Sunday, May 12, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು- 16 ಮತ್ತು 17

                        
(ಮುಂದುವರಿದ ಭಾಗ.)

ಹದಿನಾರನೇ ಅವತಾರ:  

                       ಅವತಾರೇ ಷೋಡಸಮೇ ಪಶ್ಯನ್ ಬ್ರಹ್ಮದ್ರುಹೋ ನೃಪಾನ್ |
                       ತ್ರಿಃಸಪ್ತಕೃತ್ವಃ ಕುಪಿತೋ ನಿಃಕ್ಷತ್ರಾಮಕರೋನ್ಮಹೀಮ್ ||                  ಭಾಗವತ: 1-3-20


 ಭೂಮಿಯಲ್ಲಿ ಕ್ಷತ್ರವಂಶ ಬೆಳೆದುಬಿಟ್ಟಿತ್ತು. ಅವರಿಗೆ ಆಡಳಿತದ ಅಧಿಕಾರ ಕೈಗೆ ಸಿಕ್ಕಾಗ ಅವರೆಲ್ಲರೂ ಉನ್ಮತ್ತರಾದರು. ಮದದಿಂದ ಕೊಬ್ಬಿದರು. ಆಗ ಅವರು ತಾವು ಮಾಡಿದ್ದೇ ಸರಿ ಎಂದು ಧೂರ್ತರಾಗಿ ದೇಶವನ್ನು ನಾಶಗೊಳಿಸುವ ಮಟ್ಟಕ್ಕೆ ಇಳಿದರು. ಆಳಬೇಕಾದವರು ದೇಶವನ್ನು ದೋಚಲಿಕ್ಕೆ ಪ್ರಾರಂಭಿಸಿದರು. ದೇವರುಗಳಿಗೆ, ವೇದಗಳಿಗೆ, ಜ್ಞಾನಿಗಳಿಗೆ ದ್ರೋಹ ಬಗೆದರು. ಇಂತಹ ರಾಜರ ಸಂತತಿ ಬೆಳೆಯಬಾರದೆಂದು ಭಗವಂತ ಪರಶುರಾಮನಾದಿಂದ ಅವತರಿಸಿ, ಈ ಭೂಮಿಯನ್ನು ಇಪ್ಪತ್ತೊಂದುಬಾರಿ ಸಂಚರಿಸಿ,  ಧೂರ್ತರಾಗಿದ್ದ ಕ್ಷತ್ರಿಯ ರಾಜರುಗಳನ್ನೆಲ್ಲ ನಾಶಪಡಿಸಿದ. ಅಲ್ಲಿಗೂ ಕೆಲವರು ಉಳಿದರು. ಇನ್ನುಮುಂದೆ ಧೂರ್ತತನ ಮಾಡುವುದಿಲ್ಲವೆಂದು ಕ್ಷಮೆಕೇಳಿ ತನಗೆ ಶರಣು ಬಂದವರನ್ನು ಸಂಹರಿಸದೆ ಉಳಿಸಿದ. ಇನ್ನು ಕೆಲವರು ಅಡಗಿ ಕುಳಿತವರು ಉಳಿದರು.  ರಘುವಂಶದಲ್ಲಿಯ  ಎಷ್ಡೋ ರಾಜರುಗಳನ್ನು ಪರಶುರಾಮ ಸಂಹರಿಸಿದ.  ರಘುವಂಶದಲ್ಲಿಯ ಅಷ್ಮಕ ಎನ್ನವ ಒಬ್ಬ ರಾಜ ಪರಶುರಾಮ ಬಂದಾಗ ಅರಮನೆಯಲ್ಲಿ ಹೆಣ್ಣುಮಕ್ಕಳಹಿಂದೆ ಅಡಗಿ ಕುಳಿತು ಉಳಿದುಕೊಂಡ. ಪರಶುರಾಮ ಅವನನ್ನು ಸಂಹರಿಸದೆ ಬಿಟ್ಟ. ಮುಂದೆ ಆ ವಂಶದಲ್ಲಿ ರಾಮಾವತಾರವಾಗಬೇಕಿತ್ತು. ಹಾಗೆ ಹೆಣ್ಣುಮಕ್ಕಳಹಿಂದೆ ಅಡಗಿ ಕುಳಿತ ರಾಜನಿಗೆ, ನಾರಿಯರಿಂದ ರಕ್ಷಣೆ ಪಡೆದದ್ದರಿಂದ ಅವನಿಗೆ ನಾರೀಕವಚ ಎಂಬ ಹೆಸರು ಬಂತು. ಹೀಗೆ ದುಷ್ಟ ಕ್ಷತ್ರಿಯರನ್ನೆಲ್ಲ ಸಂಹಾರ ಮಾಡಿ ಭೂಭಾರ ಇಳಿಸಿದ ಅವತಾರ ಪರಶುರಾಮನ ಅವತಾರ. ಇದೇ ಅವತಾರದಲ್ಲಿ ಭೀಷ್ಮ, ದ್ರೋಣ ಹಾಗು ಕರ್ಣನಿಗೆ ಅಸ್ತ್ರ - ಶಸ್ತ್ರ ವಿದ್ಯೆಯನ್ನು ಹೇಳಿಕೊಟ್ಟ. ಹೀಗೆ ಭೂಭಾರ ಇಳಿಸುವ ಕಾರ್ಯದಲ್ಲಿ ಪರಶುರಾಮಾವತಾರದ ಲೀಲೆ ಅದ್ಭುತ.

ಹದಿನೇಳನೇ ಅವತಾರ:   
             ತತಃ ಸಪ್ತದಶೇ ಜಾತಃ ಸತ್ಯವತ್ಯಾಂ ಪರಾಶರೇತ್ |
             ಚಕ್ರೇ ವೇದತರೋ ಶಾಖಾದೃಷ್ಟ್ವಾ ಪುಂಸೋಲ್ಪಮೇಧಸಃ ||         ಭಗವತಃ 1-3-21
 

 ಭಾಗವತದ ಪ್ರಕಾರ ವೇದವ್ಯಾಸಾವತಾರ. ಇಲ್ಲಿ ಮತ್ತೆ ಗೊಂದಲ.  ಪರಶುರಾಮಾವತಾರ ಆದಮೇಲೆ ರಾಮಾವತಾರ. ನಂತರದಲ್ಲಿ ದ್ವಾಪರಯುಗದಲ್ಲಿ ವೇದವ್ಯಾಸಾವತಾರ ಮತ್ತು ಕೃಷ್ಣಾವತಾರ ಆಗಿದ್ದು. ಆದರೆ ಇಲ್ಲಿ ರಾಮಾವತಾರಕ್ಕಿಂತ ಮೊದಲೇ ವೇದವ್ಯಾಸಾವತಾರ ಹೇಳಿದ್ದಾರೆ. ಇದೇನು ಕಥೆ? ಶ್ರೀಮದಾಚಾರ್ಯರು ಭಾಗವತಕ್ಕೆ ಭಾಷ್ಯ ಬರೆಯುವತನಕ ಆ ಮುಂಚಿನ ಯಾವ ಭಾಷ್ಯಕಾರರಿಗೂ ಇದು ಏಕೆ ಹೀಗೆ ಎಂದು ಗೊತ್ತಿರಲೇ ಇಲ್ಲ. ಎಲ್ಲಾ ವ್ಯಾಖ್ಯಾನಕಾರರು ಈ ಅವತಾರಗಳನ್ನು ಕ್ರಮವಾಗಿ ಕ್ರಮಾನುಕ್ರಮಣಿಕೆಯಾಗಿ ಹೇಳಿದ್ದಲ್ಲ, ಒಟ್ಟಿನಲ್ಲಿ ಯಾವುದೋ ಒಂದು ಸಂಖ್ಯೆ ಕೊಟ್ಟಿದ್ದಾರೆ ಎಂದು ಬರೆದರು. ಆದರೆ ಶ್ರೀಮದಾಚಾರ್ಯರು ಮಾತ್ರ ಈ ಗೊಂದಲವನ್ನು ಪರಿಹರಿಸಿದರು. ವ್ಯಾಸಾವತಾರವು ಈ ಮನ್ವಂತರದಲ್ಲಿ ಐದುಬಾರಿ ಆಗಿದೆ. ಮೂರನೇ ದ್ವಾಪರಯುಗದಲ್ಲಿ, ಏಳನೇ ದ್ವಾಪರಯುಗದಲ್ಲಿ, ಹದಿನಾರನೇ ದ್ವಾಪರಯುಗದಲ್ಲಿ, ಇಪ್ಪತ್ತೈದನೆ ದ್ವಾಪರಯುಗದಲ್ಲಿ ಮತ್ತು ಈ ಕಲಿಯುಗದ ಹಿಂದಿನ ಅಂದರೆ ಇಪ್ಪತ್ತೆಂಟನೇ ದ್ವಾಪರಯುಗದಲ್ಲಿ ವ್ಯಾಸಾವತಾರ ಆಗಿದೆ.  ಈ ಐದೂ ಬಾರಿ ವ್ಯಾಸರು ಅವತಾರಮಾಡಿದ್ದು ಪರಾಶರ ಮತ್ತು ಸತ್ಯವತಿಯಿಂದಲೇ ಎಂಬುದು ಗಮನಾರ್ಹ. ರಾಮಾವತಾರ ಆಗಿದ್ದು ಇಪ್ಪತ್ನಾಲ್ಕನೇ ತ್ರೇತಾಯುಗದಲ್ಲಿ. ಇದಕ್ಕಿಂತ ಮುಂಚೆ ವ್ಯಾಸಾವತಾರವು ಮೂರುಬಾರಿ ಆಗಿತ್ತು. ಈ ವéಿಷಯವನ್ನು ತಿಳಿಸುವುದಕ್ಕೋಸ್ಕರವೇ ಭಗವತದಲ್ಲಿ ರಾಮಾವತಾರಕ್ಕಿಂತ ಮುಂಚೆ ವ್ಯಾಸಾವತಾರವನ್ನು ಹೇಳಲಾಗಿದೆ ಎಂಬ ವಿಷಯವನ್ನು ಶ್ರೀಮದಾಚಾರ್ಯರು ತಿಳಿಸಿಕೊಡುವವರೆಗೂ ಈ ವಿಷಯ ಯಾರಿಗೂ ಗೊತ್ತೇಇರಲಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಶ್ರೀಮದಾಚಾರ್ಯರ ಜ್ಞಾನ ಎಂತಹುದು ಎಂಬುದು. ಅದು ಸಾಕ್ಷಾತ್ ವಾಯುದೇವರಜ್ಞಾನ.

 ಇನ್ನೊಂದು ಗಮನಾರ್ಹ ವಿಷಯವೆಂದರೆ, ಈ ಹಿಂದೆ ಮೂರನೇ, ಏಳನೇ, ಹದಿನಾರನೇ ಮತ್ತು ಇಪ್ಪತ್ತೈದನೇ ದ್ವಾಪರ ಯುಗಗಳಲ್ಲಿ ವ್ಯಾಸರು ಸ್ವತಃ ವೇದ ವಿಭಾಗ ಮಾಡಿಲ್ಲ. ತಾವು ಆಚಾರ್ಯರಾಗಿ ನಿಂತು ಬೇರೆಯವರಿಂದ ವೇದ ವಿಭಾಗ ಮಾಡಿಸಿದರು. ಆದರೇ ಇಪ್ಪತ್ತೆಂಟನೇ ದ್ವಾಪರಯುಗದಲ್ಲಿ ತಾವೇ ಸ್ವತಃ ವೇದಗಳನ್ನು ವಿಭಾಗ ಮಾಡಿ, ಬ್ರಹ್ಮಸೂತ್ರಗಳನ್ನು ರಚಿಸಿದರು. ಮಹಾಭಾರತವೆಂಬ ಬೃಹದ್ಗ್ರಂಥವನ್ನು ರಚನೆಮಾಡಿದರು. ಈ ವೇದವ್ಯಾಸರು ಕುರು ಸಂತತಿ ಬೆಳೆಯಲು ಸಹ ಕಾರಣರಾದರು. ಈ ವೇದವ್ಯಾಸರು ಕುರು ಸಂತತಿ ಬೆಳೆಯಲು ಸಹ ಕಾರಣರಾದರು.
ಈ ಮೊದಲು ವೇದಗಳನ್ನು ವಿಭಾಗ ಮಾಡಿದವರ ಹೆಸರುಗಳು ಬೇರೆ ಇವೆ. ಮುಂದಿನ ಇಪ್ಪತ್ತೊಂಭತ್ತನೇ ದ್ವಾಪರದಲ್ಲಿ ಅಶ್ವಥ್ಥಾಮಾಚಾರ್ಯರು ವೇದವಿಭಾಗ ಮಾಡುವವರಿದ್ದಾರೆ. ಅವರಿಗೆ ದ್ರೌಣೀವ್ಯಾಸ ಅಂತ ಹೆಸರು.

ಈ ಮೊದಲು ಅಖಂಡವೇದ ಒಂದೇ ಇತ್ತಂತೆ. ಆದರೆ ಈ ಕಲಿಯುಗದಲ್ಲಿ ಜನರು ಅಲ್ಪಮತಿಗಳಾಗಿರುವುದರಿಂದ ಇಡೀ ಅಖಂಡ ವೇದವನ್ನು ಜೀರ್ಣಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂಬುದನ್ನು ಮನಗಂಡು ವ್ಯಾಸರು ವೇದಗಳನ್ನು ವಿಭಾಗಗಳನ್ನಾಗಿ ಮಾಡಿ ಮತ್ತೆ ಅವುಗಳನ್ನು ತಮ್ಮ ಶಿಷ್ಯರುಗಳ ಮೂಲಕ ಶಾಖೆಗಳಾಗಿ ವಿಂಗಡಿಸಿದರು. ಯಾಜ್ಞವಲ್ಕ್ಯರ ಮೂಲಕ ಶುಕ್ಲಯಜುರ್ವೇದವನ್ನ ಬೆಳಕಿಗೆ ತರುವಂತೆ ಮಾಡಿದರು. ವ್ಯಾಸಸಾಹಿತ್ಯದಲ್ಲಿ ಏನು ಇಲ್ಲವೋ ಅದು ಜಗತ್ತಿನ ಬೇರೆ ಯಾವುದೇ ಸಾಹಿತ್ಯದಲ್ಲಿ ಸಿಗಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಕಂಡುಬರುವ ಎಲ್ಲಾ ಸಾಹಿತ್ಯದಲ್ಲಿ ಏನೆಲ್ಲಾ ಇದೆಯೋ ಅದು ಎಲ್ಲವೂ ವ್ಯಾಸಸಾಹಿತ್ಯದಲ್ಲಿ ಇದೆ. ತಾತ್ಪರ್ಯ ಏನೆಂದರೆ ವ್ಯಾಸಸಾಹಿತ್ಯದಲ್ಲಿ ಕಾಣಸಿಗದ ಹೊಸವಿಷಯವೊಂದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ.
ವ್ಯಾಸೋಚ್ಚಿಷ್ಟಂ ಜಗತ್ಸವರ್ಂ    

ಮುಂದುವರಿಯುವುದು..

ಕೆ. ಸತ್ಯನಾರಾಯಣರಾವ್,
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇತೆ-593203.

 
 

No comments:

Post a Comment