Monday, January 7, 2013

ಆತ್ಮೋಧ್ದಾರದ ಮಾರ್ಗದಲ್ಲಿ ಹೆಜ್ಜೆಗಳುಭಗವಂತನ ಆದೇಶದಂತೆ ಈ ಅದ್ಬುತ ಪ್ರಪಂಚವನ್ನು ಸೃಷ್ಠಿಸಿದ ಬ್ರಹ್ಮನು ಅನಂತ ಜೀವರಾಶಿಗಳನ್ನು ಸೃಷ್ಠಿಸಿದರೂ ಸಮಾಧಾನಗೊಳ್ಳದೆ, ಬುದ್ಧಿಯುಳ್ಳ ಮನುಷ್ಯನನ್ನು ಸೃಷ್ಠಿಸಿದ ಮೇಲೆ ತನ್ನ ಸೃಷ್ಠಿಯ ಬಗ್ಗೆ ಸಮಾಧಾನಗೊಂಡ ಎಂದು ಭಾಗವತ ಹೇಳುತ್ತದೆ. ಈ ಜೀವರಾಶಿಗಳೆಲ್ಲಾ ಮನುಷ್ಯ ಜನ್ಮ ಪಡೆದು ಆತ್ಮೋದ್ಧಾರ ಮಾಡಿಕೊಳ್ಳಬಹುದಾಗಿದೆ
ಎಂಬುದೇ ಬ್ರಹ್ಮದೇವರ ಸಮಾಧಾನಕ್ಕೆ ಕಾರಣ.

ಹೀಗೆ ಜೀವರುಗಳು ಮನುಷ್ಯಜನ್ಮ ಪಡೆದುಕೊಂಡು ಆತ್ಮೋದ್ಧಾರ ಮಾಡಿಕೊಂಡ ಉದಾಹರಣೆಗಳನ್ನು ಇತಿಹಾಸ, ಪುರಾಣಗಳಿಂದ ತಿಳಿದುಕೊಂಡಿದ್ದೇವೆ. ಅನೇಕ ಋಷಿ-ಮುನಿಗಳು, ರಾಜರು, ಸಾಧಕರು, ಸಜ್ಜನರು ತತ್ವಜ್ಞ್ಞಾನವನ್ನು ಪಡೆದುಕೊಂಡು ಆತ್ಮೋದ್ಧಾರದ ದಾರಿಯಲ್ಲಿ ನಡೆಯುತ್ತಾ, ಸಾಮಾನ್ಯ ಜನರಿಗೆ ಆ ದಾರಿಯನ್ನು ಪರಿಚಯಿಸಿ, ಆ
ದಾರಿಯಲ್ಲಿ ನಡೆಯುವಂತೆ ಮಾಡಿದ್ದಾರೆ. ಆ ದಾರಿಯನ್ನು ಹುಡುಕುವ ಭರದಲ್ಲಿ ಕೆಲವರು ಅಜ್ಞಾನದಿಂದ ಅಥವಾ ಆಗ್ರಹದಿಂದ ಬೇರೆ-ಬೇರೆ ಮಾರ್ಗಗಳಲ್ಲಿ ಹೊರಟು, ಸಂಸಾರಬಂಧವೆಂಬ ಈ ಜಂಜಾಟದಲ್ಲೆ ಮುಳುಗಿ, ದಾರಿಕಾಣದಂತಾಗಿರುವವರನ್ನು ತಿಳಿದುಕೊಂಡಿದ್ದೆವೆ. ಹೀಗೆ ವೇದ-ಉಪನಿಷತ್ತುಗಳು, ಋಷಿ-ಮುನಿಗಳು ತಿಳಿಸಿಕೊಟ್ಟ ವಿಷಯಗಳು ನಮಗೆ ಅರ್ಥವಾಗಲಿಲ್ಲ. ಇನ್ನು ಕೆಲವರಿಗೆ ಅಪಾರ್ಥಗಳೇ ಆಯಿತು. ಯಾವುದು ಸರಿ - ಯಾವುದು ತಪ್ಪು ಎಂದು ತಿಳಿಯದ ನಮಗೆ ತತ್ವಜ್ಞಾನದ ಮಾರ್ಗದಲ್ಲಿ ಸಾಗಲು ಸರ್ವಙ್ಞರಾದ, ಮುಖ್ಯಗುರುಗಳ ಮಾರ್ಗದರ್ಶನ ಅತ್ಯವಶ್ಯಕ. ಅವರು ತಿಳಿಸಿದ ಆಚಾರ ವಿಚಾರಗಳ ಜ್ಞಾನ ಅತ್ಯವಶ್ಯಕ. ಅದರಂತೆ ನಾವೆಲ್ಲಾ ಈ ಸಂಸಾರಿಕ ಜೀವನದಲ್ಲಿದ್ದುಕೊಂಡು  ನಮ್ಮ ನಮ್ಮ ಆತ್ಮೋದ್ಧಾರ ಮಾಡಿಕೊಳ್ಳಲು ಶ್ರೀಮದಾಚಾರ್ಯರು ತೋರಿಸಿ ತಿಳಿಸಿಕೊಟ್ಟ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು. ತಿಳಿದು ಅನುಷ್ಠಾನಕ್ಕೆ ತಂದುಕೊಳ್ಳಬೇಕು.

ಹಾಗಾದರೆ, ಆಚಾರ ಎಂದರೆ ಎನು? 'ವೇದೋಕ್ತ ಕರ್ಮಾಚರಣೆಯೇ ಆಚಾರ'.

|ಕರ್ಮಣಾ ಜ್ಞಾನಮಾತನೋತಿ, ಜ್ಞಾನೇನ ಅಮೃತೀಭವತಿ |

ಸತ್ಕಕರ್ಮಾಚರಣೆಯಿಂದ ನಮ್ಮ ಮನಸ್ಸಿನಲ್ಲಿರುವ ರಾಗ-ದ್ವೇಷಾದಿಗಳೆಲ್ಲಾ ನಾಶವಾಗುತ್ತವೆ. ಶುದ್ಧವಾದ ಮನಸ್ಸಿನಿಂದ ಜ್ಞಾನವನ್ನು ಪಡೆದು ಭಗವಂತನ್ನು ಕಾಣಬಹುದಾಗಿದೆ. ಹೀಗೆ ಆಧ್ಯಾತ್ಮಸಾಧಕನ ಮೊದಲ ಹೆಜ್ಜೆಯೇ ಸತ್ಕರ್ಮಾನುಷ್ಠಾನ.

ಅತೀತಾನಾಗತಜ್ಞಾನಿ ತ್ರೈಲೋಕ್ಯೋದ್ಧರಣ ಕ್ಷಮಃ |
ಏತಾದೃಶೊಪಿನಾಚಾರಂ ಶ್ರೌತಂ ಸ್ಮಾರ್ತಂ ಪರಿತ್ಯಜೇತ್ ||

ಭೂತ ಭವಿಷ್ಯತ್ ಗಳನ್ನು ತಿಳಿಯುವ ಜ್ಞಾನಿಯಾಗಿದ್ದು, ಮೂರು ಲೋಕಗಳನ್ನು ಉದ್ಧಾರ ಮಾಡುವ ಸಾಮಥ್ರ್ಯವುಳ್ಳವನಾಗಿದ್ದರೂ, ಶ್ರುತಿ-ಸ್ಮೃತಿಗಳಲ್ಲಿ ಹೇಳಿದ ಆಚಾರಗಳನ್ನು ಬಿಡಬಾರದು ಎಂದಿರುವಾಗ ಕರ್ಮಾಚರಣೆ ಅವಶ್ಯ ಕರ್ತವ್ಯ ಎಂದಾಯಿತು.

ಆಚರಣೆಗಳಲ್ಲಿ ಮೊದಲನೆಯದು ಸಂಧ್ಯಾವಂದನೆ.
  | ಸಂಧ್ಯಾಹೀನೋ ಅಶುಚಿರ್ನಿತ್ಯಂ, ಅನರ್ಹಃ ಸರ್ವಕರ್ಮಣಃ |
  | ಅನರ್ಹಃ ಕರ್ಮಣಾಂ ವಿಪ್ರಃ ಸಂಧ್ಯಾಹೀನೋ ಯತಃ ಸ್ಮೃತಃ ||

ಸಂಧ್ಯಾವಂದನೆ ಮಾಡದವನು ಯಾವಾಗಲೂ ಮೈಲಿಗೆಯೇ. ಯಾವ ಕರ್ಮಗಳಿಗೂ ಅರ್ಹನಲ್ಲ. ಬ್ರಾಹ್ಮಣನ ಕರ್ತವ್ಯಗಳಾದ ಯಙ್ಞ, ಪೂಜೆ, ಆಶೀರ್ವಾದಗಳಿಗೂ ಅಯೋಗ್ಯ ಎಂದು ಶಾಸ್ತ್ರ ಎಚ್ಚರಿಸಿದೆ. ಭಗವತ್ಪ್ರಸಾದ ರೂಪವಾದ ಊಧ್ರ್ವ-ಪುಂಡ್ರಧಾರಣೆ, ದೇವರ ಉಪಕಾರಸ್ಮರಣೆ ರೂಪವಾದ ಅಘ್ರ್ಯ ಇದು ಪಾಪ-ಪರಿಹಾರಕ. ಮತ್ತು ನಮ್ಮ ಬುಧ್ಧಿಗಳನ್ನು ಸನ್ಮಾರ್ಗದಲ್ಲಿ ಪ್ರಚೋದಿಸು ಎಂದು ಪ್ರಾರ್ಥನಾರೂಪವಾದ ಗಾಯತ್ರಿ ಜಪ, ಮುಂತಾದ ಪ್ರಮುಖ ಅಂಶಗಳಿಂದ ಕೂಡಿದ ಸಂಧ್ಯಾವಂದನೆ ಬ್ರಾಹ್ಮಣನಿಗೆ ಅತ್ಯವಶ್ಯ ಕರ್ತವ್ಯ. ಹಾಗೆಯೇ ದೈಹಿಕ-ಮಾನಸಿಕ ಸ್ವಾಸ್ಥ್ಯಕ್ಕಾಗಿ ಪ್ರಾಣಾಯಾಮ-ಧ್ಯಾನಗಳನ್ನು ಮಾಡಬೇಕೆಂಬುದು ಆಧುನಿಕರೂ ಒಪ್ಪುವ ವಿಚಾರವೇ. ಅದನ್ನು ನಮ್ಮ ಪ್ರಾಚೀನರು ಧ್ಯಾನಕ್ಕೆ ಸರ್ವಶ್ರೇಷ್ಟಮಂತ್ರ ಗಾಯತ್ರಿಯಿಂದ ಕೂಡಿದ  ಸಂಧ್ಯಾವಂದನೆಯನ್ನು ನಮಗೆ ವಿಧಿಸಿದ್ದು. ಇಂತಹ ಧ್ಯಾನರೂಪವಾದ ಸಂಧ್ಯಾವಂದನೆಯಿಂದ ಮನಸ್ಸು ಪ್ರಶಾಂತವಾಗಿ, ಬುದ್ಧಿ-ಶರೀರಗಳು ಬಲಿಷ್ಟವಾಗಿ ಮಾಡಬೇಕಾದ ಕಾರ್ಯಗಳನ್ನು ಸುಲಭವಾಗಿ ಅನಾಯಾಸವಾಗಿ ಮಾಡಲುಬರುತ್ತದೆ.

ಹೀಗೆ ಶಾಸ್ತ್ರಸಿದ್ಧವಾಗಿಯೂ, ಮಹದುಪಕಾರ ರೂಪವಾಗಿಯೂ ಇರುವ ಸಂಧ್ಯಾವಂದನೆಯನ್ನು ಅತ್ಯವಶ್ಯ ಮಾಡಲೇಬೇಕು.
ಹಾಗೆಯೇ ಧಾರ್ಮಿಕ ಕರ್ಮಾಚರಣೆಯಿಲ್ಲದೇ ಕೇವಲ ಜ್ಞಾನ ಪಡೆದುಕೊಂಡಿದ್ದರೂ ಪ್ರಯೊಜನವಿಲ್ಲ.
ಆಚಾರವಿಲ್ಲದ ಜ್ಞಾನ, ಭಗವತ್ಪ್ರಙೆ ಇಲ್ಲದ ಆಚಾರ - ಎರಡೂ ಕೂಡ ಆತ್ಮೋದ್ಧಾರ ಮಾರ್ಗಗಳಾಗುವುದಿಲ್ಲ.
ಆಚಾರ್ಯರು ತಿಳಿಸಿದಂತೆ ನಮ್ಮ ನಿತ್ಯಕರ್ಮಗಳಾದ ಸಂಧ್ಯಾವಂದನಾದಿಗಳನ್ನು ಮಾಡುವಾಗ ಭಗವತ್ ಪ್ರಙ್ಞೇ ಅಂದರೆ ವಿಷ್ಣುವಿನಲ್ಲಿ ಉತ್ತಮತ್ವ ಜ್ಞಾನ-ಭಕ್ತಿಗಳು ಇರಬೇಕು.

...ಯೇತು ತದ್ಭಕ್ತಿವರ್ಜಿತಾಃ |
ಅನ್ಯಸಾಮಾನ್ಯವೇತ್ತಾರಃ ತದನ್ಯೋತ್ತಮವೇದಿನ:
ತದ್ಬಕ್ತನಿಂದಕಾಶ್ಚೈವ ಯಾಂತ್ಯೇವನಿರಯಂ ಧೃವಂ |
ಅಪಿ ಧರ್ಮೈಕನಿಯಮ್ನ: ನಾತ್ರ ಕಾರ್ಯವಿಚಾರಣಾ ||


ವಿಷ್ಣುವಿನಲ್ಲಿ ಭಕ್ತಿ ಇಲ್ಲದವರು ಅಥವಾ ಇತರ ದೇವತೆಗಳ ಸಮನಾದವನು ವಿಷ್ಣು ಎಂದು ತಿಳಿದವರು ಅಥವಾ ವಿಷ್ಣುನಿಂದಕರು, ಇವರು ಧಾರ್ಮಿಕ ನಿಷ್ಠೆಯಿಂದ ಕೂಡಿದ್ದರೂ ಅನರ್ಥವನ್ನು ಹೊಂದುತ್ತಾರೆ.

ಆದ್ದರಿಂದ ಆಚಾರ್ಯರ ಸಿಧ್ಧಾಂತದ ಮಾರ್ಗದಲ್ಲಿ ಆಚಾರ ವಿಚಾರಗಳ  ಅಳವಡಿಸಿಕೊಂಡು ತತ್ವಜ್ಞಾನ ಪಡೆಯುವಲ್ಲಿ ಸಣ್ಣ ಪ್ರಯತ್ನ ಪಟ್ಟರೂ ಆತ್ಮೋದ್ಧಾರಮಾರ್ಗದಲ್ಲಿ ಸಾಗಲು ಒಂದು  ಸಣ್ಣ ಹೆಜ್ಜೆ ಇಟ್ಟಂತಾಗುತ್ತದೆ. ಅದಕ್ಕಾಗಿ ನಾವೆಲ್ಲಾ ಪ್ರಯತ್ನಿಸೋಣ.
ಶ್ರೀಕೃಷ್ಣಾರ್ಪಣಮಸ್ತು.


ಲೇಖಕರು:
ನಾರಾಯಣಾಚಾರ್ಯ ಬಾದರ್ಲಿ,
ಆಧ್ಯಾಪಕರು,
ಪೂರ್ಣಪ್ರಙ್ಞ ವಿದ್ಯಾಪೀಠ, ಬೆಂಗಳೂರು

1 comment:

  1. sri narayana acharge namaskaragalu,
    atyanatha mukaya mattu athantny amuly vishaya galanu thilisda badarli acharge abhinandanaglu,
    (it is very very basic fundamental philosphyical step to sadhaka, we should know these things before we called as madhava)
    thank u very much sir....

    ReplyDelete