Monday, June 10, 2013

ನಮಸ್ಕಾರ ಎಂದರೆ ಎನು? ಹೇಗೆ ?

ನಮಸ್ಕಾರ ಎಂದರೆ ಎನು? ಹೇಗೆ ?

 ನಮಸ್ಕಾರ ಎನ್ನುವ ಪದವು ಸಂಸ್ಕೃತ ಭಾಷೆಯ ಒಂದು ಪದ. ಈ ಪದವನ್ನು ಬಿಡಿಸಿದಾಗ ನಮಸ್ | ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ದೊರೆಯುತ್ತವೆ. ಇದು `ಣಮು ಪ್ರಹ್ವತ್ವೇ ಶಬ್ದೇ ಚ` ಎನ್ನುವ ಧಾತುವಿನಿಂದ ಉತ್ಪನ್ನವಾಗಿದೆ. ನಮಸ್ ಎಂದರೆ ಪ್ರಹ್ವತೆ. ಧಾತುವಿನಲ್ಲಿರುವ ಪದಗಳ ಅರ್ಥವನ್ನು ನೋಡಿದಾಗ ನಾವು ನಮಸ್ಕಾರ ಎನ್ನುವ ಪ್ರಕ್ರಿಯೆಯನ್ನು ಮಾಡುವಾಗ ನಮ್ಮ ದೇಹವನ್ನು ಬಾಗಿಸಿರಬೇಕು ಮತ್ತು ಮನಸ್ಸೂ ಸಹ ಬಾಗಿರಬೇಕು ಎನ್ನುವ ಅರ್ಥ ಸಿಗುತ್ತದೆ. ಅಂದರೆ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹಬಾಗಿದ್ದರೆ ಮಾತ್ರ ಸಾಲದು. ದೇವದೇವನ ಮುಂದೆ ನಮ್ಮ ಮನಸ್ಸೂ ಬಾಗಿದ್ದು, ಅವನ ಮಹಿಮೆಗಳು ಶಬ್ದರೂಪ ಸ್ತೋತ್ರದ ಮೂಲಕ ಹೊರಬರುತ್ತಿರಬೇಕು.
 ಇದೇ ಮಾತನ್ನು ಶ್ರೀಮಜ್ಜಯತೀರ್ಥರು ತಮ್ಮ ಸುಧಾಗ್ರಂಥದಲ್ಲಿ `ಮನೋವೃತ್ತೇಃ ತತ್ಪ್ರವಣತಾ ಹಿ ವಂದನಮ್` ಎಂದಿದ್ದಾರೆ. ಹೀಗೆ ನಮಸ್ಕಾರ ಮಾಡುವುದು ಮನಸ್ಸಿನಿಂದ, ಕೇವಲ ಅಡ್ಡಬೀಳುವುದೇ ನಮಸ್ಕಾರವಲ್ಲ. ನಾವು ಪೂಜಾವಸಾನದಲ್ಲಿ ಹೇಳುವ `ನಾಹಂ ಕರ್ತಾ ಹರಿ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್` ಎನ್ನುವ ಮಾತಿನಂತೆ ಯಾವುದೇ ಕಾರ್ಯ ನಮ್ಮಿಂದಾದರೆ ನಿಜವಾಗಿಯೂ ಆ ಕಾರ್ಯ ನಮ್ಮಿಂದಾದುದಲ್ಲ. ಭಗವಂತನಿಂದಲೇ ಆದದ್ದು ಎನ್ನುವ ಭಾವನೆಯೇ ನಮಸ್ಕಾರ. ಅಲ್ಲದೇ! ನಮಸ್ಕಾರವನ್ನು ಮಾಡಿದಾಗ ನಮ್ಮ ದೇಹದ ಭಾರ ವನ್ನು ಭೂವರಾಹನ ಮೇಲೆ ಹಾಕಿ ಆತ್ಮವನ್ನು ನಿವೇದಿಸಬೇಕಾದರೆ `ನಾಹಂ ಕರ್ತಾ` ಎನ್ನುವ ಅನುಸಂಧಾನವಿರಲೇಬೇಕು. ಇಲ್ಲದಿದ್ದಲ್ಲಿ ದೇಹವನ್ನು ಮಾತ್ರ ಭೂಮಿಯ ಮೇಲೆ ಬೀಳಿಸಿದಂತಾ ಗುತ್ತದೆ. ಆತ್ಮನಿವೇದನೆ ಮಾಡಿದಂತಾಗುವುದಿಲ್ಲ.
 ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
 ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||

ಎನ್ನುವ ನವವಿಧ ಭಕ್ತಿ ಯಲ್ಲಿ ಆತ್ಮನಿವೇದನೆ ಸೇರಿದಂತೆ ವಂದನವೂ ಸೇರಿದೆ. ಈ ವಂದನದ ಮೂಲಕ ಭಗವಂತನಲ್ಲಿ ಸ್ನೇಹವನ್ನು ಸಂಪಾದಿಸಿ, ಅವನ ದಾಸರಾಗಿ, ಅವನ ಉತ್ಕರ್ಷವನ್ನು ಒಪ್ಪಿಕೊಂಡು ಅವನಿಗೆ ನಮ್ಮ ಆತ್ಮನಿವೇದನೆಯನ್ನು ಮಾಡುವುದರ ಮೂಲಕ ನಮ್ಮ ಒಳಿತು-ಕೆಡಕುಗಳಿಗೆ ಆ ಭಗವಂತನೇ ಕಾರಣ ಎನ್ನುವ ಅನುಸಂಧಾನದ ಮೂಲಕ ಮನಸ್ಸನ್ನು ನಮ್ರವಾಗಿಸುವುದೇ ನಮಸ್ಕಾರದ ಪ್ರಕ್ರಿಯೆ.

ನಮಸ್ಕಾರದಲ್ಲಿ ಎಷ್ಟು ವಿಧಗಳು:
 ನಮಸ್ಕಾರವು `ಕಾಯಿಕ, ವಾಚಿಕ, ಮಾನಸಿಕ` ಎಂದು ಮೂರು ವಿಧವಾಗಿದೆ. ದೇಹ ದಿಂದ ಮಾಡುವ ನಮಸ್ಕಾರವು `ಕಾಯಿಕ(ದೈಹಿಕ) ನಮಸ್ಕಾರ` ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು `ವಾಚಿಕ ನಮಸ್ಕಾರ`, ಮನಸ್ಸಿನ ಮೂಲಕ ಮಾಡುವ ನಮಸ್ಕಾರವು `ಮಾನಸಿಕ ನಮಸ್ಕಾರ` ಎಂದು ಕರೆಸಿಕೊಳ್ಳುತ್ತದೆ. ಈ ಮೂರು ವಿಧವಾದ ನಮಸ್ಕಾರಗಳು ಸೇರಿದಾಗ ಮಾತ್ರ ಅದು `ಉತ್ತಮ ನಮಸ್ಕಾರ` ಎಂದೆನಿಸಿಕೊಳ್ಳುತ್ತದೆ. ಇದನ್ನೇ `ತ್ರಿಕರಣ ಪೂರ್ವಕ ನಮಸ್ಕಾರ` ಎನ್ನುತ್ತಾರೆ. ಈ ಮೂರು ವಿಧದ ನಮಸ್ಕಾರಗಳಲ್ಲಿ `ಕಾಯಿಕ ನಮಸ್ಕಾರವು ಉತ್ತಮ. ವಾಚಿಕ ನಮಸ್ಕಾರವು ಅಧಮ. ಮಾನಸಿಕ ನಮಸ್ಕಾರವು ಮಧ್ಯಮ` ಎಂದು ವಿಭಾಗ ಮಾಡಲಾಗಿದೆ
 ಕಾಯಿಕ ವಾಗ್ಭವಶ್ಚೈವ ಮಾನಸಸ್ತ್ರಿವಿಧಸ್ಸ್ಮೃತಃ|
 ನಮಸ್ಕಾರಸ್ತು ತತ್ವಜ್ಞೈಃ ಉತ್ತಮಾಧಮಮಧ್ಯಮಾಃ ||

ಎಂಬುದಾಗಿ.  ಕಾಯದಿಂದ ಮಾಡುವ ನಮಸ್ಕಾರಗಳಲ್ಲಿ ಪುನಃ ಮೂರುವಿಧಗಳಿವೆ. `ಕಾಯಿಕ ಉತ್ತಮ, ಕಾಯಿಕ ಮಧ್ಯಮ, ಕಾಯಿಕ ಅಧಮ` ಎಂಬುದಾಗಿ. ಕಾಯಿಕ ಉತ್ತಮ ನಮಸ್ಕಾರದ ವಿಧವನ್ನು ಹೇಳುತ್ತಿದ್ದಾರೆ 

 
 ಪ್ರಸಾರ್ಯ ಪಾದೌ ಹಸ್ತೌ ಚ ಪತಿತ್ವಾ ದಂಡವತ್ ಕ್ಷಿತೌ |
 ಜಾನುಭ್ಯಾಂ ಧರಣೀಂ ಗತ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |
 ಕ್ರಿಯತೇ ಯೋ ನಮಸ್ಕಾರಃ ಉತ್ತಮಕಾಯಿಕಸ್ತು ಸಃ ||

ಎಂಬುದಾಗಿ.

ಕಾಯಿಕ ಉತ್ತಮ:
 ಭೂಮಿಯಲ್ಲಿ ದಂಡಾಕಾರವಾಗಿ ಮಲಗಿ, ಹಸ್ತ, ಪಾದಗಳನ್ನು ಚಾಚಿ, ಮಂಡಿ, ತಲೆಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಾ, ನಮ್ಮ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂತನಲ್ಲಿ ನೆಟ್ಟು ಮಾಡುವ ನಮಸ್ಕಾರವೇ `ಕಾಯಿಕ ಉತ್ತಮ ನಮಸ್ಕಾರ.` ಈ ರೀತಿಯ ನಮಸ್ಕಾರವನ್ನು ಪುರುಷರು ಮಾತ್ರ ಮಾಡಬೇಕು. 

ಕಾಯಿಕ ಮಧ್ಯಮ:
 ಮಂಡಿಗಳನ್ನು ಭೂಮಿಯಲ್ಲಿ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂಕನ ರೂಪದಲ್ಲಿಟ್ಟು ಮಾಡುವ ನಮಸ್ಕಾರವೇ `ಕಾಯಿಕ ಮಧ್ಯಮ` ಎಂದೆನಿಸಿಕೊಳ್ಳುತ್ತದೆ.
 ಜಾನುಭ್ಯಾಂ ಚ ಕ್ಷಿತಿಂ ಸ್ಪೃಷ್ಟ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |
 ಕ್ರಿಯತೇ ಯೋ ನಮಸ್ಕಾರಃ ಮಧ್ಯಮಃ ಕಾಯಿಕಸ್ತು ಸಃ ||

ಎಂದು ಹೇಳಿ ಈ ನಮಸ್ಕಾರವನ್ನು ಸ್ತ್ರೀಪುರುಷರಿಬ್ಬರೂ ಮಾಡಬಹುದೆಂದು ಹೇಳಿ, ಮುಂದೆ ಕಾಯಕ ಅಧಮ ನಮಸ್ಕಾರದ ರೀತಿಯನ್ನು  ಹೇಳುತ್ತಿದ್ದಾರೆ

ಕಾಯಿಕ ಅಧಮ:
 ಪುಟೀಕೃತ್ಯ ಕರೌ ಶೀರ್ಷೇ ದೀಯತೇ ಯದ್ಯಥಾ ತಥಾ |
 ಅಸ್ಪೃಷ್ಟ್ವಾ ಜಾನುಶೀರ್ಷಾಭ್ಯಾಂ ಕ್ಷಿತಿಂ ಸೋಡಧಮ ಉಚ್ಯತೇ ||

ಮಂಡಿ ಮತ್ತು ತಲೆ ಯನ್ನು ಭೂಮಿಗೆ ತಾಗಿಸದೇ, ಕೈಯನ್ನು ತಲೆಯಲ್ಲಿಟ್ಟು ಮಾಡುವ ನಮಸ್ಕಾರವು ಕಾಯಕ ಅಧಮ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ.
 ಇಲ್ಲಿ ಒಂದು ಪ್ರಶ್ನೆ ಬರುತ್ತದೆ ಎನೆಂದರೆ? 
 ಕಾಯಕ ಉತ್ತಮದ ನಮಸ್ಕಾರವನ್ನು ಪುರುಷರು ಮಾತ್ರ ಎಕೆ ಮಾಡಬೇಕು, ಸ್ತ್ರೀಯರು ಎಕೆ ಮಾಡಬಾರದು ಎಂಬುದಾಗಿ? ಅದಕ್ಕೆ ಉತ್ತರವನ್ನು ಈ ರೀತಿ ಹೇಳುತ್ತಿದ್ದಾರೆ.    

ಬ್ರಾಹ್ಮಣಸ್ಯ ಗುದಂ ಶಂಖಂ ಯೋಷಿತಃ ಸ್ತನಮಂಡಲಮ್ |
ರೇತಃ ಪವಿತ್ರಗ್ರಂಥಿಂ ಚ ನ ಭೂಃ ಧಾರಯಿತುಂ ಕ್ಷಮಾ ||

ಎನೆಂದರೆ ಇಡೀ ಭೂ ಮಂಡಲದ ಭಾರವನ್ನು ಹೊತ್ತಿರುವ ಭೂದೇವಿಯು ಬ್ರಾಹ್ಮಣರ ಗುದಪ್ರದೇಶವನ್ನು, ಶಂಖವನ್ನು, ಸ್ತ್ರೀಯರ ಸ್ತನಮಂಡಲವನ್ನು, ಶುಕ್ಲರೂಪದಲ್ಲಿರುವ ರೇತಸ್ಸನ್ನು, ಧಭರ್ೆಯ ಗ್ರಂಥಿಯನ್ನು ಧರಿಸ ಲಾರಳಂತೆ. ಆದುದರಿಂದ ಸ್ತ್ರೀಯರು ಕಾಯಕ ಉತ್ತಮ ನಮಸ್ಕಾರವನ್ನು ಮಾಡಬಾರದೆಂದು ತಿಳಿಸುತ್ತಾ ಇದನ್ನು ಕೇವಲ ಪುರುಷರಿಗೆ ಮಾತ್ರ ವಿಧಾನ ಮಾಡಿರುವರು. ಅಲ್ಲದೇ! ಪುರುಷರು ಆಸನವಿಲ್ಲದೇ ನೆಲದ ಮೇಲೆ ಕುಳಿತುಕೊಳ್ಳಬಾರದೆಂದೂ ಕೂಡ ವಿಧಾನ ಮಾಡಿರುವರು.


ಪ್ರಣಾಮ ಎಂದರೇನು?
 `ಸ್ವಾಪಕರ್ಷಬೋಧಕ, ಪರೋತ್ಕರ್ಷಬೋಧಕ ಕಾಯಕವ್ಯಾಪಾರಃ ನಮಸ್ಕಾರಃ` ಎನ್ನುವ ದುರ್ಗಾದಾಸನ ಮಾತಿನಂತೆ ಪ್ರಣಾಮವೆಂದರೆ ನಮಗಿಂತ ಹಿರಿಯರ ಮುಂದೆ ನಾನು ಅಲ್ಪ ಎನ್ನುವ ಭಾವನೆಯನ್ನು ಪ್ರತಿಬಿಂಬಿಸುವ ದೈಹಿಕ ವ್ಯಾಪಾರದ ಅನುಸಂಧಾನವೇ ನಮಸ್ಕಾರ ವೆಂದು ಗೊತ್ತಾಗುತ್ತದೆ. ಅಲ್ಲದೇ! ಮೇಲೆ ತಿಳಿಸಿದಂತೆ ಕಾಯವನ್ನು ಭೂಮಿಯಲ್ಲಿ ಬೀಳಿಸಿ, ತಲೆ ಯ ಮೇಲುಗಡೆ ಗುಣಾಕಾರದ ಚಿಹ್ನೆ( ) ಯಂತೆ ಎಡಕೈಯ ಮೇಲೆ ಬಲಕೈ ಬರುವಂತೆ ಮಾಡಿ, ನಮ್ಮ ಬಲಕೈ ಭಗವಂತನ ಬಲಪಾದವನ್ನು, ನಮ್ಮ ಎಡಕೈ ಭಗವಂತನ ಎಡಪಾದವನ್ನು ಮುಟ್ಟು ವಂತೆ ಮಾಡುವ ನಮಸ್ಕಾರವೇ ಪ್ರಣಾಮ ಎಂಬುದಾಗಿ ಕಾಲಿಕಾ ಖಂಡವು ಈ ರೀತಿಯಾಗಿ ತಿಳಿಸುತ್ತಿದೆ

 ಅಯಮೇವ ನಮಸ್ಕಾರಃ ದಂಡಾದಿಪ್ರತಿಪತ್ತಿಭಿಃ|
 ಪ್ರಣಾಮ ಇತಿ ಜ್ಞೇಯಃ ಸ ಪೂರ್ವಪ್ರತಿಪಾದಿತಃ ||

ಎಂಬುದಾಗಿ. ಇಂತಹ ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.
 ಇಂತಹ ನಮಸ್ಕಾರದಲ್ಲಿ ಪುನಃ ನಾಲ್ಕುವಿಧಗಳಿವೆ. ಅವುಗಳೆಂದರೆ (1) ಭಕ್ತಿಪೂರ್ವಕ ನಮಸ್ಕಾರ (2) ಅಷ್ಟಾಂಗ ನಮಸ್ಕಾರ (3) ಪಂಚಾಂಗ ನಮಸ್ಕಾರ (4) ಅಭಿವಾದನ ಎಂಬುದಾಗಿ.

To be continued...

Thursday, May 30, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು - 18-22

                           
(ಮುಂದುವರಿದ ಭಾಗ)

ಹದಿನೆಂಟನೇ ಅವತಾರ
                   ನರದೇವತ್ವಮಾಪನ್ನಃ ಸುರಕಾರ್ಯಚಕೀರ್ಷಯಾ |
                   ಸಮುದ್ರನಿಗ್ರಹಾದೀನಿ ಚಕ್ರೇ ವೀರ್ಯಾಣ್ಯತಃ ಪರಮ್ ||           ಭಾಗವತ  1-3-22


 ಯಾವ ಯಾವ ಸಮಯದಲ್ಲಿ ಭೂಮಿಯಮೇಲೆ ದುಷ್ಟಜನರ ಸಂಖ್ಯೆ ಹೆಚ್ಚಳವಾಗಿ ಭೂಮಿಗೆ ಭಾರವಾಗುತ್ತಾರೋ, ಆವಾಗಲೆಲ್ಲಾ ಭಗವಂತನು ಭೂಮಿಗೆ ಇಳಿದುಬಂದು ಆ ಭೂಮಿಗೆ ಭಾರವಾದ ಜನರನ್ನು ಸಂಹಾರಮಾಡಿ ಭೂಮಿಯ ಭಾರವನ್ನು ಕಡಿಮೆ ಮಾಡುತ್ತಾನೆ. ಇದೇ ಕಾರಣಕ್ಕಾಗಿ ಇಕ್ಷ್ವಾಕು ವಂಶದಲ್ಲಿ ಭಗವಂತ ರಾಮಚಂದ್ರ ಎಂಬ ಹೆಸರಿನಿಂದ ಅವತಾರಮಾಡಿದ ವಿಷಯ ಪ್ರಸಿದ್ಧವಾದದು.  ನರ-ವಾನರರಿಂದಲ್ಲದೇ ಬೇರೆ ಯಾರಿಂದಲೂ ತಮಗೆ ಮರಣ ಬರಬಾರದು ಎಂದು ವರ ಪಡೆದಿದ್ದ ರಾವಣ-ಕುಂಭಕರ್ಣರನ್ನು ಸಮಃರಿಸುವುದಕ್ಕಾಗಿ, ಭಗವಂತ ಒಬ್ಬ ನರನಾಗಿ - ಕ್ಷತ್ರಿಯ ರಾಜನಾಗಿ ಅವತಾರಮಾಡಿದ. ಮತ್ತು ಮಾನವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಾನು ನಡೆದು ತೋರಿಸಿದ.  ತನ್ನ ಸಂಹಾರಕ್ಕಾಗಿ ತಾನೆ ಮುನ್ನುಡಿ ಬರೆದುಕೊಂಡ ರಾವಣ ಅಪಹರಿಸಿದ ಸೀತೆಯನ್ನು ಹುಡುಕುವ ನೆಪದಲ್ಲಿ, ತನ್ನ ದರ್ಶನಕ್ಕಾಗಿ ಎದುರು ನೋಡುತ್ತಿದ್ದ ಕಾಡಿನಲ್ಲಿದ್ದ ತಪಸ್ವಿ ಋಷಿ-ಮುನಿಗಳಿಗೆ ತನ್ನ ದರ್ಶನ ಕೊಟ್ಟು ಆನಂದ ಕರುಣಿಸಿ, ದಂಡಕಾರಣ್ಯದಲ್ಲಿ ಬೀಡುಬಿತ್ತಿದ್ದ ಎಲ್ಲಾ ರಾಕ್ಷಸರನ್ನು ಸಂಹಾರಮಾಡಿ,  ಲಂಕೆಗೆ ಹೋಗುವ ಸಲುವಾಗಿ ಸಮುದ್ರ ನಿಗ್ರಹ ಮಾಡಿ ಸೇತುವೆ ಕಟ್ಟಿ ರಾವಣ-ಕುಂಭಕರ್ಣರನ್ನು ಸಂಹಾರಮಾಡಿ, ತನ್ನ ಪರಮ ಭಕ್ತನಾದ ವಿಭೀಷಣನಿಗೆ ಪಟ್ಟಗಟ್ಟಿ ಅನುಗ್ರಹಿಸಿ, ಎಲ್ಲ ಪ್ರಜೆಗಳ ಪ್ರಶಂಸೆಗೆ ಪಾತ್ರನಾಗುವರೀತಿ ರಾಜ್ಯಭಾರ ಮಾಡಿ, ರಾಮರಾಜ್ಯ ಎಂದು ಒಂದು ಮಾದರಿಯನ್ನು ತೋರಿಸಿಕೊಟ್ಟ  ಒಂದು ಅಧ್ಬುತ ಅವತಾರ ಈ ರಾಮಾವತಾರ.


ಹತ್ತೊಂಭತ್ತು ಮತ್ತು ಇಪ್ಪತ್ತನೇ ಅವತಾರಗಳು.

                ಏಕೋನವಿಂಶೇ ವಿಂಶತಿಮೇ ವೃಷ್ಣಿಷು ಪ್ರಾಪ್ಯ ಜನ್ಮನೀ |
                ರಾಮಕೃಷ್ಣಾವಿತಿ ಭುವೋ ಭಗವಾನಹರದ್ಭರಮ್ ||           ಭಾಗವತ: 1-3-23



  ಹತ್ತೊಂಭತ್ತು ಮತ್ತು ಇಪ್ಪತ್ತನೇ ಅವತಾರಗಳು ಬಲರಾಮ ಮತ್ತು ಕೃಷ್ಣ. ಆದರೇ ಬಲರಾಮಾವತಾರ ಭಗವಂತನ ಪೂರ್ಣಾವತಾರವಲ್ಲ. ಆವೇಶಾವತಾರ. ಬಲರಾಮ ಶೇಷನ ಅವತಾರ. ಈ ಹಿಂದೆ ಪೃಥುರಾಜನ ವಿಷಯದಲ್ಲಿವಿವರಿಸಿದಂತೆ, ಬಲರಾಮನಲ್ಲಿ ಭಗವಂತನ ವಿಶೇಷ ಆವೇಶ. ಕೃಷ್ಣಾವತಾರ ಭಗವಂತನ ಪೂರ್ಣಾವತಾರ. ಈ ಎರಡು ಅವತಾರಗಳು ವೃಷ್ಣಿ ವಂಶದಲ್ಲಿ ಅಂದರೆ ಯದುವಂಶದಲ್ಲಿ ಆದ ಅವತಾರಗಳು. ಭಗವಂತನ ಅವತಾರಗಳಲ್ಲಿ ಕೆಲವು ಜ್ಞಾನಕಾರ್ಯದ ಅವತಾರಗಳು ಮತ್ತು ಕೆಲವು ಬಲಕಾರ್ಯದಅವತಾರಗಳು. ಆದರೆ ಕೃಷ್ಣಾವತಾರದಲ್ಲಿ ಭಗವಂತ ಜ್ಞಾನ ಮತ್ತು ಬಲ ಎರಡನ್ನು ಅಭಿವ್ಕಕ್ತಗೊಳಿಸಿದ್ದಾನೆ. ಅರ್ಜುನನ್ನು ನಿಮಿತ್ತವಾಗಿರಿಸಿಕೊಂಡು ಸರ್ವವೇದಗಳಸಾರ-ಮಹಾಭಾರತದ ಉಪನಿಷತ್ತೆಂದು ಕರೆಯಲ್ಪಡುವ ಭಗವದ್ಗೀತೆಯನ್ನು ಜಗತ್ತಿಗೆ ಬೋಧಿಸಿದ ಅವತಾರ ಕೃಷ್ಣಾವತಾರ.

ಇಪ್ಪತ್ತೊಂದನೇ ಅವತಾರ.

                 ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ |
                  ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ ||        ಭಾಗವತ: 1-3-24


 ಇದು ಒಂದು ಮೋಹಕ ಅವತಾರ. ಅರ್ಹತೆ ಇಲ್ಲದ ತಾಮಸಪ್ರವೃತ್ತಿಯವರು ತಾವು ಸನ್ಮಾರ್ಗ ಹಿಡಿದು ಉನ್ನತಿಗೆ ಏರಲು ಪ್ರಯತ್ನಿಸಿದಾಗ ಅವರನ್ನು ಹಾದಿ ತಪ್ಪಿಸಿ ಅವರಿಗೆ ಉಚಿತವಾದ ಮಾರ್ಗಕ್ಕೆ ಅವರನ್ನು ಹಿಂತಿರುಗುಸುವುದಕ್ಕಾಗಿ ತಳೆದ ಅವತಾರ ಈ ಬುದ್ಧಾವತಾರ. ಈ ಅವತಾರದ ಬಗ್ಗೆ ಇಂದಿಗೂ ಪಂಡಿತರ ನಡುವೆ ಗೊಂದಲಗಳಿವೆ. ಹೆಚ್ಚಿನ ಪಂಡಿತರು ಬುದ್ಧಾವತಾರಗಳು ಎರಡಿವೆ ಎಂದು ಹೇಳುತ್ತಾರೆ. ಒಂದು ಐತಿಹಾಸಿಕ ಬುದ್ಧಾವತಾರ; ಇನ್ನೊಂದು ಪೌರಾಣಿಕ ಬುದ್ಧಾವತಾರ.
ಈ ಗೊಂದಲಕ್ಕೆ ಕಾರಣವೆಂದರೆ, ಮೇಲೆ ಉಲ್ಲೇಖಿಸಲಾದ ಭಾಗವತದಲ್ಲಿನ ಶ್ಲೋಕ. ಶ್ಲೋಕದಲ್ಲಿ ಕಲೌ ಸಂಪ್ರವೃತ್ತೇ ಎಂದಿದೆ. ಅಂದರೆ ಕಲಿಯುಗದಲ್ಲಿ ಆದ ಅವತಾರ ಎಂದು ಅರ್ಥ ಮಾಡುತ್ತಾರೆ. ಕಲಿಯುಗದಲ್ಲಿ ಭಗವಂತನಿಗೆ ಅವತಾರವಿಲ್ಲವಾದುದರಿಂದ ಈ ಐತಿಹಾಸಿಕ ಬುದ್ಧ ಭಗವಂತನ ಅವತಾರವಲ್ಲ ಎಂಬುದು ಒಂದು. ಇನ್ನು ಎರಡನೆಯದಾಗಿ, ಬುದ್ಧೋನಾಮ್ನ ಜಿನಸುತಃ ಎಂದಿದೆ. (ಈಗ ಮುದ್ರಿತವಾಗಿರುವ ಕೆಲವು ಭಾಗವತ ಪುಸ್ತಕಗಳಲ್ಲಿ, ಜನಸುತಃ ಎಂದು ಮುದ್ರಿಸಿರುತ್ತಾರೆ. ಆದರೆ ಮೂಲಪಾಠ ಜಿನಸುತಃ ಎಂಬುದಾಗಿರುತ್ತದೆ.) ಅಂದರೆ ಜಿನ ಎಂಬುವವರ ಮಗನಾಗಿ ಬುದ್ಧ ಹುಟ್ಟಿದ. ಆದರೆ ಐತಿಹಾಸಿಕ ಬುದ್ಧನ ತಂದೆಯ ಹೆಸರು ಶುದ್ದೋದನ - ಜಿನ ಅಲ್ಲ. ಆದುದರಿಂದ ಈ ಬುದ್ಧ ಬೇರೆ ಎಂಬ ವಾದ.  ಮೂರನೆಯದಾಗಿ ಕೀಕಟೇಷು ಭವಿಷ್ಯತಿ ಎಂಬುದಾಗಿ ಇದೆ. ಕೀಕಟ ಎಂದರೆ ಈಗಿನ ಬಿಹಾರ ಪ್ರಾಂತ. ಕೀಕಟ ಎಂಬುದರ ಸರಿಯಾದ ಅರ್ಥವೆಂದರೆ, ವೈದಿಕಸಂಸ್ಕಾರವಿಲ್ಲದ ಜನರು ವಾಸ ಮಾಡುತ್ತಿರುವ ಪ್ರದೇಶ ಎಂದಾಗುತ್ತದೆ. ಬುದ್ಧ ಹುಟ್ಟಿದ್ದು ನೇಪಾಳದಲ್ಲಿ, ಬಿಹಾರದಲ್ಲಿ ಅಲ್ಲ. ಆದುದರಿಂದ ಈ ಬುದ್ಧ ಬೇರೆ ಎಂಬ ವಾದ. ಇನ್ನು ಕೊನೆಯದಾಗಿ ಬುದ್ಧ ಬತ್ತಲೆಯಾಗಿದ್ದ ಎಂಬ ವಿಷಯ. ಐತಿಹಾಸಿಕ ಬುದ್ಧ ಬತ್ತಲೆಯಾದ ಉಲ್ಲೇಖವಿಲ್ಲ. ಆದುದರಿಂದ ಈ ಬುದ್ಧ ಬೇರೆ ಎಂದು ವಾದಿಸುತ್ತಾರೆ. ಹೀಗಾಗಿ ಗೊಂದಲವೋ ಗೊಂದಲ.
 ಆದರೆ ಶ್ರೀಮದಾಚಾರ್ಯರು ಭಾಗವತ ತತ್ಪರ್ಯನಿರ್ಣಯದಲ್ಲಿ ಈ ಇಬ್ಬರೂ ಬುದ್ಧರು ಬೇರೆ ಬೇರೆಯಲ್ಲ, ಒಂದೇ ಎಂಬ ವಿಷಯ ಸ್ಪಷ್ಟಪಡಿಸಿರುತ್ತಾರೆ. ಭಗವಂತನಿಗೆ ಕಲಿಯುಗದಲ್ಲಿ ಅವತಾರವಿಲ್ಲ ಎಂಬುದು ನಿಜ. ಆದರೆ ನಿಜವಾಗಿ ಕಲಿಯುಗ ಪ್ರಾರಂಭವೇ ಅಗಿಲ್ಲ. ಈಗ ನಾವು ಸಂಧಿಕಾಲದಲ್ಲಿದ್ದೇವೆ. ಬುದ್ಧನ ಅವತಾರವಾಗಿದ್ದು ದ್ವಾಪರ-ಕಲಿಯುಗಗಳ ಸಂಧಿಯಲ್ಲಿ. ಕಲಿಯುಗದಲ್ಲಿ ಅಲ್ಲ. ಮಹಾಭಾರತ ಯುದ್ಧದಲ್ಲಿ ದುಯರ್ೋಧನ ತೊಡೆಮುರಿದುಕೊಂಡು ಬಿದ್ದ ದಿನದಿಂದಲೇ ಕಲಿಯುಗ ಪ್ರಾರಂಭವಾಗುತ್ತದೆ ಎಂದು ಹೇಳುವುದಾದರೂ, ಒಂದು ಯುಗ ಮುಗಿದು ಇನ್ನೊಂದು ಯುಗ ಪ್ರಾರಂಭದ ಮಧ್ಯದಲ್ಲಿ ಸಂಧಿಕಾಲವಿರುತ್ತದೆ. ಹೀಗಾಗಿ ದುಯರ್ೊಧನ ಸತ್ತನಂತರವೂ ಕೃಷ್ಣ ಇದೇ ಭೂಮಿಯಮೇಲೆ ಮುವ್ವತ್ತಾರು ವರ್ಷಗಳಕಾಲ ಇದ್ದು ನಂತರ ಅವತಾರ ಸಮಾಪ್ತಿ ಮಾಡಿದ. ಹೀಗಾಗಿ ಬುದ್ಧನ ಅವತಾರವಾಗಿದ್ದು ಕಲಿಯುಗದಲ್ಲಿ ಅಲ್ಲ - ದ್ವಾಪರ-ಕಲಿ ಯುಗಗಳ ಸಂಧಿಯಲ್ಲಿ. ಎರಡನೆಯದಾಗಿ ಜಿನಸುತಃ  ಎಂಬ ಶಬ್ದ. ಜಿನ ಎನ್ನುವುದು ಹೆಸರಲ್ಲ. ಜೈನಧರ್ಮ ಮತಾವಲಂಬಿಗಳನ್ನು ಜಿನರು ಎಂದು ಕರೆಯುತ್ತಾರೆ. ಬುದ್ಧನ ತಂದೆ ಜೈನಮತ ಪ್ರವರ್ತಕನಾಗಿದ್ದುದರಿಂದ ಅವನ್ನು ಜಿನ ಎಂದು ಊಲ್ಲೇಖಿಸಲಾಗಿದೆ. ಅವನ ಹೆಸರು ಶುದ್ದೋದನ ಎಂದೇ ಇತ್ತು. ಹುಟ್ಟಿದ್ದು ನೇಪಾಳದಲ್ಲಿಯಾದರು ಅವನು ಬುದ್ಧನಾಗಿದ್ದು ಬಿಹಾರದ ಬುದ್ಧಗಯಾದಲ್ಲಿ, ಬೋಧಿವೃಕ್ಷದ ಕೆಳಗೆ. ಇನ್ನು ಬುದ್ಧ ಬತ್ತಲೆಯಾದ ವಿಷಯ ನಾವು ವಾಸ ಮಾಡುವ ಈ ಭೂಲೋಕಕ್ಕೆ ಸಂಬಧಿಸಿದ್ದಲ್ಲ. ಅದು ಅದೃಶ್ಯ ಲೋಕಕ್ಕೆ  ಸಂಬಂಧಿಸಿದ ವಿಷಯ. ತಮ್ಮ ಪತ್ನಿಯರ ಪಾತಿವ್ರತ್ಯದ ಪ್ರಭಾವದಿಂದ ತ್ರಿಪುರಾಸುರರು ಮದೋನ್ಮತ್ತರಾಗಿ ಮೆರೆಯುತ್ತಿದ್ದಾಗ, ಅವರ ಪತ್ನಿಯರ ಪಾತಿವ್ರತ್ಯವನ್ನು ಕೆಡಿಸುವುದಕ್ಕೋಸುಗ ಬುದ್ಧ ಅವರ ಮುಂದೆ ಬತ್ತಲಾಗಿ ಬಹಳ ಮೋಹಕನಾಗಿ ನಿಂತು ಅವರ ಪಾತಿವ್ರತ್ಯವನ್ನು ಭಂಗಗೊಳಿಸಿ ತ್ರಿಪುರಾಸುರರ ಸಂಹಾರಕ್ಕೆ ಕಾರಣವಾದ ಈ ಘಟನೆ ನಡೆದಿದ್ದು ಅದೃಶ್ಯ ಲೋಕದಲ್ಲಿ. ಹೀಗಾಗಿ ಈ ಘಟನೆ ಐತಿಹಾಸಿಕವಾಗಿ ದಾಖಲೆಯಾಗುವ ಸಾಧ್ಯತೆಗಳಿರಲಿಲ್ಲ. ಈ ಕಾರಣಗಳಿಗಾಗಿ ಸ್ಪಷ್ಟವಾಗುವುದೇನೆಂದರೆ, ಐತಿಹಾಸಿಕ ಬುದ್ಧ ಹಾಗೂ ಪೌರಾಣಿಕ ಬುದ್ಧ ಬೇರೆ ಬೇರೆಯಲ್ಲ. ಇಬ್ಬರೂ ಒಂದೇ ಎಂದು. ಹೀಗಾಗಿ ಯಾವುದೇ ಗೊಂದಲವಿಲ್ಲ.

ಇಪ್ಪತ್ತೆರಡನೇ ಅವತಾರ

               ಅಥಾಸೌ ಯುಗಸಂಧ್ಯಾಯಾಂ ದಸ್ಯುಪ್ರಾಯೇಷು ರಾಜಸು |
               ಜನಿತಾ ವಿಷ್ಣುಯಶಸೋ ನಾಮ್ನಾ ಕಲ್ಕಿರ್ಜಗತ್ಪತಿಃ ||       ಭಾಗವತಃ 1-3-25

 ಇನ್ನು ಕಲಿಯುಗದಲ್ಲಿ ದೇಶವನ್ನು ಪಾಲಿಸುವ ರಾಜರುಗಳೇ ದರೋಡೆಕೋರರಾದಾಗ, ದೇಶವನ್ನು ದೋಚುವ ಕಳ್ಳರಾದಾಗ, ಅಥವಾ ದರೋಡೆಕೋರರೇ-ಕಳ್ಳರೇ ರಾಜರುಗಳಾದಾಗ, ಕಲಿಯುಗ ಮುಗಿದು, ಕಲಿ-ಕೃತಯುಗಗಳ ಸಂಧಿಯಲ್ಲಿ ಶಂಭಲಾ ಎಂಬ ಗ್ರಾಮದಲ್ಲಿ ವಿಷ್ಣುಯಶಸ್ ಎಂಬುವವರ ಮಗನಾಗಿ ಭಗವಂತ ಕಲ್ಕಿ ಎಂಬ ಹೆಸರಿನಿಂದ ಅವತಾರ ಮಾಡಿ ಎಲ್ಲ ದುಷ್ಟ  ದರೋಡೆಕೋರ - ಕಳ್ಳ ರಾಜರುಗಳನ್ನ ನಿಗ್ರಹಿಸುತ್ತಾನೆ.
 ಹೀಗೆ ಭಗವಂತನ ಇಪ್ಪತ್ತೆರಡು ಅವತಾರಗಳನ್ನು, ಭಗವಂತನ ಮೂಲ ರೂಪವಾದ ಪುರುಷರೂಪವನ್ನು ಸೇರಿಸಿದರೆ ಇಪ್ಪತ್ಮೂರು ಅವತಾರಗಳನ್ನು ಭಾಗವತ ಊಲ್ಲೇಖಿಸಿದೆ.  ಆದರೆ ಮುಂದೆ ಭಾಗವತ ನಮಗೆ ತಿಳಿಸಿಕೊಡುವುದೇನೆಂದರೆ, ಇಷ್ಟೇ ಭಗವಂತನ ಅವತಾರಗಳು ಎಂದು ತಿಳಿದುಕೊಳ್ಳಬೇಡಿ. ಅವನ ಅವತಾರಗಳು ಅನಂತ - ಅಗಣಿತ. ಅವನ ಅವತಾರಗಳನ್ನು ಎಣಿಸಿ ಹೇಳಲು ಸಾಧ್ಯವಿಲ್ಲ. ಮತ್ತು ಈ ಎಲ್ಲಾ ಅವತಾರಗಳು ಸಾಕ್ಷಾತ್ ಭಗವಂತನಾದ ಆ ಶ್ರೀಕೃಷ್ಣನ ಅವತಾರಗಳೇ ಆಗಿವೆ. ಅವನ ಅವತಾರಗಳಲ್ಲಿ ಒಂದು ಅವತಾರಕ್ಕೂ ಇನ್ನೊಂದು ಅವತಾರಕ್ಕೂ  ಯಾವುದೇ ಭೇದವಿಲ್ಲ. ಎಲ್ಲವೂ ಅಪ್ರಾಕೃತ ಪೂರ್ಣಾನಂದಜ್ಞಾನಮಯ ರೂಪಗಳು.  ಆನೆಯಲ್ಲಿರುವ ಭಗವಂತ ದೊಡ್ಡವನು, ಇರುವೆಯಲ್ಲಿರುವ ಭಗವಂತ ಸಣ್ಣವನು ಎಂದು ಭಾವಿಸಬಾರದು. ಆ ಆ ಅಧೀಷ್ಟಾನಕ್ಕೆ ತಕ್ಕಂತೆ ಶಕ್ತಿಯ ಅಭಿವ್ಯಕ್ತಿಯಲ್ಲಿ ವ್ಯತ್ಯಾಸವಿರುತ್ತದೆ.

ಇಲ್ಲಿಗೆ ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು ಎಂಬ ಈ ಲೇಖನವನ್ನು ಮುಗಿಸುತ್ತಿದ್ದೇನೆ...
::ಕೃಷ್ಣಾರ್ಪಣಮಸ್ತು ::

ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸಮಾಲಿಕೆಯಿಂದ ಸಂಗ್ರಹಿಸಿ ಬರೆದ ಲೇಖನ.


ಸಂಗ್ರಹಕಾರರು:
ಕೆ, ಸತ್ಯನಾರಾಯಣರಾವ್,
 ಈಶವಾಶ್ಯಂ  # 1361, 
ವಿವೇಕಾನಂದನಗರ, ಸಂಡೂರುರಸ್ತೆ, 
ಹೊಸಪೇಟೆ. - 583 203.
 

Sunday, May 12, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು- 16 ಮತ್ತು 17

                        
(ಮುಂದುವರಿದ ಭಾಗ.)

ಹದಿನಾರನೇ ಅವತಾರ:  

                       ಅವತಾರೇ ಷೋಡಸಮೇ ಪಶ್ಯನ್ ಬ್ರಹ್ಮದ್ರುಹೋ ನೃಪಾನ್ |
                       ತ್ರಿಃಸಪ್ತಕೃತ್ವಃ ಕುಪಿತೋ ನಿಃಕ್ಷತ್ರಾಮಕರೋನ್ಮಹೀಮ್ ||                  ಭಾಗವತ: 1-3-20


 ಭೂಮಿಯಲ್ಲಿ ಕ್ಷತ್ರವಂಶ ಬೆಳೆದುಬಿಟ್ಟಿತ್ತು. ಅವರಿಗೆ ಆಡಳಿತದ ಅಧಿಕಾರ ಕೈಗೆ ಸಿಕ್ಕಾಗ ಅವರೆಲ್ಲರೂ ಉನ್ಮತ್ತರಾದರು. ಮದದಿಂದ ಕೊಬ್ಬಿದರು. ಆಗ ಅವರು ತಾವು ಮಾಡಿದ್ದೇ ಸರಿ ಎಂದು ಧೂರ್ತರಾಗಿ ದೇಶವನ್ನು ನಾಶಗೊಳಿಸುವ ಮಟ್ಟಕ್ಕೆ ಇಳಿದರು. ಆಳಬೇಕಾದವರು ದೇಶವನ್ನು ದೋಚಲಿಕ್ಕೆ ಪ್ರಾರಂಭಿಸಿದರು. ದೇವರುಗಳಿಗೆ, ವೇದಗಳಿಗೆ, ಜ್ಞಾನಿಗಳಿಗೆ ದ್ರೋಹ ಬಗೆದರು. ಇಂತಹ ರಾಜರ ಸಂತತಿ ಬೆಳೆಯಬಾರದೆಂದು ಭಗವಂತ ಪರಶುರಾಮನಾದಿಂದ ಅವತರಿಸಿ, ಈ ಭೂಮಿಯನ್ನು ಇಪ್ಪತ್ತೊಂದುಬಾರಿ ಸಂಚರಿಸಿ,  ಧೂರ್ತರಾಗಿದ್ದ ಕ್ಷತ್ರಿಯ ರಾಜರುಗಳನ್ನೆಲ್ಲ ನಾಶಪಡಿಸಿದ. ಅಲ್ಲಿಗೂ ಕೆಲವರು ಉಳಿದರು. ಇನ್ನುಮುಂದೆ ಧೂರ್ತತನ ಮಾಡುವುದಿಲ್ಲವೆಂದು ಕ್ಷಮೆಕೇಳಿ ತನಗೆ ಶರಣು ಬಂದವರನ್ನು ಸಂಹರಿಸದೆ ಉಳಿಸಿದ. ಇನ್ನು ಕೆಲವರು ಅಡಗಿ ಕುಳಿತವರು ಉಳಿದರು.  ರಘುವಂಶದಲ್ಲಿಯ  ಎಷ್ಡೋ ರಾಜರುಗಳನ್ನು ಪರಶುರಾಮ ಸಂಹರಿಸಿದ.  ರಘುವಂಶದಲ್ಲಿಯ ಅಷ್ಮಕ ಎನ್ನವ ಒಬ್ಬ ರಾಜ ಪರಶುರಾಮ ಬಂದಾಗ ಅರಮನೆಯಲ್ಲಿ ಹೆಣ್ಣುಮಕ್ಕಳಹಿಂದೆ ಅಡಗಿ ಕುಳಿತು ಉಳಿದುಕೊಂಡ. ಪರಶುರಾಮ ಅವನನ್ನು ಸಂಹರಿಸದೆ ಬಿಟ್ಟ. ಮುಂದೆ ಆ ವಂಶದಲ್ಲಿ ರಾಮಾವತಾರವಾಗಬೇಕಿತ್ತು. ಹಾಗೆ ಹೆಣ್ಣುಮಕ್ಕಳಹಿಂದೆ ಅಡಗಿ ಕುಳಿತ ರಾಜನಿಗೆ, ನಾರಿಯರಿಂದ ರಕ್ಷಣೆ ಪಡೆದದ್ದರಿಂದ ಅವನಿಗೆ ನಾರೀಕವಚ ಎಂಬ ಹೆಸರು ಬಂತು. ಹೀಗೆ ದುಷ್ಟ ಕ್ಷತ್ರಿಯರನ್ನೆಲ್ಲ ಸಂಹಾರ ಮಾಡಿ ಭೂಭಾರ ಇಳಿಸಿದ ಅವತಾರ ಪರಶುರಾಮನ ಅವತಾರ. ಇದೇ ಅವತಾರದಲ್ಲಿ ಭೀಷ್ಮ, ದ್ರೋಣ ಹಾಗು ಕರ್ಣನಿಗೆ ಅಸ್ತ್ರ - ಶಸ್ತ್ರ ವಿದ್ಯೆಯನ್ನು ಹೇಳಿಕೊಟ್ಟ. ಹೀಗೆ ಭೂಭಾರ ಇಳಿಸುವ ಕಾರ್ಯದಲ್ಲಿ ಪರಶುರಾಮಾವತಾರದ ಲೀಲೆ ಅದ್ಭುತ.

ಹದಿನೇಳನೇ ಅವತಾರ:   
             ತತಃ ಸಪ್ತದಶೇ ಜಾತಃ ಸತ್ಯವತ್ಯಾಂ ಪರಾಶರೇತ್ |
             ಚಕ್ರೇ ವೇದತರೋ ಶಾಖಾದೃಷ್ಟ್ವಾ ಪುಂಸೋಲ್ಪಮೇಧಸಃ ||         ಭಗವತಃ 1-3-21
 

 ಭಾಗವತದ ಪ್ರಕಾರ ವೇದವ್ಯಾಸಾವತಾರ. ಇಲ್ಲಿ ಮತ್ತೆ ಗೊಂದಲ.  ಪರಶುರಾಮಾವತಾರ ಆದಮೇಲೆ ರಾಮಾವತಾರ. ನಂತರದಲ್ಲಿ ದ್ವಾಪರಯುಗದಲ್ಲಿ ವೇದವ್ಯಾಸಾವತಾರ ಮತ್ತು ಕೃಷ್ಣಾವತಾರ ಆಗಿದ್ದು. ಆದರೆ ಇಲ್ಲಿ ರಾಮಾವತಾರಕ್ಕಿಂತ ಮೊದಲೇ ವೇದವ್ಯಾಸಾವತಾರ ಹೇಳಿದ್ದಾರೆ. ಇದೇನು ಕಥೆ? ಶ್ರೀಮದಾಚಾರ್ಯರು ಭಾಗವತಕ್ಕೆ ಭಾಷ್ಯ ಬರೆಯುವತನಕ ಆ ಮುಂಚಿನ ಯಾವ ಭಾಷ್ಯಕಾರರಿಗೂ ಇದು ಏಕೆ ಹೀಗೆ ಎಂದು ಗೊತ್ತಿರಲೇ ಇಲ್ಲ. ಎಲ್ಲಾ ವ್ಯಾಖ್ಯಾನಕಾರರು ಈ ಅವತಾರಗಳನ್ನು ಕ್ರಮವಾಗಿ ಕ್ರಮಾನುಕ್ರಮಣಿಕೆಯಾಗಿ ಹೇಳಿದ್ದಲ್ಲ, ಒಟ್ಟಿನಲ್ಲಿ ಯಾವುದೋ ಒಂದು ಸಂಖ್ಯೆ ಕೊಟ್ಟಿದ್ದಾರೆ ಎಂದು ಬರೆದರು. ಆದರೆ ಶ್ರೀಮದಾಚಾರ್ಯರು ಮಾತ್ರ ಈ ಗೊಂದಲವನ್ನು ಪರಿಹರಿಸಿದರು. ವ್ಯಾಸಾವತಾರವು ಈ ಮನ್ವಂತರದಲ್ಲಿ ಐದುಬಾರಿ ಆಗಿದೆ. ಮೂರನೇ ದ್ವಾಪರಯುಗದಲ್ಲಿ, ಏಳನೇ ದ್ವಾಪರಯುಗದಲ್ಲಿ, ಹದಿನಾರನೇ ದ್ವಾಪರಯುಗದಲ್ಲಿ, ಇಪ್ಪತ್ತೈದನೆ ದ್ವಾಪರಯುಗದಲ್ಲಿ ಮತ್ತು ಈ ಕಲಿಯುಗದ ಹಿಂದಿನ ಅಂದರೆ ಇಪ್ಪತ್ತೆಂಟನೇ ದ್ವಾಪರಯುಗದಲ್ಲಿ ವ್ಯಾಸಾವತಾರ ಆಗಿದೆ.  ಈ ಐದೂ ಬಾರಿ ವ್ಯಾಸರು ಅವತಾರಮಾಡಿದ್ದು ಪರಾಶರ ಮತ್ತು ಸತ್ಯವತಿಯಿಂದಲೇ ಎಂಬುದು ಗಮನಾರ್ಹ. ರಾಮಾವತಾರ ಆಗಿದ್ದು ಇಪ್ಪತ್ನಾಲ್ಕನೇ ತ್ರೇತಾಯುಗದಲ್ಲಿ. ಇದಕ್ಕಿಂತ ಮುಂಚೆ ವ್ಯಾಸಾವತಾರವು ಮೂರುಬಾರಿ ಆಗಿತ್ತು. ಈ ವéಿಷಯವನ್ನು ತಿಳಿಸುವುದಕ್ಕೋಸ್ಕರವೇ ಭಗವತದಲ್ಲಿ ರಾಮಾವತಾರಕ್ಕಿಂತ ಮುಂಚೆ ವ್ಯಾಸಾವತಾರವನ್ನು ಹೇಳಲಾಗಿದೆ ಎಂಬ ವಿಷಯವನ್ನು ಶ್ರೀಮದಾಚಾರ್ಯರು ತಿಳಿಸಿಕೊಡುವವರೆಗೂ ಈ ವಿಷಯ ಯಾರಿಗೂ ಗೊತ್ತೇಇರಲಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಶ್ರೀಮದಾಚಾರ್ಯರ ಜ್ಞಾನ ಎಂತಹುದು ಎಂಬುದು. ಅದು ಸಾಕ್ಷಾತ್ ವಾಯುದೇವರಜ್ಞಾನ.

 ಇನ್ನೊಂದು ಗಮನಾರ್ಹ ವಿಷಯವೆಂದರೆ, ಈ ಹಿಂದೆ ಮೂರನೇ, ಏಳನೇ, ಹದಿನಾರನೇ ಮತ್ತು ಇಪ್ಪತ್ತೈದನೇ ದ್ವಾಪರ ಯುಗಗಳಲ್ಲಿ ವ್ಯಾಸರು ಸ್ವತಃ ವೇದ ವಿಭಾಗ ಮಾಡಿಲ್ಲ. ತಾವು ಆಚಾರ್ಯರಾಗಿ ನಿಂತು ಬೇರೆಯವರಿಂದ ವೇದ ವಿಭಾಗ ಮಾಡಿಸಿದರು. ಆದರೇ ಇಪ್ಪತ್ತೆಂಟನೇ ದ್ವಾಪರಯುಗದಲ್ಲಿ ತಾವೇ ಸ್ವತಃ ವೇದಗಳನ್ನು ವಿಭಾಗ ಮಾಡಿ, ಬ್ರಹ್ಮಸೂತ್ರಗಳನ್ನು ರಚಿಸಿದರು. ಮಹಾಭಾರತವೆಂಬ ಬೃಹದ್ಗ್ರಂಥವನ್ನು ರಚನೆಮಾಡಿದರು. ಈ ವೇದವ್ಯಾಸರು ಕುರು ಸಂತತಿ ಬೆಳೆಯಲು ಸಹ ಕಾರಣರಾದರು. ಈ ವೇದವ್ಯಾಸರು ಕುರು ಸಂತತಿ ಬೆಳೆಯಲು ಸಹ ಕಾರಣರಾದರು.
ಈ ಮೊದಲು ವೇದಗಳನ್ನು ವಿಭಾಗ ಮಾಡಿದವರ ಹೆಸರುಗಳು ಬೇರೆ ಇವೆ. ಮುಂದಿನ ಇಪ್ಪತ್ತೊಂಭತ್ತನೇ ದ್ವಾಪರದಲ್ಲಿ ಅಶ್ವಥ್ಥಾಮಾಚಾರ್ಯರು ವೇದವಿಭಾಗ ಮಾಡುವವರಿದ್ದಾರೆ. ಅವರಿಗೆ ದ್ರೌಣೀವ್ಯಾಸ ಅಂತ ಹೆಸರು.

ಈ ಮೊದಲು ಅಖಂಡವೇದ ಒಂದೇ ಇತ್ತಂತೆ. ಆದರೆ ಈ ಕಲಿಯುಗದಲ್ಲಿ ಜನರು ಅಲ್ಪಮತಿಗಳಾಗಿರುವುದರಿಂದ ಇಡೀ ಅಖಂಡ ವೇದವನ್ನು ಜೀರ್ಣಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂಬುದನ್ನು ಮನಗಂಡು ವ್ಯಾಸರು ವೇದಗಳನ್ನು ವಿಭಾಗಗಳನ್ನಾಗಿ ಮಾಡಿ ಮತ್ತೆ ಅವುಗಳನ್ನು ತಮ್ಮ ಶಿಷ್ಯರುಗಳ ಮೂಲಕ ಶಾಖೆಗಳಾಗಿ ವಿಂಗಡಿಸಿದರು. ಯಾಜ್ಞವಲ್ಕ್ಯರ ಮೂಲಕ ಶುಕ್ಲಯಜುರ್ವೇದವನ್ನ ಬೆಳಕಿಗೆ ತರುವಂತೆ ಮಾಡಿದರು. ವ್ಯಾಸಸಾಹಿತ್ಯದಲ್ಲಿ ಏನು ಇಲ್ಲವೋ ಅದು ಜಗತ್ತಿನ ಬೇರೆ ಯಾವುದೇ ಸಾಹಿತ್ಯದಲ್ಲಿ ಸಿಗಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಕಂಡುಬರುವ ಎಲ್ಲಾ ಸಾಹಿತ್ಯದಲ್ಲಿ ಏನೆಲ್ಲಾ ಇದೆಯೋ ಅದು ಎಲ್ಲವೂ ವ್ಯಾಸಸಾಹಿತ್ಯದಲ್ಲಿ ಇದೆ. ತಾತ್ಪರ್ಯ ಏನೆಂದರೆ ವ್ಯಾಸಸಾಹಿತ್ಯದಲ್ಲಿ ಕಾಣಸಿಗದ ಹೊಸವಿಷಯವೊಂದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ.
ವ್ಯಾಸೋಚ್ಚಿಷ್ಟಂ ಜಗತ್ಸವರ್ಂ    

ಮುಂದುವರಿಯುವುದು..

ಕೆ. ಸತ್ಯನಾರಾಯಣರಾವ್,
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇತೆ-593203.

 
 

Wednesday, April 24, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು 11,12,13,14,15

                          
(ಮುಂದುವರಿದ ಭಾಗ...)

ಹನ್ನೊಂದನೇ ಅವತಾರ

                       ಸುರಾಸುರಾಣಾಮುದಧಿಂ ಮಥ್ನ ತಾಂ ಮಂದರಾಚಲಂ|
                       ದಧ್ರೇ ಕಮಠರೂಪೇಣ ಪೃಷ್ಠ ಏಕಾದಶೇ ವಿಭುಃ||       ಭಾಗವತ: 1-3-16

 ಸುರರು ಮತ್ತು ಅಸುರರು ಸೇರಿ ಅಮೃತ ಪಡೆಯುವುದಕ್ಕಾಗಿ ಮಂದರ ಪರ್ವತವನ್ನು ಕಡಗೋಲಾಗಿ ಬಳಸಿ, ಸಮುದ್ರವನ್ನು ಮಥನ ಮಾಡುವ ಕಾಲದಲ್ಲಿ ಆ ಮಂದರ ಪರ್ವತವು ಸಮುದ್ರದಲ್ಲಿ ಮುಳಗಿಹೋಗದಂತೆ ಭಗವಂತ ಕೂರ್ಮ (ಆಮೆ) ರೂಪದಿಂದ ಆ ಮಂದರ ಪರ್ವತವನ್ನ ತನ್ನ ಬೆನ್ನಮೇಲೆ ಹೊತ್ತ ರೂಪ ಇದು. ಇದು ಹನ್ನೊಂದನೇ ಅವತಾರ. ಈ ಒಂದು ಘಟನೆ ಕಾಲದಲ್ಲಿ ಭಗವಂತ ನಾಲ್ಕು ರೂಪಗಳನ್ನು ಧರಿಸಿದ್ದಾನೆ. ಆದರೆ ಭಗವಂತನ ಮೂರು ರೂಪಗಳನ್ನು ಮಾತ್ರ ಭಾಗವತದಲ್ಲಿ ಉಲ್ಲೇಖಿಸಲಾಗಿದೆ.


ಹನ್ನೆರಡು ಮತ್ತು ಹದಿಮೂರನೇ ಅವತಾರಗಳು

                       ಧಾನ್ವಂತರಂ ದ್ವಾದಶಮಂ ತ್ರಯೋದಶಮಮೇವ ಚ|
                       ಅಪಾಯಯತ್ಸುರಾನನ್ಯಾನ್ಮೋಹಿನ್ಯಾ ಮೋಹಯನ್ ಸ್ತ್ರಿಯಾ||  ಭಾಗವತ: 1-3-17


ಸಮುದ್ರ ಮಥನವಾದ ನಂತರ ಮೊದಲು ವಿಷ ಬಂತು. ನಂತರದದಲ್ಲಿ ಮದ್ಯ-ಕಾಮಧೇನು-ಕಲ್ಪವೃಕ್ಷ-ಐರಾವತ ಬಂದವು. ತದನಂತರದಲ್ಲಿ ಸೋಮ - ಲಕ್ಷಿಯರು ಉದಿಸಿದರು. ಕೊನೆಗೆ ಅಮೃತ ಬಂತು. ಆ ಅಮೃತವನ್ನು ಕೈಯಲ್ಲಿ ಹಿಡಿದುಕೊಂಡು ಕಾಣಿಸಕೊಂಡ ರೂಪ ಅದು ಭಗವಂತನ ಧನ್ವಂತರೀ ರೂಪ. ಇದು ಹನ್ನೆರಡನೇ ಅವತಾರ

ಅಮೃತ ಬಂದ ನಂತರ ಅಲ್ಲಿದ್ದ ಅಸುರರು ಆ ಅಮೃತ ತಮಗೆ ಬೇಕೆಂದು ಗದ್ದಲವೆಬ್ಬಿಸಿದಾಗ ಭಗವಂತ ಮೋಹಿನಿ ರೂಪ ತಾಳಿ ಅಸುರರನ್ನು ಮೋಹಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದ . ಈ ಮೋಹಿನಿ ರೂಪ ಹದಿಮೂರನೇ ರೂಪ.
ಇನ್ನೊಂದು ರೂಪವಿದೆ. ಸುರಾಸುರರು ಸಮುದ್ರ ಮಥನ ಮಾಡುತ್ತಿರುವ ಕಾಲದಲ್ಲಿ ಭಗವಂತ ಅಜಿತ ಎಂಬ ರೂಪದಿಂದ ದೇವತೆಗಳ ಕಡೆಗೆ ನಿಂತು ಮಥನ ಕಾರ್ಯದಲ್ಲಿ ಪಾಲ್ಗೊಂಡಿದ್ದ ಎಂದು ಶಾಸ್ತ್ರಕಾರರು ಗುರುತಿಸಿದ್ದಾರೆ.


ಹದಿನಾಲ್ಕನೇ ಅವತಾರ

           ಚತುರ್ದಶಂ ನಾರಸಿಂಹಂ ಬಿಭ್ರದ್ದ್ಯೆತ್ಯೇನ್ದ್ರಮೂರ್ಜಿತಮ್|
                   ದದಾರ ಕರಜ್ಯೆರ್ವಕ್ಷಸ್ಯೇರಕಾಂ ಕಟಕೃದ್ಯಥಾ ||               ಭಾಗವತ: 1-3-18


ಮಹಾದ್ಯೆತ್ಯನಾದ ಹಿರಣ್ಯಕಶಿಪು ಸ್ವತಃ ಬಲಶಾಲಿ, ಅದರ ಮೇಲೆ ಅವನಿಗೆ ವರದ ಬಲ. ಇದರಿಂದಾಗಿ ಮಹಾಬಲಶಾಲಿಯಾಗಿ ಮದೋನ್ಮತ್ತನಾಗಿದ್ದ ಅವನ ಬಲದ ಮುಂದೆ ಎಲ್ಲಾ ದೇವತೆಗಳು ಅಸಹಾಯಕರಾಗಿದ್ದರು. ಇಂತಹ ಪ್ರಸಂಗ ಬಂದಾಗ, ಆ ಮಹಾದೈತ್ಯನ ಮಗನಾದ, ಶ್ರೀಹರಿಯ ಅನನ್ಯ ಭಕ್ತನಾದ ಪ್ರಹ್ಲಾದನಿಗಾಗಿ, ಭಗವಂತ ನರಸಿಂಹನಾಗಿ ಕಂಬದಿಂದ ಮೂಡಿಬಂದು ಆ ಹಿರಣ್ಯಕಶಿಪುವನ್ನು ತನ್ನ ತೊಡೆಯಮೇಲಿಟ್ಟುಕೊಂಡು, ಅವನ ವಕ್ಷಸ್ಥಳವನ್ನು ತನ್ನ ಉಗುರುಗಳಿಂದ, ಹುಲ್ಲನ್ನು ಸೀಳಿತೆಗೆಯುವಂತೆ ಸೀಳಿ ಅವನನ್ನು ಸಂಹರಿಸಿದ. ಈ ರೀತಿಯಾಗಿ '' ಸತ್ಯಂ ವಿಧಾತುಂ ನಿಜ ಭೃತ್ಯಭಾಷಿತಂ'' ಎಂಬ ವಚನದಂತೆ ತನ್ನ ಭಕ್ತನಾದ ಚತುರ್ಮುಖ ಬ್ರಹ್ಮದೇವರು ಕೊಟ್ಟ ವರವನ್ನು ಹಾಗೂ ಭಕ್ತ ಪ್ರಹ್ಲಾದನ ನುಡಿಯಂತೆ ಕಂಬದಿಂದ ಉದ್ಭವಿಸಿ ಬಂದು ತನ್ನ ಭಕ್ತರ ವಾಕ್ಯಗಳನ್ನು ಸತ್ಯ ಮಾಡಿದ ಅವತಾರ - ಇದು ಹದಿನಾಲ್ಕನೇ ಅವತಾರ.


ಹದಿನೈದನೇ ಅವತಾರ
                       ಪಂಚದಶಂ ವಾಮನಕಂ ಕೃತ್ವಾಗಾದಧ್ವರಂ ಬಲೇಃ|
                       ಪಾದತ್ರಯಂ ಯಾಚಮಾನಃ ಪ್ರತ್ಯಾದಿತ್ಸುಸ್ತ್ರಿವಿಷ್ಟಪಂ||      ಭಾಗವತ: 1-3-19


ಪ್ರಹ್ಲಾದನ ಮಗ ವೀರೋಚನ, ಅವನ ಮಗ ಬಲಿ. ಭಗವಂತ ಪುಟ್ಟ ಹುಡುಗ ವಾಮನನಾಗಿ ಬಲಿಚಕ್ರವರ್ತಿ ಯಜ್ಷ ನಡೆಸುತ್ತಿದ್ದ ಸ್ಥಳಕ್ಕೆ ಹೋಗಿ ಮೂರು ಹೆಜ್ಜೆ ಭುಮಿಯನ್ನು ದಾನವನ್ನಾಗಿ ಬೇಡಿದ. ಹಾಗೆ ದಾನವಾಗಿ ಪಡೆದು, ಒಂದು ಹೆಜ್ಜೆಯಿಂದ ಇಡೀ ಭುಮಿಯನ್ನು, ಇನ್ನೊಂದು ಹೆಜ್ಜೆಯಿಂದ ಇಡೀ ಆಕಾಶವನ್ನು ಆವರಿಸಿಕೊಂಡ. ಕೊನೆಯದಾದ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ಕೋರಿಕೆ ಮೇರೆಗೆ ಅವನ ತಲೆಯ ಮೇಲಿಟ್ಟು ಅವನನ್ನು ಅನುಗ್ರಹಿಸಿದ ಅವತಾರ - ವಾಮನ ಅವತಾರ - ಇದು ಹದಿನೈದನೇ ಅವತಾರ.

(ಮುಂದುವರೆಯುವುದು...)

ಕೆ. ಸತ್ಯನಾರಾಯಣ ರಾವ್,
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇಟೆ.


                                                                                                                                                                                                                                                                                                                                                                                                                                                                                                                                                                                                                       
 

Wednesday, March 27, 2013

ಅಂಶ, ಆವೇಶ ಮತ್ತು ಅವತಾರ



ಪರಮಾತ್ಮನೆಂದರೆ ಸಾಕ್ಷಾತ್ ಶ್ರೀರಮಾದೇವಿಯರ ಸಹಿತ ಶ್ರೀಮನ್ನಾರಾಯಣನೆಂದು ತಿಳಿಯಬೇಕು


ಅವತಾರ:



  •  ಪರಮಾತ್ಮ ಹಾಗೂ ಪರಮಾತ್ಮನ ಅವತಾರಗಳಿಗೂ, ಪರಮಾತ್ಮ ಹಾಗೂ ಪರಮಾತ್ಮನ ಅವಯವಗಳಿಗೂ ಯಾವುದೇ ಭೇದವಿಲ್ಲ. ಅಂದರೆ ಪರಮಾತ್ಮನ ಎಲ್ಲಾ ಅವಯವಗಳೂ ಪರಮಾತ್ಮನ ಎಲ್ಲಾ ಸೃಷ್ಟ್ಯಾದಿ ಅಷ್ಟ ಕರ್ತೃತ್ವವನ್ನೂ ಮಾಡುತ್ತವೆ. ಪರಮಾತ್ಮನ ಪರಮಾತ್ಮನ ಕಪ್ಪುಕೇಶಾವತಾರವಾದ ಕೃಷ್ಣಾವತಾರವು ಪರಮಾತ್ಮನ ಎಲ್ಲಾ ವ್ಯಾಪಾರಗಳನ್ನೂ ಮಾಡಿತು. ಅದಕ್ಕೇ ಅವನನ್ನು ನಖ-ಶಿಖ ಪರಿಪೂರ್ಣ, ಸ್ವಗತ-ಭೇದ ವಿವರ್ಜಿತ ಎನ್ನುತ್ತಾರೆ.
  •  ಇದೇ ರೀತಿ ವಾಯುದೇವರು ಹಾಗೂ ವಾಯುದೇವರ ಅವತಾರಗಳಿಗೂ (ಹನುಮ, ಭೀಮ ಮಧ್ವ) ಯಾವುದೇ ಭೇದವಿಲ್ಲ. ಏಕೆಂದರೆ ಪರಮಾತ್ಮನು ಹೇಗೆ ಅಪ್ರಾಕೃತ ಪರಿಪೂರ್ಣನೋ ಹಾಗೆ ನಮ್ಮ ವಾಯುದೇವರೂ ಸಹ ಪ್ರಾಕೃತವಾಗಿ ಪರಿಪೂರ್ಣರು. ಆದರೆ ಅವಯವಗಳು ಮಾತ್ರ ಭಿನ್ನ-ಭಿನ್ನವೇ.
    • (ನಿಮ್ಮ ಅವಗಾಹನೆಗಾಗಿ: ಪರಮಾತ್ಮ ಅಣುರೇಣು ತೃಣಕಾಷ್ಟ ಅಪ್ರಾಕೃತವಾಗಿ ಪರಿಪೂರ್ಣ, ಆದರೆ ವಾಯುದೇವರು 32 ಸಲ್ಲಕ್ಷಣಗಳಿಂದ ಸಂಪನ್ನವಾದ ಪ್ರಾಕೃತ ದೇಹದಿಂದ ಪರಿಪೂರ್ಣರು).
  •  ಯಾವುದೇ ಋಜುಜೀವಿಯು (ಮೂರನೇ ಕಕ್ಷೆ) ಅವತರಿಸಿದಾಗ ಪರಮಾತ್ಮನೆಡೆಗೆ ಅವರಿಗಿರುವ ಅವರ ಜ್ಞಾನ, ಭಕ್ತಿ, ವೈರಾಗ್ಯಗಳು ಯಾವುದೇ ಕಾರಣಕ್ಕೂ ಹ್ರಾಸ (ಕಮ್ಮಿ) ಆಗುವುದಿಲ್ಲ. ವಾಯುದೇವರಿಗೆ ಪ್ರಾರಬ್ಧ ಅನ್ನೋದು ಇಲ್ಲವೇ ಇಲ್ಲ..! ಏಕೆಂದರೆ, ಅವರ ಲಿಂಗ ಶರೀರವು ದಗ್ಧಪಟದಂತಿದ್ದು (ಇದ್ದೂ ಇಲ್ಲದಂತೆ)  ಪ್ರಾರಬ್ಧವಿದೆಯೆಂದರೆ ಕೇವಲ ಸುಖ ಪ್ರಾರಬ್ಧವಿದೆಯೆಂದು ತಿಳಿಯಬೇಕು. ಆದ್ದರಿಂದ ವಾಯುದೇವರ ಎಲ್ಲಾ ಅವತಾರಗಳನ್ನೂ ಸಂಪೂರ್ಣ ಅವತಾರಗಳೆನ್ನುತ್ತೇವೆ. ಹೀಗಾಗಿ ವಾಯುದೇವರು ಅವತಾರ ರೂಪದಿಂದಲೂ ಮೂಲರೂಪದಷ್ಟೇ ಸರಿಸಮಾನವಾಗಿ ವ್ಯಾಪಾರ ಮಾಡಲು ಸಮರ್ಥರು.
  •  ಆದರೆ ತದನಂತರದ ಕಕ್ಷೆಯ ದೇವತೆಗಳು ಅವತರಿಸಿದಾಗ ಅವರಿಗೆ ಪ್ರಾರಬ್ಧ ಭೋಗವುಂಟು. ಆಗ ಭೂಸಂಪರ್ಕದಿಂದಾಗಿ ಅವರ ಜ್ಞಾನ, ಭಕ್ತಿ, ವೈರಾಗ್ಯಗಳಲ್ಲಿ ಹ್ರಾಸ ಉಂಟಾಗುತ್ತದೆ. ಹೀಗಾಗಿ ವಾಯುದೇವರ ನಂತರದಲ್ಲಿಯ ಕಕ್ಷೆಯಲ್ಲಿ ಯಾವುದೇ ದೇವತೆಗಳಾಗಲೀ ಭೂಮಿಯಲ್ಲಿ ಅವತರಿಸಿದಾಗ ಮೂಲರೂಪದಷ್ಟೇ ಯೋಗ್ಯತೆಯಿಂದ ವ್ಯಾಪಾರ ಮಾಡಲು ಅಸಾಧ್ಯ. ಪರಮಾತ್ಮನ ಸಂಕಲ್ಪಕ್ಕನುಗುಣವಾಗಿ ಮೂಲರೂಪದ ಸಾಮಥ್ರ್ಯದಲ್ಲಿಯ ಎಷ್ಟು ಪ್ರಮಾಣದ ಅಂಶವನ್ನು ಗ್ರಹಣ ಮಾಡಿಕೊಂಡು ಅವತರಿಸಿರುತ್ತಾರೋ ಅಷ್ಟೇ ಪ್ರಮಾಣದ ವ್ಯಾಪಾರವನ್ನು ಮಾಡಲು ಮಾತ್ರ ಸಮರ್ಥರು. ಪರಮಾತ್ಮ ಹಾಗೂ ವಾಯುದೇವರ ಅನುಗ್ರಹದಿಂದ ಆಯಾ ಕಾಲಕ್ಕೆ, ಆಯಾ ಅವತಾರಕ್ಕೆ, ಅವರವರ ಯೋಗ್ಯತೆಗೆ ತಕ್ಕಂತೆ ಅವರು ವ್ಯಾಪಾರ ಮಾಡುತ್ತಾರೆಂದು ತಿಳಿಯಬೇಕು. ಇದನ್ನೇ ಅಂಶ ಎನ್ನುತ್ತಾರೆ.
 
ಅಂಶ: 
  •  ಮೂಲರೂಪದ ಗುಣಗಳಲ್ಲಿಯ ಕೆಲವು ಅಂಶಗಳಿಂದ ಮಾತ್ರ ಭೂಮಿಯಲ್ಲಿ ಅವತರಿಸಿ ಪರಮಾತ್ಮನ ಇಚ್ಛೆ ಹಾಗೂ ಆಜ್ಞಾನುಸಾರ ಹಾಗೂ ಪ್ರಾರಬ್ಧಕ್ಕನುಗುಣವಾಗಿ ತಮ್ಮ ವ್ಯಾಪಾರಗಳನ್ನು ಮಾಡುವರು. 5ನೇ ಕಕ್ಷೆಯಿಂದ 29ನೇ ಕಕ್ಷೆಯವರೆಗಿನ ದೇವತೆಗಳಿಗೆ ಈ ಅಂಶ ಎನ್ನುವುದು ಅನ್ವಯಿಸುತ್ತದೆ.
  • ವಿಶೇಷ ಸೂಚನೆ: 5-18 ನೇ ಕಕ್ಷೆಯ ತತ್ವಾಭಿಮಾನಿ ದೇವತೆಗಳು ಮತ್ತು 19-29ನೇ ಕಕ್ಷೆಯ ಅತಾತ್ವಿಕ (ಕರ್ಮಜ) ದೇವತೆಗಳು. ಆದರೆ ವಿಶೇಷ ಸಂದರ್ಭಗಳಲ್ಲಿ ಅವರ ಯೋಗ್ಯತೆಗೂ ಮೀರಿದ ಮಹಿಮೆಗಳನ್ನು, ವ್ಯಾಪಾರಗಳನ್ನು ಮಾಡುತ್ತಾರೆ. ಇದನ್ನೇ ಆವೇಶ ಎನ್ನುತ್ತಾರೆ.

ಆವೇಶ:



ಆವೇಶವೆಂದರೆ, ಆಗಾಗ ಬಂದು ಹೋಗುವುದು ಎನ್ನಬಹುದು.
  •  ಇದಕ್ಕೆ ಉತ್ತಮ ಉದಾಹರಣೆಯೆಂದರೆ, ದೆವ್ವ-ಭೂತಗಳು ಬಡಿಕೊಂಡಾಗ ಮನುಷ್ಯರು ಮಾಡುವ ಚೇಷ್ಟೆಗಳು. ಈ ಚೇಷ್ಟೆಗಳನ್ನು ಮಾಡುವುದು ಮನುಷ್ಯನೇ ಆದರೂ ಅವನೊಳಗೆ ನಿಂತು ಮಾಡಿಸುತ್ತಿರುವುದು ಮಾತ್ರ ದೆವ್ವ-ಭೂತಗಳು. ಆಗ ಅವುಗಳನ್ನು ಹೊಡೆದೋಡಿಸಲು ಅವುಗಳಿಗೆ ಪೆಟ್ಟು ಹಾಕುತ್ತೇವೆ. ಆದರೆ ಪೆಟ್ಟು ಯಾರಿಗೆ ಬೀಳುತ್ತದೆ? ಮನುಷ್ಯನಿಗೇ ಅಲ್ಲವೇ? ಅಂದರೆ ತತ್ಕಾಲದಲ್ಲಿ ಆ ಮನುಷ್ಯನು ಮಾಡುತ್ತಿರುವ ಯಾವುದೇ ಕೆಲಸ(ಕರ್ಮ)ಗಳ ಮೇಲೂ ಅವನಿಗೆ ಸ್ಮೃತಿಯಾಗಲೀ, ಹಿಡಿತವಾಗಲೀ ಅಥವಾ ವಿವೇಚನೆಯಾಗಲೀ ಇರುವುದಿಲ್ಲ. ಆದರೆ ಆ ಕಾಲದಲ್ಲಗುವ ಯಾವುದೇ ಕರ್ಮಫಲಗಳು ಮಾತ್ರ ಅವನೇ ಅನುಭವಿಸಬೇಕು. ಸ್ವಲ್ಪ ಸಮಯದ ನಂತರ ಆ ಭೂತ ಚೇಷ್ಟೆಯು ಮಾಯವಾದಾಗ ನಾನೇನು ಮಾಡಿದೆ? ನನಗೊಂದೂ ನೆನಪಿಲ್ಲವಲ್ಲ, ಎಂದು ಅದೇ ಮನುಷ್ಯನೇ ಕೇಳುತ್ತಾನೆ.
  •  ಅಂದರೆ ಜೀವಿಯ ಯೋಗ್ಯತೆಗೂ ಮೀರಿದ ವ್ಯಾಪಾರಾದಿಗಳು ನಡೆಯುತ್ತಿದೆಯೆಂದರೆ ಆಗ ಆ ಕ್ಷಣದಲ್ಲಿ ಆ ಜೀವಿಯಲ್ಲಿ, ಆ ಜೀವಿಗಿಂತಲೂ ಉತ್ತಮರ ಆವೇಶವಾಗಿದೆಯೆಂದು ತಿಳಿಯಬೇಕೇ ವಿನಃ ಆ ಕ್ಷಣದಲ್ಲಿ ನಡೆದ ವಿಶೇಷ ಕರ್ಮದಿಂದ ಜೀವಿಯ ಯೋಗ್ಯತೆ ನಿರ್ಧರಿಸಲಾಗದು.
  •  ಋಜು ಜೀವಿಗಳ ವ್ಯತಿರಿಕ್ತ ಬೇರೆ ಯಾವುದೇ ಜೀವಿಗಳಿಗೂ ಪರಮಾತ್ಮನಿಂದ ನೇರವಾಗಿ ಉಪದೇಶ ಪಡೆದುಕೊಳ್ಳುವ ಯೋಗ್ಯತೆಯಾಗಲೀ, ಸಾಮಥ್ರ್ಯವಾಗಲೀ ಇಲ್ಲಾ.!

ಶ್ರೀಮದಾಚಾರ್ಯರ ಸಿದ್ಧಾಂತದ ರೀತ್ಯಾ ಅಂತಹ ಕಾಲಗಳಲ್ಲಿ ಆವೇಶ ಪ್ರಬಲವಾಗಿದ್ದು ಯಾವ ದೇವತೆಯ ಆವೇಶವಿರುತ್ತದೆಯೋ ಜೀವಿಯು ಅವರಂತೆಯೇ ವರ್ತಿಸುತ್ತಾನೆ. ಈ ಸಂಬಂಧ ಅನೇಕ ಉದಾಹರಣೆಗಳನ್ನು ನೋಡಬಹುದಾಗಿದೆ.

ಉದಾ: 1)
ಅರ್ಜುನನಲ್ಲಿ ನರನ (ಆದಿಶೇಷ) ಆವೇಶ ನಿರಂತರವಾಗಿದ್ದ ಪ್ರಯುಕ್ತ, ಮಹಾಭಾರತ ಯುದ್ಧ ಕಾಲದಲ್ಲಿ ಸ್ವರೂಪತಃ ಅರ್ಜರುನನಿಗಿಂತಲೂ ಉತ್ತಮರಾದ ಅಶ್ವತ್ಥಾಮಾಚಾರ್ಯರು ತಮಗಿಂತಲೂ ಸ್ವರೂಪತಃ ಕಡಿಮೆಯಾದ ಅಜರ್ುನನಿಂದ ಸೋಲನ್ನನುಭವಿಸಿದ್ದುಂಟು.

ಉದಾ: 2)
ಸುಗ್ರೀವನಿಗಿಂತ ಮುಖ್ಯಪ್ರಾಣರಾಯರು ಎಷ್ಟೇ ಶ್ರೇಷ್ಠರಾಗಿದ್ದರೂ ಸಹ ಸುಗ್ರೀವನಿಗೆ ಮಂತ್ರಿಯೆನಿಸಿದರು. ಕಾರಣ ಇಷ್ಟೇ, ಸುಗ್ರೀವನಲ್ಲಿ ಮುಖ್ಯಪ್ರಾಣರಾಯರಿಗಿಂತಲೂ ಪದಪ್ರಯುಕ್ತ ಉತ್ತಮರಾದ ಬ್ರಹ್ಮದೇವರ ನಿರಂತರ ಆವೇಶವಿತ್ತು.

ಉದಾ: 3)
ಚಂದ್ರನಲ್ಲಿ ಬ್ರಹ್ಮದೇವರ ಆವೇಶ ನಿರಂತರವಿದ್ದುದರಿಂದ ಚಂದ್ರನೂ ಕೂಡ ಬ್ರಹ್ಮಾಂಶನೆಂದು ಕರೆಯಲ್ಪಡುತ್ತನೆ. ಇದರರ್ಥ ಚಂದ್ರನಲ್ಲಿ ಬ್ರಹ್ಮದೇವರ ವಿಶೇಷ ಆವೇಶವೇ ವಿನಃ ಚಂದ್ರ ಬ್ರಹ್ಮದೇವರ ಅವತಾರವೆಂದರ್ಥವಲ್ಲ.


ಉದಾ: 4)
ಗರುಡ-ಶೇಷ-ರುದ್ರ ಇವರುಗಳಿಂದ ಕೃಷ್ಣಪತ್ನಿಯೆನಿಸಿದ ಜಾಂಬವತಿಯು ಸ್ವರೂಪದಲ್ಲಿ ಕಡಿಮೆಯಿದ್ದರೂ ರಮಾದೇವಿಯರ ಆವೇಶದಿಂದ ಶೇಷದೇವರಿಗೆ ಸಮಳೆನಿಸುತ್ತಾಳೆ.


ಉದಾ: 5)
ಅರ್ಜುನಾವತಾರಿಗಳಾದ ಜಯತೀರ್ಥರಲ್ಲಿ (ಟೀಕಾರಾಯರು) ಶೇಷದೇವರ ವಿಶೇಷ ಆವೇಶವಿದ್ದ ಕಾರಣ ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳಿಗೆ ಟೀಕೆ ರಚಿಸಲು ಸಾಧ್ಯವಾಯಿತು.




ಭಾಷ್ಯತತ್ವವಾ ವಿಸ್ತಾರ ಮಾಳ್ಪರಾ| ದೋಷದೂರರಾ ಆದಿಶೇಷಾವೇಶರಾ||
ಉದಾ: 6)
ಅದ್ಯಪಿ ಮಂತ್ರಾಲಯ ಕ್ಷೇತ್ರದಲ್ಲಿ ವಿರಾಜಮಾನರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ನಿರಂತರ ಹರಿವಾಯುಗಳ ಆವೇಶವಿದ್ದುದರಿಂದ ಸ್ವರೂಪತಃ 19ನೇ ಕಕ್ಷೆಯ ಕರ್ಮಜ ದೇವತೆಗಳಾಗಿದ್ದರೂ ಸಹ 15ನೇ ಕಕ್ಷೆಯ ಅಗ್ನಿದೇವ, ಭೃಗುಋಷಿ ಮತ್ತು ಪ್ರಸೂತಿದೇವಿಯರು ಇವರುಗಳಿಗೆ ಸಮರೆನಿಸುತ್ತಾರೆ.


ವಿಶೇಷ ಸೂಚನೆ:

ಈ ಆವೇಶಗಳು ಇರುವುದರಿಂದ ಯೋಗ್ಯತೆ ಹೆಚ್ಚು ಕಂಡಂತೆ ಅನಿಸಿದರೂ ಅದು ದೇಶತಃ, ಕಾಲತಃ ಮಾತ್ರ. ಆದರೆ ಗುಣತಃ ಅಲ್ಲವೆಂದು ತಿಳಿಯಬೇಕು.

  • ಶೇಷಾವತಾರಿಗಳಾದ ಬಲರಾಮದೇವರಿಗೆ ಪರಮಾತ್ಮನ ಶುಕ್ಲಕೇಶದ ಆವೇಶವಿದ್ದ ಕಾರಣ ಸ್ವರೂಪದಿಂದ ಉತ್ತಮರಾದ ವಾಯುದೇವರ ಅವತಾರಿಗಳಾದ ಭೀಮಸೇನದೇವರಿಗೆ ಗುರುವೆನಿಸಿದ್ದರು. ಗದಾಯುದ್ಧದ ಕಲಿಕೆಯ ವೇಳೆಯಲ್ಲಿ ಭೀಮಸೇನದೇವರು, ಬಲರಾಮದೇವರಿಗೆ ಪೆಟ್ಟು ಕೊಡುತ್ತಿದ್ದರಂತೆ. ಮತ್ತು ಬಲರಾಮದೇವರಲ್ಲಿ ಪರಮಾತ್ಮನ ಶುಕ್ಲಕೇಶಾವೇಶವು ಜಾಗೃವಾದಾಗ ಅದನ್ನರಿತ ಭೀಮಸೇನದೇವರು ಬಲರಾಮದೇವರಿಗೆ ಶರಣಾಗುತ್ತಿದ್ದರಂತೆ.


     - ಈ ವಿಷಯಗಳನ್ನು ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಉಲ್ಲೇಖಿಸಿದ್ದಾರೆ.
 
  • ಯಾಜ್ಞವಲ್ಕ್ಯರ ವಿಷಯದಲ್ಲೂ ಇದೇ ಆದದ್ದು, ಯಾಜ್ಞವಲ್ಕ್ಯರು ಸ್ವರೂಪತಃ 19 ನೇ ಕಕ್ಷದ ದೇವತೆಗಳಾದ (ಪ್ರಮಾಣ: ವಿಜಯಪ್ರಭುಗಳ ತಾರತಮ್ಯ ಸುಳಾದಿ) ಕಾರಣ ಅಪೌರುಷೇಯವೆನಿಸಿದ ವೇದವನ್ನು ಭಗವಂತನಾದ ಸೂರ್ಯನಾರಾಯಣನಿಂದ ನೇರವಾಗಿ (ಶುಕ್ಲಯಜುರ್ವೇದವನ್ನು) ಸ್ವೀಕರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಆ ಕ್ಷಣದಲ್ಲಿ ಚತುರ್ಮುಖ ಬ್ರಹ್ಮದೇವರು ಯಾಜ್ಞ್ವಲ್ಕ್ಯರಲ್ಲಿ ಆವಿಷ್ಟರಾಗಿ ಶುಕ್ಲಯಜುರ್ವರೇದವನ್ನು ಭಗವಂತನಾದ ಸೂರ್ಯನಾರಾಯಣನಿಂದ ಸ್ವೀಕರಿಸಿದರು. ಮತ್ತು ಆ ಕೀರ್ತಿಯನ್ನು ಯಾಜ್ಞವಲ್ಕ್ಯರಿಗೆ ನೀಡಿದರು. ಇದಲ್ಲವೇ ಬ್ರಹ್ಮದೇವರಂತರ್ಗತ ಪರಮಾತ್ಮನು ಯಾಜ್ಞವಲ್ಕ್ಯರಿಗೆ ಮಾಡಿದ ಅನುಗ್ರಹ ?
ಆದ್ದರಿಂದ ವೇದವನ್ನು ಸ್ವೀಕರಿಸಲು ಆ ಕ್ಷಣದಲ್ಲಿ ಬ್ರಹ್ಮದೇವರು ಯಾಜ್ಞವಲ್ಕ್ಯರಲ್ಲಿ ಆವಿಷ್ಟರಾಗಿದ್ದರು ಮತ್ತು ಸ್ವೀಕರಿಸಿದ ನಂತರ ಆ ಆವೇಶದ ಕ್ಷಣ ಮುಗಿಯಿತು. ಹೀಗಿರುವಾಗ ಅಂಶಾವತಾರವೆಂದು ಹೇಳುವುದೂ ತರವಲ್ಲ. ಹಾಗೆ ಹೇಳಿದರೆ ಒಂದಶದಿಂದ ಬ್ರಹ್ಮದೇವರು ಯಾಜ್ಞವಲ್ಕ್ಯರಾಗಿ ಅವತರಿಸಿದರು ಎಂದಂತಾಗುತ್ತದೆ. ಆದ್ದರಿಂದ ಇಲ್ಲಿ ಅಂಶಾವತಾರ ಎನ್ನುವ ಶಬ್ದಕ್ಕೆ ಅರ್ಥವಿಲ್ಲಾ.
ಶ್ರೀಮದಾಚಾರ್ಯರ ಸಿದ್ಧಾಂತದ ರೀತ್ಯಾ ಬ್ರಹ್ಮದೇವರಿಗೆ ಅವತಾರ ಇಲ್ಲ..!


ಮೂಲ ಸಂಗ್ರಹ: ಮುಂಡರ್ಗಿ ಶ್ರೀ ಪ್ರಾಣೇಶರಾಯರು
ಅಕ್ಷರಜೋಡಣೆ: ಡಿ.ಕೆ.ಅರುಣ್ ಭಾರದ್ವಾಜ್ ಕವಿತಾಳ

  

Sunday, March 10, 2013

ಗಾಯತ್ರೀ ಅನುಷ್ಠಾನ ಪದ್ಧತಿ


ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೊ ನಮಃ


ಸಂಧ್ಯಾವಂದನೆಯಲ್ಲಿ ಮಾಡಲೇಬೇಕಾದ ಪ್ರಮುಖವಾದ ಭಾಗ ಗಾಯತ್ರೀ ಜಪ.
ಗಾಯತ್ರೀಯೆಂದೊಡನೆ ಕೆಲವರಿಗೆ ನೆನಪಾಗುವುದು ಪಂಚ ಮುಖವುಳ್ಳ ಸ್ತ್ರೀ ರೂಪ. ಆದರೆ ಹಾಗಲ್ಲ. ಗಾಯತ್ರೀಯೆಂದರೆ ಭಗವಂತನ ಒಂದು ರೂಪ. ನಾವು ಗಾಯತ್ರೀಯನ್ನು ಹೀಗೆ ಧ್ಯಾನಿಸಬೇಕು. ಸೂರ್ಯಮಂಡಲದಲ್ಲಿರುವ ಗಾಯತ್ರೀಮಂತ್ರಪ್ರತಿಪಾದ್ಯನಾದ ಶ್ರೀಮನ್ನಾರಾಯಣನನ್ನು "ಧ್ಯೇಯಃ ಸದಾ" ಎಂಬ ಮಂತ್ರದಿಂದ ಧ್ಯಾನಿಸಿ ಒಂದು ಸಾವಿರ ಅಥವಾ ನೂರು ಅಥವಾ ಕನಿಷ್ಠ ಹತ್ತು ಗಾಯತ್ರೀಯನ್ನು ಜಪಿಸಬೇಕು.
ಸೂರ್ಯೋದಯವಾಗುವ ತನಕ ನಿಂತೇ ಗಾಯತ್ರೀಮಂತ್ರವನ್ನು ಜಪಿಸಬೇಕು. ಅನಂತರ ಕುಳಿತುಕೊಳ್ಳಬಹುದು. ಪ್ರಾತಃ ಸಂಧ್ಯಾವಂದನೆಯನ್ನು ನಕ್ಷತ್ರಗಳಿರುವಾಗಲೂ, ಸಾಯಂ ಸಂಧ್ಯಾವಂದನೆಯನ್ನು ಸೂರ್ಯನಿರುವಾಗಲೇ ಮಾಡುವುದು ಶ್ರೇಷ್ಢ. ಸಾಯಂ ಸಂಧ್ಯೆಯನ್ನು ಕುಳಿತು ನಡೆಸಬೇಕು.

ಧ್ಯಾನ:
ಶ್ರೀಮನ್ನಾರಾಯಣನು ಸೂರ್ಯಮಂಡಲದಲ್ಲಿ ಪದ್ಮಾಸನಾಸೀನನಾಗಿದ್ದಾನೆ. ತೋಳಲ್ಲಿ ವಂಕಿ, ಕಿವಿಯಲ್ಲಿ ಮಕರ-ಕುಂಡಲ, ಶಿರಸ್ಸಿನಲ್ಲಿ ಕರೀಟ, ಕತ್ತಿನಲ್ಲಿ ಮುತ್ತಿನ ಹಾರಗಳನ್ನು ಧರಿಸಿದ್ದಾನೆ. ಬಂಗಾರದ ಮೈಬಣ್ಣ, ಎರಡು ಕೈಗಳಿಂದ ಶಂಖ-ಚಕ್ರಗಳನ್ನು ಧರಿಸಿದ್ದಾನೆ. ಇಂತಹ ನಾರಾಯಣನನ್ನು ಮನದಲ್ಲಿ ಧ್ಯಾನಿಸಬೇಕು. ಇಂತಹ ಗಾಯತ್ರೀಯನ್ನು ದ್ವಿಜನಾದವನು ಮೂರು ಕಾಲದಲ್ಲಿ ಅವಶ್ಯ ಕರ್ತವ್ಯ:

"...ಸಂಧ್ಯಾತ್ರಯಂ ತು ಕರ್ತವ್ಯಂ ದ್ವಿಜೇನಾತ್ಮವಿದಾ ಸದಾ..."

ಸಂಧ್ಯಾವಂದನೆ, ಜಪ, ಪಾರಾಯಣ ಇವುಗಳನ್ನು ಆಸನದಲ್ಲಿ ಕುಳಿತು ಮಾಡುವುದು ಪ್ರಶಸ್ತ. ಹೇಗೆ ಆಸನದಲ್ಲಿ ವೈವಿಧ್ಯತೆಯಿರುತ್ತದೆಯೋ ಹಾಗೆಂಯೇ ಫಲದಲ್ಲಿಯೂ ಕೂಡ ವೈವಿಧ್ಯತೆ ಇದೆ. ಧರ್ಮ-ಶಾಸ್ತ್ರದಲ್ಲಿ ಹೇಳುವಂತೆ ಆಸನದ ನಿಯಮಗಳು:

ಶ್ಲೋಕ:

 ವಂಶಾಸನೆ ದರಿದ್ರಸ್ಯಾತ್ ಪಾಷಾಣೆ ವ್ಯಾಧಿಸಂಭವಃ |
 ಧರಣ್ಯಾಂ ದುಃಖಮಾಪ್ನೋತಿ ದೌಭರ್ಾಗ್ಯಂ ದಾರುಕಾಸನೆ ||
 ತೃಣಾಸನೆ ಯಶೋಹೀನಃ ಪಲ್ಲವೇ ಚಿತ್ತವಿಭ್ರಮಃ |
 ಕುಶಾಸನೆ ಸರ್ವಸಿಧ್ಧಿಃ ಕಂಭಲೆ ದುಃಖಮೆವ ಚ ||
 ಕೃಷ್ಣಾಜಿನೆ ಙ್ಞಾನಸಿಧ್ಧಿಃ ಮೋಕ್ಷಸ್ಯಾತ್ ವ್ಯಾಘ್ರಚರ್ಮಣಿ ||

ಬಿದಿರಿನ ಆಸನದಲ್ಲಿ ಕುಳಿತು ಸಂಧ್ಯಾವಂದನೆ ಜಪಾದಿಗಳನ್ನು ಮಾಡಿದರೆ ದರಿದ್ರವು ಉಂಟಾಗುತ್ತದೆ. ಕಲ್ಲಿನ ಆಸನ ವ್ಯಾಧಿಗೆ ಕಾರಣ. ಕೇವಲ ನೆಲದಲ್ಲಿ ಕುಳಿತು ಮಾಡಿದರೆ ದುಃಖವನ್ನು ಹೊಂದುತ್ತಾನೆ. ಮಣೆಯ ಆಸನ, ಅಂದರೆ ಹಸೆಮಣೆ ಮೇಲೆ ಕುಳಿತು ಮಾಡಿದರೆ ದೌರ್ಭಾಗ್ಯವನ್ನು [ ಮಣೆಯ ಮೇಲೆ ಕುಳಿತು ಮಾಡುವುದಾದರೆ ಒಂದು ನಾಣ್ಯವನ್ನು ಮಣೆಯ ಮೇಲೆ ಹೊಡೆಸಿರಬೇಕು ], ಇನ್ನು ಹುಲ್ಲಿನ ಆಸನ ಯಶಸ್ಸು ಹಾನಿ. ಹಾಗೆಯೇ ಎಲೆ, ಪಲ್ಲವಾದಿಗಳ ಮೇಲೆ ಕುಳಿತು ಮಾಡುವುದರಿಂದ ಬುದ್ಧಿ-ಭ್ರಮಣೆ.

ಹಾಗಾದರೆ ಶ್ರೇಷ್ಠ ಆಸನಗಳೆಂದರೆ: ದರ್ಭಾಸನ ಸರ್ವಸಿದ್ಧಿಪ್ರದಾಯಕವಾಗಿದೆ. ಹಾಗೆಯೆ ಕೃಷ್ಣಾಜಿನ ಆಸನ ಙ್ಞಾನಕ್ಕೆ ಹೇತುವಾಗಿದೆ. ಇನ್ನು ವ್ಯಾಘ್ರಾಸನ ಮೋಕ್ಷವನ್ನು ಕರುಣಿಸುವುದು.

ಗಾಯತ್ರೀ ಜಪವನ್ನು ಕೂಡ ಮನೆಯಲ್ಲಿ ಮಾಡುವುದಕ್ಕಿಂತ ಗೋಶಾಲೆಯಲ್ಲಿ ಮಾಡುವುದರಿಂದ ಹೆಚ್ಚು ಫಲ. ನದಿ-ತೀರ್ಥಗಳ ಸನ್ನಿಧಿಯಲ್ಲಿ ಮಾಡುವುದರಿಂದ ಸಾವಿರಾರುಪಾಲು ಪುಣ್ಯ. ಶಾಲಗ್ರಾಮದ ಎದುರು ಮಾಡುವುದರಿಂದ ಅನಂತ ಫಲ.
ಈ ಸಂಧ್ಯಾವಂದನೆಯನ್ನು ಮೂರುದಿನ ಯಾವನು ಮಾಡುವುದಿಲ್ಲವೋ ಅವನು ಶೂದ್ರ. ಹಾಗಾಗಿ ಪುನಃ ಉಪನಯನ ಮಾಡಬೇಕು. ಆದ್ದರಿಂದ ಎಲ್ಲರೂ ಕೂಡ ಸಂಧ್ಯಾವಂದನೆಯನ್ನು ನಿತ್ಯದಲ್ಲಿಯೂ ತಪ್ಪದೇ ಮಾಡಬೇಕು.

-
ಶ್ರೀ ಸುಧಾಮ,
ಪೂರ್ಣಪ್ರಙ್ಞ ವಿದ್ಯಾಪೀಠ,
ಬೆಂಗಳೂರು.
 

Thursday, March 7, 2013

ಭಾಗವತದಲ್ಲಿ ರುದ್ರದೇವರ ಸ್ಥಾನಮಾನ



 ಶ್ರೀಮದ್ಭಾಗವತವು ಭಗವಂತನಿಗೆ ಸಂಬಂಧಿಸಿದ ಗ್ರಂಥವಾದರೂ ಪ್ರಾಸಂಗಿಕವಾಗಿ ಅನೇಕ ಭಾಗವತರ(ಭಗವದ್ ಭಕ್ತರ) ವಿಚಾರಗಳು ಅಲ್ಲಿ ಪ್ರಸ್ತುತವಾಗಿವೆ. ಅಂತಹ ಭಾಗವತ ರಲ್ಲೊಬ್ಬರಾದ ರುದ್ರದೇವರ ವಿಚಾರವೂ ಭಾಗವತದಲ್ಲಿ ಸಾಕಷ್ಟು ಕಡೆ ನಿರೂಪಿತವಾಗಿದೆ. ರುದ್ರದೇವರ ಪ್ರಸ್ತಾಪವಿಲ್ಲದ ಸ್ಕಂಧವೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿ ಪ್ರಧಾನವಾಗಿ ರುದ್ರದೇವರ ಉತ್ಪತ್ತಿ ಹಾಗೂ ವಿಷ್ಣು-ರುದ್ರರ ಸಂಬಂಧದ ಬಗ್ಗೆ ನಿರೂಪಿತವಾದ ಕೆಲವು ಅಂಶಗಳು ಇಲ್ಲಿ ಪ್ರಸ್ತಾಪಗೊಂಡಿವೆ.


ರುದ್ರದೇವರ ಜನ್ಮ
 ಪ್ರಲಯಕಾಲ ಮುಗಿದ ಬಳಿಕ ಸೃಷ್ಟಿಮಾಡಲಪೇಕ್ಷಿಸಿದ ಶ್ರೀಹರಿಯು ಮೊದಲು ತತ್ವಗಳನ್ನು, ತತ್ವಾಭಿಮಾನಿ ದೇವತೆಗಳನ್ನು ಸೃಷ್ಟಿ ಮಾಡುತ್ತಾನೆ. ಆನಂತರ ಆ ತತ್ವಾಭಿಮಾನಿ ದೇವತೆಗಳು ಬ್ರಹ್ಮಾಂಡವನ್ನು ಸೃಷ್ಟಿ ಮಾಡಲು ಅಶಕ್ತರಾಗಿ ಶ್ರೀಹರಿಯ ಬಳಿಗೆ ಹೋಗಿ ನಮಗೆ ಒಂದು ನೆಲೆಬೇಕು. ಅದಕ್ಕಾಗಿ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿಕೊಡು ಎಂದು ಪ್ರಾರ್ಥಿಸುವರು. ಅವರ ಪ್ರಾರ್ಥನೆಯಂತೆ ಪರಮಾತ್ಮನು ಬ್ರಹ್ಮಾಂಡವನ್ನು ಸೃಷ್ಟಿಮಾಡುವನು. ಆನಂತರ ದೇವತೆ ಗಳೆಲ್ಲರೂ ಭಗವಂತನೊಂದಿಗೆ ಬ್ರಹ್ಮಾಂಡವನ್ನು ಪ್ರವೇಶಿಸುವರು. ಆ ಬ್ರಹ್ಮಾಂಡದೊಳಗಿನ ನೀರಿನಲ್ಲಿ ಮಲಗಿದ ಭಗವಂತನ ನಾಭಿಯಲ್ಲಿ ಲೋಕಾಧಾರವಾದ ಹದಿನಾಲ್ಕು ದಳಾತ್ಮಕವಾದ ಒಂದು ಪದ್ಮ ಹುಟ್ಟುತ್ತದೆ. ಅದರಲ್ಲಿ ಮತ್ತೊಮ್ಮೆ ಬ್ರಹ್ಮದೇವರು ಜನಿಸುವರು. ಅನಂತರ ಆ ಬ್ರಹ್ಮದೇವರಿಂದ ಪುನಃ ರುದ್ರಾದಿದೇವತೆಗಳ ಸೃಷ್ಟಿಯು ಪ್ರಾರಂಭವಾಗುತ್ತದೆ. ಇದು ಬ್ರಹ್ಮಸೃಷ್ಟಿ. ಇದು ರುದ್ರಾದಿದೇವತಾ ತಾರತಮ್ಯಾನುಸಾರಿಯಾದ ಸೃಷ್ಟಿ. ಈ ಸೃಷ್ಟಿಯ ಆದಿಯಲ್ಲಿ ಬ್ರಹ್ಮದೇವರು 'ನಾನು ಪರಮಾತ್ಮನ ದಾಸ'ಎಂದು ಅಹಂಮತಿಯನ್ನು ಪಡೆದಾಗ ರುದ್ರದೇವರು ಜನಿಸುವರು. ಅವರೊಂದಿಗೆ ಗರುಡ, ಶೇಷರು ಜನಿಸುವರು. ಅನಂತರ ಉಮಾ, ಇಂದ್ರ, ಕಾಮ ಮೊದಲಾದ ಎಲ್ಲಾ ದೇವತೆಗಳೂ ತಾರತಮ್ಯಕ್ಕೆ ಅನುಸಾರವಾಗಿ ಜನಿಸುವರು. 

 ಭಾಗವತ ತೃತೀಯ ಸ್ಕಂಧದಲ್ಲಿ 'ಸಸರ್ಜಾಗ್ರೇಖಂಧತಾಮಿಸ್ರಂ' ಇತ್ಯಾದಿಯಾಗಿ ನಿರೂಪಿತ ವಾದದ್ದು ಅರ್ವಾಚೀನ ಸೃಷ್ಟಿ. ಇದು ತಾರತಮ್ಯಾನುಗುಣವಲ್ಲ. ಈ ಸೃಷ್ಟಿಯಲ್ಲಿ ಬ್ರಹ್ಮ ದೇವ ರಿಂದ ಮೊದಲು ಐದು ವಿಧವಾದ ಅವಿದ್ಯೆಯು ಹುಟ್ಟುತ್ತದೆ. ಅನಂತರ ಬ್ರಹ್ಮದೇವರು ತಮ್ಮ ಮನಸ್ಸಿನಿಂದ ಸನಕ, ಸನಂದನ, ಸನಾತನ, ಸನತ್ಕುಮಾರ ಎಂಬ ಮಕ್ಕಳನ್ನು ಹುಟ್ಟಿಸಿ, ಪ್ರಜಾ ಸೃಷ್ಟಿಯನ್ನು ಮುಂದುವರಿಸುವಂತೆ ಆಜ್ಞೆ ಮಾಡುವರು. ಸಂನ್ಯಾಸಿಗಳಾಗ ಬಯಸಿದ ಆ ನಾಲ್ಕು ಮಕ್ಕಳು ಬ್ರಹ್ಮದೇವರ ಆಜ್ಞೆಯನ್ನು ನಿರಾಕರಿಸುವರು. ಇದರಿಂದ ಬ್ರಹ್ಮದೇವರಿಗೆ ಕೋಪ ವುಂಟಾಗಿ ಅವರು ಅದನ್ನು ನಿಯಂತ್ರಿಸುವುದರೊಳಗೇ ಅವರ ಭ್ರೂಮಧ್ಯದಿಂದ ರುದ್ರದೇವರು ಜನಿಸುವರು (ಮೊದಲೊಮ್ಮೆ ಜನಿಸಿದ್ದ ರುದ್ರದೇವರೇ ಪುನಃ ದೇಹಾಂತರದಿಂದ ಹುಟ್ಟುವರು. ಈ ಸೃಷ್ಟಿಯಲ್ಲಿ ರುದ್ರದೇವರು ಸನಕಾದಿಗಳ ನಂತರ ಹುಟ್ಟಿದರೂ ಇದು ತಾರತಮ್ಯಾನುಸಾರಿ ಯಲ್ಲವಾದ್ದರಿಂದ ರುದ್ರದೇವರನ್ನು ಸನಕಾದಿಗಳಿಗಿಂತ ಉತ್ತಮರೆಂದೇ ತಿಳಿಯಬೇಕು.). ಆನಂತರ ರುದ್ರದೇವರು 'ನನಗೆ ನಾಮ ಮತ್ತು ಸ್ಥಾನಗಳು ಬೇಕು'ಎಂದು ಬಾಲಕನಂತೆ ರೋದಿಸುತ್ತಿರಲು ಬ್ರಹ್ಮದೇವರು ಅವರಿಗೆ ರೋದನ ಮಾಡಿದ್ದರಿಂದ 'ರುದ್ರ' ಎಂದು ನಾಮಕರಣ ಮಾಡಿ ಪುನಃ ಮನು, ಮಹಾನಾಸ, ಶಿವ, ಋತಧ್ವಜ, ಮರುರೇತ, ಭವ, ಕಾಲ, ವಾಮದೇವ, ಧೃತವ್ರತ ಎಂಬ ಹನ್ನೊಂದು ಹೆಸರುಗಳನ್ನೂ, ಹೃದಯ, ಇಂದ್ರಿಯ, ಪ್ರಾಣ ವಾಯು, ಆಕಾಶ, ಗಾಳಿ, ಬೆಂಕಿ, ನೀರು, ಭೂಮಿ, ಸೂರ್ಯ, ಚಂದ್ರ, ತಪಸ್ಸು ಎಂಬ ಸ್ಥಾನಗಳನ್ನು ಕೊಡುವರು. ಅನಂತರ ಪ್ರಜೋತ್ಪತ್ತಿ ಕಾರ್ಯದಲ್ಲಿ ಬ್ರಹ್ಮದೇವರಿಂದ ಆಜ್ಞಪ್ತರಾಗಿ ರುದ್ರದೇವರು ಭೂತಗಳನ್ನು ಸೃಷ್ಟಿ ಮಾಡುವರು. ಆ ಭೂತಗಳು ಜಗತ್ತನ್ನೇ ನುಂಗುವಷ್ಟು ಭಯಂಕರವಾದ್ದರಿಂದ ಬ್ರಹ್ಮದೇವರ ಮಾತಿನಂತೆ ತಪಸ್ಸಿಗೆ ಕಾಡಿಗೆ ತೆರಳುವರು.

ರುದ್ರದೇವರು ಮಾಡಿದ ಅಂತರ್ಯಾಮಿ ಪೂಜೆ

 ಒಂದು ಸಂದರ್ಭದಲ್ಲಿ ಪ್ರಜಾಪತಿಗಳೆಲ್ಲ ಕೂಡಿ ನಡೆಸುತ್ತಿದ್ದ ಯಾಗ ಒಂದರಲ್ಲಿ ಅನೇಕ ದೇವತೆಗಳೂ, ಋಷಿಗಳೂ ಪಾಲ್ಗೊಂಡಿರುತ್ತಾರೆ. ಆವಾಗ ಅದೇ ಯಜ್ಞದಲ್ಲಿ ಭಾಗವಹಿ ಸಲು ಬಂದ ದಕ್ಷ ಪ್ರಜಾಪತಿಗಳಿಗೆ ಎಲ್ಲರೂ ಎದ್ದು ಗೌರವ ಸಲ್ಲಿಸುವರು. ಆದರೆ ದಕ್ಷನ ಅಳಿಯನೇ ಆದ ರುದ್ರದೇವರು ಮಾತ್ರ ಸುಮ್ಮನೇ ಕೂತಿರುತ್ತಾರೆ. ಇದು ಅಳಿಯನು ತನಗೆ ಮಾಡಿದ ಅವಮಾನವೆಂದು ಭಾವಿಸಿದ ದಕ್ಷನು ರುದ್ರನನ್ನು ಅತಿಯಾಗಿ ದ್ವೇಷಿಸಿದ್ದಲ್ಲದೇ `ಇನ್ನು ಮುಂದೆ ಯಾವುದೇ ಯಾಗದಲ್ಲಿ ರುದ್ರನಿಗೆ ಆಹುತಿ ಇಲ್ಲದಂತಾಗಲಿ` ಎಂದು ಶಾಪ ಕೊಡುತ್ತಾನೆ. ಇದೇ ದ್ವೇಷವು ಮುಂದುವರೆಯುತ್ತದೆ. ಒಮ್ಮೆ ಇದರ ಪ್ರಸ್ತಾಪ ಬಂದಾಗ ದಾಕ್ಷಾಯಣಿಯೂ ಕೂಡ ಗಂಡನಾದ ರುದ್ರದೇವರ ಬಳಿ ದಕ್ಷಪ್ರಜಾಪತಿಗಳನ್ನು ಅವಮಾನಿಸಿದ್ದೇಕೆಂದು ಆಕ್ಷೇಪಿಸುತ್ತಾಳೆ. ಅದಕ್ಕೇ ರುದ್ರದೇವರು ಹೇಳುವ ಸಮಾಧಾನ ಅವರ ಆಂತರ್ಯವನ್ನು ಸ್ಪಷ್ಟ ಪಡಿಸುತ್ತದೆ.

 ಪ್ರತ್ಯುದ್ಗಮಪ್ರಶ್ರಯಣಾಭಿವಾದನಂ ವಿಧೀಯತೇ ಸಾಧು ಮಿಥಃ ಸುಮಧ್ಯಮೇ |
 ಪ್ರಾಜ್ಞೈಃ ಪರಸ್ಮೈ ಪುರುಷಾಯ ಚೇತಸಾ ಗುಹಾಶಯಾಯೈವ ನ ದೇಹಮಾನಿನೇ|| 
--ಭಾಗವತ 4-3-22
 ದಾಕ್ಷಾಯಿಣಿ! ವೈಷ್ಣವರು ಬಂದಾಗ ಪ್ರಾಜ್ಞರು ಗೌರವಾದರಗಳನ್ನು ಸಲ್ಲಿಸುವುದು ಅವರ ಅಂತರ್ಯಾಮಿಯಾದ ವಿಷ್ಣುವಿಗೇ ಹೊರತು ಅವರಿಗಲ್ಲ. ಇದು ಪರಸ್ಪರ ಸಮಾನರಾದವರ ವಿಷಯದಲ್ಲಿ. ಆದರೆ ಸಣ್ಣವರು ದೊಡ್ಡವರಿಗೆ ಸಲ್ಲಿಸುವಾಗ ಮಾತ್ರ ದೇಹಾಭಿಮಾನಿಯಾದ ಜೀವನಿಗೂ ಅಂತರ್ಯಾಮಿಯಾದ ವಿಷ್ಣುವಿಗೂ ಸಲ್ಲಿಸುವುದು ಸರಿಯಾದ ಪದ್ಧತಿ.
ರುದ್ರದೇವರ ಈ ಅಭಿಪ್ರಾಯವನ್ನು

 ಸದೇಹಮಾನಿಹರಯೇ ಪ್ರಣಮೇತ್ ಕೇವಲಾಯ ವಾ |
 ನ ದೇಹಾಯ ನ ತನ್ಮಾನಪರಾಯ ಚ ಕಥಂಚನ ||

ಎಂಬ ವ್ಯಾಸಸ್ಮೃತಿಯೂ ಅನುಮೋದಿಸುತ್ತದೆ. 
 ಅರ್ಚತ ಪ್ರಾರ್ಚತ ಪ್ರಿಯಮೇಧಾಸೋ ಅರ್ಚತ |
 ಅರ್ಚಂತು ಪುತ್ರಕಾ ಉತ ಪುರಂ ನ ಧೃಷ್ಣ್ವರ್ಚತ ||

 ಎಂಬ ವೇದಮಂತ್ರವೂ ಕೂಡ `ಪುರಂ ನ` `ದೇಹವನ್ನಾಗಲೀ ದೇಹಾಭಿಮಾನಿ ಜೀವನನ್ನಾಗಲೀ ಸ್ವತಂತ್ರವಾಗಿ ಪೂಜಿಸಬೇಡ` ಎನ್ನುತ್ತದೆ.
 ಹಾಗಾದರೆ ದಕ್ಷನು ರುದ್ರನಿಗಿಂತ ಸ್ವರೂಪತಃ ಅವರನಾದರೂ ಮಾವನಾದ್ದರಿಂದ ಶ್ರೇಷ್ಠ ನಾದ ಪ್ರಯುಕ್ತ `ಮರ್ಯಾದಾರ್ಥಂ ತೇಪಿ ಪೂಜ್ಯಾಃ` ಎಂಬ ವಚನದಂತೆ ದಕ್ಷನನ್ನು ರುದ್ರ ದೇವರು ಪೂಜಿಸಬೇಕಿತ್ತು ಎಂಬ ಸಂಶಯ ಮೂಡುವುದು ಸಹಜ. ಇದಕ್ಕೂ ರುದ್ರದೇವರು ಉತ್ತರಿಸಿದ್ದಾರೆ -
ಸತ್ವಂ ವಿಶುದ್ಧಂ ವಸುದೇವಶಬ್ದಿತಂ ಯದೀಯತೇ ತತ್ರ ಪುಮಾನಪಾವೃತಃ |
ಸತ್ವಂ ಯಸ್ಮಿನ್ ಭಗವಾನ್ ವಾಸುದೇವೋತ್ವಧೋಕ್ಷಜೋ ಮೇ ಮನಸಾ ವಿಧೀಯತೇ ||
--ಭಾಗವತ 4-3-23
 ದಾಕ್ಷಾಯಿಣಿ! ಆ ಯಜ್ಞಮಂಟಪದಲ್ಲಿ ನನ್ನೆದುರು ಪರಮ ಶುದ್ಧಾಂತಃಕರಣರಾದ ಬ್ರಹ್ಮ ದೇವರು ಕುಳಿತಿದ್ದರು. ಅವರಲ್ಲಿ ವಿಶೇಷವಾಗಿ ಸನ್ನಿಹಿತನಾದ ಭಗವಂತನನ್ನು ನಾನು ಏಕಾಗ್ರತೆ ಯಿಂದ ಧ್ಯಾನಿಸುತ್ತಿದ್ದೆ. ಮತ್ತು ಆ ಸಂದರ್ಭದಲ್ಲಿ ದಕ್ಷನ ಅಂತಃಕರಣವು ರಜೋಗುಣದಿಂದ ಅಹಂಕಾರಾದಿಗಳಿಂದ ಕಲುಷಿತವಾದ ಪ್ರಯುಕ್ತ ಭಗವಂತನ ವಿಶೇಷ ಸನ್ನಿಧಾನವಿರಲಿಲ್ಲ. ಈ ಕಾರಣಗಳಿಂದಾಗಿ ನಾನು ದಕ್ಷನನ್ನು ಪೂಜಿಸಲಿಲ್ಲ.


ಶಿವನಿಗೆ ಆಹುತಿ
 ಶಿವನಿಗೆ ಆಹುತಿ ಇಲ್ಲದಂತಾಗಲೀ ಎಂದು ಶಪಿಸಿದ್ದ ದಕ್ಷನು ತಾನೇ ಒಂದು ಯಾಗವನ್ನು ಮಾಡಲು ಪ್ರಾರಂಭಿಸುವನು. ಆ ಯಾಗಕ್ಕೆ ಸತಿ-ಶಿವರಿಗೆ ಆಮಂತ್ರಣವಿರುವುದಿಲ್ಲ. ಆದರೂ ಸತಿಯು ತಾನೊಬ್ಬಳೇ ತವರು ಮನೆಯ ಸೆಳೆತದಿಂದ ಅಲ್ಲಿಗೆ ಆಗಮಿಸುವಳು. ರುದ್ರನ ಮೇಲಿನ ಕೋಪದಿಂದ ದಕ್ಷನು ಸತಿಯನ್ನೂ ಮಾತನಾಡಿಸುವುದಿಲ್ಲ. ಈ ಅವಮಾನವನ್ನು ಸಹಿಸಿಕೊಂಡ ಸತಿಗೆ ರುದ್ರನಿಗೆ ಆಹುತಿ ಕೊಡದೇ ಯಾಗ ಮುಂದುವರೆಸಿದ್ದನ್ನು ಕಂಡು ಸಹಿಸಲಾಗಲಿಲ್ಲ. ಆ ಯಜ್ಞಕುಂಡದಲ್ಲಿಯೇ ದೇಹತ್ಯಾಗ ಮಾಡುವಳು. ನಾರದರಿಂದ ಈ ವಿಷಯ ತಿಳಿದ ರುದ್ರ ದೇವರು ಬಂದು ಯಜ್ಞವನ್ನು ಧ್ವಂಸ ಮಾಡುವರು. ದಕ್ಷನ ತಲೆಯನ್ನೂ ಕಡಿದು ಯಜ್ಞ ಕುಂಡದಲ್ಲಿ ಹೋಮಿಸುವರು.
 ಅನಂತರ ಬ್ರಹ್ಮದೇವರ ಮಾತಿನಂತೆ ಶಾಂತರಾಗಿ ಬ್ರಹ್ಮದೇವರೊಡನೆ ಯಾಗ ಶಾಲೆಗೆ ಬಂದು ಆಡಿನ ತಲೆಯನ್ನಿಟ್ಟು ದಕ್ಷನನ್ನು ಬದುಕಿಸುವರು. ಯಜ್ಞವು ಮುಂದುವರೆದು ಸಮಾಪ್ತ ವಾಗುವುದು. ಆಗ ಯಜ್ಞದ ಕೊನೆಯಲ್ಲಿ ಬ್ರಹ್ಮದೇವರ ಮಾತಿನಂತೆ ರುದ್ರದೇವರಿಗೆ ಸ್ವಿಷ್ಟಕೃದ್ಭಾಗ ಎಂಬ ಉಚ್ಛಿಷ್ಟಾಹುತಿಯನ್ನು ಸಮರ್ಪಿಸುವರು.
ಹರಿ ಪಾದೋದಕದಿಂದ ಶಿವತ್ವಪ್ರಾಪ್ತಿ  ಶಿವ ಎಂದರೆ ಮಂಗಳ ಎಂದರ್ಥ. ಶ್ರೀಹರಿ ಪಾದೋದಕವೆನಿಸಿದ ಗಂಗೆಯನ್ನು ಶಿರಸಾ ಧರಿಸಿದ್ದರಿಂದ ರುದ್ರದೇವರು `ಶಿವ`ರಾದರು (ಪರಮ ಮಂಗಳರಾದರು) ಎಂದು ಭಾಗವತ ಸಾರುತ್ತಿದೆ -
 ಯಚ್ಛೌಚನಿಃಸೃತಸರಿತ ಪ್ರವರೋದಕೇನ ............. ಶಿವಃ ಶಿವೋಭೂತ್ ||.

ಭಗವದಾಜ್ಞಾಪಾಲನೆ
 ಸ್ಮಶಾನದಲ್ಲಿ ವಾಸ, ಕೊರಳಲ್ಲಿ ತಲೆಬುರುಡೆಗಳ ಮಾಲೆ, ಕೈಯಲ್ಲಿ ಕಪಾಲ, ಮೇಲ್ನೋಟಕ್ಕೆ ಪೈಶಾಚವೃತ್ತಿಯಂತೆ ಕಾಣುವ ರುದ್ರದೇವರ ಈ ಚರ್ಯೆಯು ಭಗವದಾಜ್ಞಾನು -ಸಾರಿಯೇ ಆಗಿದೆ. ಏಕೆಂದರೆ ಸಂಧ್ಯಾಕಾಲದಲ್ಲಿ ಗರ್ಭಧರಿಸುವ ಸ್ತ್ರೀಯರನ್ನು ಹರಿಯಾಜ್ಞೆಯಿಂದ ರುದ್ರದೇವರು ಸಂಹರಿಸುತ್ತಾರೆ. ಅದರ ಪ್ರಾಯಶ್ಚಿತ್ತಕ್ಕಾಗಿ ಹರಿಯಾಜ್ಞೆಯಿಂದಲೇ ಪಿಶಾಚ ಚರ್ಯೆಯನ್ನವಲಂಬಿಸುತ್ತಾರೆ -
 ಯಸ್ಯಾನವದ್ಯಾಚರಿತಂ ಮನೀಷಿಣೋ ಗೃಹ್ಣಂತ್ಯವಿದ್ಯಾಪಟಲಂ ವಿಭಿತ್ಸವಃ |
 ನಿರ್ತಸಾಮ್ಯಾತಿಶಯೋ ಹರೇಃ ಸ್ವಯಂ ಪಿಶಾಚಚರ್ಯಾಮಚರತ್ ಸತಾಂ ಗತಿಃ ||
ಭಾಗವತ 3-15-26
 ತಾನೇ ಆಜ್ಞಾಪಿಸಿ ಮಾಡಿಸಿದ ಕಾರ್ಯಕ್ಕೆ ತಾನೇ ಪ್ರಾಯಶ್ಚಿತ್ತವನ್ನು ವಿಧಿಸಿರುವುದು ಶ್ರೀಹರಿಯ ವಿಡಂಬನೆಗೊಂದು ನಿದರ್ಶನ.

ಭಗವದುಪಾಸನೆ
 ಜಂಬೂದ್ವೀಪದಲ್ಲಿರುವ ಇಲಾವೃತ ಖಂಡದಲ್ಲಿ ರುದ್ರದೇವರು ಇಂದಿಗೂ ಭಗವಂತನ ಸಂಕರ್ಷಣ ಮೂರ್ತಿಯನ್ನು ಉಪಾಸನೆ ಮಾಡುತ್ತಿರುವರೆಂದು ಪಂಚಮ ಸ್ಕಂಧದಲ್ಲಿ ನಿರೂಪಿತವಾಗಿದೆ.
 ಶ್ರೀಕೃಷ್ಣನು ದೇವಕಿಯ ಗರ್ಭದಲ್ಲಿರುವಾಗ ಬ್ರಹ್ಮರುದ್ರಾದಿಗಳು ಬಂದು ಶ್ರೀಕೃಷ್ಣನನ್ನು ಸ್ತೋತ್ರ ಮಾಡಿದ ಸಂಗತಿ ದಶಮಸ್ಕಂಧದಲ್ಲಿ ನಿರೂಪಿತವಾಗಿದೆ.
 ರುದ್ರದೇವರು ತಾವು ಪಠಿಸುತ್ತಿದ್ದ ವಿಷ್ಣುಸ್ತೋತ್ರವನ್ನು ಪ್ರಚೇತಸರಿಗೆ ಉಪದೇಶಿಸಿದ್ದನ್ನು ನಾಲ್ಕನೇ ಸ್ಕಂಧದಲ್ಲಿ ನೋಡಬಹುದು.


ರುದ್ರ - ಭಗವದನುಗ್ರಹಪಾತ್ರ
 ವೃಕನೆಂಬ ಅಸುರನು ರುದ್ರದೇವರನ್ನು ತಪಸ್ಸಿನಿಂದ ಒಲಿಸಿಕೊಂಡು `ನಾನು ಯಾರ ತಲೆಯ ಮೇಲೆ ಕೈ ಇಡುವೆನೋ ಅವರು ಸಾಯಬೇಕು` ಎಂದು ವರವನ್ನು ಕೇಳಿದ. ರುದ್ರದೇವರು ತಥಾಸ್ತು ಎಂದು ನುಡಿದರು. ಅಸುರನು ಆ ವರವನ್ನು ಪರೀಕ್ಷಿಸಲು ರುದ್ರದೇವರ ತಲೆಯ ಮೇಲೆಯೇ ಕೈ ಇಡಲು ಹೊರಟ. ರುದ್ರದೇವರು ಭಗವಂತನಿಗೆ ಶರಣಾದಾಗ ಭಗವಂತನು ವೃಕಾಸುರನನ್ನು ಮೋಹಗೊಳಿಸಿ ತನ್ನ ತಲೆಯ ಮೇಲೆಯೇ ಕೈ ಇಟ್ಟುಕೊಳ್ಳುವಂತೆ ಮಾಡಿ ಅಸುರನನ್ನು ಸಂಹರಿಸಿ ರುದ್ರದೇವರನ್ನು ಕಾಪಾಡುವನು. ಈ ಪ್ರಸಂಗವು ಹತ್ತನೇ ಸ್ಕಂಧದಲ್ಲಿ ನಿರೂಪಿತವಾಗಿದೆ.
 ರುದ್ರದೇವರು ತ್ರಿಪುರಾಸುರ ಸಂಹಾರ ಮಾಡಿದ್ದೂ ಭಗವದನುಗ್ರಹದಿಂದಲೇ. ತ್ರಿಪುರಾಸುರ ಪಟ್ಟಣದಲ್ಲಿ ಮಯನಿರ್ಮಿತವಾದ ಅಮೃತದ ಬಾವಿಯಿತ್ತು. ರುದ್ರನಿಂದ ಹತರಾದ ಅಸುರ ರೆಲ್ಲರೂ ಆ ಬಾವಿಯ ರಸದಿಂದ ಬದುಕುತ್ತಿದ್ದರು. ಇದರಿಂದ ರುದ್ರನು ಕಂಗೆಟ್ಟಾಗ ವಿಷ್ಣುವು ಗೋರೂಪದಿಂದ ಹೋಗಿ ಆ ಅಮೃತ ರಸವನ್ನೆಲ್ಲಾ ಪಾನಮಾಡಿದ್ದಲ್ಲದೇ ತನ್ನ ಶಕ್ತಿಯಿಂದ ರುದ್ರನಿಗೆ ಯುದ್ಧಸಾಧನವಾದ ರಥಾದಿಗಳನ್ನೆಲ್ಲಾ ನಿರ್ಮಿಸಿಕೊಟ್ಟು ತಾನೇ ತನ್ನ ತೇಜಸ್ಸಿನಿಂದ ರುದ್ರನನ್ನು ರಕ್ಷಿಸಿ ತ್ರಿಪುರ ಸಂಹಾರ ಮಾಡಿಸುತ್ತಾನೆ-

 ಭಗವತ್ತೇಜಸಾ ಗುಪ್ತೋ ದದಾಹ ತ್ರಿಪುರಂ ನೃಪ || ಭಾಗವತ 7-11-17.


ಶಿವೋಪಾಸನೆಯ ಫಲ
ಶಿವಃ ಶಕ್ತಿಯುತಃ ಶಶ್ವತ್ ತ್ರಿಲಿಂಗೋ ಗುಣಸಂವೃತಃ || (ಭಾಗವತ 10ನೇ ಸ್ಕಂಧ) ಎಂಬಂತೆ ರುದ್ರದೇವರು ಪ್ರಕೃತಿಬದ್ಧರಾಗಿದ್ದಾರೆ. ಆದ್ದರಿಂದ ಪ್ರಾಯಃ ಶಿವೋಪಾಸಕರು ಪ್ರಾಕೃತವಾದ ಧನಸಂಪತ್ತುಳ್ಳವರಾಗುತ್ತಾರೆ. ಆದರೆ `ಹರಿಸ್ತು ನಿರ್ಗುಣಃ ಸಾಕ್ಷಾತ್` ಎಂಬಂತೆ ಶ್ರೀ ಹರಿಯು ಪ್ರಾಕೃತಗುಣಬದ್ಧನಲ್ಲವಾದ್ದರಿಂದ ಶ್ರೀಹರಿಯ ಉಪಾಸಕರು ಮುಕ್ತರಾಗುತ್ತಾರೆ. `ವಿದ್ಯಾಕಾಮಸ್ತು ಗಿರೀಶಂ` ಎಂದು ದ್ವಿತೀಯಸ್ಕಂಧದಲ್ಲಿ ಹೇಳಿದ ಪ್ರಕಾರ ಶಿವನ ಆರಾಧನೆ ಯಿಂದ ಜ್ಞಾನವನ್ನು ಪಡೆಯಬಹುದು. `ಜ್ಞಾನಂ ಮಹೇಶ್ವರಾದಿಚ್ಛೇತ್` ಎಂಬ ಪ್ರಮಾಣವೂ ಇದಕ್ಕೆ ಸಂವಾದಿಯಾಗಿದೆ. ಇಂತಹ ಶಿವನು ನಮಗೆಲ್ಲರಿಗೂ ಭಗವಂತನ ಬಗ್ಗೆ ಸರಿಯಾದ ಜ್ಞಾನವನ್ನು ನೀಡಿ ಅನುಗ್ರಹಿಸಲೆಂಬ ಪ್ರಾರ್ಥನೆ ನಮ್ಮದಾಗಿರಲಿ.


ಶ್ರೀ ರಂಗನಾಥಾಚಾರ್ಯ ಸಾಲಗುಂದಾ,
"ಈಶಾವಾಸ್ಯಮ್"