Wednesday, March 27, 2013

ಅಂಶ, ಆವೇಶ ಮತ್ತು ಅವತಾರ



ಪರಮಾತ್ಮನೆಂದರೆ ಸಾಕ್ಷಾತ್ ಶ್ರೀರಮಾದೇವಿಯರ ಸಹಿತ ಶ್ರೀಮನ್ನಾರಾಯಣನೆಂದು ತಿಳಿಯಬೇಕು


ಅವತಾರ:



  •  ಪರಮಾತ್ಮ ಹಾಗೂ ಪರಮಾತ್ಮನ ಅವತಾರಗಳಿಗೂ, ಪರಮಾತ್ಮ ಹಾಗೂ ಪರಮಾತ್ಮನ ಅವಯವಗಳಿಗೂ ಯಾವುದೇ ಭೇದವಿಲ್ಲ. ಅಂದರೆ ಪರಮಾತ್ಮನ ಎಲ್ಲಾ ಅವಯವಗಳೂ ಪರಮಾತ್ಮನ ಎಲ್ಲಾ ಸೃಷ್ಟ್ಯಾದಿ ಅಷ್ಟ ಕರ್ತೃತ್ವವನ್ನೂ ಮಾಡುತ್ತವೆ. ಪರಮಾತ್ಮನ ಪರಮಾತ್ಮನ ಕಪ್ಪುಕೇಶಾವತಾರವಾದ ಕೃಷ್ಣಾವತಾರವು ಪರಮಾತ್ಮನ ಎಲ್ಲಾ ವ್ಯಾಪಾರಗಳನ್ನೂ ಮಾಡಿತು. ಅದಕ್ಕೇ ಅವನನ್ನು ನಖ-ಶಿಖ ಪರಿಪೂರ್ಣ, ಸ್ವಗತ-ಭೇದ ವಿವರ್ಜಿತ ಎನ್ನುತ್ತಾರೆ.
  •  ಇದೇ ರೀತಿ ವಾಯುದೇವರು ಹಾಗೂ ವಾಯುದೇವರ ಅವತಾರಗಳಿಗೂ (ಹನುಮ, ಭೀಮ ಮಧ್ವ) ಯಾವುದೇ ಭೇದವಿಲ್ಲ. ಏಕೆಂದರೆ ಪರಮಾತ್ಮನು ಹೇಗೆ ಅಪ್ರಾಕೃತ ಪರಿಪೂರ್ಣನೋ ಹಾಗೆ ನಮ್ಮ ವಾಯುದೇವರೂ ಸಹ ಪ್ರಾಕೃತವಾಗಿ ಪರಿಪೂರ್ಣರು. ಆದರೆ ಅವಯವಗಳು ಮಾತ್ರ ಭಿನ್ನ-ಭಿನ್ನವೇ.
    • (ನಿಮ್ಮ ಅವಗಾಹನೆಗಾಗಿ: ಪರಮಾತ್ಮ ಅಣುರೇಣು ತೃಣಕಾಷ್ಟ ಅಪ್ರಾಕೃತವಾಗಿ ಪರಿಪೂರ್ಣ, ಆದರೆ ವಾಯುದೇವರು 32 ಸಲ್ಲಕ್ಷಣಗಳಿಂದ ಸಂಪನ್ನವಾದ ಪ್ರಾಕೃತ ದೇಹದಿಂದ ಪರಿಪೂರ್ಣರು).
  •  ಯಾವುದೇ ಋಜುಜೀವಿಯು (ಮೂರನೇ ಕಕ್ಷೆ) ಅವತರಿಸಿದಾಗ ಪರಮಾತ್ಮನೆಡೆಗೆ ಅವರಿಗಿರುವ ಅವರ ಜ್ಞಾನ, ಭಕ್ತಿ, ವೈರಾಗ್ಯಗಳು ಯಾವುದೇ ಕಾರಣಕ್ಕೂ ಹ್ರಾಸ (ಕಮ್ಮಿ) ಆಗುವುದಿಲ್ಲ. ವಾಯುದೇವರಿಗೆ ಪ್ರಾರಬ್ಧ ಅನ್ನೋದು ಇಲ್ಲವೇ ಇಲ್ಲ..! ಏಕೆಂದರೆ, ಅವರ ಲಿಂಗ ಶರೀರವು ದಗ್ಧಪಟದಂತಿದ್ದು (ಇದ್ದೂ ಇಲ್ಲದಂತೆ)  ಪ್ರಾರಬ್ಧವಿದೆಯೆಂದರೆ ಕೇವಲ ಸುಖ ಪ್ರಾರಬ್ಧವಿದೆಯೆಂದು ತಿಳಿಯಬೇಕು. ಆದ್ದರಿಂದ ವಾಯುದೇವರ ಎಲ್ಲಾ ಅವತಾರಗಳನ್ನೂ ಸಂಪೂರ್ಣ ಅವತಾರಗಳೆನ್ನುತ್ತೇವೆ. ಹೀಗಾಗಿ ವಾಯುದೇವರು ಅವತಾರ ರೂಪದಿಂದಲೂ ಮೂಲರೂಪದಷ್ಟೇ ಸರಿಸಮಾನವಾಗಿ ವ್ಯಾಪಾರ ಮಾಡಲು ಸಮರ್ಥರು.
  •  ಆದರೆ ತದನಂತರದ ಕಕ್ಷೆಯ ದೇವತೆಗಳು ಅವತರಿಸಿದಾಗ ಅವರಿಗೆ ಪ್ರಾರಬ್ಧ ಭೋಗವುಂಟು. ಆಗ ಭೂಸಂಪರ್ಕದಿಂದಾಗಿ ಅವರ ಜ್ಞಾನ, ಭಕ್ತಿ, ವೈರಾಗ್ಯಗಳಲ್ಲಿ ಹ್ರಾಸ ಉಂಟಾಗುತ್ತದೆ. ಹೀಗಾಗಿ ವಾಯುದೇವರ ನಂತರದಲ್ಲಿಯ ಕಕ್ಷೆಯಲ್ಲಿ ಯಾವುದೇ ದೇವತೆಗಳಾಗಲೀ ಭೂಮಿಯಲ್ಲಿ ಅವತರಿಸಿದಾಗ ಮೂಲರೂಪದಷ್ಟೇ ಯೋಗ್ಯತೆಯಿಂದ ವ್ಯಾಪಾರ ಮಾಡಲು ಅಸಾಧ್ಯ. ಪರಮಾತ್ಮನ ಸಂಕಲ್ಪಕ್ಕನುಗುಣವಾಗಿ ಮೂಲರೂಪದ ಸಾಮಥ್ರ್ಯದಲ್ಲಿಯ ಎಷ್ಟು ಪ್ರಮಾಣದ ಅಂಶವನ್ನು ಗ್ರಹಣ ಮಾಡಿಕೊಂಡು ಅವತರಿಸಿರುತ್ತಾರೋ ಅಷ್ಟೇ ಪ್ರಮಾಣದ ವ್ಯಾಪಾರವನ್ನು ಮಾಡಲು ಮಾತ್ರ ಸಮರ್ಥರು. ಪರಮಾತ್ಮ ಹಾಗೂ ವಾಯುದೇವರ ಅನುಗ್ರಹದಿಂದ ಆಯಾ ಕಾಲಕ್ಕೆ, ಆಯಾ ಅವತಾರಕ್ಕೆ, ಅವರವರ ಯೋಗ್ಯತೆಗೆ ತಕ್ಕಂತೆ ಅವರು ವ್ಯಾಪಾರ ಮಾಡುತ್ತಾರೆಂದು ತಿಳಿಯಬೇಕು. ಇದನ್ನೇ ಅಂಶ ಎನ್ನುತ್ತಾರೆ.
 
ಅಂಶ: 
  •  ಮೂಲರೂಪದ ಗುಣಗಳಲ್ಲಿಯ ಕೆಲವು ಅಂಶಗಳಿಂದ ಮಾತ್ರ ಭೂಮಿಯಲ್ಲಿ ಅವತರಿಸಿ ಪರಮಾತ್ಮನ ಇಚ್ಛೆ ಹಾಗೂ ಆಜ್ಞಾನುಸಾರ ಹಾಗೂ ಪ್ರಾರಬ್ಧಕ್ಕನುಗುಣವಾಗಿ ತಮ್ಮ ವ್ಯಾಪಾರಗಳನ್ನು ಮಾಡುವರು. 5ನೇ ಕಕ್ಷೆಯಿಂದ 29ನೇ ಕಕ್ಷೆಯವರೆಗಿನ ದೇವತೆಗಳಿಗೆ ಈ ಅಂಶ ಎನ್ನುವುದು ಅನ್ವಯಿಸುತ್ತದೆ.
  • ವಿಶೇಷ ಸೂಚನೆ: 5-18 ನೇ ಕಕ್ಷೆಯ ತತ್ವಾಭಿಮಾನಿ ದೇವತೆಗಳು ಮತ್ತು 19-29ನೇ ಕಕ್ಷೆಯ ಅತಾತ್ವಿಕ (ಕರ್ಮಜ) ದೇವತೆಗಳು. ಆದರೆ ವಿಶೇಷ ಸಂದರ್ಭಗಳಲ್ಲಿ ಅವರ ಯೋಗ್ಯತೆಗೂ ಮೀರಿದ ಮಹಿಮೆಗಳನ್ನು, ವ್ಯಾಪಾರಗಳನ್ನು ಮಾಡುತ್ತಾರೆ. ಇದನ್ನೇ ಆವೇಶ ಎನ್ನುತ್ತಾರೆ.

ಆವೇಶ:



ಆವೇಶವೆಂದರೆ, ಆಗಾಗ ಬಂದು ಹೋಗುವುದು ಎನ್ನಬಹುದು.
  •  ಇದಕ್ಕೆ ಉತ್ತಮ ಉದಾಹರಣೆಯೆಂದರೆ, ದೆವ್ವ-ಭೂತಗಳು ಬಡಿಕೊಂಡಾಗ ಮನುಷ್ಯರು ಮಾಡುವ ಚೇಷ್ಟೆಗಳು. ಈ ಚೇಷ್ಟೆಗಳನ್ನು ಮಾಡುವುದು ಮನುಷ್ಯನೇ ಆದರೂ ಅವನೊಳಗೆ ನಿಂತು ಮಾಡಿಸುತ್ತಿರುವುದು ಮಾತ್ರ ದೆವ್ವ-ಭೂತಗಳು. ಆಗ ಅವುಗಳನ್ನು ಹೊಡೆದೋಡಿಸಲು ಅವುಗಳಿಗೆ ಪೆಟ್ಟು ಹಾಕುತ್ತೇವೆ. ಆದರೆ ಪೆಟ್ಟು ಯಾರಿಗೆ ಬೀಳುತ್ತದೆ? ಮನುಷ್ಯನಿಗೇ ಅಲ್ಲವೇ? ಅಂದರೆ ತತ್ಕಾಲದಲ್ಲಿ ಆ ಮನುಷ್ಯನು ಮಾಡುತ್ತಿರುವ ಯಾವುದೇ ಕೆಲಸ(ಕರ್ಮ)ಗಳ ಮೇಲೂ ಅವನಿಗೆ ಸ್ಮೃತಿಯಾಗಲೀ, ಹಿಡಿತವಾಗಲೀ ಅಥವಾ ವಿವೇಚನೆಯಾಗಲೀ ಇರುವುದಿಲ್ಲ. ಆದರೆ ಆ ಕಾಲದಲ್ಲಗುವ ಯಾವುದೇ ಕರ್ಮಫಲಗಳು ಮಾತ್ರ ಅವನೇ ಅನುಭವಿಸಬೇಕು. ಸ್ವಲ್ಪ ಸಮಯದ ನಂತರ ಆ ಭೂತ ಚೇಷ್ಟೆಯು ಮಾಯವಾದಾಗ ನಾನೇನು ಮಾಡಿದೆ? ನನಗೊಂದೂ ನೆನಪಿಲ್ಲವಲ್ಲ, ಎಂದು ಅದೇ ಮನುಷ್ಯನೇ ಕೇಳುತ್ತಾನೆ.
  •  ಅಂದರೆ ಜೀವಿಯ ಯೋಗ್ಯತೆಗೂ ಮೀರಿದ ವ್ಯಾಪಾರಾದಿಗಳು ನಡೆಯುತ್ತಿದೆಯೆಂದರೆ ಆಗ ಆ ಕ್ಷಣದಲ್ಲಿ ಆ ಜೀವಿಯಲ್ಲಿ, ಆ ಜೀವಿಗಿಂತಲೂ ಉತ್ತಮರ ಆವೇಶವಾಗಿದೆಯೆಂದು ತಿಳಿಯಬೇಕೇ ವಿನಃ ಆ ಕ್ಷಣದಲ್ಲಿ ನಡೆದ ವಿಶೇಷ ಕರ್ಮದಿಂದ ಜೀವಿಯ ಯೋಗ್ಯತೆ ನಿರ್ಧರಿಸಲಾಗದು.
  •  ಋಜು ಜೀವಿಗಳ ವ್ಯತಿರಿಕ್ತ ಬೇರೆ ಯಾವುದೇ ಜೀವಿಗಳಿಗೂ ಪರಮಾತ್ಮನಿಂದ ನೇರವಾಗಿ ಉಪದೇಶ ಪಡೆದುಕೊಳ್ಳುವ ಯೋಗ್ಯತೆಯಾಗಲೀ, ಸಾಮಥ್ರ್ಯವಾಗಲೀ ಇಲ್ಲಾ.!

ಶ್ರೀಮದಾಚಾರ್ಯರ ಸಿದ್ಧಾಂತದ ರೀತ್ಯಾ ಅಂತಹ ಕಾಲಗಳಲ್ಲಿ ಆವೇಶ ಪ್ರಬಲವಾಗಿದ್ದು ಯಾವ ದೇವತೆಯ ಆವೇಶವಿರುತ್ತದೆಯೋ ಜೀವಿಯು ಅವರಂತೆಯೇ ವರ್ತಿಸುತ್ತಾನೆ. ಈ ಸಂಬಂಧ ಅನೇಕ ಉದಾಹರಣೆಗಳನ್ನು ನೋಡಬಹುದಾಗಿದೆ.

ಉದಾ: 1)
ಅರ್ಜುನನಲ್ಲಿ ನರನ (ಆದಿಶೇಷ) ಆವೇಶ ನಿರಂತರವಾಗಿದ್ದ ಪ್ರಯುಕ್ತ, ಮಹಾಭಾರತ ಯುದ್ಧ ಕಾಲದಲ್ಲಿ ಸ್ವರೂಪತಃ ಅರ್ಜರುನನಿಗಿಂತಲೂ ಉತ್ತಮರಾದ ಅಶ್ವತ್ಥಾಮಾಚಾರ್ಯರು ತಮಗಿಂತಲೂ ಸ್ವರೂಪತಃ ಕಡಿಮೆಯಾದ ಅಜರ್ುನನಿಂದ ಸೋಲನ್ನನುಭವಿಸಿದ್ದುಂಟು.

ಉದಾ: 2)
ಸುಗ್ರೀವನಿಗಿಂತ ಮುಖ್ಯಪ್ರಾಣರಾಯರು ಎಷ್ಟೇ ಶ್ರೇಷ್ಠರಾಗಿದ್ದರೂ ಸಹ ಸುಗ್ರೀವನಿಗೆ ಮಂತ್ರಿಯೆನಿಸಿದರು. ಕಾರಣ ಇಷ್ಟೇ, ಸುಗ್ರೀವನಲ್ಲಿ ಮುಖ್ಯಪ್ರಾಣರಾಯರಿಗಿಂತಲೂ ಪದಪ್ರಯುಕ್ತ ಉತ್ತಮರಾದ ಬ್ರಹ್ಮದೇವರ ನಿರಂತರ ಆವೇಶವಿತ್ತು.

ಉದಾ: 3)
ಚಂದ್ರನಲ್ಲಿ ಬ್ರಹ್ಮದೇವರ ಆವೇಶ ನಿರಂತರವಿದ್ದುದರಿಂದ ಚಂದ್ರನೂ ಕೂಡ ಬ್ರಹ್ಮಾಂಶನೆಂದು ಕರೆಯಲ್ಪಡುತ್ತನೆ. ಇದರರ್ಥ ಚಂದ್ರನಲ್ಲಿ ಬ್ರಹ್ಮದೇವರ ವಿಶೇಷ ಆವೇಶವೇ ವಿನಃ ಚಂದ್ರ ಬ್ರಹ್ಮದೇವರ ಅವತಾರವೆಂದರ್ಥವಲ್ಲ.


ಉದಾ: 4)
ಗರುಡ-ಶೇಷ-ರುದ್ರ ಇವರುಗಳಿಂದ ಕೃಷ್ಣಪತ್ನಿಯೆನಿಸಿದ ಜಾಂಬವತಿಯು ಸ್ವರೂಪದಲ್ಲಿ ಕಡಿಮೆಯಿದ್ದರೂ ರಮಾದೇವಿಯರ ಆವೇಶದಿಂದ ಶೇಷದೇವರಿಗೆ ಸಮಳೆನಿಸುತ್ತಾಳೆ.


ಉದಾ: 5)
ಅರ್ಜುನಾವತಾರಿಗಳಾದ ಜಯತೀರ್ಥರಲ್ಲಿ (ಟೀಕಾರಾಯರು) ಶೇಷದೇವರ ವಿಶೇಷ ಆವೇಶವಿದ್ದ ಕಾರಣ ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳಿಗೆ ಟೀಕೆ ರಚಿಸಲು ಸಾಧ್ಯವಾಯಿತು.




ಭಾಷ್ಯತತ್ವವಾ ವಿಸ್ತಾರ ಮಾಳ್ಪರಾ| ದೋಷದೂರರಾ ಆದಿಶೇಷಾವೇಶರಾ||
ಉದಾ: 6)
ಅದ್ಯಪಿ ಮಂತ್ರಾಲಯ ಕ್ಷೇತ್ರದಲ್ಲಿ ವಿರಾಜಮಾನರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ನಿರಂತರ ಹರಿವಾಯುಗಳ ಆವೇಶವಿದ್ದುದರಿಂದ ಸ್ವರೂಪತಃ 19ನೇ ಕಕ್ಷೆಯ ಕರ್ಮಜ ದೇವತೆಗಳಾಗಿದ್ದರೂ ಸಹ 15ನೇ ಕಕ್ಷೆಯ ಅಗ್ನಿದೇವ, ಭೃಗುಋಷಿ ಮತ್ತು ಪ್ರಸೂತಿದೇವಿಯರು ಇವರುಗಳಿಗೆ ಸಮರೆನಿಸುತ್ತಾರೆ.


ವಿಶೇಷ ಸೂಚನೆ:

ಈ ಆವೇಶಗಳು ಇರುವುದರಿಂದ ಯೋಗ್ಯತೆ ಹೆಚ್ಚು ಕಂಡಂತೆ ಅನಿಸಿದರೂ ಅದು ದೇಶತಃ, ಕಾಲತಃ ಮಾತ್ರ. ಆದರೆ ಗುಣತಃ ಅಲ್ಲವೆಂದು ತಿಳಿಯಬೇಕು.

  • ಶೇಷಾವತಾರಿಗಳಾದ ಬಲರಾಮದೇವರಿಗೆ ಪರಮಾತ್ಮನ ಶುಕ್ಲಕೇಶದ ಆವೇಶವಿದ್ದ ಕಾರಣ ಸ್ವರೂಪದಿಂದ ಉತ್ತಮರಾದ ವಾಯುದೇವರ ಅವತಾರಿಗಳಾದ ಭೀಮಸೇನದೇವರಿಗೆ ಗುರುವೆನಿಸಿದ್ದರು. ಗದಾಯುದ್ಧದ ಕಲಿಕೆಯ ವೇಳೆಯಲ್ಲಿ ಭೀಮಸೇನದೇವರು, ಬಲರಾಮದೇವರಿಗೆ ಪೆಟ್ಟು ಕೊಡುತ್ತಿದ್ದರಂತೆ. ಮತ್ತು ಬಲರಾಮದೇವರಲ್ಲಿ ಪರಮಾತ್ಮನ ಶುಕ್ಲಕೇಶಾವೇಶವು ಜಾಗೃವಾದಾಗ ಅದನ್ನರಿತ ಭೀಮಸೇನದೇವರು ಬಲರಾಮದೇವರಿಗೆ ಶರಣಾಗುತ್ತಿದ್ದರಂತೆ.


     - ಈ ವಿಷಯಗಳನ್ನು ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಉಲ್ಲೇಖಿಸಿದ್ದಾರೆ.
 
  • ಯಾಜ್ಞವಲ್ಕ್ಯರ ವಿಷಯದಲ್ಲೂ ಇದೇ ಆದದ್ದು, ಯಾಜ್ಞವಲ್ಕ್ಯರು ಸ್ವರೂಪತಃ 19 ನೇ ಕಕ್ಷದ ದೇವತೆಗಳಾದ (ಪ್ರಮಾಣ: ವಿಜಯಪ್ರಭುಗಳ ತಾರತಮ್ಯ ಸುಳಾದಿ) ಕಾರಣ ಅಪೌರುಷೇಯವೆನಿಸಿದ ವೇದವನ್ನು ಭಗವಂತನಾದ ಸೂರ್ಯನಾರಾಯಣನಿಂದ ನೇರವಾಗಿ (ಶುಕ್ಲಯಜುರ್ವೇದವನ್ನು) ಸ್ವೀಕರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಆ ಕ್ಷಣದಲ್ಲಿ ಚತುರ್ಮುಖ ಬ್ರಹ್ಮದೇವರು ಯಾಜ್ಞ್ವಲ್ಕ್ಯರಲ್ಲಿ ಆವಿಷ್ಟರಾಗಿ ಶುಕ್ಲಯಜುರ್ವರೇದವನ್ನು ಭಗವಂತನಾದ ಸೂರ್ಯನಾರಾಯಣನಿಂದ ಸ್ವೀಕರಿಸಿದರು. ಮತ್ತು ಆ ಕೀರ್ತಿಯನ್ನು ಯಾಜ್ಞವಲ್ಕ್ಯರಿಗೆ ನೀಡಿದರು. ಇದಲ್ಲವೇ ಬ್ರಹ್ಮದೇವರಂತರ್ಗತ ಪರಮಾತ್ಮನು ಯಾಜ್ಞವಲ್ಕ್ಯರಿಗೆ ಮಾಡಿದ ಅನುಗ್ರಹ ?
ಆದ್ದರಿಂದ ವೇದವನ್ನು ಸ್ವೀಕರಿಸಲು ಆ ಕ್ಷಣದಲ್ಲಿ ಬ್ರಹ್ಮದೇವರು ಯಾಜ್ಞವಲ್ಕ್ಯರಲ್ಲಿ ಆವಿಷ್ಟರಾಗಿದ್ದರು ಮತ್ತು ಸ್ವೀಕರಿಸಿದ ನಂತರ ಆ ಆವೇಶದ ಕ್ಷಣ ಮುಗಿಯಿತು. ಹೀಗಿರುವಾಗ ಅಂಶಾವತಾರವೆಂದು ಹೇಳುವುದೂ ತರವಲ್ಲ. ಹಾಗೆ ಹೇಳಿದರೆ ಒಂದಶದಿಂದ ಬ್ರಹ್ಮದೇವರು ಯಾಜ್ಞವಲ್ಕ್ಯರಾಗಿ ಅವತರಿಸಿದರು ಎಂದಂತಾಗುತ್ತದೆ. ಆದ್ದರಿಂದ ಇಲ್ಲಿ ಅಂಶಾವತಾರ ಎನ್ನುವ ಶಬ್ದಕ್ಕೆ ಅರ್ಥವಿಲ್ಲಾ.
ಶ್ರೀಮದಾಚಾರ್ಯರ ಸಿದ್ಧಾಂತದ ರೀತ್ಯಾ ಬ್ರಹ್ಮದೇವರಿಗೆ ಅವತಾರ ಇಲ್ಲ..!


ಮೂಲ ಸಂಗ್ರಹ: ಮುಂಡರ್ಗಿ ಶ್ರೀ ಪ್ರಾಣೇಶರಾಯರು
ಅಕ್ಷರಜೋಡಣೆ: ಡಿ.ಕೆ.ಅರುಣ್ ಭಾರದ್ವಾಜ್ ಕವಿತಾಳ

  

Sunday, March 10, 2013

ಗಾಯತ್ರೀ ಅನುಷ್ಠಾನ ಪದ್ಧತಿ


ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೊ ನಮಃ


ಸಂಧ್ಯಾವಂದನೆಯಲ್ಲಿ ಮಾಡಲೇಬೇಕಾದ ಪ್ರಮುಖವಾದ ಭಾಗ ಗಾಯತ್ರೀ ಜಪ.
ಗಾಯತ್ರೀಯೆಂದೊಡನೆ ಕೆಲವರಿಗೆ ನೆನಪಾಗುವುದು ಪಂಚ ಮುಖವುಳ್ಳ ಸ್ತ್ರೀ ರೂಪ. ಆದರೆ ಹಾಗಲ್ಲ. ಗಾಯತ್ರೀಯೆಂದರೆ ಭಗವಂತನ ಒಂದು ರೂಪ. ನಾವು ಗಾಯತ್ರೀಯನ್ನು ಹೀಗೆ ಧ್ಯಾನಿಸಬೇಕು. ಸೂರ್ಯಮಂಡಲದಲ್ಲಿರುವ ಗಾಯತ್ರೀಮಂತ್ರಪ್ರತಿಪಾದ್ಯನಾದ ಶ್ರೀಮನ್ನಾರಾಯಣನನ್ನು "ಧ್ಯೇಯಃ ಸದಾ" ಎಂಬ ಮಂತ್ರದಿಂದ ಧ್ಯಾನಿಸಿ ಒಂದು ಸಾವಿರ ಅಥವಾ ನೂರು ಅಥವಾ ಕನಿಷ್ಠ ಹತ್ತು ಗಾಯತ್ರೀಯನ್ನು ಜಪಿಸಬೇಕು.
ಸೂರ್ಯೋದಯವಾಗುವ ತನಕ ನಿಂತೇ ಗಾಯತ್ರೀಮಂತ್ರವನ್ನು ಜಪಿಸಬೇಕು. ಅನಂತರ ಕುಳಿತುಕೊಳ್ಳಬಹುದು. ಪ್ರಾತಃ ಸಂಧ್ಯಾವಂದನೆಯನ್ನು ನಕ್ಷತ್ರಗಳಿರುವಾಗಲೂ, ಸಾಯಂ ಸಂಧ್ಯಾವಂದನೆಯನ್ನು ಸೂರ್ಯನಿರುವಾಗಲೇ ಮಾಡುವುದು ಶ್ರೇಷ್ಢ. ಸಾಯಂ ಸಂಧ್ಯೆಯನ್ನು ಕುಳಿತು ನಡೆಸಬೇಕು.

ಧ್ಯಾನ:
ಶ್ರೀಮನ್ನಾರಾಯಣನು ಸೂರ್ಯಮಂಡಲದಲ್ಲಿ ಪದ್ಮಾಸನಾಸೀನನಾಗಿದ್ದಾನೆ. ತೋಳಲ್ಲಿ ವಂಕಿ, ಕಿವಿಯಲ್ಲಿ ಮಕರ-ಕುಂಡಲ, ಶಿರಸ್ಸಿನಲ್ಲಿ ಕರೀಟ, ಕತ್ತಿನಲ್ಲಿ ಮುತ್ತಿನ ಹಾರಗಳನ್ನು ಧರಿಸಿದ್ದಾನೆ. ಬಂಗಾರದ ಮೈಬಣ್ಣ, ಎರಡು ಕೈಗಳಿಂದ ಶಂಖ-ಚಕ್ರಗಳನ್ನು ಧರಿಸಿದ್ದಾನೆ. ಇಂತಹ ನಾರಾಯಣನನ್ನು ಮನದಲ್ಲಿ ಧ್ಯಾನಿಸಬೇಕು. ಇಂತಹ ಗಾಯತ್ರೀಯನ್ನು ದ್ವಿಜನಾದವನು ಮೂರು ಕಾಲದಲ್ಲಿ ಅವಶ್ಯ ಕರ್ತವ್ಯ:

"...ಸಂಧ್ಯಾತ್ರಯಂ ತು ಕರ್ತವ್ಯಂ ದ್ವಿಜೇನಾತ್ಮವಿದಾ ಸದಾ..."

ಸಂಧ್ಯಾವಂದನೆ, ಜಪ, ಪಾರಾಯಣ ಇವುಗಳನ್ನು ಆಸನದಲ್ಲಿ ಕುಳಿತು ಮಾಡುವುದು ಪ್ರಶಸ್ತ. ಹೇಗೆ ಆಸನದಲ್ಲಿ ವೈವಿಧ್ಯತೆಯಿರುತ್ತದೆಯೋ ಹಾಗೆಂಯೇ ಫಲದಲ್ಲಿಯೂ ಕೂಡ ವೈವಿಧ್ಯತೆ ಇದೆ. ಧರ್ಮ-ಶಾಸ್ತ್ರದಲ್ಲಿ ಹೇಳುವಂತೆ ಆಸನದ ನಿಯಮಗಳು:

ಶ್ಲೋಕ:

 ವಂಶಾಸನೆ ದರಿದ್ರಸ್ಯಾತ್ ಪಾಷಾಣೆ ವ್ಯಾಧಿಸಂಭವಃ |
 ಧರಣ್ಯಾಂ ದುಃಖಮಾಪ್ನೋತಿ ದೌಭರ್ಾಗ್ಯಂ ದಾರುಕಾಸನೆ ||
 ತೃಣಾಸನೆ ಯಶೋಹೀನಃ ಪಲ್ಲವೇ ಚಿತ್ತವಿಭ್ರಮಃ |
 ಕುಶಾಸನೆ ಸರ್ವಸಿಧ್ಧಿಃ ಕಂಭಲೆ ದುಃಖಮೆವ ಚ ||
 ಕೃಷ್ಣಾಜಿನೆ ಙ್ಞಾನಸಿಧ್ಧಿಃ ಮೋಕ್ಷಸ್ಯಾತ್ ವ್ಯಾಘ್ರಚರ್ಮಣಿ ||

ಬಿದಿರಿನ ಆಸನದಲ್ಲಿ ಕುಳಿತು ಸಂಧ್ಯಾವಂದನೆ ಜಪಾದಿಗಳನ್ನು ಮಾಡಿದರೆ ದರಿದ್ರವು ಉಂಟಾಗುತ್ತದೆ. ಕಲ್ಲಿನ ಆಸನ ವ್ಯಾಧಿಗೆ ಕಾರಣ. ಕೇವಲ ನೆಲದಲ್ಲಿ ಕುಳಿತು ಮಾಡಿದರೆ ದುಃಖವನ್ನು ಹೊಂದುತ್ತಾನೆ. ಮಣೆಯ ಆಸನ, ಅಂದರೆ ಹಸೆಮಣೆ ಮೇಲೆ ಕುಳಿತು ಮಾಡಿದರೆ ದೌರ್ಭಾಗ್ಯವನ್ನು [ ಮಣೆಯ ಮೇಲೆ ಕುಳಿತು ಮಾಡುವುದಾದರೆ ಒಂದು ನಾಣ್ಯವನ್ನು ಮಣೆಯ ಮೇಲೆ ಹೊಡೆಸಿರಬೇಕು ], ಇನ್ನು ಹುಲ್ಲಿನ ಆಸನ ಯಶಸ್ಸು ಹಾನಿ. ಹಾಗೆಯೇ ಎಲೆ, ಪಲ್ಲವಾದಿಗಳ ಮೇಲೆ ಕುಳಿತು ಮಾಡುವುದರಿಂದ ಬುದ್ಧಿ-ಭ್ರಮಣೆ.

ಹಾಗಾದರೆ ಶ್ರೇಷ್ಠ ಆಸನಗಳೆಂದರೆ: ದರ್ಭಾಸನ ಸರ್ವಸಿದ್ಧಿಪ್ರದಾಯಕವಾಗಿದೆ. ಹಾಗೆಯೆ ಕೃಷ್ಣಾಜಿನ ಆಸನ ಙ್ಞಾನಕ್ಕೆ ಹೇತುವಾಗಿದೆ. ಇನ್ನು ವ್ಯಾಘ್ರಾಸನ ಮೋಕ್ಷವನ್ನು ಕರುಣಿಸುವುದು.

ಗಾಯತ್ರೀ ಜಪವನ್ನು ಕೂಡ ಮನೆಯಲ್ಲಿ ಮಾಡುವುದಕ್ಕಿಂತ ಗೋಶಾಲೆಯಲ್ಲಿ ಮಾಡುವುದರಿಂದ ಹೆಚ್ಚು ಫಲ. ನದಿ-ತೀರ್ಥಗಳ ಸನ್ನಿಧಿಯಲ್ಲಿ ಮಾಡುವುದರಿಂದ ಸಾವಿರಾರುಪಾಲು ಪುಣ್ಯ. ಶಾಲಗ್ರಾಮದ ಎದುರು ಮಾಡುವುದರಿಂದ ಅನಂತ ಫಲ.
ಈ ಸಂಧ್ಯಾವಂದನೆಯನ್ನು ಮೂರುದಿನ ಯಾವನು ಮಾಡುವುದಿಲ್ಲವೋ ಅವನು ಶೂದ್ರ. ಹಾಗಾಗಿ ಪುನಃ ಉಪನಯನ ಮಾಡಬೇಕು. ಆದ್ದರಿಂದ ಎಲ್ಲರೂ ಕೂಡ ಸಂಧ್ಯಾವಂದನೆಯನ್ನು ನಿತ್ಯದಲ್ಲಿಯೂ ತಪ್ಪದೇ ಮಾಡಬೇಕು.

-
ಶ್ರೀ ಸುಧಾಮ,
ಪೂರ್ಣಪ್ರಙ್ಞ ವಿದ್ಯಾಪೀಠ,
ಬೆಂಗಳೂರು.
 

Thursday, March 7, 2013

ಭಾಗವತದಲ್ಲಿ ರುದ್ರದೇವರ ಸ್ಥಾನಮಾನ



 ಶ್ರೀಮದ್ಭಾಗವತವು ಭಗವಂತನಿಗೆ ಸಂಬಂಧಿಸಿದ ಗ್ರಂಥವಾದರೂ ಪ್ರಾಸಂಗಿಕವಾಗಿ ಅನೇಕ ಭಾಗವತರ(ಭಗವದ್ ಭಕ್ತರ) ವಿಚಾರಗಳು ಅಲ್ಲಿ ಪ್ರಸ್ತುತವಾಗಿವೆ. ಅಂತಹ ಭಾಗವತ ರಲ್ಲೊಬ್ಬರಾದ ರುದ್ರದೇವರ ವಿಚಾರವೂ ಭಾಗವತದಲ್ಲಿ ಸಾಕಷ್ಟು ಕಡೆ ನಿರೂಪಿತವಾಗಿದೆ. ರುದ್ರದೇವರ ಪ್ರಸ್ತಾಪವಿಲ್ಲದ ಸ್ಕಂಧವೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿ ಪ್ರಧಾನವಾಗಿ ರುದ್ರದೇವರ ಉತ್ಪತ್ತಿ ಹಾಗೂ ವಿಷ್ಣು-ರುದ್ರರ ಸಂಬಂಧದ ಬಗ್ಗೆ ನಿರೂಪಿತವಾದ ಕೆಲವು ಅಂಶಗಳು ಇಲ್ಲಿ ಪ್ರಸ್ತಾಪಗೊಂಡಿವೆ.


ರುದ್ರದೇವರ ಜನ್ಮ
 ಪ್ರಲಯಕಾಲ ಮುಗಿದ ಬಳಿಕ ಸೃಷ್ಟಿಮಾಡಲಪೇಕ್ಷಿಸಿದ ಶ್ರೀಹರಿಯು ಮೊದಲು ತತ್ವಗಳನ್ನು, ತತ್ವಾಭಿಮಾನಿ ದೇವತೆಗಳನ್ನು ಸೃಷ್ಟಿ ಮಾಡುತ್ತಾನೆ. ಆನಂತರ ಆ ತತ್ವಾಭಿಮಾನಿ ದೇವತೆಗಳು ಬ್ರಹ್ಮಾಂಡವನ್ನು ಸೃಷ್ಟಿ ಮಾಡಲು ಅಶಕ್ತರಾಗಿ ಶ್ರೀಹರಿಯ ಬಳಿಗೆ ಹೋಗಿ ನಮಗೆ ಒಂದು ನೆಲೆಬೇಕು. ಅದಕ್ಕಾಗಿ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿಕೊಡು ಎಂದು ಪ್ರಾರ್ಥಿಸುವರು. ಅವರ ಪ್ರಾರ್ಥನೆಯಂತೆ ಪರಮಾತ್ಮನು ಬ್ರಹ್ಮಾಂಡವನ್ನು ಸೃಷ್ಟಿಮಾಡುವನು. ಆನಂತರ ದೇವತೆ ಗಳೆಲ್ಲರೂ ಭಗವಂತನೊಂದಿಗೆ ಬ್ರಹ್ಮಾಂಡವನ್ನು ಪ್ರವೇಶಿಸುವರು. ಆ ಬ್ರಹ್ಮಾಂಡದೊಳಗಿನ ನೀರಿನಲ್ಲಿ ಮಲಗಿದ ಭಗವಂತನ ನಾಭಿಯಲ್ಲಿ ಲೋಕಾಧಾರವಾದ ಹದಿನಾಲ್ಕು ದಳಾತ್ಮಕವಾದ ಒಂದು ಪದ್ಮ ಹುಟ್ಟುತ್ತದೆ. ಅದರಲ್ಲಿ ಮತ್ತೊಮ್ಮೆ ಬ್ರಹ್ಮದೇವರು ಜನಿಸುವರು. ಅನಂತರ ಆ ಬ್ರಹ್ಮದೇವರಿಂದ ಪುನಃ ರುದ್ರಾದಿದೇವತೆಗಳ ಸೃಷ್ಟಿಯು ಪ್ರಾರಂಭವಾಗುತ್ತದೆ. ಇದು ಬ್ರಹ್ಮಸೃಷ್ಟಿ. ಇದು ರುದ್ರಾದಿದೇವತಾ ತಾರತಮ್ಯಾನುಸಾರಿಯಾದ ಸೃಷ್ಟಿ. ಈ ಸೃಷ್ಟಿಯ ಆದಿಯಲ್ಲಿ ಬ್ರಹ್ಮದೇವರು 'ನಾನು ಪರಮಾತ್ಮನ ದಾಸ'ಎಂದು ಅಹಂಮತಿಯನ್ನು ಪಡೆದಾಗ ರುದ್ರದೇವರು ಜನಿಸುವರು. ಅವರೊಂದಿಗೆ ಗರುಡ, ಶೇಷರು ಜನಿಸುವರು. ಅನಂತರ ಉಮಾ, ಇಂದ್ರ, ಕಾಮ ಮೊದಲಾದ ಎಲ್ಲಾ ದೇವತೆಗಳೂ ತಾರತಮ್ಯಕ್ಕೆ ಅನುಸಾರವಾಗಿ ಜನಿಸುವರು. 

 ಭಾಗವತ ತೃತೀಯ ಸ್ಕಂಧದಲ್ಲಿ 'ಸಸರ್ಜಾಗ್ರೇಖಂಧತಾಮಿಸ್ರಂ' ಇತ್ಯಾದಿಯಾಗಿ ನಿರೂಪಿತ ವಾದದ್ದು ಅರ್ವಾಚೀನ ಸೃಷ್ಟಿ. ಇದು ತಾರತಮ್ಯಾನುಗುಣವಲ್ಲ. ಈ ಸೃಷ್ಟಿಯಲ್ಲಿ ಬ್ರಹ್ಮ ದೇವ ರಿಂದ ಮೊದಲು ಐದು ವಿಧವಾದ ಅವಿದ್ಯೆಯು ಹುಟ್ಟುತ್ತದೆ. ಅನಂತರ ಬ್ರಹ್ಮದೇವರು ತಮ್ಮ ಮನಸ್ಸಿನಿಂದ ಸನಕ, ಸನಂದನ, ಸನಾತನ, ಸನತ್ಕುಮಾರ ಎಂಬ ಮಕ್ಕಳನ್ನು ಹುಟ್ಟಿಸಿ, ಪ್ರಜಾ ಸೃಷ್ಟಿಯನ್ನು ಮುಂದುವರಿಸುವಂತೆ ಆಜ್ಞೆ ಮಾಡುವರು. ಸಂನ್ಯಾಸಿಗಳಾಗ ಬಯಸಿದ ಆ ನಾಲ್ಕು ಮಕ್ಕಳು ಬ್ರಹ್ಮದೇವರ ಆಜ್ಞೆಯನ್ನು ನಿರಾಕರಿಸುವರು. ಇದರಿಂದ ಬ್ರಹ್ಮದೇವರಿಗೆ ಕೋಪ ವುಂಟಾಗಿ ಅವರು ಅದನ್ನು ನಿಯಂತ್ರಿಸುವುದರೊಳಗೇ ಅವರ ಭ್ರೂಮಧ್ಯದಿಂದ ರುದ್ರದೇವರು ಜನಿಸುವರು (ಮೊದಲೊಮ್ಮೆ ಜನಿಸಿದ್ದ ರುದ್ರದೇವರೇ ಪುನಃ ದೇಹಾಂತರದಿಂದ ಹುಟ್ಟುವರು. ಈ ಸೃಷ್ಟಿಯಲ್ಲಿ ರುದ್ರದೇವರು ಸನಕಾದಿಗಳ ನಂತರ ಹುಟ್ಟಿದರೂ ಇದು ತಾರತಮ್ಯಾನುಸಾರಿ ಯಲ್ಲವಾದ್ದರಿಂದ ರುದ್ರದೇವರನ್ನು ಸನಕಾದಿಗಳಿಗಿಂತ ಉತ್ತಮರೆಂದೇ ತಿಳಿಯಬೇಕು.). ಆನಂತರ ರುದ್ರದೇವರು 'ನನಗೆ ನಾಮ ಮತ್ತು ಸ್ಥಾನಗಳು ಬೇಕು'ಎಂದು ಬಾಲಕನಂತೆ ರೋದಿಸುತ್ತಿರಲು ಬ್ರಹ್ಮದೇವರು ಅವರಿಗೆ ರೋದನ ಮಾಡಿದ್ದರಿಂದ 'ರುದ್ರ' ಎಂದು ನಾಮಕರಣ ಮಾಡಿ ಪುನಃ ಮನು, ಮಹಾನಾಸ, ಶಿವ, ಋತಧ್ವಜ, ಮರುರೇತ, ಭವ, ಕಾಲ, ವಾಮದೇವ, ಧೃತವ್ರತ ಎಂಬ ಹನ್ನೊಂದು ಹೆಸರುಗಳನ್ನೂ, ಹೃದಯ, ಇಂದ್ರಿಯ, ಪ್ರಾಣ ವಾಯು, ಆಕಾಶ, ಗಾಳಿ, ಬೆಂಕಿ, ನೀರು, ಭೂಮಿ, ಸೂರ್ಯ, ಚಂದ್ರ, ತಪಸ್ಸು ಎಂಬ ಸ್ಥಾನಗಳನ್ನು ಕೊಡುವರು. ಅನಂತರ ಪ್ರಜೋತ್ಪತ್ತಿ ಕಾರ್ಯದಲ್ಲಿ ಬ್ರಹ್ಮದೇವರಿಂದ ಆಜ್ಞಪ್ತರಾಗಿ ರುದ್ರದೇವರು ಭೂತಗಳನ್ನು ಸೃಷ್ಟಿ ಮಾಡುವರು. ಆ ಭೂತಗಳು ಜಗತ್ತನ್ನೇ ನುಂಗುವಷ್ಟು ಭಯಂಕರವಾದ್ದರಿಂದ ಬ್ರಹ್ಮದೇವರ ಮಾತಿನಂತೆ ತಪಸ್ಸಿಗೆ ಕಾಡಿಗೆ ತೆರಳುವರು.

ರುದ್ರದೇವರು ಮಾಡಿದ ಅಂತರ್ಯಾಮಿ ಪೂಜೆ

 ಒಂದು ಸಂದರ್ಭದಲ್ಲಿ ಪ್ರಜಾಪತಿಗಳೆಲ್ಲ ಕೂಡಿ ನಡೆಸುತ್ತಿದ್ದ ಯಾಗ ಒಂದರಲ್ಲಿ ಅನೇಕ ದೇವತೆಗಳೂ, ಋಷಿಗಳೂ ಪಾಲ್ಗೊಂಡಿರುತ್ತಾರೆ. ಆವಾಗ ಅದೇ ಯಜ್ಞದಲ್ಲಿ ಭಾಗವಹಿ ಸಲು ಬಂದ ದಕ್ಷ ಪ್ರಜಾಪತಿಗಳಿಗೆ ಎಲ್ಲರೂ ಎದ್ದು ಗೌರವ ಸಲ್ಲಿಸುವರು. ಆದರೆ ದಕ್ಷನ ಅಳಿಯನೇ ಆದ ರುದ್ರದೇವರು ಮಾತ್ರ ಸುಮ್ಮನೇ ಕೂತಿರುತ್ತಾರೆ. ಇದು ಅಳಿಯನು ತನಗೆ ಮಾಡಿದ ಅವಮಾನವೆಂದು ಭಾವಿಸಿದ ದಕ್ಷನು ರುದ್ರನನ್ನು ಅತಿಯಾಗಿ ದ್ವೇಷಿಸಿದ್ದಲ್ಲದೇ `ಇನ್ನು ಮುಂದೆ ಯಾವುದೇ ಯಾಗದಲ್ಲಿ ರುದ್ರನಿಗೆ ಆಹುತಿ ಇಲ್ಲದಂತಾಗಲಿ` ಎಂದು ಶಾಪ ಕೊಡುತ್ತಾನೆ. ಇದೇ ದ್ವೇಷವು ಮುಂದುವರೆಯುತ್ತದೆ. ಒಮ್ಮೆ ಇದರ ಪ್ರಸ್ತಾಪ ಬಂದಾಗ ದಾಕ್ಷಾಯಣಿಯೂ ಕೂಡ ಗಂಡನಾದ ರುದ್ರದೇವರ ಬಳಿ ದಕ್ಷಪ್ರಜಾಪತಿಗಳನ್ನು ಅವಮಾನಿಸಿದ್ದೇಕೆಂದು ಆಕ್ಷೇಪಿಸುತ್ತಾಳೆ. ಅದಕ್ಕೇ ರುದ್ರದೇವರು ಹೇಳುವ ಸಮಾಧಾನ ಅವರ ಆಂತರ್ಯವನ್ನು ಸ್ಪಷ್ಟ ಪಡಿಸುತ್ತದೆ.

 ಪ್ರತ್ಯುದ್ಗಮಪ್ರಶ್ರಯಣಾಭಿವಾದನಂ ವಿಧೀಯತೇ ಸಾಧು ಮಿಥಃ ಸುಮಧ್ಯಮೇ |
 ಪ್ರಾಜ್ಞೈಃ ಪರಸ್ಮೈ ಪುರುಷಾಯ ಚೇತಸಾ ಗುಹಾಶಯಾಯೈವ ನ ದೇಹಮಾನಿನೇ|| 
--ಭಾಗವತ 4-3-22
 ದಾಕ್ಷಾಯಿಣಿ! ವೈಷ್ಣವರು ಬಂದಾಗ ಪ್ರಾಜ್ಞರು ಗೌರವಾದರಗಳನ್ನು ಸಲ್ಲಿಸುವುದು ಅವರ ಅಂತರ್ಯಾಮಿಯಾದ ವಿಷ್ಣುವಿಗೇ ಹೊರತು ಅವರಿಗಲ್ಲ. ಇದು ಪರಸ್ಪರ ಸಮಾನರಾದವರ ವಿಷಯದಲ್ಲಿ. ಆದರೆ ಸಣ್ಣವರು ದೊಡ್ಡವರಿಗೆ ಸಲ್ಲಿಸುವಾಗ ಮಾತ್ರ ದೇಹಾಭಿಮಾನಿಯಾದ ಜೀವನಿಗೂ ಅಂತರ್ಯಾಮಿಯಾದ ವಿಷ್ಣುವಿಗೂ ಸಲ್ಲಿಸುವುದು ಸರಿಯಾದ ಪದ್ಧತಿ.
ರುದ್ರದೇವರ ಈ ಅಭಿಪ್ರಾಯವನ್ನು

 ಸದೇಹಮಾನಿಹರಯೇ ಪ್ರಣಮೇತ್ ಕೇವಲಾಯ ವಾ |
 ನ ದೇಹಾಯ ನ ತನ್ಮಾನಪರಾಯ ಚ ಕಥಂಚನ ||

ಎಂಬ ವ್ಯಾಸಸ್ಮೃತಿಯೂ ಅನುಮೋದಿಸುತ್ತದೆ. 
 ಅರ್ಚತ ಪ್ರಾರ್ಚತ ಪ್ರಿಯಮೇಧಾಸೋ ಅರ್ಚತ |
 ಅರ್ಚಂತು ಪುತ್ರಕಾ ಉತ ಪುರಂ ನ ಧೃಷ್ಣ್ವರ್ಚತ ||

 ಎಂಬ ವೇದಮಂತ್ರವೂ ಕೂಡ `ಪುರಂ ನ` `ದೇಹವನ್ನಾಗಲೀ ದೇಹಾಭಿಮಾನಿ ಜೀವನನ್ನಾಗಲೀ ಸ್ವತಂತ್ರವಾಗಿ ಪೂಜಿಸಬೇಡ` ಎನ್ನುತ್ತದೆ.
 ಹಾಗಾದರೆ ದಕ್ಷನು ರುದ್ರನಿಗಿಂತ ಸ್ವರೂಪತಃ ಅವರನಾದರೂ ಮಾವನಾದ್ದರಿಂದ ಶ್ರೇಷ್ಠ ನಾದ ಪ್ರಯುಕ್ತ `ಮರ್ಯಾದಾರ್ಥಂ ತೇಪಿ ಪೂಜ್ಯಾಃ` ಎಂಬ ವಚನದಂತೆ ದಕ್ಷನನ್ನು ರುದ್ರ ದೇವರು ಪೂಜಿಸಬೇಕಿತ್ತು ಎಂಬ ಸಂಶಯ ಮೂಡುವುದು ಸಹಜ. ಇದಕ್ಕೂ ರುದ್ರದೇವರು ಉತ್ತರಿಸಿದ್ದಾರೆ -
ಸತ್ವಂ ವಿಶುದ್ಧಂ ವಸುದೇವಶಬ್ದಿತಂ ಯದೀಯತೇ ತತ್ರ ಪುಮಾನಪಾವೃತಃ |
ಸತ್ವಂ ಯಸ್ಮಿನ್ ಭಗವಾನ್ ವಾಸುದೇವೋತ್ವಧೋಕ್ಷಜೋ ಮೇ ಮನಸಾ ವಿಧೀಯತೇ ||
--ಭಾಗವತ 4-3-23
 ದಾಕ್ಷಾಯಿಣಿ! ಆ ಯಜ್ಞಮಂಟಪದಲ್ಲಿ ನನ್ನೆದುರು ಪರಮ ಶುದ್ಧಾಂತಃಕರಣರಾದ ಬ್ರಹ್ಮ ದೇವರು ಕುಳಿತಿದ್ದರು. ಅವರಲ್ಲಿ ವಿಶೇಷವಾಗಿ ಸನ್ನಿಹಿತನಾದ ಭಗವಂತನನ್ನು ನಾನು ಏಕಾಗ್ರತೆ ಯಿಂದ ಧ್ಯಾನಿಸುತ್ತಿದ್ದೆ. ಮತ್ತು ಆ ಸಂದರ್ಭದಲ್ಲಿ ದಕ್ಷನ ಅಂತಃಕರಣವು ರಜೋಗುಣದಿಂದ ಅಹಂಕಾರಾದಿಗಳಿಂದ ಕಲುಷಿತವಾದ ಪ್ರಯುಕ್ತ ಭಗವಂತನ ವಿಶೇಷ ಸನ್ನಿಧಾನವಿರಲಿಲ್ಲ. ಈ ಕಾರಣಗಳಿಂದಾಗಿ ನಾನು ದಕ್ಷನನ್ನು ಪೂಜಿಸಲಿಲ್ಲ.


ಶಿವನಿಗೆ ಆಹುತಿ
 ಶಿವನಿಗೆ ಆಹುತಿ ಇಲ್ಲದಂತಾಗಲೀ ಎಂದು ಶಪಿಸಿದ್ದ ದಕ್ಷನು ತಾನೇ ಒಂದು ಯಾಗವನ್ನು ಮಾಡಲು ಪ್ರಾರಂಭಿಸುವನು. ಆ ಯಾಗಕ್ಕೆ ಸತಿ-ಶಿವರಿಗೆ ಆಮಂತ್ರಣವಿರುವುದಿಲ್ಲ. ಆದರೂ ಸತಿಯು ತಾನೊಬ್ಬಳೇ ತವರು ಮನೆಯ ಸೆಳೆತದಿಂದ ಅಲ್ಲಿಗೆ ಆಗಮಿಸುವಳು. ರುದ್ರನ ಮೇಲಿನ ಕೋಪದಿಂದ ದಕ್ಷನು ಸತಿಯನ್ನೂ ಮಾತನಾಡಿಸುವುದಿಲ್ಲ. ಈ ಅವಮಾನವನ್ನು ಸಹಿಸಿಕೊಂಡ ಸತಿಗೆ ರುದ್ರನಿಗೆ ಆಹುತಿ ಕೊಡದೇ ಯಾಗ ಮುಂದುವರೆಸಿದ್ದನ್ನು ಕಂಡು ಸಹಿಸಲಾಗಲಿಲ್ಲ. ಆ ಯಜ್ಞಕುಂಡದಲ್ಲಿಯೇ ದೇಹತ್ಯಾಗ ಮಾಡುವಳು. ನಾರದರಿಂದ ಈ ವಿಷಯ ತಿಳಿದ ರುದ್ರ ದೇವರು ಬಂದು ಯಜ್ಞವನ್ನು ಧ್ವಂಸ ಮಾಡುವರು. ದಕ್ಷನ ತಲೆಯನ್ನೂ ಕಡಿದು ಯಜ್ಞ ಕುಂಡದಲ್ಲಿ ಹೋಮಿಸುವರು.
 ಅನಂತರ ಬ್ರಹ್ಮದೇವರ ಮಾತಿನಂತೆ ಶಾಂತರಾಗಿ ಬ್ರಹ್ಮದೇವರೊಡನೆ ಯಾಗ ಶಾಲೆಗೆ ಬಂದು ಆಡಿನ ತಲೆಯನ್ನಿಟ್ಟು ದಕ್ಷನನ್ನು ಬದುಕಿಸುವರು. ಯಜ್ಞವು ಮುಂದುವರೆದು ಸಮಾಪ್ತ ವಾಗುವುದು. ಆಗ ಯಜ್ಞದ ಕೊನೆಯಲ್ಲಿ ಬ್ರಹ್ಮದೇವರ ಮಾತಿನಂತೆ ರುದ್ರದೇವರಿಗೆ ಸ್ವಿಷ್ಟಕೃದ್ಭಾಗ ಎಂಬ ಉಚ್ಛಿಷ್ಟಾಹುತಿಯನ್ನು ಸಮರ್ಪಿಸುವರು.
ಹರಿ ಪಾದೋದಕದಿಂದ ಶಿವತ್ವಪ್ರಾಪ್ತಿ  ಶಿವ ಎಂದರೆ ಮಂಗಳ ಎಂದರ್ಥ. ಶ್ರೀಹರಿ ಪಾದೋದಕವೆನಿಸಿದ ಗಂಗೆಯನ್ನು ಶಿರಸಾ ಧರಿಸಿದ್ದರಿಂದ ರುದ್ರದೇವರು `ಶಿವ`ರಾದರು (ಪರಮ ಮಂಗಳರಾದರು) ಎಂದು ಭಾಗವತ ಸಾರುತ್ತಿದೆ -
 ಯಚ್ಛೌಚನಿಃಸೃತಸರಿತ ಪ್ರವರೋದಕೇನ ............. ಶಿವಃ ಶಿವೋಭೂತ್ ||.

ಭಗವದಾಜ್ಞಾಪಾಲನೆ
 ಸ್ಮಶಾನದಲ್ಲಿ ವಾಸ, ಕೊರಳಲ್ಲಿ ತಲೆಬುರುಡೆಗಳ ಮಾಲೆ, ಕೈಯಲ್ಲಿ ಕಪಾಲ, ಮೇಲ್ನೋಟಕ್ಕೆ ಪೈಶಾಚವೃತ್ತಿಯಂತೆ ಕಾಣುವ ರುದ್ರದೇವರ ಈ ಚರ್ಯೆಯು ಭಗವದಾಜ್ಞಾನು -ಸಾರಿಯೇ ಆಗಿದೆ. ಏಕೆಂದರೆ ಸಂಧ್ಯಾಕಾಲದಲ್ಲಿ ಗರ್ಭಧರಿಸುವ ಸ್ತ್ರೀಯರನ್ನು ಹರಿಯಾಜ್ಞೆಯಿಂದ ರುದ್ರದೇವರು ಸಂಹರಿಸುತ್ತಾರೆ. ಅದರ ಪ್ರಾಯಶ್ಚಿತ್ತಕ್ಕಾಗಿ ಹರಿಯಾಜ್ಞೆಯಿಂದಲೇ ಪಿಶಾಚ ಚರ್ಯೆಯನ್ನವಲಂಬಿಸುತ್ತಾರೆ -
 ಯಸ್ಯಾನವದ್ಯಾಚರಿತಂ ಮನೀಷಿಣೋ ಗೃಹ್ಣಂತ್ಯವಿದ್ಯಾಪಟಲಂ ವಿಭಿತ್ಸವಃ |
 ನಿರ್ತಸಾಮ್ಯಾತಿಶಯೋ ಹರೇಃ ಸ್ವಯಂ ಪಿಶಾಚಚರ್ಯಾಮಚರತ್ ಸತಾಂ ಗತಿಃ ||
ಭಾಗವತ 3-15-26
 ತಾನೇ ಆಜ್ಞಾಪಿಸಿ ಮಾಡಿಸಿದ ಕಾರ್ಯಕ್ಕೆ ತಾನೇ ಪ್ರಾಯಶ್ಚಿತ್ತವನ್ನು ವಿಧಿಸಿರುವುದು ಶ್ರೀಹರಿಯ ವಿಡಂಬನೆಗೊಂದು ನಿದರ್ಶನ.

ಭಗವದುಪಾಸನೆ
 ಜಂಬೂದ್ವೀಪದಲ್ಲಿರುವ ಇಲಾವೃತ ಖಂಡದಲ್ಲಿ ರುದ್ರದೇವರು ಇಂದಿಗೂ ಭಗವಂತನ ಸಂಕರ್ಷಣ ಮೂರ್ತಿಯನ್ನು ಉಪಾಸನೆ ಮಾಡುತ್ತಿರುವರೆಂದು ಪಂಚಮ ಸ್ಕಂಧದಲ್ಲಿ ನಿರೂಪಿತವಾಗಿದೆ.
 ಶ್ರೀಕೃಷ್ಣನು ದೇವಕಿಯ ಗರ್ಭದಲ್ಲಿರುವಾಗ ಬ್ರಹ್ಮರುದ್ರಾದಿಗಳು ಬಂದು ಶ್ರೀಕೃಷ್ಣನನ್ನು ಸ್ತೋತ್ರ ಮಾಡಿದ ಸಂಗತಿ ದಶಮಸ್ಕಂಧದಲ್ಲಿ ನಿರೂಪಿತವಾಗಿದೆ.
 ರುದ್ರದೇವರು ತಾವು ಪಠಿಸುತ್ತಿದ್ದ ವಿಷ್ಣುಸ್ತೋತ್ರವನ್ನು ಪ್ರಚೇತಸರಿಗೆ ಉಪದೇಶಿಸಿದ್ದನ್ನು ನಾಲ್ಕನೇ ಸ್ಕಂಧದಲ್ಲಿ ನೋಡಬಹುದು.


ರುದ್ರ - ಭಗವದನುಗ್ರಹಪಾತ್ರ
 ವೃಕನೆಂಬ ಅಸುರನು ರುದ್ರದೇವರನ್ನು ತಪಸ್ಸಿನಿಂದ ಒಲಿಸಿಕೊಂಡು `ನಾನು ಯಾರ ತಲೆಯ ಮೇಲೆ ಕೈ ಇಡುವೆನೋ ಅವರು ಸಾಯಬೇಕು` ಎಂದು ವರವನ್ನು ಕೇಳಿದ. ರುದ್ರದೇವರು ತಥಾಸ್ತು ಎಂದು ನುಡಿದರು. ಅಸುರನು ಆ ವರವನ್ನು ಪರೀಕ್ಷಿಸಲು ರುದ್ರದೇವರ ತಲೆಯ ಮೇಲೆಯೇ ಕೈ ಇಡಲು ಹೊರಟ. ರುದ್ರದೇವರು ಭಗವಂತನಿಗೆ ಶರಣಾದಾಗ ಭಗವಂತನು ವೃಕಾಸುರನನ್ನು ಮೋಹಗೊಳಿಸಿ ತನ್ನ ತಲೆಯ ಮೇಲೆಯೇ ಕೈ ಇಟ್ಟುಕೊಳ್ಳುವಂತೆ ಮಾಡಿ ಅಸುರನನ್ನು ಸಂಹರಿಸಿ ರುದ್ರದೇವರನ್ನು ಕಾಪಾಡುವನು. ಈ ಪ್ರಸಂಗವು ಹತ್ತನೇ ಸ್ಕಂಧದಲ್ಲಿ ನಿರೂಪಿತವಾಗಿದೆ.
 ರುದ್ರದೇವರು ತ್ರಿಪುರಾಸುರ ಸಂಹಾರ ಮಾಡಿದ್ದೂ ಭಗವದನುಗ್ರಹದಿಂದಲೇ. ತ್ರಿಪುರಾಸುರ ಪಟ್ಟಣದಲ್ಲಿ ಮಯನಿರ್ಮಿತವಾದ ಅಮೃತದ ಬಾವಿಯಿತ್ತು. ರುದ್ರನಿಂದ ಹತರಾದ ಅಸುರ ರೆಲ್ಲರೂ ಆ ಬಾವಿಯ ರಸದಿಂದ ಬದುಕುತ್ತಿದ್ದರು. ಇದರಿಂದ ರುದ್ರನು ಕಂಗೆಟ್ಟಾಗ ವಿಷ್ಣುವು ಗೋರೂಪದಿಂದ ಹೋಗಿ ಆ ಅಮೃತ ರಸವನ್ನೆಲ್ಲಾ ಪಾನಮಾಡಿದ್ದಲ್ಲದೇ ತನ್ನ ಶಕ್ತಿಯಿಂದ ರುದ್ರನಿಗೆ ಯುದ್ಧಸಾಧನವಾದ ರಥಾದಿಗಳನ್ನೆಲ್ಲಾ ನಿರ್ಮಿಸಿಕೊಟ್ಟು ತಾನೇ ತನ್ನ ತೇಜಸ್ಸಿನಿಂದ ರುದ್ರನನ್ನು ರಕ್ಷಿಸಿ ತ್ರಿಪುರ ಸಂಹಾರ ಮಾಡಿಸುತ್ತಾನೆ-

 ಭಗವತ್ತೇಜಸಾ ಗುಪ್ತೋ ದದಾಹ ತ್ರಿಪುರಂ ನೃಪ || ಭಾಗವತ 7-11-17.


ಶಿವೋಪಾಸನೆಯ ಫಲ
ಶಿವಃ ಶಕ್ತಿಯುತಃ ಶಶ್ವತ್ ತ್ರಿಲಿಂಗೋ ಗುಣಸಂವೃತಃ || (ಭಾಗವತ 10ನೇ ಸ್ಕಂಧ) ಎಂಬಂತೆ ರುದ್ರದೇವರು ಪ್ರಕೃತಿಬದ್ಧರಾಗಿದ್ದಾರೆ. ಆದ್ದರಿಂದ ಪ್ರಾಯಃ ಶಿವೋಪಾಸಕರು ಪ್ರಾಕೃತವಾದ ಧನಸಂಪತ್ತುಳ್ಳವರಾಗುತ್ತಾರೆ. ಆದರೆ `ಹರಿಸ್ತು ನಿರ್ಗುಣಃ ಸಾಕ್ಷಾತ್` ಎಂಬಂತೆ ಶ್ರೀ ಹರಿಯು ಪ್ರಾಕೃತಗುಣಬದ್ಧನಲ್ಲವಾದ್ದರಿಂದ ಶ್ರೀಹರಿಯ ಉಪಾಸಕರು ಮುಕ್ತರಾಗುತ್ತಾರೆ. `ವಿದ್ಯಾಕಾಮಸ್ತು ಗಿರೀಶಂ` ಎಂದು ದ್ವಿತೀಯಸ್ಕಂಧದಲ್ಲಿ ಹೇಳಿದ ಪ್ರಕಾರ ಶಿವನ ಆರಾಧನೆ ಯಿಂದ ಜ್ಞಾನವನ್ನು ಪಡೆಯಬಹುದು. `ಜ್ಞಾನಂ ಮಹೇಶ್ವರಾದಿಚ್ಛೇತ್` ಎಂಬ ಪ್ರಮಾಣವೂ ಇದಕ್ಕೆ ಸಂವಾದಿಯಾಗಿದೆ. ಇಂತಹ ಶಿವನು ನಮಗೆಲ್ಲರಿಗೂ ಭಗವಂತನ ಬಗ್ಗೆ ಸರಿಯಾದ ಜ್ಞಾನವನ್ನು ನೀಡಿ ಅನುಗ್ರಹಿಸಲೆಂಬ ಪ್ರಾರ್ಥನೆ ನಮ್ಮದಾಗಿರಲಿ.


ಶ್ರೀ ರಂಗನಾಥಾಚಾರ್ಯ ಸಾಲಗುಂದಾ,
"ಈಶಾವಾಸ್ಯಮ್"