Thursday, March 7, 2013

ಭಾಗವತದಲ್ಲಿ ರುದ್ರದೇವರ ಸ್ಥಾನಮಾನ ಶ್ರೀಮದ್ಭಾಗವತವು ಭಗವಂತನಿಗೆ ಸಂಬಂಧಿಸಿದ ಗ್ರಂಥವಾದರೂ ಪ್ರಾಸಂಗಿಕವಾಗಿ ಅನೇಕ ಭಾಗವತರ(ಭಗವದ್ ಭಕ್ತರ) ವಿಚಾರಗಳು ಅಲ್ಲಿ ಪ್ರಸ್ತುತವಾಗಿವೆ. ಅಂತಹ ಭಾಗವತ ರಲ್ಲೊಬ್ಬರಾದ ರುದ್ರದೇವರ ವಿಚಾರವೂ ಭಾಗವತದಲ್ಲಿ ಸಾಕಷ್ಟು ಕಡೆ ನಿರೂಪಿತವಾಗಿದೆ. ರುದ್ರದೇವರ ಪ್ರಸ್ತಾಪವಿಲ್ಲದ ಸ್ಕಂಧವೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿ ಪ್ರಧಾನವಾಗಿ ರುದ್ರದೇವರ ಉತ್ಪತ್ತಿ ಹಾಗೂ ವಿಷ್ಣು-ರುದ್ರರ ಸಂಬಂಧದ ಬಗ್ಗೆ ನಿರೂಪಿತವಾದ ಕೆಲವು ಅಂಶಗಳು ಇಲ್ಲಿ ಪ್ರಸ್ತಾಪಗೊಂಡಿವೆ.


ರುದ್ರದೇವರ ಜನ್ಮ
 ಪ್ರಲಯಕಾಲ ಮುಗಿದ ಬಳಿಕ ಸೃಷ್ಟಿಮಾಡಲಪೇಕ್ಷಿಸಿದ ಶ್ರೀಹರಿಯು ಮೊದಲು ತತ್ವಗಳನ್ನು, ತತ್ವಾಭಿಮಾನಿ ದೇವತೆಗಳನ್ನು ಸೃಷ್ಟಿ ಮಾಡುತ್ತಾನೆ. ಆನಂತರ ಆ ತತ್ವಾಭಿಮಾನಿ ದೇವತೆಗಳು ಬ್ರಹ್ಮಾಂಡವನ್ನು ಸೃಷ್ಟಿ ಮಾಡಲು ಅಶಕ್ತರಾಗಿ ಶ್ರೀಹರಿಯ ಬಳಿಗೆ ಹೋಗಿ ನಮಗೆ ಒಂದು ನೆಲೆಬೇಕು. ಅದಕ್ಕಾಗಿ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿಕೊಡು ಎಂದು ಪ್ರಾರ್ಥಿಸುವರು. ಅವರ ಪ್ರಾರ್ಥನೆಯಂತೆ ಪರಮಾತ್ಮನು ಬ್ರಹ್ಮಾಂಡವನ್ನು ಸೃಷ್ಟಿಮಾಡುವನು. ಆನಂತರ ದೇವತೆ ಗಳೆಲ್ಲರೂ ಭಗವಂತನೊಂದಿಗೆ ಬ್ರಹ್ಮಾಂಡವನ್ನು ಪ್ರವೇಶಿಸುವರು. ಆ ಬ್ರಹ್ಮಾಂಡದೊಳಗಿನ ನೀರಿನಲ್ಲಿ ಮಲಗಿದ ಭಗವಂತನ ನಾಭಿಯಲ್ಲಿ ಲೋಕಾಧಾರವಾದ ಹದಿನಾಲ್ಕು ದಳಾತ್ಮಕವಾದ ಒಂದು ಪದ್ಮ ಹುಟ್ಟುತ್ತದೆ. ಅದರಲ್ಲಿ ಮತ್ತೊಮ್ಮೆ ಬ್ರಹ್ಮದೇವರು ಜನಿಸುವರು. ಅನಂತರ ಆ ಬ್ರಹ್ಮದೇವರಿಂದ ಪುನಃ ರುದ್ರಾದಿದೇವತೆಗಳ ಸೃಷ್ಟಿಯು ಪ್ರಾರಂಭವಾಗುತ್ತದೆ. ಇದು ಬ್ರಹ್ಮಸೃಷ್ಟಿ. ಇದು ರುದ್ರಾದಿದೇವತಾ ತಾರತಮ್ಯಾನುಸಾರಿಯಾದ ಸೃಷ್ಟಿ. ಈ ಸೃಷ್ಟಿಯ ಆದಿಯಲ್ಲಿ ಬ್ರಹ್ಮದೇವರು 'ನಾನು ಪರಮಾತ್ಮನ ದಾಸ'ಎಂದು ಅಹಂಮತಿಯನ್ನು ಪಡೆದಾಗ ರುದ್ರದೇವರು ಜನಿಸುವರು. ಅವರೊಂದಿಗೆ ಗರುಡ, ಶೇಷರು ಜನಿಸುವರು. ಅನಂತರ ಉಮಾ, ಇಂದ್ರ, ಕಾಮ ಮೊದಲಾದ ಎಲ್ಲಾ ದೇವತೆಗಳೂ ತಾರತಮ್ಯಕ್ಕೆ ಅನುಸಾರವಾಗಿ ಜನಿಸುವರು. 

 ಭಾಗವತ ತೃತೀಯ ಸ್ಕಂಧದಲ್ಲಿ 'ಸಸರ್ಜಾಗ್ರೇಖಂಧತಾಮಿಸ್ರಂ' ಇತ್ಯಾದಿಯಾಗಿ ನಿರೂಪಿತ ವಾದದ್ದು ಅರ್ವಾಚೀನ ಸೃಷ್ಟಿ. ಇದು ತಾರತಮ್ಯಾನುಗುಣವಲ್ಲ. ಈ ಸೃಷ್ಟಿಯಲ್ಲಿ ಬ್ರಹ್ಮ ದೇವ ರಿಂದ ಮೊದಲು ಐದು ವಿಧವಾದ ಅವಿದ್ಯೆಯು ಹುಟ್ಟುತ್ತದೆ. ಅನಂತರ ಬ್ರಹ್ಮದೇವರು ತಮ್ಮ ಮನಸ್ಸಿನಿಂದ ಸನಕ, ಸನಂದನ, ಸನಾತನ, ಸನತ್ಕುಮಾರ ಎಂಬ ಮಕ್ಕಳನ್ನು ಹುಟ್ಟಿಸಿ, ಪ್ರಜಾ ಸೃಷ್ಟಿಯನ್ನು ಮುಂದುವರಿಸುವಂತೆ ಆಜ್ಞೆ ಮಾಡುವರು. ಸಂನ್ಯಾಸಿಗಳಾಗ ಬಯಸಿದ ಆ ನಾಲ್ಕು ಮಕ್ಕಳು ಬ್ರಹ್ಮದೇವರ ಆಜ್ಞೆಯನ್ನು ನಿರಾಕರಿಸುವರು. ಇದರಿಂದ ಬ್ರಹ್ಮದೇವರಿಗೆ ಕೋಪ ವುಂಟಾಗಿ ಅವರು ಅದನ್ನು ನಿಯಂತ್ರಿಸುವುದರೊಳಗೇ ಅವರ ಭ್ರೂಮಧ್ಯದಿಂದ ರುದ್ರದೇವರು ಜನಿಸುವರು (ಮೊದಲೊಮ್ಮೆ ಜನಿಸಿದ್ದ ರುದ್ರದೇವರೇ ಪುನಃ ದೇಹಾಂತರದಿಂದ ಹುಟ್ಟುವರು. ಈ ಸೃಷ್ಟಿಯಲ್ಲಿ ರುದ್ರದೇವರು ಸನಕಾದಿಗಳ ನಂತರ ಹುಟ್ಟಿದರೂ ಇದು ತಾರತಮ್ಯಾನುಸಾರಿ ಯಲ್ಲವಾದ್ದರಿಂದ ರುದ್ರದೇವರನ್ನು ಸನಕಾದಿಗಳಿಗಿಂತ ಉತ್ತಮರೆಂದೇ ತಿಳಿಯಬೇಕು.). ಆನಂತರ ರುದ್ರದೇವರು 'ನನಗೆ ನಾಮ ಮತ್ತು ಸ್ಥಾನಗಳು ಬೇಕು'ಎಂದು ಬಾಲಕನಂತೆ ರೋದಿಸುತ್ತಿರಲು ಬ್ರಹ್ಮದೇವರು ಅವರಿಗೆ ರೋದನ ಮಾಡಿದ್ದರಿಂದ 'ರುದ್ರ' ಎಂದು ನಾಮಕರಣ ಮಾಡಿ ಪುನಃ ಮನು, ಮಹಾನಾಸ, ಶಿವ, ಋತಧ್ವಜ, ಮರುರೇತ, ಭವ, ಕಾಲ, ವಾಮದೇವ, ಧೃತವ್ರತ ಎಂಬ ಹನ್ನೊಂದು ಹೆಸರುಗಳನ್ನೂ, ಹೃದಯ, ಇಂದ್ರಿಯ, ಪ್ರಾಣ ವಾಯು, ಆಕಾಶ, ಗಾಳಿ, ಬೆಂಕಿ, ನೀರು, ಭೂಮಿ, ಸೂರ್ಯ, ಚಂದ್ರ, ತಪಸ್ಸು ಎಂಬ ಸ್ಥಾನಗಳನ್ನು ಕೊಡುವರು. ಅನಂತರ ಪ್ರಜೋತ್ಪತ್ತಿ ಕಾರ್ಯದಲ್ಲಿ ಬ್ರಹ್ಮದೇವರಿಂದ ಆಜ್ಞಪ್ತರಾಗಿ ರುದ್ರದೇವರು ಭೂತಗಳನ್ನು ಸೃಷ್ಟಿ ಮಾಡುವರು. ಆ ಭೂತಗಳು ಜಗತ್ತನ್ನೇ ನುಂಗುವಷ್ಟು ಭಯಂಕರವಾದ್ದರಿಂದ ಬ್ರಹ್ಮದೇವರ ಮಾತಿನಂತೆ ತಪಸ್ಸಿಗೆ ಕಾಡಿಗೆ ತೆರಳುವರು.

ರುದ್ರದೇವರು ಮಾಡಿದ ಅಂತರ್ಯಾಮಿ ಪೂಜೆ

 ಒಂದು ಸಂದರ್ಭದಲ್ಲಿ ಪ್ರಜಾಪತಿಗಳೆಲ್ಲ ಕೂಡಿ ನಡೆಸುತ್ತಿದ್ದ ಯಾಗ ಒಂದರಲ್ಲಿ ಅನೇಕ ದೇವತೆಗಳೂ, ಋಷಿಗಳೂ ಪಾಲ್ಗೊಂಡಿರುತ್ತಾರೆ. ಆವಾಗ ಅದೇ ಯಜ್ಞದಲ್ಲಿ ಭಾಗವಹಿ ಸಲು ಬಂದ ದಕ್ಷ ಪ್ರಜಾಪತಿಗಳಿಗೆ ಎಲ್ಲರೂ ಎದ್ದು ಗೌರವ ಸಲ್ಲಿಸುವರು. ಆದರೆ ದಕ್ಷನ ಅಳಿಯನೇ ಆದ ರುದ್ರದೇವರು ಮಾತ್ರ ಸುಮ್ಮನೇ ಕೂತಿರುತ್ತಾರೆ. ಇದು ಅಳಿಯನು ತನಗೆ ಮಾಡಿದ ಅವಮಾನವೆಂದು ಭಾವಿಸಿದ ದಕ್ಷನು ರುದ್ರನನ್ನು ಅತಿಯಾಗಿ ದ್ವೇಷಿಸಿದ್ದಲ್ಲದೇ `ಇನ್ನು ಮುಂದೆ ಯಾವುದೇ ಯಾಗದಲ್ಲಿ ರುದ್ರನಿಗೆ ಆಹುತಿ ಇಲ್ಲದಂತಾಗಲಿ` ಎಂದು ಶಾಪ ಕೊಡುತ್ತಾನೆ. ಇದೇ ದ್ವೇಷವು ಮುಂದುವರೆಯುತ್ತದೆ. ಒಮ್ಮೆ ಇದರ ಪ್ರಸ್ತಾಪ ಬಂದಾಗ ದಾಕ್ಷಾಯಣಿಯೂ ಕೂಡ ಗಂಡನಾದ ರುದ್ರದೇವರ ಬಳಿ ದಕ್ಷಪ್ರಜಾಪತಿಗಳನ್ನು ಅವಮಾನಿಸಿದ್ದೇಕೆಂದು ಆಕ್ಷೇಪಿಸುತ್ತಾಳೆ. ಅದಕ್ಕೇ ರುದ್ರದೇವರು ಹೇಳುವ ಸಮಾಧಾನ ಅವರ ಆಂತರ್ಯವನ್ನು ಸ್ಪಷ್ಟ ಪಡಿಸುತ್ತದೆ.

 ಪ್ರತ್ಯುದ್ಗಮಪ್ರಶ್ರಯಣಾಭಿವಾದನಂ ವಿಧೀಯತೇ ಸಾಧು ಮಿಥಃ ಸುಮಧ್ಯಮೇ |
 ಪ್ರಾಜ್ಞೈಃ ಪರಸ್ಮೈ ಪುರುಷಾಯ ಚೇತಸಾ ಗುಹಾಶಯಾಯೈವ ನ ದೇಹಮಾನಿನೇ|| 
--ಭಾಗವತ 4-3-22
 ದಾಕ್ಷಾಯಿಣಿ! ವೈಷ್ಣವರು ಬಂದಾಗ ಪ್ರಾಜ್ಞರು ಗೌರವಾದರಗಳನ್ನು ಸಲ್ಲಿಸುವುದು ಅವರ ಅಂತರ್ಯಾಮಿಯಾದ ವಿಷ್ಣುವಿಗೇ ಹೊರತು ಅವರಿಗಲ್ಲ. ಇದು ಪರಸ್ಪರ ಸಮಾನರಾದವರ ವಿಷಯದಲ್ಲಿ. ಆದರೆ ಸಣ್ಣವರು ದೊಡ್ಡವರಿಗೆ ಸಲ್ಲಿಸುವಾಗ ಮಾತ್ರ ದೇಹಾಭಿಮಾನಿಯಾದ ಜೀವನಿಗೂ ಅಂತರ್ಯಾಮಿಯಾದ ವಿಷ್ಣುವಿಗೂ ಸಲ್ಲಿಸುವುದು ಸರಿಯಾದ ಪದ್ಧತಿ.
ರುದ್ರದೇವರ ಈ ಅಭಿಪ್ರಾಯವನ್ನು

 ಸದೇಹಮಾನಿಹರಯೇ ಪ್ರಣಮೇತ್ ಕೇವಲಾಯ ವಾ |
 ನ ದೇಹಾಯ ನ ತನ್ಮಾನಪರಾಯ ಚ ಕಥಂಚನ ||

ಎಂಬ ವ್ಯಾಸಸ್ಮೃತಿಯೂ ಅನುಮೋದಿಸುತ್ತದೆ. 
 ಅರ್ಚತ ಪ್ರಾರ್ಚತ ಪ್ರಿಯಮೇಧಾಸೋ ಅರ್ಚತ |
 ಅರ್ಚಂತು ಪುತ್ರಕಾ ಉತ ಪುರಂ ನ ಧೃಷ್ಣ್ವರ್ಚತ ||

 ಎಂಬ ವೇದಮಂತ್ರವೂ ಕೂಡ `ಪುರಂ ನ` `ದೇಹವನ್ನಾಗಲೀ ದೇಹಾಭಿಮಾನಿ ಜೀವನನ್ನಾಗಲೀ ಸ್ವತಂತ್ರವಾಗಿ ಪೂಜಿಸಬೇಡ` ಎನ್ನುತ್ತದೆ.
 ಹಾಗಾದರೆ ದಕ್ಷನು ರುದ್ರನಿಗಿಂತ ಸ್ವರೂಪತಃ ಅವರನಾದರೂ ಮಾವನಾದ್ದರಿಂದ ಶ್ರೇಷ್ಠ ನಾದ ಪ್ರಯುಕ್ತ `ಮರ್ಯಾದಾರ್ಥಂ ತೇಪಿ ಪೂಜ್ಯಾಃ` ಎಂಬ ವಚನದಂತೆ ದಕ್ಷನನ್ನು ರುದ್ರ ದೇವರು ಪೂಜಿಸಬೇಕಿತ್ತು ಎಂಬ ಸಂಶಯ ಮೂಡುವುದು ಸಹಜ. ಇದಕ್ಕೂ ರುದ್ರದೇವರು ಉತ್ತರಿಸಿದ್ದಾರೆ -
ಸತ್ವಂ ವಿಶುದ್ಧಂ ವಸುದೇವಶಬ್ದಿತಂ ಯದೀಯತೇ ತತ್ರ ಪುಮಾನಪಾವೃತಃ |
ಸತ್ವಂ ಯಸ್ಮಿನ್ ಭಗವಾನ್ ವಾಸುದೇವೋತ್ವಧೋಕ್ಷಜೋ ಮೇ ಮನಸಾ ವಿಧೀಯತೇ ||
--ಭಾಗವತ 4-3-23
 ದಾಕ್ಷಾಯಿಣಿ! ಆ ಯಜ್ಞಮಂಟಪದಲ್ಲಿ ನನ್ನೆದುರು ಪರಮ ಶುದ್ಧಾಂತಃಕರಣರಾದ ಬ್ರಹ್ಮ ದೇವರು ಕುಳಿತಿದ್ದರು. ಅವರಲ್ಲಿ ವಿಶೇಷವಾಗಿ ಸನ್ನಿಹಿತನಾದ ಭಗವಂತನನ್ನು ನಾನು ಏಕಾಗ್ರತೆ ಯಿಂದ ಧ್ಯಾನಿಸುತ್ತಿದ್ದೆ. ಮತ್ತು ಆ ಸಂದರ್ಭದಲ್ಲಿ ದಕ್ಷನ ಅಂತಃಕರಣವು ರಜೋಗುಣದಿಂದ ಅಹಂಕಾರಾದಿಗಳಿಂದ ಕಲುಷಿತವಾದ ಪ್ರಯುಕ್ತ ಭಗವಂತನ ವಿಶೇಷ ಸನ್ನಿಧಾನವಿರಲಿಲ್ಲ. ಈ ಕಾರಣಗಳಿಂದಾಗಿ ನಾನು ದಕ್ಷನನ್ನು ಪೂಜಿಸಲಿಲ್ಲ.


ಶಿವನಿಗೆ ಆಹುತಿ
 ಶಿವನಿಗೆ ಆಹುತಿ ಇಲ್ಲದಂತಾಗಲೀ ಎಂದು ಶಪಿಸಿದ್ದ ದಕ್ಷನು ತಾನೇ ಒಂದು ಯಾಗವನ್ನು ಮಾಡಲು ಪ್ರಾರಂಭಿಸುವನು. ಆ ಯಾಗಕ್ಕೆ ಸತಿ-ಶಿವರಿಗೆ ಆಮಂತ್ರಣವಿರುವುದಿಲ್ಲ. ಆದರೂ ಸತಿಯು ತಾನೊಬ್ಬಳೇ ತವರು ಮನೆಯ ಸೆಳೆತದಿಂದ ಅಲ್ಲಿಗೆ ಆಗಮಿಸುವಳು. ರುದ್ರನ ಮೇಲಿನ ಕೋಪದಿಂದ ದಕ್ಷನು ಸತಿಯನ್ನೂ ಮಾತನಾಡಿಸುವುದಿಲ್ಲ. ಈ ಅವಮಾನವನ್ನು ಸಹಿಸಿಕೊಂಡ ಸತಿಗೆ ರುದ್ರನಿಗೆ ಆಹುತಿ ಕೊಡದೇ ಯಾಗ ಮುಂದುವರೆಸಿದ್ದನ್ನು ಕಂಡು ಸಹಿಸಲಾಗಲಿಲ್ಲ. ಆ ಯಜ್ಞಕುಂಡದಲ್ಲಿಯೇ ದೇಹತ್ಯಾಗ ಮಾಡುವಳು. ನಾರದರಿಂದ ಈ ವಿಷಯ ತಿಳಿದ ರುದ್ರ ದೇವರು ಬಂದು ಯಜ್ಞವನ್ನು ಧ್ವಂಸ ಮಾಡುವರು. ದಕ್ಷನ ತಲೆಯನ್ನೂ ಕಡಿದು ಯಜ್ಞ ಕುಂಡದಲ್ಲಿ ಹೋಮಿಸುವರು.
 ಅನಂತರ ಬ್ರಹ್ಮದೇವರ ಮಾತಿನಂತೆ ಶಾಂತರಾಗಿ ಬ್ರಹ್ಮದೇವರೊಡನೆ ಯಾಗ ಶಾಲೆಗೆ ಬಂದು ಆಡಿನ ತಲೆಯನ್ನಿಟ್ಟು ದಕ್ಷನನ್ನು ಬದುಕಿಸುವರು. ಯಜ್ಞವು ಮುಂದುವರೆದು ಸಮಾಪ್ತ ವಾಗುವುದು. ಆಗ ಯಜ್ಞದ ಕೊನೆಯಲ್ಲಿ ಬ್ರಹ್ಮದೇವರ ಮಾತಿನಂತೆ ರುದ್ರದೇವರಿಗೆ ಸ್ವಿಷ್ಟಕೃದ್ಭಾಗ ಎಂಬ ಉಚ್ಛಿಷ್ಟಾಹುತಿಯನ್ನು ಸಮರ್ಪಿಸುವರು.
ಹರಿ ಪಾದೋದಕದಿಂದ ಶಿವತ್ವಪ್ರಾಪ್ತಿ  ಶಿವ ಎಂದರೆ ಮಂಗಳ ಎಂದರ್ಥ. ಶ್ರೀಹರಿ ಪಾದೋದಕವೆನಿಸಿದ ಗಂಗೆಯನ್ನು ಶಿರಸಾ ಧರಿಸಿದ್ದರಿಂದ ರುದ್ರದೇವರು `ಶಿವ`ರಾದರು (ಪರಮ ಮಂಗಳರಾದರು) ಎಂದು ಭಾಗವತ ಸಾರುತ್ತಿದೆ -
 ಯಚ್ಛೌಚನಿಃಸೃತಸರಿತ ಪ್ರವರೋದಕೇನ ............. ಶಿವಃ ಶಿವೋಭೂತ್ ||.

ಭಗವದಾಜ್ಞಾಪಾಲನೆ
 ಸ್ಮಶಾನದಲ್ಲಿ ವಾಸ, ಕೊರಳಲ್ಲಿ ತಲೆಬುರುಡೆಗಳ ಮಾಲೆ, ಕೈಯಲ್ಲಿ ಕಪಾಲ, ಮೇಲ್ನೋಟಕ್ಕೆ ಪೈಶಾಚವೃತ್ತಿಯಂತೆ ಕಾಣುವ ರುದ್ರದೇವರ ಈ ಚರ್ಯೆಯು ಭಗವದಾಜ್ಞಾನು -ಸಾರಿಯೇ ಆಗಿದೆ. ಏಕೆಂದರೆ ಸಂಧ್ಯಾಕಾಲದಲ್ಲಿ ಗರ್ಭಧರಿಸುವ ಸ್ತ್ರೀಯರನ್ನು ಹರಿಯಾಜ್ಞೆಯಿಂದ ರುದ್ರದೇವರು ಸಂಹರಿಸುತ್ತಾರೆ. ಅದರ ಪ್ರಾಯಶ್ಚಿತ್ತಕ್ಕಾಗಿ ಹರಿಯಾಜ್ಞೆಯಿಂದಲೇ ಪಿಶಾಚ ಚರ್ಯೆಯನ್ನವಲಂಬಿಸುತ್ತಾರೆ -
 ಯಸ್ಯಾನವದ್ಯಾಚರಿತಂ ಮನೀಷಿಣೋ ಗೃಹ್ಣಂತ್ಯವಿದ್ಯಾಪಟಲಂ ವಿಭಿತ್ಸವಃ |
 ನಿರ್ತಸಾಮ್ಯಾತಿಶಯೋ ಹರೇಃ ಸ್ವಯಂ ಪಿಶಾಚಚರ್ಯಾಮಚರತ್ ಸತಾಂ ಗತಿಃ ||
ಭಾಗವತ 3-15-26
 ತಾನೇ ಆಜ್ಞಾಪಿಸಿ ಮಾಡಿಸಿದ ಕಾರ್ಯಕ್ಕೆ ತಾನೇ ಪ್ರಾಯಶ್ಚಿತ್ತವನ್ನು ವಿಧಿಸಿರುವುದು ಶ್ರೀಹರಿಯ ವಿಡಂಬನೆಗೊಂದು ನಿದರ್ಶನ.

ಭಗವದುಪಾಸನೆ
 ಜಂಬೂದ್ವೀಪದಲ್ಲಿರುವ ಇಲಾವೃತ ಖಂಡದಲ್ಲಿ ರುದ್ರದೇವರು ಇಂದಿಗೂ ಭಗವಂತನ ಸಂಕರ್ಷಣ ಮೂರ್ತಿಯನ್ನು ಉಪಾಸನೆ ಮಾಡುತ್ತಿರುವರೆಂದು ಪಂಚಮ ಸ್ಕಂಧದಲ್ಲಿ ನಿರೂಪಿತವಾಗಿದೆ.
 ಶ್ರೀಕೃಷ್ಣನು ದೇವಕಿಯ ಗರ್ಭದಲ್ಲಿರುವಾಗ ಬ್ರಹ್ಮರುದ್ರಾದಿಗಳು ಬಂದು ಶ್ರೀಕೃಷ್ಣನನ್ನು ಸ್ತೋತ್ರ ಮಾಡಿದ ಸಂಗತಿ ದಶಮಸ್ಕಂಧದಲ್ಲಿ ನಿರೂಪಿತವಾಗಿದೆ.
 ರುದ್ರದೇವರು ತಾವು ಪಠಿಸುತ್ತಿದ್ದ ವಿಷ್ಣುಸ್ತೋತ್ರವನ್ನು ಪ್ರಚೇತಸರಿಗೆ ಉಪದೇಶಿಸಿದ್ದನ್ನು ನಾಲ್ಕನೇ ಸ್ಕಂಧದಲ್ಲಿ ನೋಡಬಹುದು.


ರುದ್ರ - ಭಗವದನುಗ್ರಹಪಾತ್ರ
 ವೃಕನೆಂಬ ಅಸುರನು ರುದ್ರದೇವರನ್ನು ತಪಸ್ಸಿನಿಂದ ಒಲಿಸಿಕೊಂಡು `ನಾನು ಯಾರ ತಲೆಯ ಮೇಲೆ ಕೈ ಇಡುವೆನೋ ಅವರು ಸಾಯಬೇಕು` ಎಂದು ವರವನ್ನು ಕೇಳಿದ. ರುದ್ರದೇವರು ತಥಾಸ್ತು ಎಂದು ನುಡಿದರು. ಅಸುರನು ಆ ವರವನ್ನು ಪರೀಕ್ಷಿಸಲು ರುದ್ರದೇವರ ತಲೆಯ ಮೇಲೆಯೇ ಕೈ ಇಡಲು ಹೊರಟ. ರುದ್ರದೇವರು ಭಗವಂತನಿಗೆ ಶರಣಾದಾಗ ಭಗವಂತನು ವೃಕಾಸುರನನ್ನು ಮೋಹಗೊಳಿಸಿ ತನ್ನ ತಲೆಯ ಮೇಲೆಯೇ ಕೈ ಇಟ್ಟುಕೊಳ್ಳುವಂತೆ ಮಾಡಿ ಅಸುರನನ್ನು ಸಂಹರಿಸಿ ರುದ್ರದೇವರನ್ನು ಕಾಪಾಡುವನು. ಈ ಪ್ರಸಂಗವು ಹತ್ತನೇ ಸ್ಕಂಧದಲ್ಲಿ ನಿರೂಪಿತವಾಗಿದೆ.
 ರುದ್ರದೇವರು ತ್ರಿಪುರಾಸುರ ಸಂಹಾರ ಮಾಡಿದ್ದೂ ಭಗವದನುಗ್ರಹದಿಂದಲೇ. ತ್ರಿಪುರಾಸುರ ಪಟ್ಟಣದಲ್ಲಿ ಮಯನಿರ್ಮಿತವಾದ ಅಮೃತದ ಬಾವಿಯಿತ್ತು. ರುದ್ರನಿಂದ ಹತರಾದ ಅಸುರ ರೆಲ್ಲರೂ ಆ ಬಾವಿಯ ರಸದಿಂದ ಬದುಕುತ್ತಿದ್ದರು. ಇದರಿಂದ ರುದ್ರನು ಕಂಗೆಟ್ಟಾಗ ವಿಷ್ಣುವು ಗೋರೂಪದಿಂದ ಹೋಗಿ ಆ ಅಮೃತ ರಸವನ್ನೆಲ್ಲಾ ಪಾನಮಾಡಿದ್ದಲ್ಲದೇ ತನ್ನ ಶಕ್ತಿಯಿಂದ ರುದ್ರನಿಗೆ ಯುದ್ಧಸಾಧನವಾದ ರಥಾದಿಗಳನ್ನೆಲ್ಲಾ ನಿರ್ಮಿಸಿಕೊಟ್ಟು ತಾನೇ ತನ್ನ ತೇಜಸ್ಸಿನಿಂದ ರುದ್ರನನ್ನು ರಕ್ಷಿಸಿ ತ್ರಿಪುರ ಸಂಹಾರ ಮಾಡಿಸುತ್ತಾನೆ-

 ಭಗವತ್ತೇಜಸಾ ಗುಪ್ತೋ ದದಾಹ ತ್ರಿಪುರಂ ನೃಪ || ಭಾಗವತ 7-11-17.


ಶಿವೋಪಾಸನೆಯ ಫಲ
ಶಿವಃ ಶಕ್ತಿಯುತಃ ಶಶ್ವತ್ ತ್ರಿಲಿಂಗೋ ಗುಣಸಂವೃತಃ || (ಭಾಗವತ 10ನೇ ಸ್ಕಂಧ) ಎಂಬಂತೆ ರುದ್ರದೇವರು ಪ್ರಕೃತಿಬದ್ಧರಾಗಿದ್ದಾರೆ. ಆದ್ದರಿಂದ ಪ್ರಾಯಃ ಶಿವೋಪಾಸಕರು ಪ್ರಾಕೃತವಾದ ಧನಸಂಪತ್ತುಳ್ಳವರಾಗುತ್ತಾರೆ. ಆದರೆ `ಹರಿಸ್ತು ನಿರ್ಗುಣಃ ಸಾಕ್ಷಾತ್` ಎಂಬಂತೆ ಶ್ರೀ ಹರಿಯು ಪ್ರಾಕೃತಗುಣಬದ್ಧನಲ್ಲವಾದ್ದರಿಂದ ಶ್ರೀಹರಿಯ ಉಪಾಸಕರು ಮುಕ್ತರಾಗುತ್ತಾರೆ. `ವಿದ್ಯಾಕಾಮಸ್ತು ಗಿರೀಶಂ` ಎಂದು ದ್ವಿತೀಯಸ್ಕಂಧದಲ್ಲಿ ಹೇಳಿದ ಪ್ರಕಾರ ಶಿವನ ಆರಾಧನೆ ಯಿಂದ ಜ್ಞಾನವನ್ನು ಪಡೆಯಬಹುದು. `ಜ್ಞಾನಂ ಮಹೇಶ್ವರಾದಿಚ್ಛೇತ್` ಎಂಬ ಪ್ರಮಾಣವೂ ಇದಕ್ಕೆ ಸಂವಾದಿಯಾಗಿದೆ. ಇಂತಹ ಶಿವನು ನಮಗೆಲ್ಲರಿಗೂ ಭಗವಂತನ ಬಗ್ಗೆ ಸರಿಯಾದ ಜ್ಞಾನವನ್ನು ನೀಡಿ ಅನುಗ್ರಹಿಸಲೆಂಬ ಪ್ರಾರ್ಥನೆ ನಮ್ಮದಾಗಿರಲಿ.


ಶ್ರೀ ರಂಗನಾಥಾಚಾರ್ಯ ಸಾಲಗುಂದಾ,
"ಈಶಾವಾಸ್ಯಮ್"

No comments:

Post a Comment