Wednesday, March 27, 2013

ಅಂಶ, ಆವೇಶ ಮತ್ತು ಅವತಾರ



ಪರಮಾತ್ಮನೆಂದರೆ ಸಾಕ್ಷಾತ್ ಶ್ರೀರಮಾದೇವಿಯರ ಸಹಿತ ಶ್ರೀಮನ್ನಾರಾಯಣನೆಂದು ತಿಳಿಯಬೇಕು


ಅವತಾರ:



  •  ಪರಮಾತ್ಮ ಹಾಗೂ ಪರಮಾತ್ಮನ ಅವತಾರಗಳಿಗೂ, ಪರಮಾತ್ಮ ಹಾಗೂ ಪರಮಾತ್ಮನ ಅವಯವಗಳಿಗೂ ಯಾವುದೇ ಭೇದವಿಲ್ಲ. ಅಂದರೆ ಪರಮಾತ್ಮನ ಎಲ್ಲಾ ಅವಯವಗಳೂ ಪರಮಾತ್ಮನ ಎಲ್ಲಾ ಸೃಷ್ಟ್ಯಾದಿ ಅಷ್ಟ ಕರ್ತೃತ್ವವನ್ನೂ ಮಾಡುತ್ತವೆ. ಪರಮಾತ್ಮನ ಪರಮಾತ್ಮನ ಕಪ್ಪುಕೇಶಾವತಾರವಾದ ಕೃಷ್ಣಾವತಾರವು ಪರಮಾತ್ಮನ ಎಲ್ಲಾ ವ್ಯಾಪಾರಗಳನ್ನೂ ಮಾಡಿತು. ಅದಕ್ಕೇ ಅವನನ್ನು ನಖ-ಶಿಖ ಪರಿಪೂರ್ಣ, ಸ್ವಗತ-ಭೇದ ವಿವರ್ಜಿತ ಎನ್ನುತ್ತಾರೆ.
  •  ಇದೇ ರೀತಿ ವಾಯುದೇವರು ಹಾಗೂ ವಾಯುದೇವರ ಅವತಾರಗಳಿಗೂ (ಹನುಮ, ಭೀಮ ಮಧ್ವ) ಯಾವುದೇ ಭೇದವಿಲ್ಲ. ಏಕೆಂದರೆ ಪರಮಾತ್ಮನು ಹೇಗೆ ಅಪ್ರಾಕೃತ ಪರಿಪೂರ್ಣನೋ ಹಾಗೆ ನಮ್ಮ ವಾಯುದೇವರೂ ಸಹ ಪ್ರಾಕೃತವಾಗಿ ಪರಿಪೂರ್ಣರು. ಆದರೆ ಅವಯವಗಳು ಮಾತ್ರ ಭಿನ್ನ-ಭಿನ್ನವೇ.
    • (ನಿಮ್ಮ ಅವಗಾಹನೆಗಾಗಿ: ಪರಮಾತ್ಮ ಅಣುರೇಣು ತೃಣಕಾಷ್ಟ ಅಪ್ರಾಕೃತವಾಗಿ ಪರಿಪೂರ್ಣ, ಆದರೆ ವಾಯುದೇವರು 32 ಸಲ್ಲಕ್ಷಣಗಳಿಂದ ಸಂಪನ್ನವಾದ ಪ್ರಾಕೃತ ದೇಹದಿಂದ ಪರಿಪೂರ್ಣರು).
  •  ಯಾವುದೇ ಋಜುಜೀವಿಯು (ಮೂರನೇ ಕಕ್ಷೆ) ಅವತರಿಸಿದಾಗ ಪರಮಾತ್ಮನೆಡೆಗೆ ಅವರಿಗಿರುವ ಅವರ ಜ್ಞಾನ, ಭಕ್ತಿ, ವೈರಾಗ್ಯಗಳು ಯಾವುದೇ ಕಾರಣಕ್ಕೂ ಹ್ರಾಸ (ಕಮ್ಮಿ) ಆಗುವುದಿಲ್ಲ. ವಾಯುದೇವರಿಗೆ ಪ್ರಾರಬ್ಧ ಅನ್ನೋದು ಇಲ್ಲವೇ ಇಲ್ಲ..! ಏಕೆಂದರೆ, ಅವರ ಲಿಂಗ ಶರೀರವು ದಗ್ಧಪಟದಂತಿದ್ದು (ಇದ್ದೂ ಇಲ್ಲದಂತೆ)  ಪ್ರಾರಬ್ಧವಿದೆಯೆಂದರೆ ಕೇವಲ ಸುಖ ಪ್ರಾರಬ್ಧವಿದೆಯೆಂದು ತಿಳಿಯಬೇಕು. ಆದ್ದರಿಂದ ವಾಯುದೇವರ ಎಲ್ಲಾ ಅವತಾರಗಳನ್ನೂ ಸಂಪೂರ್ಣ ಅವತಾರಗಳೆನ್ನುತ್ತೇವೆ. ಹೀಗಾಗಿ ವಾಯುದೇವರು ಅವತಾರ ರೂಪದಿಂದಲೂ ಮೂಲರೂಪದಷ್ಟೇ ಸರಿಸಮಾನವಾಗಿ ವ್ಯಾಪಾರ ಮಾಡಲು ಸಮರ್ಥರು.
  •  ಆದರೆ ತದನಂತರದ ಕಕ್ಷೆಯ ದೇವತೆಗಳು ಅವತರಿಸಿದಾಗ ಅವರಿಗೆ ಪ್ರಾರಬ್ಧ ಭೋಗವುಂಟು. ಆಗ ಭೂಸಂಪರ್ಕದಿಂದಾಗಿ ಅವರ ಜ್ಞಾನ, ಭಕ್ತಿ, ವೈರಾಗ್ಯಗಳಲ್ಲಿ ಹ್ರಾಸ ಉಂಟಾಗುತ್ತದೆ. ಹೀಗಾಗಿ ವಾಯುದೇವರ ನಂತರದಲ್ಲಿಯ ಕಕ್ಷೆಯಲ್ಲಿ ಯಾವುದೇ ದೇವತೆಗಳಾಗಲೀ ಭೂಮಿಯಲ್ಲಿ ಅವತರಿಸಿದಾಗ ಮೂಲರೂಪದಷ್ಟೇ ಯೋಗ್ಯತೆಯಿಂದ ವ್ಯಾಪಾರ ಮಾಡಲು ಅಸಾಧ್ಯ. ಪರಮಾತ್ಮನ ಸಂಕಲ್ಪಕ್ಕನುಗುಣವಾಗಿ ಮೂಲರೂಪದ ಸಾಮಥ್ರ್ಯದಲ್ಲಿಯ ಎಷ್ಟು ಪ್ರಮಾಣದ ಅಂಶವನ್ನು ಗ್ರಹಣ ಮಾಡಿಕೊಂಡು ಅವತರಿಸಿರುತ್ತಾರೋ ಅಷ್ಟೇ ಪ್ರಮಾಣದ ವ್ಯಾಪಾರವನ್ನು ಮಾಡಲು ಮಾತ್ರ ಸಮರ್ಥರು. ಪರಮಾತ್ಮ ಹಾಗೂ ವಾಯುದೇವರ ಅನುಗ್ರಹದಿಂದ ಆಯಾ ಕಾಲಕ್ಕೆ, ಆಯಾ ಅವತಾರಕ್ಕೆ, ಅವರವರ ಯೋಗ್ಯತೆಗೆ ತಕ್ಕಂತೆ ಅವರು ವ್ಯಾಪಾರ ಮಾಡುತ್ತಾರೆಂದು ತಿಳಿಯಬೇಕು. ಇದನ್ನೇ ಅಂಶ ಎನ್ನುತ್ತಾರೆ.
 
ಅಂಶ: 
  •  ಮೂಲರೂಪದ ಗುಣಗಳಲ್ಲಿಯ ಕೆಲವು ಅಂಶಗಳಿಂದ ಮಾತ್ರ ಭೂಮಿಯಲ್ಲಿ ಅವತರಿಸಿ ಪರಮಾತ್ಮನ ಇಚ್ಛೆ ಹಾಗೂ ಆಜ್ಞಾನುಸಾರ ಹಾಗೂ ಪ್ರಾರಬ್ಧಕ್ಕನುಗುಣವಾಗಿ ತಮ್ಮ ವ್ಯಾಪಾರಗಳನ್ನು ಮಾಡುವರು. 5ನೇ ಕಕ್ಷೆಯಿಂದ 29ನೇ ಕಕ್ಷೆಯವರೆಗಿನ ದೇವತೆಗಳಿಗೆ ಈ ಅಂಶ ಎನ್ನುವುದು ಅನ್ವಯಿಸುತ್ತದೆ.
  • ವಿಶೇಷ ಸೂಚನೆ: 5-18 ನೇ ಕಕ್ಷೆಯ ತತ್ವಾಭಿಮಾನಿ ದೇವತೆಗಳು ಮತ್ತು 19-29ನೇ ಕಕ್ಷೆಯ ಅತಾತ್ವಿಕ (ಕರ್ಮಜ) ದೇವತೆಗಳು. ಆದರೆ ವಿಶೇಷ ಸಂದರ್ಭಗಳಲ್ಲಿ ಅವರ ಯೋಗ್ಯತೆಗೂ ಮೀರಿದ ಮಹಿಮೆಗಳನ್ನು, ವ್ಯಾಪಾರಗಳನ್ನು ಮಾಡುತ್ತಾರೆ. ಇದನ್ನೇ ಆವೇಶ ಎನ್ನುತ್ತಾರೆ.

ಆವೇಶ:



ಆವೇಶವೆಂದರೆ, ಆಗಾಗ ಬಂದು ಹೋಗುವುದು ಎನ್ನಬಹುದು.
  •  ಇದಕ್ಕೆ ಉತ್ತಮ ಉದಾಹರಣೆಯೆಂದರೆ, ದೆವ್ವ-ಭೂತಗಳು ಬಡಿಕೊಂಡಾಗ ಮನುಷ್ಯರು ಮಾಡುವ ಚೇಷ್ಟೆಗಳು. ಈ ಚೇಷ್ಟೆಗಳನ್ನು ಮಾಡುವುದು ಮನುಷ್ಯನೇ ಆದರೂ ಅವನೊಳಗೆ ನಿಂತು ಮಾಡಿಸುತ್ತಿರುವುದು ಮಾತ್ರ ದೆವ್ವ-ಭೂತಗಳು. ಆಗ ಅವುಗಳನ್ನು ಹೊಡೆದೋಡಿಸಲು ಅವುಗಳಿಗೆ ಪೆಟ್ಟು ಹಾಕುತ್ತೇವೆ. ಆದರೆ ಪೆಟ್ಟು ಯಾರಿಗೆ ಬೀಳುತ್ತದೆ? ಮನುಷ್ಯನಿಗೇ ಅಲ್ಲವೇ? ಅಂದರೆ ತತ್ಕಾಲದಲ್ಲಿ ಆ ಮನುಷ್ಯನು ಮಾಡುತ್ತಿರುವ ಯಾವುದೇ ಕೆಲಸ(ಕರ್ಮ)ಗಳ ಮೇಲೂ ಅವನಿಗೆ ಸ್ಮೃತಿಯಾಗಲೀ, ಹಿಡಿತವಾಗಲೀ ಅಥವಾ ವಿವೇಚನೆಯಾಗಲೀ ಇರುವುದಿಲ್ಲ. ಆದರೆ ಆ ಕಾಲದಲ್ಲಗುವ ಯಾವುದೇ ಕರ್ಮಫಲಗಳು ಮಾತ್ರ ಅವನೇ ಅನುಭವಿಸಬೇಕು. ಸ್ವಲ್ಪ ಸಮಯದ ನಂತರ ಆ ಭೂತ ಚೇಷ್ಟೆಯು ಮಾಯವಾದಾಗ ನಾನೇನು ಮಾಡಿದೆ? ನನಗೊಂದೂ ನೆನಪಿಲ್ಲವಲ್ಲ, ಎಂದು ಅದೇ ಮನುಷ್ಯನೇ ಕೇಳುತ್ತಾನೆ.
  •  ಅಂದರೆ ಜೀವಿಯ ಯೋಗ್ಯತೆಗೂ ಮೀರಿದ ವ್ಯಾಪಾರಾದಿಗಳು ನಡೆಯುತ್ತಿದೆಯೆಂದರೆ ಆಗ ಆ ಕ್ಷಣದಲ್ಲಿ ಆ ಜೀವಿಯಲ್ಲಿ, ಆ ಜೀವಿಗಿಂತಲೂ ಉತ್ತಮರ ಆವೇಶವಾಗಿದೆಯೆಂದು ತಿಳಿಯಬೇಕೇ ವಿನಃ ಆ ಕ್ಷಣದಲ್ಲಿ ನಡೆದ ವಿಶೇಷ ಕರ್ಮದಿಂದ ಜೀವಿಯ ಯೋಗ್ಯತೆ ನಿರ್ಧರಿಸಲಾಗದು.
  •  ಋಜು ಜೀವಿಗಳ ವ್ಯತಿರಿಕ್ತ ಬೇರೆ ಯಾವುದೇ ಜೀವಿಗಳಿಗೂ ಪರಮಾತ್ಮನಿಂದ ನೇರವಾಗಿ ಉಪದೇಶ ಪಡೆದುಕೊಳ್ಳುವ ಯೋಗ್ಯತೆಯಾಗಲೀ, ಸಾಮಥ್ರ್ಯವಾಗಲೀ ಇಲ್ಲಾ.!

ಶ್ರೀಮದಾಚಾರ್ಯರ ಸಿದ್ಧಾಂತದ ರೀತ್ಯಾ ಅಂತಹ ಕಾಲಗಳಲ್ಲಿ ಆವೇಶ ಪ್ರಬಲವಾಗಿದ್ದು ಯಾವ ದೇವತೆಯ ಆವೇಶವಿರುತ್ತದೆಯೋ ಜೀವಿಯು ಅವರಂತೆಯೇ ವರ್ತಿಸುತ್ತಾನೆ. ಈ ಸಂಬಂಧ ಅನೇಕ ಉದಾಹರಣೆಗಳನ್ನು ನೋಡಬಹುದಾಗಿದೆ.

ಉದಾ: 1)
ಅರ್ಜುನನಲ್ಲಿ ನರನ (ಆದಿಶೇಷ) ಆವೇಶ ನಿರಂತರವಾಗಿದ್ದ ಪ್ರಯುಕ್ತ, ಮಹಾಭಾರತ ಯುದ್ಧ ಕಾಲದಲ್ಲಿ ಸ್ವರೂಪತಃ ಅರ್ಜರುನನಿಗಿಂತಲೂ ಉತ್ತಮರಾದ ಅಶ್ವತ್ಥಾಮಾಚಾರ್ಯರು ತಮಗಿಂತಲೂ ಸ್ವರೂಪತಃ ಕಡಿಮೆಯಾದ ಅಜರ್ುನನಿಂದ ಸೋಲನ್ನನುಭವಿಸಿದ್ದುಂಟು.

ಉದಾ: 2)
ಸುಗ್ರೀವನಿಗಿಂತ ಮುಖ್ಯಪ್ರಾಣರಾಯರು ಎಷ್ಟೇ ಶ್ರೇಷ್ಠರಾಗಿದ್ದರೂ ಸಹ ಸುಗ್ರೀವನಿಗೆ ಮಂತ್ರಿಯೆನಿಸಿದರು. ಕಾರಣ ಇಷ್ಟೇ, ಸುಗ್ರೀವನಲ್ಲಿ ಮುಖ್ಯಪ್ರಾಣರಾಯರಿಗಿಂತಲೂ ಪದಪ್ರಯುಕ್ತ ಉತ್ತಮರಾದ ಬ್ರಹ್ಮದೇವರ ನಿರಂತರ ಆವೇಶವಿತ್ತು.

ಉದಾ: 3)
ಚಂದ್ರನಲ್ಲಿ ಬ್ರಹ್ಮದೇವರ ಆವೇಶ ನಿರಂತರವಿದ್ದುದರಿಂದ ಚಂದ್ರನೂ ಕೂಡ ಬ್ರಹ್ಮಾಂಶನೆಂದು ಕರೆಯಲ್ಪಡುತ್ತನೆ. ಇದರರ್ಥ ಚಂದ್ರನಲ್ಲಿ ಬ್ರಹ್ಮದೇವರ ವಿಶೇಷ ಆವೇಶವೇ ವಿನಃ ಚಂದ್ರ ಬ್ರಹ್ಮದೇವರ ಅವತಾರವೆಂದರ್ಥವಲ್ಲ.


ಉದಾ: 4)
ಗರುಡ-ಶೇಷ-ರುದ್ರ ಇವರುಗಳಿಂದ ಕೃಷ್ಣಪತ್ನಿಯೆನಿಸಿದ ಜಾಂಬವತಿಯು ಸ್ವರೂಪದಲ್ಲಿ ಕಡಿಮೆಯಿದ್ದರೂ ರಮಾದೇವಿಯರ ಆವೇಶದಿಂದ ಶೇಷದೇವರಿಗೆ ಸಮಳೆನಿಸುತ್ತಾಳೆ.


ಉದಾ: 5)
ಅರ್ಜುನಾವತಾರಿಗಳಾದ ಜಯತೀರ್ಥರಲ್ಲಿ (ಟೀಕಾರಾಯರು) ಶೇಷದೇವರ ವಿಶೇಷ ಆವೇಶವಿದ್ದ ಕಾರಣ ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳಿಗೆ ಟೀಕೆ ರಚಿಸಲು ಸಾಧ್ಯವಾಯಿತು.




ಭಾಷ್ಯತತ್ವವಾ ವಿಸ್ತಾರ ಮಾಳ್ಪರಾ| ದೋಷದೂರರಾ ಆದಿಶೇಷಾವೇಶರಾ||
ಉದಾ: 6)
ಅದ್ಯಪಿ ಮಂತ್ರಾಲಯ ಕ್ಷೇತ್ರದಲ್ಲಿ ವಿರಾಜಮಾನರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ನಿರಂತರ ಹರಿವಾಯುಗಳ ಆವೇಶವಿದ್ದುದರಿಂದ ಸ್ವರೂಪತಃ 19ನೇ ಕಕ್ಷೆಯ ಕರ್ಮಜ ದೇವತೆಗಳಾಗಿದ್ದರೂ ಸಹ 15ನೇ ಕಕ್ಷೆಯ ಅಗ್ನಿದೇವ, ಭೃಗುಋಷಿ ಮತ್ತು ಪ್ರಸೂತಿದೇವಿಯರು ಇವರುಗಳಿಗೆ ಸಮರೆನಿಸುತ್ತಾರೆ.


ವಿಶೇಷ ಸೂಚನೆ:

ಈ ಆವೇಶಗಳು ಇರುವುದರಿಂದ ಯೋಗ್ಯತೆ ಹೆಚ್ಚು ಕಂಡಂತೆ ಅನಿಸಿದರೂ ಅದು ದೇಶತಃ, ಕಾಲತಃ ಮಾತ್ರ. ಆದರೆ ಗುಣತಃ ಅಲ್ಲವೆಂದು ತಿಳಿಯಬೇಕು.

  • ಶೇಷಾವತಾರಿಗಳಾದ ಬಲರಾಮದೇವರಿಗೆ ಪರಮಾತ್ಮನ ಶುಕ್ಲಕೇಶದ ಆವೇಶವಿದ್ದ ಕಾರಣ ಸ್ವರೂಪದಿಂದ ಉತ್ತಮರಾದ ವಾಯುದೇವರ ಅವತಾರಿಗಳಾದ ಭೀಮಸೇನದೇವರಿಗೆ ಗುರುವೆನಿಸಿದ್ದರು. ಗದಾಯುದ್ಧದ ಕಲಿಕೆಯ ವೇಳೆಯಲ್ಲಿ ಭೀಮಸೇನದೇವರು, ಬಲರಾಮದೇವರಿಗೆ ಪೆಟ್ಟು ಕೊಡುತ್ತಿದ್ದರಂತೆ. ಮತ್ತು ಬಲರಾಮದೇವರಲ್ಲಿ ಪರಮಾತ್ಮನ ಶುಕ್ಲಕೇಶಾವೇಶವು ಜಾಗೃವಾದಾಗ ಅದನ್ನರಿತ ಭೀಮಸೇನದೇವರು ಬಲರಾಮದೇವರಿಗೆ ಶರಣಾಗುತ್ತಿದ್ದರಂತೆ.


     - ಈ ವಿಷಯಗಳನ್ನು ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಉಲ್ಲೇಖಿಸಿದ್ದಾರೆ.
 
  • ಯಾಜ್ಞವಲ್ಕ್ಯರ ವಿಷಯದಲ್ಲೂ ಇದೇ ಆದದ್ದು, ಯಾಜ್ಞವಲ್ಕ್ಯರು ಸ್ವರೂಪತಃ 19 ನೇ ಕಕ್ಷದ ದೇವತೆಗಳಾದ (ಪ್ರಮಾಣ: ವಿಜಯಪ್ರಭುಗಳ ತಾರತಮ್ಯ ಸುಳಾದಿ) ಕಾರಣ ಅಪೌರುಷೇಯವೆನಿಸಿದ ವೇದವನ್ನು ಭಗವಂತನಾದ ಸೂರ್ಯನಾರಾಯಣನಿಂದ ನೇರವಾಗಿ (ಶುಕ್ಲಯಜುರ್ವೇದವನ್ನು) ಸ್ವೀಕರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಆ ಕ್ಷಣದಲ್ಲಿ ಚತುರ್ಮುಖ ಬ್ರಹ್ಮದೇವರು ಯಾಜ್ಞ್ವಲ್ಕ್ಯರಲ್ಲಿ ಆವಿಷ್ಟರಾಗಿ ಶುಕ್ಲಯಜುರ್ವರೇದವನ್ನು ಭಗವಂತನಾದ ಸೂರ್ಯನಾರಾಯಣನಿಂದ ಸ್ವೀಕರಿಸಿದರು. ಮತ್ತು ಆ ಕೀರ್ತಿಯನ್ನು ಯಾಜ್ಞವಲ್ಕ್ಯರಿಗೆ ನೀಡಿದರು. ಇದಲ್ಲವೇ ಬ್ರಹ್ಮದೇವರಂತರ್ಗತ ಪರಮಾತ್ಮನು ಯಾಜ್ಞವಲ್ಕ್ಯರಿಗೆ ಮಾಡಿದ ಅನುಗ್ರಹ ?
ಆದ್ದರಿಂದ ವೇದವನ್ನು ಸ್ವೀಕರಿಸಲು ಆ ಕ್ಷಣದಲ್ಲಿ ಬ್ರಹ್ಮದೇವರು ಯಾಜ್ಞವಲ್ಕ್ಯರಲ್ಲಿ ಆವಿಷ್ಟರಾಗಿದ್ದರು ಮತ್ತು ಸ್ವೀಕರಿಸಿದ ನಂತರ ಆ ಆವೇಶದ ಕ್ಷಣ ಮುಗಿಯಿತು. ಹೀಗಿರುವಾಗ ಅಂಶಾವತಾರವೆಂದು ಹೇಳುವುದೂ ತರವಲ್ಲ. ಹಾಗೆ ಹೇಳಿದರೆ ಒಂದಶದಿಂದ ಬ್ರಹ್ಮದೇವರು ಯಾಜ್ಞವಲ್ಕ್ಯರಾಗಿ ಅವತರಿಸಿದರು ಎಂದಂತಾಗುತ್ತದೆ. ಆದ್ದರಿಂದ ಇಲ್ಲಿ ಅಂಶಾವತಾರ ಎನ್ನುವ ಶಬ್ದಕ್ಕೆ ಅರ್ಥವಿಲ್ಲಾ.
ಶ್ರೀಮದಾಚಾರ್ಯರ ಸಿದ್ಧಾಂತದ ರೀತ್ಯಾ ಬ್ರಹ್ಮದೇವರಿಗೆ ಅವತಾರ ಇಲ್ಲ..!


ಮೂಲ ಸಂಗ್ರಹ: ಮುಂಡರ್ಗಿ ಶ್ರೀ ಪ್ರಾಣೇಶರಾಯರು
ಅಕ್ಷರಜೋಡಣೆ: ಡಿ.ಕೆ.ಅರುಣ್ ಭಾರದ್ವಾಜ್ ಕವಿತಾಳ

  

2 comments:

  1. gurugaligi pranamagalu, olleya vivarne ,thumba danyvadagalu

    ReplyDelete
  2. ತುಂಬಾ ಚೆನ್ನಾಗಿ ಮೂಡಿಬಂದಿವೆ.ವಂದನೆಗಳು.

    ReplyDelete