Friday, January 11, 2013

ಸಂಕ್ರಮಣ

ಅಪಮೃತ್ಯು ಪರಿಹರಿಸುವ ಮಕರ ಸಂಕ್ರಮಣ

 ರವಿಯು ಮೇಷಾದಿರಾಶಿಗಳಲ್ಲಿ ಸಂಚರಿಸುವ ಹನ್ನೆರಡು ತಿಂಗಳುಗಳ ಕಾಲವನ್ನು ಸಂಕ್ರಮಣ ಎಂದು ಕರೆಯುವರು. ರವಿಯು ದಿನವೊಂದಕ್ಕೆ ಒಂದು ಭಾಗ ಮಾತ್ರ ಸಂಚರಿಸುವವನಾಗಿ ಒಂದು ರಾಶಿಯಲ್ಲಿ ಒಂದು ತಿಂಗಳವರೆಗೆ ಇರುವನು. ಹೀಗೆ ರವಿಯು ಒಂದೊಂದು ರಾಶಿಯನ್ನು ನಿರ್ದಿಷ್ಟವಾದ ದಿನಾಂಕದಂದು ಪ್ರವೇಶಿಸುತ್ತಾನೆ. ಅಂದರೆ ಮೇಷ ರಾಶಿಯನ್ನು ಏಪ್ರಿಲ್ ತಿಂಗಳ 13-14ರಂದು ಪ್ರವೇಶಿಸುವನು. ವೃಷಭರಾಶಿಯನ್ನು ಮೇ 14-15ರಂದು ಪ್ರವೇಶಿಸುವನು. ಮಿಥುನ ರಾಶಿಯನ್ನು ಜೂನ್ 14-15ರಂದು, ಕಟಕ ರಾಶಿಯನ್ನು ಜುಲೈ 16- 17ರಂದು, ಸಿಂಹ ರಾಶಿಯನ್ನು ಆಗಸ್ಟ್ 16-17ರಂದು, ಕನ್ಯಾ ರಾಶಿಯನ್ನು ಸೆಪ್ಟೆಂಬರ್ 16- 17ರಂದು, ತುಲಾ ರಾಶಿಯನ್ನು ಅಕ್ಟೋಬರ್ 16-17ರಂದು, ವೃಶ್ಚಿಕ ರಾಶಿಯನ್ನು ನವೆಂಬರ್ 15-16ರಂದು, ಧನು ರಾಶಿಯನ್ನು ಡಿಸೆಂಬರ್ 15-16 ರಂದು, ಮಕರ ರಾಶಿಯನ್ನು ಜನವರಿ 13-14ರಂದು, ಕುಂಭ ರಾಶಿಯನ್ನು ಫೆಬ್ರವರಿ 12-13ರಂದು, ಮೀನ ರಾಶಿಯನ್ನು ಮಾರ್ಚ್ 14-15ರಂದು ಪ್ರವೇಶಿಸುವನು.
 ರವಿಯು ಕಟಕದಿಂದ ಧನು ರಾಶಿಯಲ್ಲಿ ಸಂಚರಿಸುವ ಸಮಯವನ್ನು ದಕ್ಷಿಣಾಯಣವೆಂದೂ, ಮಕರದಿಂದ ಮಿಥುನರಾಶಿಯಲ್ಲಿ ಸಂಚರಿಸುವ ಸಮಯವನ್ನು ಉತ್ತರಾಯಣವೆಂದೂ ಕರೆಯುತ್ತಾರೆ.

ದಕ್ಷಿಣಾಯಣ
 ರವಿಯು ಭೂಮಧ್ಯರೇಖೆಗೆ ದಕ್ಷಿಣಾಭಿಮುಖವಾಗಿ ಸಂಚರಿಸುವ ಕಾಲ ದಕ್ಷಿಣಾಯಣ. ಇದು ಸಾಮಾನ್ಯವಾಗಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ ಪುಷ್ಯಮಾಸದವರೆಗೆ ಇರುತ್ತದೆ.

ಉತ್ತರಾಯಣ
 ರವಿಯು ಭೂಮಧ್ಯರೇಖೆಗೆ ಉತ್ತರಾಭಿಮುಖವಾಗಿ ಸಂಚರಿಸುವ ಕಾಲಕ್ಕೆ ಉತ್ತರಾಯಣ ಕಾಲವೆಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಮಾಘಮಾಸದಿಂದ ಭಾದ್ರಪದ ಮಾಸದವರೆಗೆ ಇರುತ್ತದೆ.

ದಕ್ಷಿಣಾಯಣದ ಆರು ತಿಂಗಳ ಸಮಯದಲ್ಲಿ ನಾವು ಮಾಡಿದ ಪಾಪಗಳೆಲ್ಲವೂ ಕ್ರೂರವಾಗಿ ಉತ್ತರಾಯಣದಲ್ಲಿ ಕಾಣಿಸಿಕೊಳ್ಳುವವು. ಅವುಗಳ ಪರಿಹಾರಕ್ಕಾಗಿ ನಾವು ವಿಶೇಷವಾಗಿ ಮಕರ ಸಂಕ್ರಮಣದಂದು ಜಪ, ತಪ, ದಾನಾದಿಗಳಿಗಳಿಂದ ಪರಿಹರಿಸಿಕೊಳ್ಳಬಹುದು.

ಮಕರ ಸಂಕ್ರಮಣ
 ರವಿಯು ಭೂಮಧ್ಯರೇಖೆಗೆ ಉತ್ತರಾಭಿಮುಖವಾಗಿ ಮಕರ ರಾಶಿಯಲ್ಲಿ ಸಂಚರಿಸುವ ಈ ಸಮಯ ಉತ್ತರಾಯಣ ಪುಣ್ಯಕಾಲ ಎನಿಸಿದೆ. ಈ ಸಂಕ್ರಮಣದ ಅಧಿದೇವತೆ ಸೂರ್ಯಾದಿ ದೇವತೆಗಳನ್ನು ಸಂಚರಿಸುವಂತೆ ಮಾಡುವ ಧ್ರುವರಾಯನನ್ನು ತನ್ನ ಕೊಂಡಿಯಲ್ಲಿ ಧರಿಸಿರುವ ಶಿಂಶುಮಾರ ರೂಪೀ ಪರಮಾತ್ಮ. 


ಸಂಕ್ರಮಣಗಳ ಮಹತ್ವ

 ರವಿಸಂಕ್ರಮಣೇ ಪ್ರಾಪ್ತೇ ನ ಸ್ನಾಯಾತ್ ಯಸ್ತು ಮಾನವಃ |
 ಸಪ್ತಜನ್ಮಸು ರೋಗೀ ಸ್ಯಾತ್ ನಿರ್ಧನಶ್ಚೈವ ಜಾಯತೇ ||

ಎನ್ನುವಂತೆ ಸಂಕ್ರಮಣದಂತಹ ಪರ್ವಕಾಲದಲ್ಲಿ ಸ್ನಾನ ಮಾಡದವನು ಏಳು ಜನ್ಮಗಳಲ್ಲಿ ರೋಗಿಯಾಗಿಯೂ, ದರಿದ್ರ ನಾಗಿಯೂ ಹುಟ್ಟುವನು. ಆದುದರಿಂದ ಸಂಕ್ರಮಣದಂತಹ ಪರ್ವಕಾಲಗಳಲ್ಲಿ ಅವಶ್ಯವಾಗಿ ಸ್ನಾನವನ್ನು ಮಾಡಲೇಬೇಕು. ಅಲ್ಲದೇ ಸೂರ್ಯನು ಈ ಕಾಲದಲ್ಲಿ ನಾವು ಮಾಡಿದ ಪುಣ್ಯವನ್ನು ಅನೇಕ ಜನ್ಮಗಳವರೆಗೆ ನಮಗೆ ತಲುಪಿಸುವನು ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಆದುದರಿಂದ ವಿಶೇಷವಾಗಿ ಸಂಕ್ರಮಣಗಳಂದು ಸ್ನಾನ, ಜಪ, ತಪ, ತರ್ಪಣ ಮುಂತಾದವುಗಳನ್ನು ಅವಶ್ಯವಾಗಿ ಮಾಡಬೇಕು. ಅದರಲ್ಲಿಯೂ ವಿಶೇಷವಾಗಿ ಮಕರ ಸಂಕ್ರಾತಿಯಂದು ಅವಶ್ಯವಾಗಿ ಸ್ನಾನ, ಜಪ, ತಪಾದಿಗಳನ್ನು ಅವಶ್ಯವಾಗಿ ಮಾಡಬೇಕು. 

ಸಂಕ್ರಮಣದ ಪುಣ್ಯಕಾಲ ಎಷ್ಟು ಸಮಯ?
 ಹನ್ನೆರಡು ಸಂಕ್ರಮಣಗಳಲ್ಲಿ ಮೇಷ ಮತ್ತು ತುಲಾ ಸಂಕ್ರಮಣಗಳ ಸಮಯದ ಹಿಂದಿನ ಹಾಗೂ ಮುಂದಿನ ಹತ್ತು ಘಳಿಗೆಗಳು ಪರ್ವಕಾಲ. (ಒಂದು ಘಳಿಗೆ 24 ನಿಮಿಷ).
 ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ಸಂಕ್ರಮಣಗಳ ಸಮಯದ ಹಿಂದಿನ ಮತ್ತು ಮುಂದಿನ ಹದಿನಾರು ಘಳಿಗೆಗಳು ಪರ್ವಕಾಲ. ಮಿಥುನ, ಕನ್ಯಾ, ಧನು, ಮೀನ ಸಂಕ್ರಮಣಗಳ ಸಮಯದ ಮುಂದಿನ ಹದಿನಾರು ಘಳಿಗೆಗಳು ಪರ್ವಕಾಲ.
 ಕರ್ಕಾಟಕ ಸಂಕ್ರಮಣದಲ್ಲಿ ಮೊದಲಿನ ಮುವ್ವತ್ತು ಘಳಿಗೆಗಳು ಅತಿ ಪುಣ್ಯತಮ ಕಾಲ ಎಂದೆನಿಸಿದರೆ, ಮಕರ ಸಂಕ್ರಮಣಕ್ಕಾಗುವಾಗ ಸಂಕ್ರಮಣದ ನಂತರದ ನಲವತ್ತು ಘಳಿಗೆಗಳು ಪುಣ್ಯಕಾಲವೆನಿಸಿದೆ.


 ಈ ಹನ್ನೆರಡು ಸಂಕ್ರಮಣಗಳಲ್ಲಿ ವಿಶೇಷವಾಗಿ ಕರ್ಕಾಟಕ ಮತ್ತು ಮಕರ ಸಂಕ್ರಮಣಗಳು ವಿಶೇಷ ಫಲಪ್ರದಗಳಾಗಿವೆ.
 ಈ ನಿಯಮವು ಹಗಲಿನಲ್ಲಿ ಸಂಕ್ರಮಣವಾದರೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ರಾತ್ರಿಯಲ್ಲಿ ಸಂಕ್ರಮಣವಾಗುವುದಾರೆ ಅಂದರೆ ರಾತ್ರಿಯಲ್ಲಿ ಸೂರ್ಯನು ಆಯಾ ರಾಶಿಯನ್ನು ಪ್ರವೇಶಿಸುವವನಾದರೆ ಆ ಸಮಯದಲ್ಲಿ ಪುಣ್ಯಕಾಲಗಳ ಆಚರಣೆಯಲ್ಲಿ ವ್ಯತ್ಯಾಸವನ್ನು ಹೇಳಿದ್ದಾರೆ. ಇಂತಹ ಸಮಯದಲ್ಲಿ ಹೇಗೆ ಮಾಡಬೇಕು ಎಂಬ ಸಂಶಯ ಬಂದರೆ, ಆಗ ಕರ್ಕಾಟಕ ಸಂಕ್ರಮಣವು ಸೂರ್ಯಾಸ್ತವಾದ ಮೇಲೆ ಪುನಃ ಮರುದಿನ ಸೂರ್ಯೋದಯವಾಗುವವರೆಗೆ ಯಾವ ಸಮಯದಲ್ಲಾದರೂ ಹಿಂದಿನ ದಿನವೇ ಅಂದರೆ ಆ ದಿನ ಬೆಳಿಗ್ಗೆ ಸೂರ್ಯೋದಯದಿಂದ ಪ್ರಾರಂಭಿಸಿ ಸೂರ್ಯಾಸ್ತದವರೆಗೆ ಪುಣ್ಯಕಾಲ. ಏಕೆಂದರೆ ರಾತ್ರಿಕಾಲದಲ್ಲಿ ಸ್ನಾನ, ದಾನ, ಜಪ, ತಪ, ತರ್ಪಣಾದಿಗಳಿಗೆ ನಿಷೇಧವಿದೆ. ಆದುದರಿಂದ ಆ ದಿನ ಬೆಳಿಗ್ಗೆ ಸಂಕ್ರಮಣ ಅಂಗವಾಗಿ ಸ್ನಾನ, ದಾನಾದಿ ಕಾರ್ಯಗಳನ್ನು ಮಾಡಬೇಕು. ಮಕರ ಸಂಕ್ರಮಣಕ್ಕಾದರೆ ಸೂಯರ್ಾಸ್ತದಿಂದ ರಾತ್ರಿಯ ಯಾವ ಕಾಲದಲ್ಲೇ ಆಗಲಿ ಮರುದಿನ ಸೂರ್ಯೋದಯದ ನಂತರವೇ ಪುಣ್ಯಕಾಲ.
 ಈ ಪುಣ್ಯಸಮಯದಲ್ಲಿ ಎಷ್ಟು ಘಳಿಗೆಗಳು ವಿಶೇಷ ಎಂದರೆ -

 ಯಾಃ ಯಾಃ ಸನ್ನಿಹಿತಾಃ ನಾಡ್ಯಾಃ ತಾಸ್ತಾಃ ಪುಣ್ಯತಮಾ ಮತಾಃ ||

ಎನ್ನುವ ವಾಕ್ಯದಂತೆ ಕರ್ಕಾಟಕ ಸಂಕ್ರಮಣಕ್ಕೆ ಸಮೀಪವಾದ ಹಿಂದಿನ ಇಪ್ಪತ್ತು ಘಳಿಗೆಗಳು ಅಂದರೆ ಎಂಟು ತಾಸು ಅತ್ಯಂತ ಪುಣ್ಯಕರವಾದ ಸಮಯ. ಹಾಗೆಯೇ ಮಕರ ಸಂಕ್ರಮಣಕ್ಕಾಗುವಾಗ ಮುಂದಿನ ಇಪ್ಪತ್ತು ಘಳಿಗೆಗಳು ಅತೀ ಪುಣ್ಯಕರವಾದ ಸಮಯವು.
 ಇಂತಹ ಅತೀ ಪುಣ್ಯಕರವಾದ ಸಮಯದಲ್ಲಿ ಸರ್ವರೂ ಸ್ನಾನ, ದಾನಾದಿಗಳನ್ನು ಅವಶ್ಯವಾಗಿ ಮಾಡಬೇಕು. 

 ಸಂಕ್ರಾಂತೌ ದತ್ತಾನಿ ಹವ್ಯಕವ್ಯಾನಿ ದಾತೃಭಿಃ |
 ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ ||

ಎನ್ನುವ ಪ್ರಮಾಣದಂತೆ ಸಂಕ್ರಮಣದ ಸಮಯದಲ್ಲಿ ಕೊಟ್ಟ ದಾನವು ಅನೇಕ ಜನ್ಮಗಳವರೆಗೆ ನಮ್ಮನ್ನು ತಲುಪುವಂತೆ ಸೂರ್ಯನು ಮಾಡುತ್ತಾನೆ.
 ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ |
 ತಿಲಭುಕ್ ತಿಲದಾತಾ ಚ ಷಟ್ತಿಲಾ ಪಾಪನಾಶಕಾಃ ||

ಎಂದು ಹೇಳಿದಂತೆ ಇಂದು ತಿಲವನ್ನು ಮೈಗೆ ಹಚ್ಚಿಕೊಂಡು ಸ್ನಾನವನ್ನು ಮಾಡುವುದು, ತಿಲದಿಂದ ಕೂಡಿದ ದೀಪವನ್ನು ಹಚ್ಚುವುದು, ತಿಲದಿಂದ ಹೋಮ ಮಾಡುವುದು, ತಿಲಮಿಶ್ರಿತ ಜಲದಿಂದ ಪಿತೃಗಳಿಗೆ ತರ್ಪಣ ಕೊಡುವುದು, ತಿಲಭಕ್ಷಣ, ತಿಲದಾನ ಹೀಗೆ ಆರು ಪ್ರಕಾರಗಳಿಂದ ಎಳ್ಳನ್ನು ಬಳಸುವವನು ಭಾಗ್ಯವಂತನಾಗುವನು ಎಂದು ಶಾಸ್ತ್ರದಲ್ಲಿ ಹೇಳಿರುವುದು.

ಎಳ್ಳಿನ ದಾನ:

 ಈ ದಿನದಂದು ನಾವು ಮಾಡಿದ ಪಾಪಗಳಿಂದ ಒದಗುವ ಕ್ರೂರತೆಯು ನಮ್ಮನ್ನು ಅಪಮೃತ್ಯುವಿಗೆ ಈಡು ಮಾಡಬಹುದು. ಇದರಿಂದ ಪಾರಾಗಲು ಇಂದು ಅವಶ್ಯವಾಗಿ ಎಳ್ಳನ್ನು ದಾನ ಮಾಡಲೇಬೇಕು. ಇಂತಹ ಒಂದು ಪ್ರಮಾಣದ ಪ್ರಕಾರವೇ ನಾವೆಲ್ಲರೂ ಇಂದು ಪರಸ್ಪರವಾಗಿ ಎಳ್ಳನ್ನು, ಅದರೊಡನೆ ಅಪಮೃತ್ಯುಪರಿಹಾರಕವಾದ ಬೆಲ್ಲವನ್ನು ಸೇರಿಸಿ, ದಾನ ಮಾಡುತ್ತೇವೆ. ದಾನ ತೆಗೆದುಕೊಳ್ಳುತ್ತೇವೆ. ಇಂದು ನಮ್ಮ ಸ್ತ್ರೀಯರು ಎಳ್ಳನ್ನು ಬೀರುವುದು ಮಾಡುತ್ತಾರೆ. ಹಾಗೆಯೇ ಕಬ್ಬು, ಬಾರೆ ಹಣ್ಣು ಇವುಗಳನ್ನು ಸೇರಿಸುತ್ತಾರೆ. ಈ ದಿವಸ ಕುಂಬಳಕಾಯಿಯ ದಾನವೂ ವಿಶೇಷ ಫಲಪ್ರದವಾಗಿದೆ. ಹೀಗೆ ಈ ಪುಣ್ಯಕಾಲದಲ್ಲಿ ಮಾಡುವ ಎಲ್ಲಾ ಕಾರ್ಯವು ನಮಗೊದಗುವ ಅಪಮೃತ್ಯುವನ್ನು ಪರಿಹರಿಸಿ, ನಮ್ಮ ಪುಣ್ಯವನ್ನು ವರ್ಧಿಸುವುದು. ಅಲ್ಲದೇ ಈ ಸಮಯದಲ್ಲಿ ಅಧಿಕಾರಿಗಳು ತಮ್ಮ ಪಿತೃದೇವತೆಗಳಿಗೆ ತಿಲತರ್ಪಣವನ್ನು ಅವಶ್ಯವಾಗಿ ಕೊಡಬೇಕು. ಇದು ಮಹಾಲಯದಂತೆ ವಿಹಿತ.

 ಈ ವರ್ಷವೂ ಪುಷ್ಯ ಮಾಸದ ಶುಕ್ಲ ಪಕ್ಷ ತೃತಿಯಾ ದಿ||14-1-2013ರಂದು ಮಧ್ಯಾಹ್ನ 12-05 ಕ್ಕೆ ಸೂರ್ಯನು ಮಕರ ರಾಶಿ ಪ್ರವೇಶಿಸಲಿದ್ದು, ಮಧ್ಯಾಹ್ನ 12-05 ನಿ. ದಿಂದ ಸೂರ್ಯಾಸ್ತದವರೆಗೆ ಉತ್ತರಾಯಣ ಪುಣ್ಯಕಾಲವಿರುವುದು. ಈ ಸಮಯದಲ್ಲಿ ಸರ್ವರೂ ಸ್ನಾನ, ಜಪ, ತಪಗಳನ್ನು, ಅಧಿಕಾರಿಗಳು ಪಿತೃತರ್ಪಣಾದಿಗಳು ಕಾರ್ಯಗಳನ್ನು ಮಾಡಬೇಕು. ಈ ಕಾರ್ಯಗಳು ವಿಶೇಷ ಪುಣ್ಯದಾಯಕಗಳಾಗಿವೆ.

 ಹೀಗೆ ಮಕರ ಸಂಕ್ರಮಣವು ದಾನ, ತರ್ಪಣಾದಿಗಳಿಗೆ ಅತ್ಯುಪಯುಕ್ತವೆಂದೆನಿಸಿದ್ದು, ಸ್ನಾನ, ಜಪಾದಿಗಳಿಂದ ಮಹಾಫಲವು ಸಂಪಾದನೆಯಾಗುವುದು. ವಿಶೇಷವಾಗಿ ಇಂದು ಮಾಡುವ ಆಮಾನ್ನದಾನ, (ಅಕ್ಕಿ), ಕುಂಬಳಕಾಯಿಯ ದಾನಾದಿಗಳಿಂದ ಮಹಾಪುಣ್ಯವು ಲಭ್ಯವಾಗುವುದು. `ಅಯನೇ ಕೋಟಿ ಪುಣ್ಯಂ ಚ` ಎನ್ನುವ ವಾಕ್ಯದಂತೆ ಈ ಕಾಲದಲ್ಲಿ ಮಾಡುವ ಎಲ್ಲಾ ದಾನ, ಕಾರ್ಯಗಳಿಗೆ ಅನಂತಪುಣ್ಯ ದೊರಕುವುದು. ಆದುದರಿಂದಲೇ ಅಲ್ಲವೇ! ಭೀಷ್ಮರು ಉತ್ತರಾಯಣ ಪುಣ್ಯಕಾಲ ಬರುವವರೆಗೆ ಜೀವವನ್ನು ಹಿಡಿದಿದ್ದು ಎಂದ ಮೇಲೆ ಸಾಧಕನಿಗೆ ಸೂಕ್ತ ಕಾಲವಲ್ಲವೇ ಈ ಉತ್ತರಾಯಣ ಪುಣ್ಯಕಾಲ.

--
ರಂಗನಾಥಾಚಾರ್ಯ ಸಾಲಗುಂದಿ, ಸಿಂಧನೂರ

No comments:

Post a Comment