Tuesday, November 27, 2012

ಭೀಷ್ಮ ಪಂಚಕ ವ್ರತ


ಭೀಷ್ಮ ಪಂಚಕ ವ್ರತ

ಭೀಷ್ಮ ಪಂಚಕ ವ್ರತವು ಪರಮ ಪವಿತ್ರವೂ,ಸಮಸ್ತ ಪಾಪ ನಾಶಕವೂ ಆದ ವ್ರತವಾಗಿದೆ. ಯಾವ ಮಾನವನು ಭಕ್ತಿ ಪೂರ್ವಕವಾಗಿ ಈ ವ್ರತವನ್ನು ಅನುಷ್ಠಾನ ಮಾಡುವನೊ ಅವನಿಗೆ ಅಚ್ಯುತನು ಮುಕ್ತಿ ಪ್ರಧಾನ ಮಾಡುತ್ತಾನೆ. ಭ್ರಹ್ಮಚಾರಿ, ಗ್ರಹಸ್ಥ, ವಾನಪ್ರಸ್ಥ ಅಥವಾ ಸನ್ಯಾಸಿ ಯಾವನಾದರೂ ಈ ವ್ರತವನ್ನು ಮಾಡಿದರೆ ಅವನಿಗೆ ಪರಮ ದುರ್ಲಭವಾದ ವೈಷ್ಣವ ಸ್ಥಾನವು ಪ್ರಾಪ್ತವಾಗುತ್ತದೆ. ಈ ವ್ರತವನ್ನು ಕಾರ್ತಿಕ ಶುಕ್ಲ ಏಕಾದಶಿಯಿಂದಾ ಪ್ರಾರಂಭಿಸಿ ಹುಣ್ಣಿಮೆಯದಿನ ಪೂರ್ತಿಗೊಳಿಸಬೆಕು. ಯಾವನು ಈ ವ್ರತವನ್ನು ಮಾಡುವನೊ ಅವನು ಬ್ರಹ್ಮಹತ್ಯಾ, ಗೊಹತ್ಯಾ, ಪಾಪಗಳಿಂದಾ ಮುಕ್ತನಾಗಿ ಶುದ್ದವಾದ ಸದ್ಗತಿಯನ್ನು ಹೂಂದುತ್ತಾನೆ. ಎಂದು ಭೀಷ್ಮಾಚಾರ್ಯರ ವಚನವಿದೆ.

 

ಮೂದಲು ಕೃತಯುಗದಲ್ಲಿ ವಶಿಷ್ಠ, ಭ್ರುಗು, ಶುಕ್ರ, ಗರ್ಗ, ಪ್ರಹ್ಲಾದ, ಮೂದಲಾದ ಮುನಿಗಳೂ, ಆನಂತರ ತ್ರೆತಾಯುಗದಲ್ಲಿ ನಾಭಾಗ, ಅಂಬರಿಷ ಇನ್ನುಳಿದವರು, ದ್ವಾಪಾರದಲ್ಲಿ ಶಿರಭದ್ರ ಮೂದಲಾದ ವೈಶ್ಯರು ಮತ್ತು ಕಲಿಯುಗದಲ್ಲಿ ಉತ್ತಮ ಅಚಾರವುಳ್ಳ ಶೂದ್ರರು ಕೂಡಾ ಈ ವ್ರತವನ್ನು ಅನುಷ್ಠಾನ ಮಾಡಿದ್ದಾರೆ.

 

ವ್ರತಾಚರಣೆ -

ಭೀಷ್ಮ ಪಂಚಕವೆಂಬ ಹೆಸರಿನ ಈ ವ್ರತವು ವಿಷ್ಣುವಿಗೆ ಹೆಚ್ಚು ಸಂತೂಷವನ್ನುಂಟು ಮಾಡುವಂಥಾದ್ದು ಮತ್ತು ರಹಶ್ಯಮಯವೂ, ಆಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದಾ ಮನೊಹರವಾದ ಪೌರ್ಣೀಮೆಯವರೆಗಿನ (೫)ಐದು ತಿಥಿಗಳು ಪಂಚಭೀಷ್ಮ ವೆಂದು ಪ್ರಸಿದ್ದವಾಗಿದೆ. ಈ ತಿಥಿಗಳು ಬಹು ಪುಣ್ಯದಾಯಕವಾಗಿವೆ. ಈ ದಿನಗಳಂದು ಪ್ರಾತ:ಕಾಲದಲ್ಲೆದ್ದು ವಿಧಿಪೂರ್ವಕ ಶೌಚಾದಿಗಳನ್ನು ಮುಗಿಸಿ ವ್ರತವನ್ನು ಮಾಡುವವರು ಶುದ್ದವಾದ ಜಲವುಳ್ಳ ನದಿ, ದೆವಖಾತ, ಅಥವಾ ಪವಿತ್ರ ಜಲಾಶಯಗಳಲ್ಲಿ ಶರೀರಕ್ಕೆ ಗೊಮಯವನ್ನು ಹಚ್ಚಿಕೊಂಡು ತಮ್ಮ ಧರ್ಮಪತ್ನಿಯೊಂದಿಗೆ (ಹೆಂಡತಿಯೂ ವ್ರತ ಮಡುತ್ತಿದ್ದಲ್ಲಿ) ಸ್ನಾನ ಮಾಡಬೆಕು. ನಂತರ ಮಡಿ ಬಟ್ಟೆಯನ್ನುಟ್ಟುಕೊಂಡು ದೇವತಾ ನಿರ್ಮಾಲ್ಯ ವಿಸರ್ಜನ, ಸಂಧ್ಯಾವಂದನ, ಬ್ರಹ್ಮಯಜ್ನಾದಿಗಳನ್ನು ಮುಗಿಸಿ ಕುರುವಂಶ ಪಿತಾಮಹನಾದ ಭೀಷ್ಮಾಚಾರ್ಯರನ್ನು ಕುರಿತು ||

 
ವೈಯ್ಯಾಘ್ರಪಾದಗೋತ್ರಾಯ ಸಾಂಕೃತಿ ಪ್ರವರಾಯ ಚ |
ತಿಲತೋಯಾಂಜಲಿಂ ತಸ್ಮೈ ಪ್ರದದಾಮಿ ಮಹಾತ್ಮನೇ ||೧|
 

ಎಂದು ಭಿಷ್ಮರಿಗೆ ತರ್ಪಣವನ್ನು ಕೊಟ್ಟು. ಆಚಮನವನ್ನು ಮಾಡಬೆಕು. ನಂತರ ಗಂಧ,ಅಕ್ಷತೆ, ಪುಷ್ಪ, ಧೂಪ, ದೀಪ, ನೇವೈಧ್ಯಾದಿಗಳಿಂದ ದೆವತಾರ್ಚನೆಯನ್ನು ಮಾಡಬೆಕು. ನಂತರ ಯತಾತ್ಮನಾದ ವ್ರತಧಾರಿಯು

 
ಸತ್ಯವ್ರತಾಯ ಶುಚಯೇ ಗಾಂಗೇಯಾಯ ಮಹಾತ್ಮನೇ|
ಭೀಷ್ಮಾಯ ತದ್ದದಾಮ್ಯರ್ಘ್ಯಂ ಆಜನ್ಮ ಬ್ರಹ್ಮಚಾರಿಣೇ||೨||

 ಎಂದು ಭೀಷ್ಮರಿಗೆ ಫುನ: ಅರ್ಘ್ಯವನ್ನು ಕೊಡಬೆಕು. ಮತ್ತು ಪ್ರತಿದಿನ ಬ್ರಾಹ್ಮಣನಿಗೆ ಮ್ರುಷ್ಟಾನ್ನ ಭೂಜನ ಮಾಡಿಸಿ ತಾನು ತೀರ್ಥ, (ತೀರ್ಥವನ್ನು ನಿತ್ಯದಂತೆ ತುಲಸಿಸಹಿತವಾಗಿ (೩) ಮೂರುಸಲ ತೆಗೆದುಕೊಳ್ಳಬೆಕು) ಗಂಧ, ಅಕ್ಷತೆ, ಅಂಗಾರ,ಗಳನ್ನು ಧಾರಣೆ ಮಾಡಿಕೊಳ್ಳಬೆಕು. ಈ ರೀತಿಯಾಗಿ ಐದು ದಿನಗಳಪರ್ಯಂತ ಉಪವಾಸ ಮಾಡಬೆಕು. ಅನಿವಾರ್ಯವಾದಲ್ಲಿ ದ್ವಾದಸಿಯಂದು ಗೊಮಯ ಅಥವಾ ಗೊಮೂತ್ರ, ತ್ರಯೂದಸಿಯಂದು ಕ್ಷೀರ, ಚತುರ್ದಸಿಯಂದು ದಧಿ(ಮೊಸರು), ಪೌರ್ಣಿಮೆಯಂದು ಘ್ರುತ(ತುಪ್ಪ), ವನ್ನು ಸ್ವೀಕರಿಸಬಹುದು. ಪೌರ್ಣಿಮೆಯದಿನ ಸಾಯಂಕಾಲದಲ್ಲಿ ಪಂಚಗವ್ಯ ಪ್ರಾಶನ ಮಾಡಿ, ಭೀಷ್ಮರಿಗೆ ಅರ್ಘ್ಯವನ್ನು ಕೊಟ್ಟು, ನಕ್ಷತ್ರ ಕಂಡನಂತರದಲ್ಲಿ ಪಾರಣೆಯನ್ನು ಮಾಡಬೆಕು.
 

ವ್ರತದ ಪೂರ್ಣಫಲಪ್ರಾಪ್ತಿಗಾಗಿ ಕರುಸಹಿತವಾದ ಆಕಳನ್ನು ಶ್ರೋತ್ರಿಯನಾದ, ಕುಟುಂಬಿಯಾದ ಬ್ರಾಹ್ಮಣನಿಗೆ ದಾನವಾಗಿ ಕೊಡಬೆಕು. ಮತ್ತು ಯಾವನು ಪತ್ನಿಸಮೇತನಾಗಿ ಪುತ್ರಕಾಮನೆಯಿಂದಾ ಭೀಷ್ಮಪಂಚಕ ವ್ರತವನ್ನು ಮಾಡಿ ಪೌರ್ಣಿಮೆಯದಿನ "ಪಾಪಪುರುಷ" ಪ್ರತಿಮೆಯನ್ನು ದಾನವಾಗಿಕೊಡುವರೂ ಅವರು ವರುಷದಲ್ಲಿ ಪುತ್ರನನ್ನು ಪಡೆಯುವರು. ಈ ಐದೂ ದಿನಗಳಲ್ಲಿ ಭಾಗವತಾದಿ ಪುರಾಣ ಶ್ರವಣ ಮಾಡಬೆಕು. ಹಾಗು ಕೊನೆಯದಿನದಂದು ಆಚರ್ಯರಿಗೆ ಯಥಾಶಕ್ಥಿ ವಸ್ತ್ರಾಲಂಕಾರ ಸಹಿತವಾಗಿ ದಕ್ಶಿಣೆ ಗಳನ್ನು ಕೊಡಬೆಕು.

-
Shri Gururajacharya Punyavanta,
Hubli
 

Monday, November 19, 2012

ಶ್ರೀ ಮಧ್ವ ಮತದ ವೈಶಿಷ್ಟ್ಯ


ಶ್ರೀ ಮಧ್ವ ಮತದ ವೈಶಿಷ್ಟ್ಯ

 ಶ್ರೀ ಮಧ್ವಮತವು ಅತ್ಯಂತ ಶ್ರೇಷ್ಠವಾದುದು. ಅದಕ್ಕೆ ಸಮನಾದ ಇನ್ನೊಂದು ಮತವಿಲ್ಲ. ಮೊದಲ ಬಾರಿ ಬದರಿಕಾಶ್ರಮಕ್ಕೆ ತೆರಳುವಾಗ ಶ್ರೀ ಮಧ್ವಾಚಾರ್ಯರು ಶಿಷ್ಯರಿಗೆ ಇತ್ತ ಸಂದೇಶದಲ್ಲಿ ಈ ಮಾತು ಬಂದಿದೆ - `ನಾಸ್ಮದುಕ್ತಿ ಸದೃಶಂ ಹಿತರೂಪಂ` ನಮ್ಮ ಮಾತಿನಂತಹ ಹಿತನುಡಿ ಬೇರೊಂದಿಲ್ಲ ಎಂಬುದಾಗಿ. ಇದನ್ನು ಸಮಥರ್ಿಸಲು ಅನಂತ ಸಾಧಕಗಳನ್ನು ಹೇಳಬಹುದು.
 ಲೋಕದಲ್ಲಿ ಪ್ರಚಲಿತವಿರುವ ಅನೇಕ ಮತಗಳು ಕೇವಲ ಒಂದು ಬಗೆಯ ನಂಬಿಕೆಯ - ಶ್ರದ್ಧೆಯ-ಆಧಾರದ ಮೇಲೆ ನಿಂತಿವೆ. ಅವಕ್ಕೆ ಯಾವ ಭದ್ರ ತಳಹದಿಯೂ ಇಲ್ಲ. ವಿಚಾರದ ಒರೆಗಲ್ಲಿಗೆ ಅವು ನಿಲ್ಲುವುದಿಲ್ಲ. ಆಗಮದ ಮೂಲವಿಲ್ಲ. ಪ್ರತ್ಯಕ್ಷದ ಬಲವಿಲ್ಲ. ಆದುದರಿಂದ ಅಂತಹ ಮತಗಳಿಗೆ ಪಾಷಂಡ ಮತಗಳೆಂದು ಶಾಸ್ತ್ರಗಳಲ್ಲಿ ನಾಮಕರಣ ಮಾಡಲಾಗಿದೆ. ಶ್ರೀ ಮಧ್ವಮತವು ಹಾಗಲ್ಲ. ಅಂಧಶ್ರದ್ಧೆಯ ಮೇಲೆ ಕೇವಲ ಮೂಲ ಪುರುಷನ ಮೇಲಿನ ಮಮತೆಯ ಮೇಲೆ ನೆಲೆ ನಿಂತುದಲ್ಲ. ಅದಕ್ಕೆ ವೇದಗಳ ಮೂಲವಿದೆ. ಯುಕ್ತಿಗಳ ಶಕ್ತಿಯಿದೆ. ಪ್ರತ್ಯಕ್ಷದ ಪಕ್ಷಪಾತವಿದೆ. ಹೀಗೆ ಯುಕ್ತಿ, ಪ್ರತ್ಯಕ್ಷ ಮತ್ತು ವೇದ ಇವುಗಳಿಗೆ ಸಮ್ಮತವಾದ ಮತವು ಶ್ರೀಮಧ್ವಮತ ಬಿಟ್ಟರೆ ಬೇರೊಂದಿಲ್ಲ. ಇದೇ ಮಧ್ವಮತದ ವೈಶಿಷ್ಟ್ಯ.
 ಶ್ರೀಮಧ್ವಮತವು ಕೇವಲ ಸಾಮಾನ್ಯರ ಮತವಲ್ಲ. ಸಮಸ್ತ ಜೀವರಾಶಿಗಳಲ್ಲಿ ಶ್ರೇಷ್ಠರಾದ ಋಜುಜೀವರ ಜೀವೋತ್ತಮರ ಮತವಿದು. ಬ್ರಹ್ಮಸೂತ್ರಗಳಲ್ಲಿ `ಶ್ರೇಷ್ಠಶ್ಚ` `ಅನ್ಯತ್ರ ಶ್ರೇಷ್ಠಾತ್` ಎಂದು ಮುಖ್ಯಪ್ರಾಣದೇವರಿಗೆ ಶ್ರೇಷ್ಠ ಎಂಬ ನಿದರ್ೇಶವಿದೆ. ಈ ಶ್ರೇಷ್ಠರ ಮತವು ಶ್ರೇಷ್ಠವೇ ಆಗಬೇಕಲ್ಲವೇ? ಆದುದರಿಂದಲೇ ಮಹನೀಯರಾದ ಶ್ರೀ ವಾದಿರಾಜ ಸ್ವಾಮಿಗಳು ` ಏನು ಶಪಥವ ಮಾಡಲೀ ಮತವು ಹಿರಿಯದೆಂದು` ಎಂದು ಆಹ್ವಾನಿಸಿದ್ದಾರೆ. ಜೀವೋತ್ತಮರ ಮಾತು ಎಂದೂ ಸುಳ್ಳಲ್ಲ. ಅವರ ಮನಸ್ಸು ಎಂದೂ ಅಡ್ಡಡ್ಡ ಹೋಗುವುದಿಲ್ಲ. ಕಾರಣವೇನು ಗೊತ್ತೇ? ಯಾವಾಗಲೂ ಸಂಭ್ರಮದಿಂದ ತುಂಬಿದ ಮನದಿಂದ ಮಂಗಳಮಯನಾದ ಶ್ರೀಹರಿಯನ್ನು ತಮ್ಮ ಹೃದಯದಲ್ಲಿ ಧರಿಸಿಕೊಂಡಿರುತ್ತಾರೆ ಆ ಜೀವೋತ್ತಮರು.
 ` ನಭಾರತಿಮಂಗಮೃಷೋಪಲಕ್ಷ್ಯತೇ ನ ಕಹರ್ಿಚಿನ್ಮೇ ಮನಸೋಮೃಷಾಗತಿಃ |
 ನ ಮೇ ಹೃಷಿಕಾಣಿ ಪತಂತ್ಸ ಸತ್ ಯನ್ನೇ ಹೃದೌತ್ಕಂಠ್ಯವತಾ ಧೃತೇ ಹರಿಃ` (ಶ್ರೀ ಭಾಗವತ)

ಅಂದ ಮೇಲೆ ಈ ಜೀವೋತ್ತಮರ, ಶ್ರೀ ಮಧ್ವಮುನಿಗಳ ಮತವು ಹೇಗೆ ಹುಸಿಯಾದೀತು? ಜೊಳ್ಳಾದೀತು? ಪೊಳ್ಳಾದೀತು? ಇಷ್ಟು ಮಾತ್ರವಲ್ಲ ಇವರ ಮತವೇ ಶ್ರೀಹರಿಯ ಮತವು. ಆದುದರಿಂದಲೇ ದೊಡ್ಡವರಾದ ದಾಸರಾಯರು `ಹನುಮನ ಮತವೇ ಹರಿಯ ಮತವು. ಹರಿಯ ಮತವೇ ಹನುಮನ ಮತವು` ಎಂದು ಹಾಡಿರುವರು. ಹರಿಯ ಮತವೇ ಇದಾದ ಮೇಲೆ ಇನ್ನೇನು ಬೇಕು ಇದು ಶ್ರೇಷ್ಠವೆಂಬುದಕ್ಕೆ?

 ಈ ಮತದಂತೆ ಆಚರಿಸಬೇಕಾದ ಸಾಧನಗಳೂ ಶುದ್ಧ. ದೊರೆಯುವ ಫಲಗಳು ಶುದ್ಧ. ಇನ್ನು ಸಾಧನಗಳ ಸಂಗ್ರಹ ನೋಡಿದರೆ ಅವುಗಳೂ ಇನ್ನೂ ಶುದ್ಧ. ಅವುಗಳೆಂದೆರೆ ವೈರಾಗ್ಯ, ಶಮ, ದಮಾದಿಗಳು, ಗುರುಸೇವೆ, ಅಧ್ಯಯನ, ಶ್ರವಣ, ಮನನಗಳು, ಯಥಾ ಯೋಗ್ಯ ಗುರುಭಕ್ತಿ, ಉಚ್ಚ ಹರಿಭಕ್ತಿ, ಅಧಮರಲ್ಲಿ ದಯೆ, ಸಮರಲ್ಲಿ ಸ್ನೇಹ, ಉತ್ತಮರಲ್ಲಿ ಭಕ್ತಿ. ನಿಷ್ಕಾಮಕಮರ್ಾನುಷ್ಠಾನ, ನಿಷಿದ್ಧ ವರ್ಜನ, ಪಂಚಭೇದಜ್ಞಾನ, ತಾರತಮ್ಯ ಜ್ಞಾನ, ಅಯೋಗ್ಯರ ಸಂಗತ್ಯಾಗ, ಶ್ರೀಹರಿಯ ಉಪಾಸನೆ, ಸರ್ವ ಸಮರ್ಪಣೆ ಮತ್ತು ಶರಣಾಗತಿ ಈ ಸಾಧನಗಳು ಎಷ್ಟು ಶುದ್ಧವಾಗಿವೆ. ಪ್ರತಿಯೊಂದು ಪರಮ ಪವಿತ್ರ ಮಂಗಳಕರ. ಇನ್ನೂ ಫಲವೂ ಹಾಗೆಯೇ. ಭಗವಂತನ ಅನುಗ್ರಹ, ಸಾಕ್ಷಾತ್ಕಾರ, ಪರಮ ಪ್ರಸಾದ, ಪರಂಧಾಮವಾದ ವೈಕುಂಠಾದಿಗಳ ಪ್ರಾಪ್ತಿ, ಯಾವುದರಲ್ಲಿ ಜರಾ, ಮರಣ, ಹಸಿವು, ನೀರಡಿಕೆ, ಚಿಂತೆ, ಸಂತಾಪ, ಹೆಚ್ಚೇನು ಹಿಗ್ಗು, ಕುಗ್ಗುಗಳು (ವೃದ್ಧಿ, ಹ್ರಾಸ) ಕೂಡಾ ಇಲ್ಲವೋ ಅಂತಹ ಉತ್ತಮ ಸ್ಥಿತಿ, ಆಮೋದ, ಪ್ರಮೋದ, ವಿನೋದ, ಉತ್ಸಾಹ, ಉಲ್ಲಾಸ, ಸಂಕಲ್ಪ ಮಾತ್ರದಿಂದ ಲಭ್ಯವಾಗುವ ಸವರ್ಾರ್ಥಸಿದ್ಧಿ, ನಿರಂತರ ಆನಂದಭೋಗ, ಎಂದಿಗೂ ಅಲ್ಲಿಂದ ಮರಳದಂತಹ ಶಾಶ್ವತಸ್ಥಾನ. ಇನ್ನೂ ಈ ಫಲಗಳ ವರ್ಣನೆ ಬೇಕಾದಷ್ಟು ಮಾಡಬಹುದು. ಈ ಫಲಗಳ ಬಗ್ಗೆ ಶ್ರೀ ವಾದಿರಾಜ ಸ್ವಾಮಿಗಳವರು ವೈಕುಂಠವರ್ಣನೆ ಎಂಬ ಗ್ರಂಥವನ್ನೇ ಬರೆದಿರುವರು.

 ಶ್ರೀಮಧ್ವಮತದಲ್ಲಿ ಹೀಗಿದ್ದರೆ ಇತರ ಮತಗಳಲ್ಲಿ ನೋಡಿ. ಸಾಧನಗಳು ಪ್ರಾಯಃ ದುರಾಚಾರ, ವಾಮಾಚಾರಗಳೇ. ಶಾಕ್ತ, ಶಾಂಭವ ಮುಂತಾದ ಮತಗಳಲ್ಲಿಯ ಸಾಧನಗಳನ್ನು ನೆನೆದರೆ ಒಮ್ಮೆ ಜುಗುಪ್ಸೆಯುಂಟಾದರೆ, ಇನ್ನೊಮ್ಮೆ ರೋಮಾಂಚನವಾಗುತ್ತದೆ. ಇತರ ಮತಗಳಲ್ಲಿಯ ಫಲಗಳೂ ಅರ್ಥಕ್ಕಿಂತ ಅನರ್ಥಗಳೇ. ಯಾವುದಕ್ಕೂ ಸದ್ಗತಿ ಯಿಲ್ಲ. ಈ ಕಾರಣದಿಂದಲೂ ಶ್ರೀ ಮಧ್ವಮತವು ವಿಶಿಷ್ಟವಾಗಿದೆ.

 ಶ್ರೀಮಧ್ವಮತವು ಒಂದು ಸಮಗ್ರ ದರ್ಶನ(ಶಾಸ್ತ್ರ)ವಾಗಿದೆ. ಏಕದೇಶೀಯ, ಏಕಪಕ್ಷೀಯ ದೃಷ್ಟಿಯದಲ್ಲ. ಕರ್ಮ, ಜ್ಞಾನ, ವೈರಾಗ್ಯ, ಭಕ್ತಿ ಹೀಗೆ ಅಗ್ರಸ್ಥಾನ ಪಡೆದಿರುವ ಸಾಧನಗಳಲ್ಲಿ ಒಂದೊಂದನ್ನೇ ಅವಲಂಬಿಸಿ ಮತಗಳೂ, ಪಂಥಗಳೂ ಹೊರಟಿವೆ. ತಮ್ಮ ತಮ್ಮದೇ ಹೆಚ್ಚಿನದೆನ್ನುವ ಘರ್ಷಣೆ ಬೇರೆ. ಹೀಗಿರುವಾಗ ಮೇಲೆ ಹೇಳಿದ ಸಾಧನಗಳೆಲ್ಲವನ್ನೂ ಒಂದು ಸೂತ್ರದಲ್ಲಿ ಹೊಂದಿಸಿ ಸಮನ್ವಯ ಸಾಧಿಸಿದ ಹೆಗ್ಗಳಿಕೆ ಶ್ರೀಮಧ್ವಮತಕ್ಕಿದೆ. ಇವುಗಳಲ್ಲಿ ಯಾವುದನ್ನೂ ಬಿಟ್ಟರೂ ನಡೆಯುವುದಿಲ್ಲ. ಜೀವನದ ಸಾಫಲ್ಯಕ್ಕೆ ಎಲ್ಲಾ ಸಾಧನಗಳೂ ಅವಶ್ಯ ವಾಗಿವೆ. ಯಥೋಚಿತವಾಗಿ ಅವುಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ಸಮಗ್ರದೃಷ್ಟಿ, ಈ ಮತದಲ್ಲಿ ಇದೆ. ಇದೇ ಈ ಮತದ ವೈಶಿಷ್ಟ್ಯ

 ದೇವತೆಗಳ ವಿಷಯದಲ್ಲಿಯೂ ಹೀಗೆ ಅನೇಕಾನೇಕ ದೇವತೆಗಳನ್ನು ನಂಬಿರುವ ಭಾರತೀಯರಲ್ಲಿ ಆಯಾ ಆಯಾ ದೇವತೆಗಳನ್ನು ಅವಲಂಬಿಸಿ ಪ್ರವೃತ್ತವಾಗಿರುವ ಅನೇಕ ಮತಗಳಿವೆ. ಹೀಗಾಗಿ ದೇವತೆಗಳ ವಿಚಾರದಲ್ಲಿ ಗೊಂದಲ, ತಾಕಲಾಟ ಬಹಳ. ಎಲ್ಲರೂ ಏಕದೇಶದೃಷ್ಟಿಯುಳ್ಳವರೇ. ಇನ್ನೊಂದು ದೇವತೆಗೆ ಸರಿಯಾದ ಸ್ಥಾನ ಗೊತ್ತುಪಡಿಸಿ ಎಲ್ಲವನ್ನೂ ಸರಿಹೊಂದಿಸಿ ಸಮಾಧಾನಪಡಿಸುವವರೇ ಇಲ್ಲ. ಹೀಗಿರುವಾಗ ಎಲ್ಲಾ ದೇವತೆಗಳ ವಿಷಯದಲ್ಲಿಯೂ ಪ್ರಮಾಣಪುರಸ್ಸರವಾಗಿ ಅಸಂದಿಗ್ಧರೀತಿಯಲ್ಲಿ ಸ್ಥಾನಮಾನಗಳನ್ನು ಖಚಿತಗೊಳಿಸಿ ಸರ್ವದೇವತಾಸಮನ್ವಯವನ್ನು ಸಮರಸರೀತಿಯಲ್ಲಿ ಸಾಧಿಸಿದ ಘನತೆಯು ಸಮಗ್ರದೃಷ್ಟಿಯ ಶ್ರೀಮಧ್ವಮತಕ್ಕೆ ಮಾತ್ರ ಇದೆ. ಇಲ್ಲಿ ಯಾವ ದೇವತೆಗಳನ್ನೂ ಕೈಬಿಡಲಾಗಿಲ್ಲ. ಎಲ್ಲರಿಗೂ ಯಥೋಚಿತ ಮಾನ ಮಯರ್ಾದೆ ವ್ಯವಸ್ಥಿತವಾಗಿದೆ. ಇದರಿಂದಲೂ ಶ್ರೀ ಮಧ್ವಮತಕ್ಕೆ ವೈಶಿಷ್ಟ್ಯವಿದೆ.

 ವೇದಗಳ ವಿಷಯದಲ್ಲಿಯೂ ದರ್ಶನಕಾರರ ಅಭಿಪ್ರಾಯ ಒಂದೇ ಆಗಿಲ್ಲ. ವಿವಿಧ ವಿಷಯಗಳನ್ನು ನಿರೂಪಿಸುವ ವೇದಗಳಲ್ಲಿ ಏಕವಾಕ್ಯತೆಯನ್ನು ಕಾಣುವುದು ದುಷ್ಕರವಾಯಿತು. ಅಪರಿಹಾರ್ಯವೇನೋ ಎಂಬಂತೆ ವೇದಗಳನ್ನು ಭಾಗ ಮಾಡಲಾಯಿತು. ಕರ್ಮಕಾಂಡ, ಬ್ರಹ್ಮಕಾಂಡ, ಉಪನಿಷತ್ತು ಎಂಬ ಭೇದವನ್ನು ಕಲ್ಪಿಸಲಾಯಿತು. ಆದರೆ ಸಮಗ್ರ ದೃಷ್ಟಿಯಿಂದ ಶ್ರೀಮಧ್ವಮತವು ಇದನ್ನು ಒಪ್ಪಲಿಲ್ಲ. ಇಡೀ ವೇದವು ಬ್ರಹ್ಮನಿಷ್ಠ - ಪರಮಾತ್ಮ ವಿಷಯಕ ಎಂದು ಅದು ಸಾರಿತು. ವೇದಗಳು ಪರಮ ಮುಖ್ಯವಾಗಿ ಪರಮಾತ್ಮನನ್ನೇ ಹೇಳುತ್ತವೆ. ಮುಖ್ಯವಾಗಿ ಕಮರ್ಾದಿಗಳನ್ನು ಹೇಳಿದರೂ ಪರಬ್ರಹ್ಮನ ಪ್ರೀತ್ಯರ್ಥವಾಗಿ ಅವುಗಳನ್ನು ಹೇಳಿರುವುದರಿಂದ ಪರಮಾತ್ಮನಲ್ಲಿಯೇ ಪರಮ ತಾತ್ಪರ್ಯವನ್ನು ಹೊಂದಿರುತ್ತವೆ. ಹೀಗೆ ಸಕಲ ವೇದಗಳಿಗೂ ಒಂದೇ ಉದ್ದೇಶ, ಒಂದೇ ವಿಷಯ, ಒಂದೇ ಮುಖ್ಯಾರ್ಥ. ಆದುದರಿಂದ ಎಲ್ಲಾ ವೇದಗಳಲ್ಲಿಯೂ ಧೃಡವಾದ ಏಕವಾಕ್ಯತೆ ಇದೆ. ಇದನ್ನು ಘೋಷಿಸಿದ ಪರಮ ವೈದಿಕ ಶಿಖಾಮಣಿ ಶ್ರೀ ಮಧ್ವಮುನಿಗಳ ಮತವು ಶ್ರೇಷ್ಠವಾಗದೇ ಇರುವುದು ಹೇಗೆ?

 ದೇವರ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಬಗೆಯಾಗಿ ವರ್ಣನೆ ಮಾಡುವುದನ್ನೂ ನೀವು ಕೇಳಿರಬಹುದು, ದೇವರಿಲ್ಲ ಎಂದು ವಾದಿಸುವ ನಾಸ್ತಿಕರನ್ನು ಬಿಡಿರಿ. ದೇವರ ಅಸ್ಥಿತ್ವವನ್ನು ಒಪ್ಪಿರುವ ಮತಗಳಲ್ಲಿಯೂ ದೇವರ ಕಲ್ಪನೆ ವಿಧ-ವಿಧವಾಗಿದೆ. ದೇವರು ಜಗತ್ತಿಗೆ ಕಾರಣನೇ ಅಲ್ಲ. ಅವನು ಉದಾಸೀನನೆಂದು ಕೆಲವರು ಹೇಳುವರು. ಕಾರಣವೆಂದು ಹೇಳುವ ಬೇರೊಬ್ಬರು ದೇವರಿಗೆ ಜಗತ್ತಿನ ರೂಪದಲ್ಲಿ ಪರಿಣಾಮವಾಗುವನೆಂದು ತಿಳಿಸುವರು. ನಿಮಿತ್ತ ಕಾರಣನೆಂದು ಹೇಳುವ ಮತ್ತೊಬ್ಬರು. ದೇವರಿಗೆ ಕೆಲವೇ ಗುಣಗಳಿವೆಯೆಂದು ವಾದಿಸುವರು. ದೇವರಿಗೆ ವಿಗ್ರಹವಿದೆಯಂದು ಕೆಲವರು, ಇಲ್ಲವೆಂದು ಕೆಲವರು, ಇನ್ನಬ್ಬರಂತೂ ಬೇರೆ ರೀತಿಯ ಕಲ್ಪನೆ ಮಾಡಿರುವರು. ಅವರಂತೆ ದೇವರು ನಿಗರ್ುಣ, ನಿರಾಕಾರ, ವೇದಗಳಲ್ಲಿ ಅಸಂಖ್ಯವಾದ ವಣರ್ಿತವಾದ ಗುಣಗಳ ಬಗ್ಗೆ ಏನು ಮಾಡುವುದು ಎಂದು ಯೋಚಿಸಿ ಅವರುಗಳು ಅದಕ್ಕಾಗಿಯೇ ಒಬ್ಬ ಸಗುಣಬ್ರಹ್ಮನನ್ನು ಸೃಷ್ಟಿಮಾಡಿರುವರು. ಹೀಗೆ ಅವರ ಪ್ರಕಾರ `ಸಗುಣಬ್ರಹ್ಮ ನಿಗರ್ುಣಬ್ರಹ್ಮ ಎಂದು ಎರಡು ದೇವರುಗಳು. ಅದರಲ್ಲಿಯೂ ಸಗುಣ ಬ್ರಹ್ಮ ಮಾಯಾಮಯವಾದುದರಿಂದ ಮಿಥ್ಯಾ, ಅವಾಚ್ಯ, ಅಜ್ಞೇಯ. ಆದರೆ ನಿಗರ್ುಣ ಬ್ರಹ್ಮ ಮಾತ್ರ ಸತ್ಯ` ಎಂಬುದಾಗಿ ಹೇಳುವರು ಅವರು. ಇತರ ಮತೀಯರೂ ಹೀಗೆ ನಿರಾಕಾರ, ನಿರೀಹ ದೇವರ ಕಲ್ಪನೆಯಲ್ಲಿರುವರು. ಅಂತೂ ಯಾರೂ ಸಮಂಜಸವಾಗಿ ನಿದರ್ುಷ್ಟವಾದ ಸವರ್ೋತ್ತಮನಾದ ದೇವರ ಪರಿಚಯ ಮಾಡಿಕೊಟ್ಟಿಲ್ಲವೆಂಬುದು ಸೂಕ್ಷ್ಮವಾಗಿ ಪರಿಶೀಲಿಸುವವರಿಗೆ ಗೊತ್ತಾಗದಿರದು. ಶ್ರೀಮಧ್ವಮತವೊಂದು ಮಾತ್ರ ದೋಷಲೇಶವಿಲ್ಲದ ಸವರ್ೋತ್ಕೃಷ್ಟನಾದ ದೇವರ ಯಥಾರ್ಥ ಚಿತ್ರವನ್ನು ತೋರಿಸಿ ಸುಜನರ ಉದ್ಧಾರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಮತದಲ್ಲಿ ಬ್ರಹ್ಮದ್ವೈವಿಧ್ಯವಿಲ್ಲ. ವೇದಗಳಲ್ಲಿ ಎಷ್ಟು ಸಮಂಜಸತೆ ಬೇಕೋ ಅಷ್ಟನ್ನೆಲ್ಲ ಶ್ರೀಮಧ್ವಮತವು ಸಾರುತ್ತದೆ. ಇದು ಈ ಮತದ ವೈಶಿಷ್ಟ್ಯ.

 ಇದರಂತೆಯೇ ಇದ್ದುದನ್ನು ಇದ್ದಂತೆಯೇ ಹೇಳುವ ಪ್ರಾಮಾಣಿಕತನದ ಮತವಾಗಿದೆ ಈ ಮಧ್ವಮತ. ಇಲ್ಲ ಯಾವ ಸಂಕೋಚಕ್ಕೆ ಅಥವಾ ಅಭಿರುಚಿಗೆ ಎಡೆ ಇಲ್ಲ. ಪ್ರತಿಯೊಂದು ವಿಷಯದಲ್ಲಿಯೂ ಯಥಾರ್ಥವಾದ ವಿವೇಚನೆ ಕೊಡುವುದರಲ್ಲಿಯೇ ಆಸಕ್ತಿ ಈ ಮತಕ್ಕೆ. ಜೀವರಲ್ಲಿಯ ಅನಾದಿ ಯೋಗ್ಯತೆ, ತಾರತಮ್ಯ ಮುಂತಾದ ವಿಷಯಗಳು ಈ ಮಾತಿಗೆ ಸಾಕ್ಷಿಯಾಗಿವೆ. ಈ ಕಾರಣದಿಂದ ದರ್ಶನಗಳಲ್ಲಿ ಈ ಮತಕ್ಕೆ ವಿಶಿಷ್ಟವಾದ ಸ್ಥಾನವಿದೆ.
 ` ತೇನ ವಿನಾ ತೃಣಮಪಿ ನ ಚಲತಿ ` ಎಂಬ ಸಿದ್ಧಾಂತದ ಬಲವಾದ ಸಮರ್ಥಕವಾಗಿದೆ ಶ್ರೀಮಧ್ವಮತ. ಪರಮಾತ್ಮನ ಅನುಗ್ರಹವಿಲ್ಲದೇ ಯಾವುದೂ ಸಾಧ್ಯವಿಲ್ಲ. ಎನು ಮಾಡಲಿಕ್ಕೂ ಆಗುವುದಿಲ್ಲ. ಆದುದರಿಂದ ಭಗವದನುಗ್ರಹ ಸರ್ವತ್ರ ಬೇಕೇ ಬೇಕು ಎಂದು ಅದು ಸಾರುತ್ತದೆ. ಇತರ ಮತಗಳಲ್ಲಿ ಮಹಾಫಲವಾದ ಮೋಕ್ಷ ಕೂಡಾ ತಂತಾನೇ ಆಗಿಬಿಡುವುದು. ಅಲ್ಲಿ ಪರಮಾತ್ಮನ ಪ್ರಸಾದದ ಅಪೇಕ್ಷೆ ಇಲ್ಲ ಎಂದು ಭಗವಂತನನ್ನೇ ಕಡೆಗಣಿಸಲಾಗಿದೆ. ಆದರೆ ಶ್ರೀ ಮಧ್ವಮತದ ಪ್ರಕಾರ ಅಜ್ಞಾನಿಗಳಿಗೆ ಜ್ಞಾನ ಬರುವುದು ಶ್ರೀಹರಿಯ ಕೃಪೆಯಿಂದ. ಜ್ಞಾನಿಗಳಾದವರು ಮೋಕ್ಷವನ್ನು ಪಡೆಯುವುದು ಅವನ ಪ್ರಸಾದದಿಂದಲೇ. ಮುಕ್ತರಾದವರು ಮಹಾ ಮಹಾ ಆನಂದಾದಿ ಭೋಗಗಳನ್ನು ಅನುಭವಿಸುವುದು ಆ ಶ್ರೀಶನ ಪರಮಾನುಗ್ರಹದಿಂದಲೇ. ಹೀಗೆ ಭಗವದನುಗ್ರಹವು ಸಕಲಕ್ಕೂ ಮೂಲ. ಇದು ಎಲ್ಲರಿಗೂ ಸಂಬಂಧಿಸಿದಂತೆ ಆಯಿತು. ವಿಶೇಷವಾಗಿ ಹೇಳುವುದಾದರೆ ವಿಶೇಷಜ್ಞರಿಗೆ ಈ ಭಗವತ್ಪೀತಿಯೇ ಮಹಾಫಲ, ಅದುವೇ ಗುರಿ, ಅದುವೇ ಸರ್ವಸ್ವ, ಅಂತಹವರಿಗೆ ಮೋಕ್ಷಾದಿಗಳು ಕೂಡಾ ಆ ಭಗವಂತನ ಸನ್ನಿಧಿಯಲ್ಲಿ ಇರಲು ಅವನ ನಿರಂತರ ಪ್ರಸಾದ ಅನುಭವಿಸಲು ಉಪಾಯವಾಗಿವೆ ಅಷ್ಟೇ. ಆದುದರಿಂದಲೇ ಸರ್ವತ್ರ `ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯಥ್ರ್ಯಂ` ಎಂಬುದು ಮಾಧ್ವ ವೃಂದದ ಮನೆ ಮಾತಾಗಿಬಿಟ್ಟಿದೆ. ಇದು ಈ ಮತದ ಸ್ಪಷ್ಟವಾದ ವೈಶಿಷ್ಟ್ಯ.

 ಇಂತಹ ಪರಮಾತ್ಮನ ಪ್ರಸಾದದಿಂದ ಲಭಿಸುವ ಮೋಕ್ಷವು ಜೀವರ ಸ್ವರೂಪಾವಿಭರ್ಾವರೂಪವಾಗಿದೆ. ಮೋಕ್ಷವು ಆಗುಂತಕವಲ್ಲ ಎಂದರೆ ಹೊರಗಿನಿಂದ ಬೇರೆ ಹೊಸದೊಂದು ಏನಾದರೂ ಬಂದು ಸೇರುವುದಲ್ಲ. ಮೋಕ್ಷವೆಂದರೆ ದೇವರೊಡನೆ ಜೀವರಿಗೆ ಐಕ್ಯವೆಂದಲ್ಲ, ಜೀವರು ಎಂದೂ ದೇವರು ಆಗಲಾರರು. ಬ್ರಹ್ಮ-ರುದ್ರಾದಿ ದೇವತೆಗಳೂ, ಅಷ್ಟೇ ಏಕೆ! ಶ್ರೀ ಮಹಾಲಕ್ಷ್ಮೀಯೂ ಕೂಡಾ ಪಡೆಯಲು ಸರ್ವಥಾ ಅಶಕ್ಯವಾದುದು ಆ ಪರಮಾತ್ಮನ ಪದವಿ. ಆದುದರಿಂದ ಜೀವರು ತಮ್ಮ ತಮ್ಮ ಯೋಗ್ಯತಾನುಸಾರ ಪೂರ್ಣರಾಗಿ ಸ್ವಸ್ವರೂಪವಾದ ಆನಂದಾದಿಗಳನ್ನು ಸವಿಯುವರು. ಸುಳ್ಳು ಸುಳ್ಳಾದ, ಭ್ರಾಮಕವಾದ ಮಾತುಗಳನ್ನು ಬದಿಗೆ ಸರಿಸಿ, ಈ ಪ್ರಕಾರ ಜೀವರಿಗೆ ನಿಜವಾಗಿ ಆಗುವ ಫಲವೇನೆಂಬುದನ್ನು ಯಥಾವತ್ತಾಗಿ ನಿರೂಪಿಸುವುದು ಈ ಮತದ ವೈಶಿಷ್ಟ್ಯ ವಾಗಿದೆ.

 ಕರ್ಮಗಳ ವಿಚಾರದಲ್ಲಿಯೂ ಅಷ್ಟೇ. ಯಾವಾಗಲೂ ಶುದ್ಧವಾದ ನಿಷ್ಕಾಮ ಕರ್ಮಕ್ಕೆ ಪ್ರಾಶಸ್ತ್ಯ ಕೊಟ್ಟಿದೆ ಈ ಮತ. ಸಕಾಮವಾಗಿ ಮಾಡುವ ಕರ್ಮಗಳ ಕಡೆಗೆ ಇತರ ಮತಗಳು ಎಳೆದುಕೊಂಡು ಹೋಗುವವು. ಆದರೆ ಅದಕ್ಕೆ ಕಲಂಕ ಹಚ್ಚಬಾರದು. ಫಲಾಭಿಲಾಷೆ ಮತ್ತು ಫಲದ ಭರವಸೆ ಮನೋರಂಜಕವಾದುದೇನೋ ಸರಿ. ಆದರೆ ಅದರಿಂದ ಪುನಃ ಸಂಸಾರದ ಬಂಧನ ಹೆಚ್ಚೆಚ್ಚು ಆಗುವುದು. ಆದುದರಿಂದ ಮುಕ್ತಿ ಬಯಸುವವರಿಗೆ ಅದು ಪ್ರತಿಗಾಮಿ ಸ್ವರೂಪದ್ದಾಗುವುದು. ಇನ್ನು ಕರ್ಮ ಬಿಟ್ಟಿರುವುದಂತೂ ದೇಹಧಾರಣ ಮಾಡಿರುವವರಿಗೆ ಅಸಂಭವ. ವಿಹಿತ ಕರ್ಮ ಬಿಡುವುದರಿಂದ ಅನರ್ಥವೂ ಆಗುವುದು. ಆದುದರಿಂದ ನಿಷ್ಕಾಮಕರ್ಮ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ಮಾರ್ಗದರ್ಶನ ಮಾಡಿರುವುದೇ ಶ್ರೀ ಮಧ್ವಮತದ ವೈಶಿಷ್ಟ್ಯವಾಗಿದೆ.

 ಈ ಜಗತ್ತನ್ನು ಭಗವಂತ ಏಕೆ ನಿಮರ್ಿಸಿದ? ಉದ್ದೇಶವೇನು? ಫಲವೇನು? ಈ ಪ್ರಪಂಚದಲ್ಲಿ ಇರುವ ವ್ಯಕ್ತಿಗಳು ಹಾಗೂ ಪದಾರ್ಥಗಳು ಒಂದೇ ಬಗೆಯಾಗಿರದೇ ಚಿತ್ರ ವಿಚಿತ್ರವಾಗಿರುವುದೇಕೆ? ಇವೇ ಮೊದಲಾದ ಪ್ರಶ್ನೆಗಳು ವಿಶ್ವದ ಮಹತ್ತರ ಒಗಟುಗಳಾಗಿವೆ. ಇವುಗಳ ಗೊಡವೆಗೆ ಹೋಗದೇ ಅದೆಷ್ಟೋ ಮತಗಳು ದೂರದ ದಾರಿಯಿಂದ ಸಾಗಿಹೋಗಿವೆ. ಇವುಗಳನ್ನು ಬಿಡಿಸಲು ಯತ್ನಿಸಿ ಎಷ್ಟೋ ಮತಗಳು ಅಯಶಸ್ವಿಯಾಗಿವೆ. ಶ್ರೀ ಮಧ್ವಮತವೊಂದೇ ಸಮರ್ಪಕ ಉತ್ತರವನ್ನು ಇತ್ತ ಮತವಾಗಿದೆ.

 ಭಗವಂತನು ಪೂರ್ಣನು, ಆಪ್ತಕಾಮನು. ಅವನಿಗೆ ಸ್ವಂತಕ್ಕೆ ಆಗಬೇಕಾದುದೇನೂ ಇಲ್ಲ. ಹೀಗಿದ್ದರೂ ಅವನು ಮಾಡುವ ಜಗತ್ತಿನ ಕಾರ್ಯಭಾರವು ಸಫಲವಾಗಿದೆ. ಆ ಜೀವರ ಸ್ವರೂಪ ವಿಕಾಸಕ್ಕೆ ಉಪಯುಕ್ತವಾಗಿದೆ. ತಮ್ಮ ತಮ್ಮ ಯೋಗ್ಯತೆಗೆ ತಕ್ಕಂತೆ ಸಾಧನ ಮಾಡಿಕೊಂಡು ಜೀವರು ಫಲಭಾಗಿಗಳಾಗಲೆಂದೇ ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಅಷ್ಟ ಮಾತ್ರವಲ್ಲ, ಅವರವರಿಗೆ ಸಲ್ಲುವ ಸಾಧನಗಳ ಫಲಗಳನ್ನು ಸಾಧಿಸಿ ಕೊಡಲು ತಾನೂ ಕೂಡಾ ಇದರಲ್ಲಿ ಪಾಲುಗೊಳ್ಳುತ್ತಾನೆ. ಅವತರಿಸಿಯೂ ಬರುತ್ತಾನೆ. ಹೀಗೆ ವಿಶ್ವದ ಅನಂತ ಕಾರ್ಯಕಲಾಪಗಳು ನಿಷ್ಫಲವಾಗುವುದು ಹೇಗೆ? ಅವೆಲ್ಲವೂ ಜೀವರನ್ನು ಗುರಿಯ ಕಡೆಗೆ ಮುಟ್ಟಿಸಲು ನಡೆಯುವ ವ್ಯಾಪಾರಗಳಾಗಿವೆ. `ಯಥಾ ಯೋಗ್ಯಫಲಪ್ರಾಪ್ತ್ಯೈ ಲೀಲೈಷಾ ಪರಮಾತ್ಮನಃ` ಶ್ರೀಮಧ್ವವಾಕ್ಯ. ಪುಟ್ಟಮಾತಿನಲ್ಲಿ ಬೆಟ್ಟದಂತಹ ಅರ್ಥ ತುಂಬಿದೆ ಇಲ್ಲಿ. ಇದು ಶ್ರೀಮಧ್ವಮತದ ಚೊಕ್ಕಟವಾದ ವೈಶಿಷ್ಟ್ಯ.
 ಸಿದ್ಧಾಂತವನ್ನು ತೆಗೆದಾಗ ಅದು ಅಬಾಧಿತವಾಗಿರಬೇಕು. ಅಸಂಗತ ವಿಸಂಗತವಾಗಿರಬಾರದು. ಸಮಂಜಸವಾಗಿರಬೇಕು. ಯಾವ ಅನುಪಪತ್ತಿಗೂ ಆಸ್ಪದವಿರಬಾರದು. ಸರಿಯಾದುದೆಲ್ಲವನ್ನೂ ಸ್ವಾಗತಿಸಬೇಕು. ಸ್ವೀಕರಿಸಬೇಕು. ಯಾವ ವಿಷಯದಲ್ಲಿಯೂ ಆಗ್ರಹ ತೋರಬಾರದು. ಈ ಎಲ್ಲಾ ದೃಷ್ಟಿಯಿಂದ ವಿಮಶರ್ಿಸಿದರೆ ಶ್ರೀ ಮಧ್ವಮತದಂತಹ ಸಮಂಜಸ ಮತವು ಇನ್ನೊಂದಿಲ್ಲ. ಈ ಮಾತಿಗೆ ಶ್ರೀ ನ್ಯಾಯಸುಧಾ, ನ್ಯಾಯಾಮೃತ, ಚಂದ್ರಿಕಾ, ತರ್ಕತಾಂಡವ ಮುಂತಾದ ಈ ಮತಗಳ ಉದ್ಗ್ರಂಥಗಳೇ ಸಾಕ್ಷಿ. ಹೀಗೆ ಸರ್ವ ಸಮೀಚೀನತೆಯು ಈ ಮತದ ವೈಶಿಷ್ಟ್ಯವಾಗಿದೆ.

 ಯಾವುದೇ ಒಂದು ಮತವನ್ನು ಅಳೆಯಬೇಕಾದರೆ ಅದರ ಮೂಲ, ಬೆಳವಣಿಗೆ , ಬೆಳೆದು ಬಂದ ರೀತಿ, ಅದರ ಸ್ವರೂಪ, ಗುಣ, ಸ್ವಭಾವ ಮುಂತಾದವುಗಳನ್ನು ಅವಲೋಕಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಮಧ್ವಮತದ ಮಹತ್ವವು ತಿಳಿಯುವುದು. ಇದು ಸತ್ಸಂಪ್ರದಾಯಸಿದ್ಧವಾದ ಮತವಾಗಿದೆ. ಸರ್ವವಿಧದಲ್ಲಿಯೂ ಸಾತ್ವಿಕವಾಗಿದೆ. ಶ್ರೀ ಹಂಸ ನಾಮಕ ಪರಮಾತ್ಮ, ಚತುಮರ್ುಖ ಬ್ರಹ್ಮದೇವರು, ಸನಕಾದಿ ಮುನಿಗಳು, ದೂವರ್ಾಸ ಮಹಷರ್ಿಗಳು ಇವರ ಘನವಾದ ಪರಂಪರೆಯಿಂದ ನಡೆದು ಬಂದ ಮತವಿದು. ಶ್ರೀ ಮಧ್ವಾಚಾರ್ಯರ ಶ್ರೇಷ್ಠತೆ, ಜೀವೋತ್ತಮತ್ವದ ಬಗ್ಗೆಯಂತೂ ಮುಂಚೆಯೇ ಹೇಳಲಾಗಿದೆ. ಮತ್ತು ಇದು ಶುದ್ಧ ಸಾತ್ವಿಕವಾದ ಮತ. ರಾಜಸ, ತಾಮಸವಾದ ಆಚಾರ ವಿಚಾರಗಳಿಗೆ ಎಡೆ ಇಲ್ಲ ಈ ಮತದಲ್ಲಿ. ಈ ಕಾರಣಗಳಿಂದಲೂ ಇದು ವಿಶಿಷ್ಟವಾಗಿದೆ.

 ಮತದ ಬೆಲೆಯು ಅದರ ಉಪಯುಕ್ತತೆಯ ಮೇಲೆ ಅವಲಂಬಿಸಿದೆ. ಎಷ್ಟೋ ಮತಗಳು ಕೇವಲ ತಾತ್ವಿಕ ಚಚರ್ೆಗಳಾಗಿವೆ. ನಿಜವಾದ ಜೀವನಕ್ಕೂ ಅವಕ್ಕೂ ಸಂಬಂಧವಿಲ್ಲ. ಇನ್ನು ಕೆಲವು ಮತಗಳಲ್ಲಿ ಬೋಧಿಸುವ ಪ್ರಮೇಯಗಳೇ ಬೇರೆ, ಆಚರಣೆಯಲ್ಲಿ ತರುವ ಪ್ರಮೇಯಗಳೇ ಬೇರೆ, ಮತ್ತೆ ಕೆಲವು ಮತಗಳಲ್ಲಿ ಸುಳ್ಳಿನಿಂದ ಆರಂಭಿಸಿ ಸತ್ಯದ ದರ್ಶನ ಮಾಡಿಸಲಾಗುವುದಂತೆ, ಇಂತಹ ನಿರುಪಯುಕ್ತ ಮತಗಳ ಕಾಡಿನಲ್ಲಿ ಶ್ರೀ ಮಧ್ವಮತವು ದಿವ್ಯಸಂಜೀವಿನಿಯಾಗಿದೆ. ಶ್ರೀ ಸಂಜೀವ ಮುಖ್ಯಪ್ರಾಣದೇವರ ಮತವಲ್ಲವೇ ಇದು?.

 ಸಾಧಕರ ಅಧಿಕಾರಕ್ರಮಕ್ಕನುಸರಿಸಿ ಅನೇಕ ಸಾಧನಗಳಿವೆ ಇಲ್ಲಿ. ಇವುಗಳಲ್ಲಿ ಯಾವುದೂ ಮಿಥ್ಯೆಯಲ್ಲ. ಎಲ್ಲವೂ ಅವರವರಿಗೆ ಸಾಧುವಾದ ಮಾರ್ಗಗಳೇ. ವಿಹಿತ ದೃಷ್ಟಿಯಿಂದ ಭಕ್ತಿಪೂರ್ವಕವಾಗಿ ಮಾಡುವ ಭಗವದಾರಾಧನೆಯೇ ಪರಮಧರ್ಮ. ಹೀಗೆ ನಾವು ಆಚರಿಸುವ ಸಕಲ ಕ್ರಿಯೆಗಳೂ ಭಗವತ್ಪೂಜಾರೂಪವಾಗಿರಬೇಕು. ಸರ್ವವನ್ನು ಆ ಭಗವಂತನಲ್ಲಿ ಅರ್ಪಣ ಮಾಡಬೇಕು. ಈ ರೀತಿ ಅನುಸಂಧಾನ ತಂದುಕೊಳ್ಳುವ ವಿಧಾನವನ್ನು ಉಪದೇಶಿಸಿದೆ ಈ ಮತ. ಜೀವನದಲ್ಲಿ ಹಾಸುಹೊಕ್ಕಾಗುವಂತಿವೆ ಇದರ ತತ್ವಗಳು. ಈ ಪ್ರಕಾರ ಅತ್ಯಂತ ಜೀವನೋಪಯೋಗಿಯಾಗಿರುವುದು ಶ್ರೀ ಮಧ್ವಮತದ ಮಹಾವೈಶಿಷ್ಟ್ಯವಾಗಿದೆ.

 ಇಂತಹ ವಿವರಣೆಯಿಂದ ತುಂಬಿರುವ ಈ ಶಾಸ್ತ್ರವು ಆಚಾರ್ಯರು ತಾವು ಹೇಳಿರುವ `ನಾಸ್ಮದುಕ್ತಿ ಸದೃಶಂ ಹಿತರೂಪಮ್` ಎನ್ನುವ ವಾಕ್ಯದಂತೆ ನಿಜವಾಗಿಯೂ ನಮ್ಮ ಹಿತವನ್ನು ಕಾಪಾಡುವಂತಹದಾಗಿದೆ.

-- 
ರಂಗನಾಥಾಚಾರ್ಯ ಸಾಲಗುಂದಿ, ಸಿಂಧನೂರ  

Monday, November 12, 2012

ಕಾಣ್ವ ಶಾಖೆಯವರಲ್ಲಿ ಮಾಧ್ವರಿಲ್ಲವೇ ? ಅಥವಾ ಕಾಣ್ವ ಶಾಖೆಯವರು ಮಾಧ್ವರಲ್ಲವೇ ? Part-2


ಭಾಗ - 2

8. ಈಗ ಇನ್ನೊಂದು ಪ್ರಮುಖ ವಿಷಯಕ್ಕೆ ಬರೋಣ ಮಧ್ವಾಚಾರ್ಯರು ನಮ್ಮ ಗುರುಗಳಲ್ಲ ಶ್ರೀ ಯಾಜ್ಞ್ಯವಲ್ಕ್ಯರು ಮಾತ್ರ ನಮ್ಮ ಗುರುಗಳು ಹಾಗಾಗಿ ನಮ್ಮತನವನ್ನು ನಾವು ಉಳಿಸಿ ಕೊಳ್ಳಬೇಕು ಎಂದು ಹೇಳುವವರ ಅಜ್ಞಾನಕ್ಕೆ ಏನೆಂದು ಉತ್ತರಿಸಬೇಕು. ಶ್ರೀ ಯಾಜ್ಞ್ಯವಲ್ಕ್ಯರು ಮಹಾಪುರುಷರು, ಮಹಾ ಮೇಧಾವಿಗಳು, ಶುಕ್ಲ ಯಜುವರ್ೇದದ ದ್ರಷ್ಟಾರರು, ಶ್ರೇಷ್ಟ ಬ್ರಹ್ಮ ಜ್ಞಾನಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಅಲ್ಲಗಳೆಯುವ ಸಾಹಸವನ್ನು ಯಾವ ವಿವೇಕಿಯು ಮಾಡಲಾರನು. ಆದರೆ ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೇ ಶ್ರೀ ಯಾಜ್ಞ್ಯವಲ್ಕ್ಯರು ಕೇವಲ ಕಣ್ವ-ಮಾಧ್ಯಂದಿನ ಶಾಖೆಯವರಿಗಷ್ಟೇ ಗುರುಗಳಲ್ಲ. ಅವರು ಜಗದ್ಗುರುಗಳು. ವೈದಿಕ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ಸರ್ವರಿಗೂ ಮಾನ್ಯವಾದದು. ಹೀಗಾಗಿ ಅವರು ಎಲ್ಲಾ ವೇದಗಳ ಎಲ್ಲಾ ಶಾಖೆಯವರಿಗೂ, ಅವರು ಒಪ್ಪಲಿ ಬಿಡಲಿ, ಗುರುಗಳು. ಅದೇ ರೀತಿ ಶ್ರೀ ಯಾಜ್ಞ್ಯವಲ್ಕ್ಯರಿಗಿಂತ ಮುಂಚೆ ಶುಕ್ಷ ಯಜುವರ್ೇದವನ್ನುಳಿದು ಇತರೆ ವೇದಗಳನ್ನು ವಿಭಾಗಮಾಡಿ, ಪೈಲ, ಶ್ರೀಯಾಜ್ಞ್ಯವಲ್ಕ್ಯರ ಗುರುಗಳಾದ ವೈಶಂಪಾಯನ, ಸುಮಂತು ಹಾಗೂ ಜೈಮಿನಿಗಳಿಗೆ ಉಪದೇಶಮಾಡಿದ ಸಾಕ್ಷಾತ್ ಭಗವಂತನ ಅವತಾರವಾದ ಶ್ರೀ ವೇದವ್ಯಾಸರು ಎಲ್ಲರಿಗೂ ಗುರುಗಳೇ. ಇದನ್ನೂ ಸಹ ಯಾರು ಅಲ್ಲಗಳೆಯಲು ಸಾಧ್ಯವಿಲ್ಲ.  ಹೀಗಿರುವಾಗ ಋಗ್ವೇದಿಗಳು, ಕೃಷ್ಣಯಜುವರ್ೇದಿಗಳು, ಸಾಮವೇದಿಗಳು ಹಾಗೂ ಅಥರ್ವವೇದಿಗಳೆಲ್ಲರೂ, ಎಲ್ಲಿಯೂ ಸಹ, ನಮಗೆ ಶ್ರೀವೇದವ್ಯಾಸರಷ್ಟೇ ಗುರುಗಳು. ಶಂಕರಾಚಾರ್ಯರಾಗಲೀ , ರಾಮಾನುಚಾರ್ಯರಾಗಲಿ ಅಥವಾ ಮಧ್ವಾಚಾರ್ಯರಾಗಲಿ ನಮಗೆ ಗುರುಗಳಲ್ಲ ಎಂದು ಹೇಳುವ ಸಾಹಸ ಮಾಡಿಲ್ಲ. ಏಕೆಂದರೆ ಈ ದಾರ್ಶನಿಕರ ಭಾಷ್ಯ, ಟೀಕೆ ಟಿಪ್ಪಣಿಗಳಿಲ್ಲದೇ ವೇದಗಳನ್ನು ನೇರವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬುದನ್ನು ಅವರು ಒಪ್ಪಿಕೊಂಡಿರುತ್ತಾರೆ. ಅಂಥದ್ದರಲ್ಲಿ ಯಾರ ಭಾಷ್ಯದ ಸಹಾಯವಿಲ್ಲದೇ ಶ್ರೀಯಾಜ್ಞ್ಯವಲ್ಕ್ಯರ ಶುಕ್ಷ ಯಜುವರ್ೇದವನ್ನು ನಮ್ಮ ಪ್ರಸ್ತುತ ಪೀಠಾಧಿಪತಿಗಳು ಮತ್ತು ಅವರ ಆತ್ಮೀಯ ಶಿಷ್ಯರು ನೇರವಾಗಿ ಅಥರ್ೈಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ತಿಳಿಯುವುದು ಹಾಸ್ಯಾಸ್ಪದ . ವೇದಗಳನ್ನು ಹೇಗೆ ಅಥರ್ೈಸಬೇಕೆಂದು ತಿಳಿಸುವುದಕ್ಕಾಗಿಯೇ ಶ್ರೀ ವೇದವ್ಯಾಸರು ಬ್ರಹ್ಮ ಸೂತ್ರಗಳನ್ನು ರಚಿಸಿಕೊಟ್ಟ ನಂತರವೂ ಸಹ ಅವು ಕೆಲವರಿಗೆ ಅರ್ಥವಾಗದೇ , ಇನ್ನು ಕೆಲವರಿಗೆ ವಿಪರೀತ ಅರ್ಥವಾಗಿ ವೇದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲಾರದವರು 21 ಜನ ಆಗಿ ಹೋದರು . ವಿಷಯ ಇಷ್ಟು ಗಹನವಾಗಿರುವಾಗ , ಮಧ್ವಾಚಾರ್ಯರ ಭಾಷ್ಯದ ಅಗತ್ಯನಮಗಿಲ್ಲ .ನಾವು ಅವರ ಭಾಷ್ಯ ಒಪ್ಪುವದಿಲ್ಲ ಅವರ ಅವಶ್ಯಕತೆ ನಮಗಿಲ್ಲ, ನಾವುನೇರವಾಗಿ ವೇದಗಳಲ್ಲಿ ಪುರಾಣಗಳಲ್ಲಿ ಏನು ವಾಕ್ಯಗಳಿವೆಯೋ ಅದರಂತೆ ಅರ್ಥಮಾಡುತ್ತೇವೆ ಎಂಬುದು ಎಂಥ ಉದ್ಘಟತನದ ಅಭಿಪ್ರಾಯ ನೀವೇ ವಿಚಾರಿಸಿನೋಡಿ. ಇವರು ಶ್ರೀ ಶಂಕರಾಚಾರ್ಯರು , ರಾಮಾನುಜಾಚಾರ್ಯರಿಗಿಂತಲು ಪ್ರಬುಧ್ದರೇ? ವೈದಿಕ ಸಾಹಿತ್ಯ -ಪುರಾಣ ಸಾಹಿತ್ಯಗಳು ಅರ್ಥವಾಗಬೇಕಾದರೆ ದರ್ಶನೆ ಬಾಷೆ, ಸಮಾಧಿ ಬಾಷೆ, ಗುಹ್ಯ ಬಾಷೆಗಳ ಪರಿಚಯ ವಿರಬೇಕು. ಏಳು ಪ್ರಕಾರಗಳನ್ನು (ಸ್ಟೈಲ್) ತಿಳಿದು ಕೊಂಡಿರಬೇಕು. ಈ ಯಾವುದರ ಗಂಧಗಾಳಿಯಲ್ಲಿದ ನಮಗೆ ಮಧ್ವಾಚಾರ್ಯರ ಭಾಷ್ಯಬೇಡ ಎನ್ನುವುದು ಅಜ್ಞಾನದ ಪರಮಾವಧಿ ಎಂದೇ ಹೇಳಬೇಕಾಗುತ್ತದೆ ಬಹುಶ: ಇತರೆ ಮಾಧ್ವ ಬ್ರಾಹ್ಮಣರು ನಮ್ಮ ಕಾಣ್ವರನ್ನು ತಾರತಮ್ಯ ರೀತಿಯಿಂದ ನಡೆಸಿಕೊಳ್ಳುತ್ತಿರುವುದಕ್ಕಾಗಿ ಅವರ ಮೇಲಿನ ಸಿಟ್ಟಿಗಾಗಿ ಮಧ್ವಾಚಾರ್ಯರನ್ನೇ ಅಲ್ಲಗೆಳೆಯುವುದು ಅಕ್ಷಮ್ಯ ಅಪರಾಧ ಎಂದೇ ನನ್ನ ಭಾವನೆ .

 

9. ಇನ್ನೊಂದು ರೀತಿಯಲ್ಲಿ ವಿಚಾರ ಮಾಡೋಣ ನಮಗೆ ಭಾಷ್ಯವೆ ಬೇಕೆಂಬುದಾದಲ್ಲಿ ಶ್ರೀ ಮಧ್ವಾಚಾರ್ಯರ ಭಾಷ್ಯವೇ ಏಕೆ? ಶ್ರೀ ಶಂಕರಾಚಾರ್ಯರ ಅಥವಾ ರಾಮಾನುಜಾಚಾರ್ಯರ ಭಾಷ್ಯ ಏಕಾಗಬಾರದು ಎಂಬ ಪ್ರಶ್ನೆ ಬರಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ವಾಚಕರ ಗಮನಕ್ಕೆ ಒಂದು ವಿಷಯ ತರಬಯಸುತ್ತೇನೆ. ಈಗ ಸುಮಾರು ಮೂರು ವರ್ಷಗಳಹಿಂದೆ ನಮ್ಮ ಕಣ್ವ ಮಠದ ಪ್ರಸ್ತುತ ಪೀಠಾಥೀಶ್ವರರು ಒಂದು ಕರ ಪತ್ರ ಮುದ್ರಿಸಿ, ಅದರಲ್ಲಿ ಜೀವ ಈಶ ಭೇದ ತಾರತಮ್ಯ ವನ್ನು ಮೊದಲು ಹೇಳಿದವರು ಯಜ್ಞ್ಯವಲ್ಕ್ಯರೇ? ಮಧ್ವಾಚಾರ್ಯರೇ? ಎಂದು ಪ್ರಶ್ನಿಸಿ ತಮ್ಮ ಪಾಂಡಿತ್ಯವನ್ನು ಮೆರೆದಿದ್ದರು. ಅಂದಮೇಲೆ ಇವರ ಪ್ರಕಾರ, ಜೀವ-ಈಶ ಭೇದ ಪಂಚಭೇಧ ತಾರತಮ್ಯವನ್ನು ಮೊದಲು ಹೇಳಿದವರು, ಶ್ರೀ ಯಾಜ್ಞ್ಯವಲ್ಕ್ಯರು ನಂತರ ಅದನ್ನು ಹೇಳಿದವರು ಮಧ್ವಾಚಾರ್ಯರು ಎಂದು ಒಪ್ಪಿಕೊಂಡಂತಾಯಿತಲ್ಲವೇ? ಅಂದಮೇಲೆ ಇವರ ಪ್ರಕಾರ ಶ್ರೀ ಯಜ್ಞ್ಯವಲ್ಕ್ಯರ ಮತವೇ ಶ್ರೀ ಮಧ್ವಾಚಾರ್ಯರ ಮತ ಎಂಬುದು ಸ್ಪಷ್ಠಪಡಿಸಿದಂತಾಯಿತು. ಇನ್ನೊಂದು ಕಡೆ ಶ್ರೀಯಾಜ್ಞ್ಯವಲ್ಕ್ಯರು ಜೀವ ಈಶಭೇದ ತತ್ವಕ್ಕೂ ಶ್ರೀ ಶಂಕರಾಚಾರ್ಯರ ಅಹಂಬ್ರಹ್ಮಾಸ್ಮಿ ತತ್ವಕ್ಕೂ ವಿರೋಧ ಬರುತ್ತದೆ. ರಾಮಾನುಜಾಚಾರ್ಯರ ಇಲ್ಲಿ ಮಾತ್ರ ಭೆಧ ಅಲ್ಲಿ ಒಂದೇ ಎಂಬ ತತ್ವವೂ ವಿರೋಧವಾಗುತ್ತದೆ. ವಿಷಯಹೀಗಿರುವಾಗ ಶ್ರೀಯಾಜ್ಞ್ಯವಲ್ಕ್ಯರ ಅಭಿಪ್ರಾಯವನ್ನು ಸರಿ ಎಂದು ಒಪ್ಪಿಕೊಂಡು ಅದರಂತೆ ಭಾಷ್ಯ ಬರೆದ ಶ್ರೀ ಮಧ್ವಾಚಾರ್ಯರನ್ನೇ ಅನಗತ್ಯ ಎಂದು ಭಾವಿಸುವುದು ಮೂರ್ಖತನವಾಗುವುದಿಲ್ಲವೇ.

10. ಶ್ರೀ ಮಧ್ವಾಚಾರ್ಯರಿಗಿಂತಲೂ ಮುಚೆ ಬಂದ  ಭಾಷ್ಯೇಕಾರರಿಗೂ ತಿಳಿಯದೇ ಹೋದ ಎಷ್ಟೋ ಸಂದಿಗ್ದ ಸಂಗತಿಗಳಿಗೆ, ತಮ್ಮ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಹಾಗೂ ಭಾಗವತ ತಾತ್ಪರ್ಯ ನಿರ್ಣಯದಲ್ಲಿ ಉತ್ತರ ನೀಡಿದ ಶ್ರೀ ಮಧ್ವಾಚಾರ್ಯರನ್ನು ಹೊರಗಿಟ್ಟು ಬದುಕುವ ಆಧ್ಯಾತ್ಮಿಕ ಬದುಕೂ ಒಂದು ಬದುಕೇ ? ಶ್ರೀ ಮಧ್ವಾಚಾರ್ಯ ಒಬ್ಬರನ್ನೇ ಹೊರಗಿಡಲು ಸಾಧ್ಯವಿಲ್ಲ ಅವರ ಹಿಂದೆಯೇ ಅವರ ಪರಂಪರೆಯಲ್ಲಿ ಬರುವ ಮಹಾಪುರುಷರಾದ ಶ್ರೀಯುತ ಜಯತೀರ್ಥರು ವ್ಯಾಸರಾಯರು, ವಾದಿರಾಜರು, ರಾಘವೇಂದ್ರ ಸ್ವಾಮಿಗಳು ಇವರೆಲ್ಲರ ಸಂಪರ್ಕ ಕಳೆದುಕೊಳ್ಳಬೇಕಾಗುತ್ತದೆ. ಇವರೆಲ್ಲರ ಗ್ರಂಥಗಳು ಮಾಧ್ವಭಾಷ್ಯಾನುಸರಿಯಾಗಿಯೇ ರಚನೆಗೊಂಡಿದ್ದಾಗಿವೆ. ಇನ್ನೂ ಮುಂದುವರೆದಲ್ಲಿ ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು ಹಾಗೂ ಶ್ರೀ ಜಗನ್ನಾಥದಾಸರುಗಳನ್ನು ಹೊರಗಿಡಬೇಕಾಗುತ್ತದೆ. ಹೀಗಾಗಿ ಕಾಣ್ವಶಾಖೆಯ ಮಾಧ್ವಮತಾನುಮಾಯಿಗಳ ಭಜನಾ ಮಂಡಳಿಗಳನ್ನೆಲ್ಲಾ  ವಿಸರ್ಜಸಬೇಕಾದೀತು. ಏಕೆಂದರೆ ಎಲ್ಲಾ ಹರಿದಾಸರ ಹಾಡುಗಳೂ ಮಧ್ವಮತ ಪ್ರತಿಪಾದಕವಾಗಿಯೇ ರಚನೆ ಗೊಂಡಿರುತ್ತವೆ. ಒಮ್ಮೆ ಯೋಚಿಸಿ ನೋಡಿ ಪರಿಸ್ಥಿತಿ ಊಹಿಸಿಕೊಂಡರೆ ನಮ್ಮ ಆಧ್ಯಾತ್ಮಿಕ ಬದುಕುನಿಂದ ಮಧ್ವಾಚಾರ್ಯರನ್ನು ಹೊರಿಗಿಟ್ಟು ಬದುಕುವುದು ಎಷ್ಟು ಭಯಾನಕ ಎಂಬುದರ ಅರಿವಾಗುತ್ತದೆ. ಆದರೆ ಇಲ್ಲಿ ಒಂದು ಮಾತು, ಈ ಲೇಖನದಲ್ಲಿ ತಿಳಿದ ವಿಷಯ ಹರಿ-ವಾಯು ಗುರುಗಳಲ್ಲಿ ಶ್ರದ್ಧೆ ಭಕ್ತಿ ಇಟ್ಟು ಆಧ್ಯಾತ್ಮ ಜೀವನ ನಡೆಸಬೇಕೆನ್ನುವವರಿಗೆ ಮಾತ್ರ ಅನ್ವಯವಾಗುತ್ತದಯೇ ಹೊರತು ಹುಟ್ಟಿ ಬಂದ ನಂತರ ಯಾವುದೆ ಒಂದು ದಾರಿಯಲ್ಲಿಹಣ ಆಸ್ತಿಗಳಿಸುವುದು ಮುಖ್ಯವಾಗಿ ಅದಕ್ಕಾಗಿ ಮೋಸ ವಂಚನೆ ಯಿಂದ ಯಾರದೋ ಆಸ್ತಿ ಕಬಳಿಸಿ ಬದುಕುವುದೇ ಪರಮಾರ್ಥ ಎಂದು ಭಾವಿಸುವವರಿಗೆ ಇದರಲ್ಲಿರುವ ಸಂದೇಶ ಅನ್ವಯವಾಗುವುದೇ ಇಲ್ಲ ಎಂಬುದು ಸ್ಪಷ್ಟ.

11.  ಈ ಹಿಂದೆ ಹೇಳಿದಂತೆ ಶ್ರೀ ಯಾಜ್ಞ್ಯವಲ್ಕ್ಯರು ಮಹಾಪುರುಷರು ನಿಜ. ಆದ್ದರಿಂದಲೇ ಅವರ ಉಲ್ಲೇಖ ಉಪನಿಷತ್ತಿನಲ್ಲಿ, ಮಹಾಭಾರತದಲ್ಲಿ , ಭಾಗವತದಲ್ಲಿ ಇತರೆ ಪುರಾಣಗಳಲ್ಲಿ ಬರುತ್ತದೆ. ಈ ಮೇಲೆ ತಿಳಿಸಿದ ಗ್ರಂಥಗಳಲ್ಲಿ ಅವರ ಬಗ್ಗೆ ಉಲ್ಲೇಖ ಇದೆ. ಆ ಗ್ರಂಥಗಳ ಬಗ್ಗೆ ಶ್ರೀ ಯಾಜ್ಞ್ಯವಲ್ಕ್ಯರು ಏನು ಹೇಳುವುದಿಲ್ಲ. ಏಕೆಂದರೆ ಅವರ ಕಾಲದಲ್ಲಿ ಈ ಗ್ರಂಥಗಳ ರಚನೆಯೇ ಆಗಿರಲಿಕ್ಕಿಲ್ಲ ಈಗ ಈ ಗ್ರಂಥಗಳ ಬಗ್ಗೆ ನಮಗೆ ಸರಿಯಾದ ತಿಳುವಳಿಕೆ ಕೊಡಲಾದರೂ ಒಬ್ಬ ಮಹಾಪುರುಷರು ಬೇಕಲ್ಲ? ಇಲ್ಲದೇ ಹೋದಲ್ಲಿ ಅವುಗಳನ್ನು ಅರ್ಥಮಾಡಿಕೊಳ್ಳುವುದು ನಮಗೆ ಸಾಧ್ಯವೇ? ಅಥವಾ ನಮ್ಮ ಮಠದಲ್ಲಿ, ಮಧ್ವಾಚಾರ್ಯರ ನಂತರ 23ನೇ ಭಾಷ್ಯ ರಚಿಸುವವರು ಅವತರಿಸಿದ್ದಾರೆಯೇ? ಇಲ್ಲ. ಈ ಕಾರಣಕ್ಕಾಗಿಯೇ ಶ್ರೀ ಮಧ್ವಾಚಾರ್ಯರು ನಾವು ಅತ್ಯಗತವಾಗಿ ಅನುಸರಿಸಲೇ ಬೇಕಾದ ಗುರುಗಳು. ನಮ್ಮ ಅಧ್ಯಾತ್ಮ ಜೀವನದಲ್ಲಿ ಏನಾದರೂ ಸಾಧಿಸಲೇ ಬೇಕೆಂದಿದ್ದರೇ ಶ್ರೀ ಮಧ್ವರ ವಾಣಿಯನ್ನು ಅನುಸರಿಸಬೇಕೇ ವಿನಃ ತಮ್ಮ ಸ್ವಹಿತ ಸ್ವಾರ್ಥಕ್ಕಾಗಿ ಶ್ರೀ ಮಧ್ವರಂತಹ ಗುರುಗಳನ್ನು ಅಲ್ಲಗಳೆಯುವಂತಹ ಅಜ್ಞಾನಿಗಳ ಉಪದೇಶವನ್ನು  ಕೇಳುವುದರಿಂದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.

ಮಧ್ವರಾಯರ ಕರುಣೆ ಪಡೆಯದವ ಧರೆಯೊಳಗೆ ಇದ್ದರೇನು? ಇಲ್ಲದಿದ್ದರೇನು?
" ಓಂ ತತ್ಸತ್"
ಕೆ. ಸತ್ಯನಾರಾಯಣರಾವ್, ಹೊಸಪೇಟೆ ಕಣ್ವ ಮಠದ ಉದ್ದಾರ ಬಯಸುವ ಒಬ್ಬ ಶಿಷ್ಯ

Monday, November 5, 2012

ಕಾಣ್ವ ಶಾಖೆಯವರಲ್ಲಿ ಮಾಧ್ವರಿಲ್ಲವೇ ? ಅಥವಾ ಕಾಣ್ವ ಶಾಖೆಯವರು ಮಾಧ್ವರಲ್ಲವೇ ? ( Part-1 )

ಶುಕ್ಲ ಯಜುವರ್ೇದದ ಕಾಣ್ವ ಶಾಖೆಯ ಮಧ್ವಮತಾನುಯಾಯಿಗಳೇ ,

ತೀರಾ ಇತ್ತೀಚಿನ ದಿನಗಳಲ್ಲಿ ಕನರ್ಾಟಕದಲ್ಲಿ ಕೆಲವರು ವಿಶೇಷವಾಗಿ ಕಣ್ವ ಮಠದ ಪ್ರಸ್ತುತ ಪೀಠಾಧಿಪತಿಗಳ ಸುತ್ತ ಮುತ್ತಾ ಸೇರಿ ಕೊಂಡಿರುವವರು ಸಮಾಜದಲ್ಲಿ ಹೇಳಿಕೆಗಳನ್ನು ಕೊಡುತ್ತಾ , ನಾವು ಕಾಣ್ವರು ಮಾಧ್ವರಲ್ಲ, ಮಧ್ವಾಚಾರ್ಯರಿಗೂ ನಮಗೂ ಸಂಬಂಧವಿಲ್ಲ ಎಂಬಂತೆ ಅಪಪ್ರಚಾರ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇವರ ಪ್ರಕಾರ ಶ್ರೀ ಯಾಜ್ಞ್ಯವಲ್ಕ್ಯರು ಮಾತ್ರ ನಮ್ಮ ಗುರುಗಳು, ಕಣ್ವ ಮಠ ಒಂದು ಮಾಧ್ವ ಮಠವಲ್ಲ, ಅದು ಸ್ಮಾರ್ತ, ಭಾಗವತ ಮತ್ತು ಮಾಧ್ವ ಸಂಪ್ರದಾಯದವರೆಲ್ಲರಿಗೂ ಸೇರಿದ್ದಾಗಿದೆ ಎಂಬ ವಿಷ ಬೀಜವನ್ನು ಬಿತ್ತಲಾರಂಬಿಸಿದ್ದಾರೆ. ದುರದೃಷ್ಟವಶಾತ್ ಇದಕ್ಕೆ ಪ್ರಸ್ತುತ ಪೀಠಾಧಿಪತಿಗಳ ಬೆಂಬಲವಿರುವುದು ಸಹ ಕಂಡು ಬಂದಿದೆ   (ವಿಪಯರ್ಾಸವೆಂದರೆ ಒಂದು ಕಡೆ ನಾವು ಮಾಧ್ವರಲ್ಲ ಎಂದು ಹೇಳಿಕೆ ನೀಡುತ್ತಾ ಮತ್ತೊಂದು ಕಡೆ ಈ ಮಠ ಸ್ಮಾರ್ತ ಭಾಗವತ ಮತ್ತು ಮಾಧ್ವ ಸಂಪ್ರದಾಯದವರೆಲ್ಲರಿಗೂ ಸೇರಿದೆ ಎಂದು ಎರಡು ವಿರುದ್ಧ ಹೇಳೀಕೆಗಳನ್ನು ನೀಡುತ್ತಿರುವುದು).

 ಈ ಮೇಲೆ ತಿಳಿಸಿದ ಘಟನೆಗಳಿಂದಾಗಿ ನಾವು ಅಂದರೆ ಕಾಣ್ವ ಶಾಖೆಯ ಮಧ್ವ ಮತಾನುಯಾಯಿಗಳು ವಿಷಯವನ್ನು ಚೆನ್ನಾಗಿ ವಿವರಿಸಿ ಸತ್ಯವನ್ನು ಜನರಿಗೆ ತಿಳೀಸುವ ಕಾರ್ಯನಡೆಯಬೇಕಾಗಿದೆ. ಅದಕ್ಕಾಗಿ ಈ ಲೇಖನ ಬರೆಯುತ್ತಿದ್ದೇನೆ.

1. ಮೊಟ್ಟ ಮೊದಲನೆಯದಾಗಿ ನಮ್ಮ ಮಠಕ್ಕೆ ಇಟ್ಟಿರುವ ಹೆಸರಿನಿಂದಾಗಿ ಬಹಳ ಜನರಿಗೆ ಗೊಂದಲ ಉಂಟಾಗುತ್ತಿದೆ. ಶಾಖೆ (ಸಂಹಿತೆ)ಯ ಹೆಸರನ್ನು ಮಠಕ್ಕೆ ಇಟ್ಟಿರುವುದರಿಂದ ಕಣ್ವ ಶಾಖೆ ಮತ್ತು ಕಣ್ವ ಮಠ ಈ ಎರಡರ ನಡುವಿನ ವ್ಯತ್ಯಾಸ ಜನರಿಗೆ ತಿಳಿಯುತ್ತಿಲ್ಲ. ಹೀಗಾಗಿ ಹೆಚ್ಚಿನ ಜನರಿಗೆ, ನಮ್ಮ ಮಠ ಕಾಣ್ವ ಶಾಖೆಯ ಎಲ್ಲಾ ಸಂಪ್ರದಾಯದವರಿಗೆ ಸೇರಿದ್ದು ಎಂಬ ಭ್ರಮಯುಂಟಾಗಿದೆ. ಬೇರೆ ವೇದಗಳವರಿಗೆ ಅಂದರೆ ಋಗ್ವೇದಿಗಳಲ್ಲಿ ಹಾಗೂ ಕೃಷ್ಣ ಯಜುವರ್ೇದಿಗಳಲ್ಲಿ ಈ ರೀತಿಯಿಲ್ಲ. ಅವರಲ್ಲಿ ಸ್ಮಾರ್ತರಿಗೆ, ಶ್ರೀ ವೈಷ್ಣವರಿಗೆ ಹಾಗೂ ಮಾಧ್ವರಿಗೆ ಬೇರೆ ಬೇರೆ ಮಠಗಳಿವೆ. ನಮ್ಮಲ್ಲಿ ಆ ರೀತಿ ಇಲ್ಲ. ಆದುದರಿಂದ ನಮ್ಮ ಕಣ್ವ ಮಠ ಎಲ್ಲಾ ಸಂಪ್ರದಾಯದವರಿಗೆ ಸೇರಿದ್ದು ಎಂಬುದಾಗಿ ತಪ್ಪು ತಿಳಿದುಕೊಂಡಿದ್ದಾರೆ. ಇಷ್ಟಕ್ಕೆಲ್ಲಾ ಕಾರಣವೇನೆಂದರೆ ಶಾಖೆಯ ಹೆಸರನ್ನು ಮಠಕ್ಕೆ ಇಟ್ಟಿರುವುದರಿಂದ ಜನರಿಗೆ ವಿಷಯ ಅರ್ಥವಾಗುತ್ತಿಲ್ಲ ಕೆಲವರಿಗೆ ಅರ್ಥವಾದರು ತಮ್ಮ ಸ್ವಹಿತಕ್ಕಾಗಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಈ ಕೆಳಗಿನ ವಿವರಣೆಯನ್ನು ನಿಧಾನವಾಗಿ ಗಮನವಿಟ್ಟು ಓದಿ , ವಿಚಾರ ಮಾಡಿದರೆ ಎಲ್ಲರಿಗೂ ಸತ್ಯಗೋಚರಿಸುತ್ತದೆ.

2. ಶಂಕರಾಚಾರ್ಯ ಮತದವರು (ಸ್ಮಾರ್ತರು) ರಾಮಾನುಜಾಚಾರ್ಯ ಮತದವರು (ಶ್ರೀವೈಷ್ಣವರು) ಮಧ್ವಾಚಾರ್ಯಮತದವರು (ಮಾಧ್ವರು) ಈ 3 ಸಂಪ್ರದಾಯದವರು ಎಲ್ಲಾ ವೇದಗಳ ಎಲ್ಲಾ ಶಾಖೆಗಳಲ್ಲಿಯೂ ಇರುತ್ತಾರೆ. ಈಗ ನಮಗೆ ಪ್ರಸ್ತುತ ಲಭ್ಯವಿರುವ ಶಾಖೆಗಳೆಂದರೆ ಋಗ್ವೇದದ ಶಾಕಲ ಶಾಖೆ (ಸಂಹಿತೆ) ಕೃಷ್ಣ ಯಜುವರ್ೇದ ತೈತ್ತಿರೀಯ ಶಾಖೆ ಮತ್ತು ಕಠಶಾಖೆ ಹಾಗೂ ಶುಕ್ಲ ಯಜುವರ್ೇದದ ಕಣ್ವಶಾಖೆ ಮತ್ತು ಮಧ್ಯಂದಿನ ಶಾಖೆ.

3. ಋಗ್ವೇದಿಗಳಿಗೆ ಈಗ ತಮ್ಮ ಶಾಖೆ ಯಾವುದೆಂಬುದೇ ತಿಳಿಯುತ್ತಿಲ್ಲ. ಆದರೆ ಋಗ್ವೇದಿಗಳಲ್ಲಿ ಶಾಂಕರರು, ರಾಮಾನುಜೀಯರು ಹಾಗೂ ಮಾಧ್ವರು ಹೀಗೇ ಮೂರು ಸಂಪ್ರದಾಯದವರಿದ್ದಾರೆ ಶಂಕರಾಚಾರ್ಯರ ಕಾಲದಲ್ಲಿದ್ದ ಎಲ್ಲಾ ಬ್ರಾಹ್ಮಣರಲ್ಲಿ ಮುಂದೆ ರಾಮಾನುಜಾಚಾರ್ಯರು ಬಂದ ನಂತರ ಕೆಲವರು ಅವರ ಮತವನ್ನನುಸರಿದ್ದರು. ತದನಂತರದಲ್ಲಿ, ಮಧ್ವಾಚಾರ್ಯರು ಬಂದನಂತರ ಅವರಲ್ಲಿ ಕೆಲವರು ಮಧ್ವ ಮತವನ್ನು ಅನುಸರಿಸಿದ್ದರು. ಹೀಗೆ, ಶಂಕರರ ಮತದಲ್ಲೇ ಉಳಿದವರು , ಶೃಂಗೇರಿ ಮಠ, ಕಂಚಿಮಠ, ಸ್ವರ್ಣವಲ್ಲಿ ಇತ್ಯಾದಿ ಮಠದ ಶಿಷ್ಯರಾದರು ರಾಮಾನುಜಾಚಾರ್ಯರ ಮತಾನುಯಾಯಿಗಳು, ಶ್ರೀ ವೈಷ್ಣವರೆನಿಸಿ ಅವರದೇ ಆದ ಮಠಗಳ ಶಿಷ್ಯರೆನಿಸಿದರು. ಮುಂದೆ ಮಾಧ್ವ ಮತಾನುಯಾಯಿಗಳು ಉತ್ತರಾದಿಮಠ, ವಿಬುದೇಂದ್ರ ಮಠ (ಈಗಿನ ರಾಯರ ಮಠ) ವ್ಯಾಸರಾಯ ಮಠ, ಶ್ರೀ ಪಾದರಾಯರ ಮಠ ಮುಂತಾದ ಅನೇಕ ಮಠದ ಶಿಷ್ಯರೆನಿಸಿದರು. ತಾತ್ಪರ್ಯವೇನೆಂದರೆ ಒಂದೇ ವೇದದ ಒಂದೇ ಶಾಖೆಯವರು ಕಾಲಾನುಕ್ರಮವಾಗಿ ಅದ್ವೈತ, ವಿಶಿಷ್ಠಾದ್ವೈತ ಹಾಗೂ ದೈತ ಹೀಗೇ ಮೂರು ಮಠಗಳಲ್ಲಿ ಅವರವರ ಅಭಿರುಚಿಗೆ ತಕ್ಕಂತೆ ಹಂಚಿಹೋದರು.

4. ಈ ಮೇಲೆ ತಿಳಿಸಿದ ಪ್ರಕ್ರಿಯೆಗನುಗುಣವಾಗಿ ಕೃಷ್ಣ ಯಜುವರ್ೇದಿಯ ತೈತ್ತಿರೀಯ ಶಾಖೆಯವರು ಸಹ ಮೂರು ಮಠಗಳಲಿ ತಮ್ಮ ಅಭಿರುಚಿಗೆ ತಕ್ಕಂತೆ ಹಂಚಿಹೋಗಿರುತ್ತಾರೆ. ಒಟ್ಟಾರೆ ಅಭಿಪ್ರಾಯದಲ್ಲಿ ಈ ಮೂರು ಮತ ಮಠಗಳಲ್ಲಿ ಋಗ್ವೇದಿಗಳು (ಶಾಖೆ ತಿಳಿದಿಲ್ಲ) ಕೃಷ್ಣ ಯಜುವರ್ೇದದ ತ್ತೆತ್ತೀರೀಯ ಶಾಖೆಯವರು ಇರುತ್ತಾರೆ. ಆದರೆ ಇವರ ಮಠಗಳಿಗೆ ಋಗ್ವೇದ ಶಾಕಲ ಮಠವೆಂದಾಗಲೀ ಕೃಷ್ಣ ಯಜುವರ್ೇದದ ತ್ತೆತ್ತಿರೀಯ ಮಠವೆಂದಾಗಲೀ ಹೆಸರಿಲ್ಲ ಮಠಗಳ ಹೆಸರುಗಳು ಶಾಖೆಯ ಹೆಸರುಗಳಿಂದ ಭಿನ್ನವಾಗಿದೆ. ಉದಾ: ಶೃಂಗೇರಿ ಮಠ, ಕಂಚಿಮಠ, ಸ್ವರ್ಣವಲ್ಲಿ ಮಠ ಶ್ರೀ ವೈಷ್ಣವ ಮಠಗಳು0 ಉತ್ತರಾದಿಮಠ, ರಾಯರ ಮಠ ಇತ್ಯಾದಿ, ಹೀಗಾಗಿ ಉತ್ತರಾದಿ -ರಾಯರ-ವ್ಯಾಸ ರಾಯರ ಮಠಗಳಲ್ಲಿ ಸ್ಮಾರ್ತರಿರುವುದಿಲ್ಲ ಅದರಂತೆಯೇ ಶೃಂಗೇರಿ , ಕಂಚಿ, ಸ್ವರ್ಣವಲ್ಲಿ ಮಠಗಳಲಿ ಮಾಧ್ವರಿರುವುದಿಲ್ಲ ಗಮನಿಸಬೇಕಾದ ವಿಷಯವೆಂದರೆ ಇವರ ಮಠಗಳು ಬೇರೆ ಬೇರೆಯಾದರೂ ಸಹ ಇವರೆಲ್ಲರೂ ಒಂದೇ ಶಾಖೆಗೆ ಸೇರಿದವರಾಗಿರಬಹುದು.

5. ಈಗ ನಮ್ಮ ಕಣ್ವ ಮಠಕ್ಕೆ ಬರೋಣ ಶುಕ್ಲ ಯುವರ್ೇದದಲ್ಲಿ ಒಟ್ಟು 15 ಶಾಖೆಗಳಿದ್ದು ಈಗ ಕೇವಲ ಎರಡು ಶಾಖೆಗಳು ಉಳಿದುಕೊಂಡಿವೆ. ಅವುಗಳೆಂದರೆ 1) ಕಾಣ್ವ ಶಾಖೆ 2) ಮಾಧ್ಯಂದಿನಶಾಖೆ ಇವುಗಳಲ್ಲಿ ಕನರ್ಾಟಕದಲ್ಲಿ ಮಾಧ್ಯಂದಿನ ಶಾಖೆಯವರು ಇಲ್ಲವೆಂದೇ ಹೇಳಬಹುದು. ಉತ್ತರ ಭಾರತದಲ್ಲಿ ಈ ಶಾಖೆಯವರು ಹೇರಳವಾಗಿ ಸಿಗುತ್ತಾರೆ. ಇನ್ನು ಉಳಿದಿದ್ದು ಕಣ್ವಶಾಖೆ . ಈ ಹಿಂದೆ ತಿಳಿಸಿದಂಥ ಕ್ರಮದಲ್ಲಿಯೇ ಕಣ್ವ ಶಾಖೆಯವರು ಸಹ ಶಂಕರಾಚಾರ್ಯಕಾಲದಲ್ಲಿ ಇದ್ದವರಲ್ಲಿ ಕಲವರು ರಾಮಾನುಜಾಚಾರ್ಯರ ಬಂದನಂತರ ಅವರ ಮತ ಮಾಯಿಗಳಾದರೂ ಮುಂದೆ ಮಧ್ವಾಚಾರ್ಯರು ಬಂದನಂತರ ಇದೇ ಕಣ್ವ ಶಾಖೆಯ ಕೆಲವರು ಮಧ್ವಮತಾನು ಯಾಯಿಗಳಾದರು.

6. ಈ ರೀತಿ ಮಾಧ್ವ ಮತಕ್ಕೆ ಸೇರಿದ ಕಣ್ವ ಶಾಖೆಯವರು ಮೊದಲು ಆಗ ಚಾಲ್ತಿಯಲ್ಲಿದ್ದ ಪದ್ಮನಾಭ ತೀರ್ಥರ ಪರಂಪರೆಯ ಮಠದಲ್ಲಿದ್ದವರು ಮುಂದೆ ಮಠಗಳು ವಿಭಾಗವಾಗಿ ಉತ್ತರಾದಿ ಮಠ ಮತ್ತು ವಿಭುದೇಂದ್ರ ತೀರ್ಥರ ಮಠಗಳೆಂದು ಕರೆಯಲ್ಪಟ್ಟಾಗ ಕಣ್ವ ಶಾಖೆಯ ಮಧ್ವಮತಾನುಯಾಯಿಗಳು ಶ್ರೀ ವಿಭುದೇಂದ್ರ ಮಠದಲ್ಲಿ (ಈಗಿನ ರಾಯರ ಮಠದಲ್ಲಿ) ಸೇರಿಕೊಂಡರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಧ್ವಮತಕ್ಕೆ ಸೇರಿದ ಕಣ್ವ ಶಾಖೆಯರು ಮಾತ್ರ ಈ ಮಠಕ್ಕೆ ಸೇರಿಕೊಂಡರೆ ವಿನಃ ಬೇರೆ ಕಣ್ವ ಶಾಖೆಯ ಅದೈತ ಮತ್ತು ವಿಶಿಷ್ಠಾದೈತ ಮತದವರು ಇವರೊಂದಿಗೆ ಈ ಮಠಗಳಲ್ಲಿ ಸೇರಿಕೊಳ್ಳಲಿಲ್ಲ ಬಹುಶ ಅವರುಗಳು ತಮ್ಮ ತಮ್ಮ ಮತಗಳಿಗೆ ಸೇರಿದ ಮಠಗಳಲ್ಲಿ ಸೇರಿಕೊಂಡಿರಬಹುದು.  ಮುಂದೆ ಅಧ್ವೈತ ಮತಗಳನ್ನು ಅನುಸರಿಸಿಕೊಂಡು ಬಂದವರಲ್ಲಿ ಚಿದಂಬರ ದೀಕ್ಷಿತರು ಹಾಗೂ ಅಗಡಿ ಆನಂದವನ ಪ್ರಮುಖವಾದುವುಗಳು ಅದರೆ ಅವುಗಳು ಮಠಗಳೆಂದು ಕರೆಸಿಕೊಳ್ಳಲಿಲ್ಲ. ಸಂಸ್ಥಾನಗಳಾಗಿಯೇ ಉಳಿದು ಕೊಂಡಿದ್ದು ಅದುದರಿಂದ ಆ ಸಂಸ್ಥಾನಗಳಲಿ ಸನ್ಯಾಸ ಪೀಠಾಧಿಪತಿಗಳು ಇಲ್ಲ. ಆದರೆ ಕಣ್ವ ಶಾಖೀಯ ಅದೈತಿಗಳು (ಶಂಕರ ಮತದವರಿಗೆ) ಆ ಸಂಸ್ಥಾನಗಳೇ ಮಠಗಳಿದ್ದಂತೆ.

7. ಮುಂದೆ ಶ್ರೀ ರಾಯರ ಮಠದಲ್ಲಿ ಕಣ್ವ ಶಾಖೀಯರನ್ನು ತಾರತಮ್ಯ ಭಾವದಿಂದ ಕಾಣತೊಡಗಿದಾಗ ಇದರಿಂದ ಮನನೊಂದು ಶ್ರೀ ವೆಂಕಟೇಶಾಚಾರ್ಯರು ಕಣ್ವ ಶಾಖೆಯ ಮಾಧ್ವರಿಗಾಗಿಯೇ ಒಂದು ಮಠವನ್ನು ಸ್ಥಾಪಿಸಬೇಕೆಂದು ನಿರ್ಣಯಿಸಿ ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಶಿರೂರು ಮಠದ ಆಗಿನ ಪೀಠಾಧಿಪತಿಗಳಾಗಿದ್ದ ಶ್ರೀ ಲಕ್ಷ್ಮೀ ಮನೋಹರ ತೀರ್ಥರಿಂದ ಸನ್ಯಾಸ ಸ್ವೀಕರಿಸಿ ಕಣ್ವ ಶಾಖೆಯ ಮಧ್ವಮತಾನುಯಾಯಿಗಳಾಗಿಯೇ ಕಣ್ವಶಾಖಿಯರ ಸ್ವಾಭಿಮಾನ ದ್ಯೋತಕವೆಂಬಂತೆ  ಶಾಖೆಯ ಹೆಸರನ್ನೇ ಮಠಕ್ಕೂ ನಾಮಕರಣ ಮಾಡಿ ಕಣ್ವ ಮಠ ಎಂದು ಕರೆದರು. ಈ ರೀತಿಯಾಗಿ ಸ್ಥಾಪನೆಯಾದ ಕಣ್ವ ಮಠಕ್ಕೆ ಕೇವಲ ಮಧ್ವಮತಾನುಮಾಯಿಗಳಷ್ಟೇ ಶಿಷ್ಯರಾಗಿದ್ದರಲ್ಲದೆ ಬೇರೆ ಶಂಕರಾಚಾರ್ಯರ ಮತಾನುಮಾಯಿಗಳಾಗಲೀ ರಾಮಾನುಜಾಚಾರ್ಯರ ಮತಾನು ಮಾಯಿಗಳಗಳಲೀ  ಅಥವಾ ಇತರ ಬೇರೆ ಯಾವುದೇ ಸಂಪ್ರದಾಯವರಾಗಲಿ ಶಿಷ್ಯರಾಗಿರಲಿಲ್ಲ ಆಗಿರುವ ಸಾಧ್ಯತೆಗಳೇ ಇರಲಿಲ್ಲ, ಹೀಗೆ ಕಣ್ವ ಮಠ ಎಂದರೆ ಅದೊಂದು ಮಾಧ್ವಮಠವೇ ಹೊರತು ಈಗ ಕೇವಲ ಅಪಪಪ್ರಚಾರ ನಡೆಸಿರುವಂತೆ ಅದು ಎಲ್ಲಾ ಮತದವರಿಗೂ ಸೇರಿದ್ದು ಎಂಬುದಕ್ಕೆ ಯಾವ ಪ್ರಮಾಣವೂ ಇಲ್ಲ ಆಧಾರವೂ ಇಲ್ಲ. ಹೀಗಾಗಿ ಬೇರೆ ಮತಕ್ಕೆ ಸಂಪ್ರದಾಯಕ್ಕೆ ಸೇರಿದವರು ತಮ್ಮ ಮತವನ್ನು ಪ್ರತಿಪಾದಿಸುವ ಮಠಗಳಿಗೆ ಸಂಸ್ಥಾನಗಳಿಗೆ ಶಿಷ್ಯರಾಗುವುದು ಉಚಿತ ಸ್ವಧಮರ್ಾಚರಣೆ. ಅದೇ ಶ್ರೇಷ್ಠವಾದ ಹಾದಿ.  ಒಟ್ಟಾರೆ ತಾತ್ಪರ್ಯದಲ್ಲಿ ಕಣ್ವ ಶಾಖೆ ಬೇರೆ ಕಣ್ವ ಮಠ ಬೇರೆ. ಬೇರೆ ವೇದಗಳ ಶಾಖೆಗಳಲ್ಲಿ ಇರುವಂತೆ ಕಣ್ವ ಶಾಖೆಯಲ್ಲಿಯೂ ಸಹ ಅಧೈತ, ವಿಶಿಷ್ಠಾಧೈತ ಭಾಗವತ ಸಂಪ್ರದಾಯದವರಿದ್ದಾರೆ ಅದೇ ರೀತಿ ಬೇರೆ ವೇದಗಳ ಶಾಖೆಗಳ ಮಾಧ್ವರಿಗೆ ಹೇಗೆ ಉತ್ತರಾದಿ ಮಠ , ರಾಯರ ಮಠ, ಶ್ರೀ ಪಾದರಾಯರ ಮಠ ವ್ಯಾಸರಾಯರ ಮಠ ಮುಂತಾಗಿ ಇವೆಯೋ ಹಾಗೆ ಕಾಣ್ವ ಶಾಖೆಯ ಮಾಧ್ವರಿಗಾಗಿಯೇ ಇರುವ ಮಠ ಕಣ್ವಮಠ. ಅದಕ್ಕಾಗಿಯೇ ಕಣ್ವಮಠದ ಮಾದವತೀರ್ಥರಿಂದ ಹಿಡಿದು ಪ್ರಸ್ತುತ ಪೀಠಾಧಿಪತಿಗಳವರ ಹಣಿಯಮೇಲೆ ಮಾಧ್ವಮತದ ಸಂಕೇತ ಅಂಗಾರ-ಅಕ್ಷತೆ ಕಂಗೊಳಿಸುತ್ತದೆ. ಕಣ್ವಮಠದ ಪಂಚಾಂಗ ಶುರುವಾದಂದಿನಿಂದ ಇಂದಿನವರೆಗೆ ಪಂಚಾಗದ ರಕ್ಷಪುಟದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರ ಕಂಡುಬರುತ್ತದೆ .

"ಮಧ್ವರಾಯರ ಕರುಣೆ ಪಡೆಯದವ ಧರೆಯೊಳಗೆ ಇದ್ದರೇನು? ಇಲ್ಲದಿದ್ದರೇನು?"
"ಓಂ ತತ್ಸತ್"

ಕೆ. ಸತ್ಯನಾರಾಯಣರಾವ್, ಹೊಸಪೇಟೆ ಕಣ್ವ ಮಠದ ಉದ್ದಾರ ಬಯಸುವ ಒಬ್ಬ ಶಿಷ್ಯ