Friday, October 18, 2013

ಭಗವಂತನು ಪಕ್ಷಪಾತಿಯೇ?

ಭಗವಂತನು ಪಕ್ಷಪಾತಿಯೇ?
 
ಶ್ರೀಮದ್ಭಾಗವತದ ಸಪ್ತಮ ಸ್ಕಂಧದ ಆರಂಭದಲ್ಲಿ ಪರೀಕ್ಷಿತ್ ರಾಜನು, ನಮ್ಮೆಲ್ಲರ ಪ್ರತಿನಿಧಿಯಾಗಿ, ಶ್ರೀ ಶುಕಾಚಾರ್ಯರ ಮುಂದೆ ಒಂದು ಪ್ರಶ್ನೆ ಇಡುತ್ತಾನೆ. ದೇವ ಮತ್ತು ಅಸುರರ ನಡುವೆ ಯುಧ್ಧ ಸಂಭವಿಸಿದಾಗಲೆಲ್ಲಾ, ಮೊದಮೊದಲು ದೇವತೆಗಳಿಗೆ ಸೋಲುಂಟಾದರೂ, ಅಂತಿಮವಾಗಿ ಭಗವಂತ ದೇವತೆಗಳ ಕಡೆಗೆ ನಿಂತು ಅವರಿಗೆ ಜಯ ತಂದುಕೊಡುತ್ತಾನೆ. ದೈತ್ಯರನ್ನು ಸಂಹಾರ ಮಾಡುತ್ತಾನೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದನ್ನು ಕಾಣುತ್ತಿದ್ದೇವೆ. ಈ ಪ್ರಪಂಚದಲ್ಲಿ ಎಲ್ಲ ಜೀವರನ್ನೂ ದೇವ-ದಾನವ-ಮಾನವ-ಪ್ರಾಣಿ-ಪಕ್ಷಿ ಮುಂತಾದ ಸಕಲ ಜೀವರಾಶಿಯನ್ನು ಭಗವಂತನೇ ಸೃಸ್ಟಿಸಿದ್ದಾನೆ. (ಇಲ್ಲಿ ಸೃಸ್ಟಿಯೆಂದರೆ ಜೀವರುಗಳಿಗೆ ದೇಹ ಸೃಸ್ಟಿಮಾತ್ರ). ಹಾಗಾಗಿ ಎಲ್ಲರೂ ಭಗವಂತನ ಮಕ್ಕಳೇ. ಹೀಗಿರುವಾಗ ಪ್ರತೀಸಾರಿಯೂ ದೇವತೆಗಳನ್ನು ಗೆಲಿಸುವುದು, ಅಸುರರನ್ನು ಸೋಲಿಸುವುದರ ಔಚಿತ್ಯವೇನು?  ಏಕೆ ಒಮ್ಮೊಮ್ಮೆ ಅಸುರರನ್ನು ಗೆಲಿಸಿ ದೇವತೆಗಳನ್ನು ಸೋಲಿಸಬಾರದು? ಎರಡೂ ಬಣಗಳು ಅವನ ಮಕ್ಕಳೇ ತಾನೆ? ತನ್ನದೇ ಆದ ಮಕ್ಕಳಲ್ಲಿ ಈ ಪಕ್ಷಪಾತವೇಕೆ? ಭಗವಂತನಿಗೆ ತನ್ನವರು-ಬೇರೆಯವರು ಎಂಬ ಭಾವನೆಗಳಿವೆಯೇ?
 
ಈ ಮೇಲಿನ ಪ್ರಶ್ನೆಗೆ  ಶ್ರೀ ಶುಕಾಚಾರ್ಯರು ಉತ್ತರಿಸುತ್ತಾ ಭಗವಂತನಿಗೆ ತನ್ನವರು-ಬೇರೆಯವರು ಎಂಬ ಭಾವನೆಗಳಿರಲು ಸಾಧ್ಯವೇಇಲ್ಲ. ವಿಷಯ ಹೀಗಿರುವಾಗ ಅವನು ಪಕ್ಷಪಾತ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೇಗೆಂದರೆ, ಈ ರಾಗ-ದ್ವೇಷಗಳಿಗೆ ಮೂಲಕಾರಣ ಸತ್ವ-ರಜಸ್ಸು-ತಮೋಗುಣಗಳು. ಈ ತ್ರಿಗುಣಗಳಿಂದ ಯಾರು ಬದ್ಧರಾಗಿರುತ್ತಾರೋ ಅವರುಗಳು ಮಾತ್ರ ಈ ವೈಷಮ್ಯ-ನೈರ್ೃಘಣ್ಯ ಎಂಬ ದೋಷಗಳಿಂದ ಕೂಡಿದವರಾಗಿರುತ್ತಾರೆ. ಆದರೆ ಚಿತ್ಪ್ರಕೃತ್ಯಭಿಮಾನಿನಿಯಾದ ಲಕ್ಷ್ಮೀದೇವಿಯವರಿಗೇ ಈ ತ್ರಿಗುಣಗಳ ಬದ್ಧತೆಯಿರುವುದಿಲ್ಲ. ಅವರು ಈ ಗುಣಗಳ ಅಭಿಮಾನಿ ದೇವತೆ. ಹೀಗಿರುವಾಗ ಆ ಲಕ್ಷ್ಮೀದೇವಿಯವರ ಪತಿಯಾದ ಭಗವಂತನಿಗೆ ಈ ಗುಣಗಳ ಬದ್ಧತೆಯಿರುವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿರುವುದಿಲ್ಲ. ಆದುದರಿಂದ ಭಗವಂತನ ಮೇಲೆ ಈ ಗುಣಗಳ ಪ್ರಭಾವ ಉಂಟಾಗುವುದಿಲ್ಲ. ಈ ತ್ರಿಗುಣಗಳೂ ಅವನ ಹಿಡಿತದಲ್ಲಿರುತ್ತವೆ. ಹೀಗಾಗಿ ಅವನಿಗೆ ಇವರು ತನ್ನವರು, ಇವರು ಪರರು ಎಂಬ ಭಾವನೆಯೇ ಇರುವುದಿಲ್ಲ. ದೇವತೆಗಳ ಗೆಲುವಿನಿಂದ ಅಥವಾ ಅಸುರರ ಸೋಲಿನಿಂದ ಅವನಿಗಾಗಬೇಕಾದ ಪ್ರಯೋಜನವೂ ಇಲ್ಲ-ನಷ್ಠವೂ ಇಲ್ಲ. ದೇವತೆಗಳು ತನ್ನನ್ನು ಪ್ರೀತಿಸುತ್ತಾರೆಂದಾಗಲೀ, ಅಸುರರು ತನ್ನನ್ನು ದ್ವೇಷಿಸುತ್ತಾರೆಂದಾಗಲೀ ತಿಳಿದು ಅವನು ಯಾವುದೇ ಪಕ್ಷಪಾತ ಮಾಡುವುದಿಲ್ಲ. ಯಾರ ಪ್ರೀತಿಯಿಂದಾಗಲೀ-ದ್ವೇಷದಿಂದಾಗಲೀ ಅವನಿಗೆ ಆಗಬೇಕಾದ್ದು ಏನೂ ಇಲ್ಲ. ಅವನ ಮೂಲ ಉದ್ದೇಶ ಜಗತ್ತಿನಲ್ಲಿ ಒಳ್ಳೇದು ಎಂಬುದು ಗೆಲ್ಲಬೇಕು, ಕೆಟ್ಟದ್ದು ನಾಶವಾಗಬೇಕು. ದೇವತೆಗಳು ಒಳ್ಳೆಯವರು-ಸಾತ್ವಿಕರು, ಆದುದರಿಂದ ಅವರ ಪಕ್ಷಕ್ಕೆ ಜಯ ತಂದುಕೊಡುತ್ತಾನೆ ಅಸ್ಠೆ ನಮ್ಮ ಕಣ್ಮುಂದಿರುವ ಈ ಲೋಕದಲ್ಲಿಯಾದರೂ ಸಾಮಾನ್ಯವಾಗಿ  ನಾವು ಮಾಡುವುದು ಅದೇ ತಾನೆ. 
 
ಹೌದೂ, ಈ ಲೋಕದಲ್ಲಿ ಜನರ ಬುದ್ಧಿ ನಮ್ಮ ಕೈಯಲ್ಲಿರುವುದಿಲ್ಲ. ಹಾಗಾಗಿ ನಮಗೆ ಒಳ್ಳೆಯದನ್ನು ಪ್ರೋತ್ಸಾಹಿಸುವ ಕೆಟ್ಟದ್ದನ್ನು ಟೀಕಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ಭಗವಂತ ಸರ್ವಸಮರ್ಥನಿರುವಾಗ ಅವನು ತನ್ನ ಮಕ್ಕಳಲ್ಲೇ ಕೆಲವರಿಗೆ ಒಳ್ಳೆ ಬುದ್ಧಿಯನ್ನು-ಕೆಲವರಿಗೆ ಕೆಟ್ಟ ಬುದ್ಧಿಯನ್ನು ಏಕೆ ಕೊಡಬೇಕು? ಎಲ್ಲರಿಗೂ ಒಳ್ಳೇ ಬುದ್ಧಿಯನ್ನೇ ಕೊಡಬಾರದೇಕೆ? ಹೀಗೆ ಮಾಡುವುದರಿಂದ ಯಾವ ಸಮಸ್ಯೆಯೇ ಇರುವುದಿಲ್ಲವಲ್ಲ. ಕೆಲವರಿಗೆ ತನ್ನನ್ನು ಪ್ರೀತಿಸುವ ಬುದ್ಧಿ-ಕೆಲವರಿಗೆ ತನ್ನನ್ನು ದ್ವೇಷಿಸುವ ಬುದ್ಧಿಯನ್ನು ಏಕೆ ಕೊಡಬೇಕು?  ಎಲ್ಲರಿಗೂ ತನ್ನನ್ನು ಪ್ರೀತಿಸುವ ಬುದ್ಧಿಯನ್ನು ಕೊಟ್ಟುಬಿಟ್ಟಿದ್ದರೆ ಎಲ್ಲರೂ ತನ್ನ ಭಕ್ತರೇ ಆಗಿರುತ್ತಿದ್ದರು. ಆಗ ತಾನು ಯಾರಪರವಾಗಿಯೂ ನಿಲ್ಲುವ ಪ್ರಸಂಗವೇ ಉಂಟಾಗುತ್ತಿರಲಿಲ್ಲವಲ್ಲವೇ? ಭಗವಂತ ಯಾಕೆ ಹಾಗೆ ಮಾಡಬಾರದು ಎಂಬ ಪ್ರಶ್ನೆ ಬಂದಾಗ ಶ್ರೀ ಶುಕಾಚಾರ್ಯರು  ಮುಂದೆ ಉತ್ತರಿಸುತ್ತಾರೆ
ಭಗವಂತ ಸರ್ವತಂತ್ರ ಸ್ವತಂತ್ರ. ಸ್ವತಂತ್ರ ಎಂದರೆ, ಅವನು ಯಾರಿಗೂ ಅಧೀನನಲ್ಲ ಆದರೇ ಅವನು ತನಗೆ ತಾನು ಅಧೀನ. ಸ್ವ-ತಂತ್ರ ಎಂಬುದರ ಅರ್ಥವೇ ಹಾಗೆ. ತಾನು ರೂಪಿಸಿದ(ರಚಿಸಿದ) ನಿಯಮಗಳಿಗೆ ಅವನು ಬದ್ಧ. ಅದು ಅವನ ಸಂವಿಧಾನ. ಅದು ಒಂದು ಅವನ ಗುಣ. ದೋಷವಲ್ಲ. ನಮ್ಮ ದೇಶ ಭಾರತವೂ ಸ್ವತಂತ್ರ ದೇಶ. ಇಲ್ಲಿ ನಾವೇ ರಚಿಸಿಕೊಂಡ ಸಂವಿಧಾನವಿದ್ದರೂ, ಅದಕ್ಕೆ ಬದ್ಧರಾಗಿರುವವರಕ್ಕಿಂತ ಉಲ್ಲಂಘಿಸುವವರೇ ಹೆಚ್ಚು. ಆದರೆ ಭಗವಂತನ ವಿಷಯ ಹಾಗಿಲ್ಲ. ಈ ಕಾರಣದಿಂದಾಗಿಯೇ ಇದುವರೆವಿಗೂ ಸೃಷ್ಟವಾಗಿರುವ ಎಲ್ಲ ಪ್ರಪಂಚಗಳು ಒಂದೇ ರೀತಿಯಾಗಿವೆ. ಎಂದೂ ಸೃಸ್ಟಿಯ ನಿಯಮ ಬದಲಾಗುವುದಿಲ್ಲ. ಒಮ್ಮೆ ಸೂರ್ಯ ಹಗಲು ಹುಟ್ಟುವುದು-ಒಮ್ಮೆ ರಾತ್ರಿ. ಒಮ್ಮೆ ಸುಡುವ ಸೂರ್ಯ-ಒಮ್ಮೆ ತಣ್ಣಗೆ ಹೀಗೆ ಬದಲಾಗುವುದಿಲ್ಲ. ಭಗವಂತನು ಸರ್ವಸಮರ್ಥನಾದರೂ ಅವನು ಯಾವುದನ್ನೂ ಬದಲಿಸುವುದಿಲ್ಲ. ಅದು ಅವನ ಸಂಕಲ್ಪ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ. 
 
 
ಜೀವಿಗಳು ಭಗವಂತನ ಪ್ರತಿಬಿಂಬರೇ ಆದರೂ ಪ್ರತಿಯೊಂದು ಜೀವಿಯ ಸ್ವಭಾವ ಬೇರೆಯೇ ಆಗಿರುತ್ತದೆ. ಭಿನ್ನಾಶ್ಚ ಭಿನ್ನಕರ್ಮಶ್ಚ. ಮೂರು ವಿಧ ಜೀವರುಗಳಿದ್ದಾರೆ. ಸಾತ್ವಿಕ-ರಾಜಸ ಹಾಗು ತಾಮಸ ಎಂದು ಮೂರು ವಿಧ. ಇವುಗಳಲ್ಲಿಯೂ ಮತ್ತೇ ವಿಭಾಗ ಮಾಡಿದಾಗ, ಸಾತ್ವಿಕ-ಸಾತ್ವಿಕ, ಸಾತ್ವಿಕ-ರಾಜಸ, ಸಾತ್ವಿಕ-ತಾಮಸ; ರಾಜಸ-ಸಾತ್ವಿಕ, ರಾಜಸ-ರಾಜಸ, ರಾಜಸ-ತಾಮಸ, ತಾಮಸ-ಸಾತ್ವಿಕ, ತಾಮಸ-ರಾಜಸ, ತಾಮಸ-ತಾಮಸ ಎಂದು ಒಂಭತ್ತು ರೀತಿ ವಿಭಾಗವಾಗುತ್ತದೆ. ಮುಂದುವರಿದು ಇವುಗಳಲ್ಲಿ ಇನ್ನೂ ಒಟ್ಟು 81 ರೀತಿಯಲ್ಲಿ ವಿಭಾಗವಾಗುತ್ತದೆ.  ಸಾತ್ವಿಕರೆಂದರೆ ಒಳ್ಳೆಯವರು; ರಾಜಸರೆಂದರೆ ಒಳ್ಳೆಯ ಮತ್ತು ಕೆಟ್ಟ ಗುಣಗಳ ಮಿಶ್ರರು ಮತ್ತು ತಾಮಸರೆಂದರೆ, ಕೆಟ್ಟವರು ಅಂದರೆ ದೈತ್ಯರು. ಈ ಮೇಲೆ ತಿಳಿಸಿದಂತೆ ಭಗವಂತ ಈ ಜೀವಿಗಳ ಸ್ವಭಾವವನ್ನು ಬದಲಿಸುವುದಿಲ್ಲ. ಜೀವಿಗಳಿಗೆ ಅವರದೇ ಆದ ಸ್ವಭಾವವಿದೆ ಎಂಬ ಸತ್ಯವನ್ನು ಮೊತ್ತಮೊದಲು ಆಧ್ಯತ್ಮ ಲೋಕಕ್ಕೆ ಪರಿಚಯಿಸಿದವರು ಶ್ರೀಮದಾನಂದತೀರ್ಥರು. 
 
 
ಭಗವಂತನ ಕೆಲಸವೇನಿದ್ದರೂ ತೋಟಗಾರನ ಕೆಲಸ ಮಾತ್ರ. ಹೇಗೆ ಒಬ್ಬ ತೋಟಗಾರನು ತರತರಹದ ಗಿಡಗಳನ್ನು ನೆಟ್ಟು, ಅವಕ್ಕೆ ನೀರು-ಗೊಬ್ಬರ ಹಾಕಿ ಹೇಗೆ ಬೆಳೆಸುತ್ತಾನೋ ಹಾಗೆ ಭಗವಂತ ಜೀವಿಗಳನ್ನು ಅಸೃಜ್ಯಾವಸ್ಥೆಯಿಂದ ಈ ಸೃಸ್ಟಿಗೆ ತಂದು ಆಯಾ ಜೀವಿಗಳ ಸ್ವಭಾವದ ವಿಕಾಸಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಿ ಅವುಗಳು ತಮ್ಮ-ತಮ್ಮ ಗತಿ ಹೊಂದಲು ಸಹಕಾರಿಯಾಗುತ್ತಾನೆ. ಇದು ಜೀವಿಗಳ ಮೇಲಿನ ಅವನ ಕಾರುಣ್ಯ. ಇಲ್ಲದೇ ಹೋಗಿದ್ದಲ್ಲಿ ಜೀವಿಗಳಿಗೆ ತಮ್ಮ ಅಸ್ತಿತ್ವವೇ ತಿಳಿಯದಾಗಿಬಿಡುತ್ತಿತ್ತು. ಭಗವಂತನ ಕಾರುಣ್ಯದಿಂದ ಜೀವಿಗಳು ಸೃಸ್ಟಿಗೆ ಬಂದು ತಮ್ಮ-ತಮ್ಮ ಸಾಧನೆ ಮಾಡಿಕೊಂಡು ತಮ್ಮ-ತಮ್ಮ ಗತಿ ಹೊಂದಲು ಸಾಧ್ಯವಾಗುತ್ತದೆ. ತೋಟದಲ್ಲಿ ಬೇಳೆಸಿದ ಗಿಡಗಳಲ್ಲಿ ಮಾವಿನಮರ ಬಿಡುವ ಹಣ್ಣು ಸಿಹಿ; ನಿಂಬೆಹಣ್ಣು ಹುಳಿ; ಹಾಗಲಕಾಯಿ ಕಹಿ ಹೇಗೋ ಹಾಗೆ ಜೀವಿಗಳ ವಿಭಿನ್ನ ಸ್ವಭಾವಗಳು. ಜೀವಿಗಳು ಅಸ್ವತಂತ್ರರಾದುದರಿಂದ, ಅವುಗಳು ತಾವೇ ಸ್ವತಃ ತಮ್ಮ ಸಾಧನೆ ಮಾಡಿಕೊಳ್ಳಲು ಅಸಮರ್ಥರಾಗಿರುತ್ತಾರಾದ್ದರಿಂದ ಭಗವಂತ ಇವರಲ್ಲಿ ನಿಂತು ತಾನು ಅವರಿಂದ ಕರ್ಮಗಳನ್ನು ಮಾಡಿಸಿ ಅವರವರ ಕರ್ಮಗಳಿಗೆ ತಕ್ಕ ಫಲವನ್ನು ನೀಡುತ್ತಾನೆ. ಒಂದು ಲೌಕಿಕ ಉದಾಹರಣೆಯನ್ನು ನೋಡುವುದಾದರೆ,  ನಮ್ಮ ಮನೆಗಳಲ್ಲಿ ಅನೇಕ ವಿದ್ಯುತ್ ಉಪಕರಣಗಳಿರುತ್ತವೆ. ಫ್ರೀಜ್, ಗೀಜರ್, ಏರ್ ಕೂಲರ್, ರೂಮ್ ವಾರ್ಮರ್ ಹೀಗೆ ಅನೇಕ ರೀತಿಯಾಗಿರುತ್ತವೆ. ಫ್ರೀಜನಲ್ಲಿ ನೀರು ತಣ್ಣಗಾದರೆ, ಗೀಜರ್ನಲ್ಲಿ ಬಿಸಿಯಾಗುತ್ತದೆ. ಏರ್ ಕೂಲರ್ನಲ್ಲಿ ಗಾಳಿ ತಣ್ಣಗೆ ಬೀಸುತ್ತದೆ. ರೂಮ್ ವಾರ್ಮರ್ ಕೋಣೆಯನ್ನು ಬೆಚ್ಚಗೆ ಇಡುತ್ತದೆ. ಈ ರೀತಿಯಾಗಿ ಅವು ವಿಭಿನ್ನ ಸ್ವಭಾವದ ಉಪಕರಣಗಳು. ಅವುಗಳು ತಾವೇತಾವಾಗಿ ಸ್ವತಃ ಕೆಲಸ ನಿರ್ವಹಿಸಲು ಅಸಮರ್ಥವಾಗಿರುತ್ತವೆ. ಅವುಗಳಲ್ಲಿ ವಿದುತ್ತನ್ನು ಹಾಯಿಸಿದಾಗ ಮಾತ್ರ ಅವು ಕೆಲಸ ಮಾಡುತ್ತವೆ. ಭಗವಂತ ವಿದ್ಯುತ್ ಇದ್ದಂತೆ. ಹೇಗೆ ವಿದ್ಯುತ್, ಉಪಕರಣಗಳಲ್ಲಿ ಹರಿದು ಆ ಆ ಉಪಕರಣಗಳ ಗುಣಧರ್ಮಗಳಿಗನುಸಾರವಾಗಿ ಕೆಲಸ ಮಾಡಿಸುತ್ತದೋ, ಹಾಗೆ ಭಗವಂತ ಜೀವರುಗಳ ಅಂತಯರ್ಾಮಿಗಿದ್ದುಕೊಂಡು ಜೀವಿಗಳ ಸ್ವಭಾವಗಳಿಗನುಸಾರವಾಗಿ ಕರ್ಮ ಮಾಡಿಸುತ್ತಾನೆ. ಸ್ವಭಾವಗಳನ್ನು ಬದಲಿಸುವುದಿಲ್ಲ. 
 
ಭಗವಂತ ಯಾವಾಗಲೂ ಒಳ್ಳೆಯದನ್ನೇ ಬೆಂಬಲಿಸುತ್ತಾನೆ.  ದೇವತೆಗಳು ಸಹಜವಾಗಿಯೇ ಒಳ್ಳೆಯಸ್ವಭಾವದವರು-ದೈತ್ಯರು ಕೆಟ್ಟ ಸ್ವಭಾವದವರು. ಹೀಗಾಗಿ ಸಹಜವಾಗಿಯೇ ಭಗವಂತ ದೇವತೆಗಳ ಪಕ್ಷದಲ್ಲಿ ನಿಲ್ಲುತ್ತಾನೆಯೇ ಹೊರತು ಅವನಿಗೆ ತನ್ನವರು-ಬೇರೆಯವರು ಎಂಬ ಮಮತೆಯಾಗಲಿ-ಪಕ್ಷಪಾತವಾಗಲೀ-ದ್ವೇಷವಾಗಲೀ ಎಂದೂ ಇರುವುದಿಲ್ಲ. ಈ ಹಿಂದೆ ನಿಮ್ಮ ತಾತ ಧರ್ಮರಾಜ ನಾರದರಿಗೆ ಇಂತಹದ್ದೇ ಒಂದು ಪ್ರಶ್ನೆಯನ್ನು ಕೇಳಿದ್ದ ಎಂದು ಶ್ರೀ ಶುಕಾಚಾರ್ಯರು ಪರೀಕ್ಷಿತರಾಜನಿಗೆ ಹೇಳುತ್ತಾರೆ.
 
ಧರ್ಮರಾಜನು ನಾರದರಿಗೆ ಕೇಳಿದ ಪ್ರಶ್ನೆ ಏನು? ಅದಕ್ಕೆ ನಾರದರ ಉತ್ತರವೇನು? ಎಂಬುದನ್ನು ಮುಂದಿನ ಭಾಗದಲ್ಲಿ ನೋಡೋಣ. 
 
 
 ಶ್ರೀಕೃಷ್ಣಾರ್ಪಣಮಸ್ತು
 
 
ಕೆ. ಸತ್ಯನಾರಾಯಣರಾವ್, ಹೊಸಪೇಟೆ.