Thursday, May 30, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು - 18-22

                           
(ಮುಂದುವರಿದ ಭಾಗ)

ಹದಿನೆಂಟನೇ ಅವತಾರ
                   ನರದೇವತ್ವಮಾಪನ್ನಃ ಸುರಕಾರ್ಯಚಕೀರ್ಷಯಾ |
                   ಸಮುದ್ರನಿಗ್ರಹಾದೀನಿ ಚಕ್ರೇ ವೀರ್ಯಾಣ್ಯತಃ ಪರಮ್ ||           ಭಾಗವತ  1-3-22


 ಯಾವ ಯಾವ ಸಮಯದಲ್ಲಿ ಭೂಮಿಯಮೇಲೆ ದುಷ್ಟಜನರ ಸಂಖ್ಯೆ ಹೆಚ್ಚಳವಾಗಿ ಭೂಮಿಗೆ ಭಾರವಾಗುತ್ತಾರೋ, ಆವಾಗಲೆಲ್ಲಾ ಭಗವಂತನು ಭೂಮಿಗೆ ಇಳಿದುಬಂದು ಆ ಭೂಮಿಗೆ ಭಾರವಾದ ಜನರನ್ನು ಸಂಹಾರಮಾಡಿ ಭೂಮಿಯ ಭಾರವನ್ನು ಕಡಿಮೆ ಮಾಡುತ್ತಾನೆ. ಇದೇ ಕಾರಣಕ್ಕಾಗಿ ಇಕ್ಷ್ವಾಕು ವಂಶದಲ್ಲಿ ಭಗವಂತ ರಾಮಚಂದ್ರ ಎಂಬ ಹೆಸರಿನಿಂದ ಅವತಾರಮಾಡಿದ ವಿಷಯ ಪ್ರಸಿದ್ಧವಾದದು.  ನರ-ವಾನರರಿಂದಲ್ಲದೇ ಬೇರೆ ಯಾರಿಂದಲೂ ತಮಗೆ ಮರಣ ಬರಬಾರದು ಎಂದು ವರ ಪಡೆದಿದ್ದ ರಾವಣ-ಕುಂಭಕರ್ಣರನ್ನು ಸಮಃರಿಸುವುದಕ್ಕಾಗಿ, ಭಗವಂತ ಒಬ್ಬ ನರನಾಗಿ - ಕ್ಷತ್ರಿಯ ರಾಜನಾಗಿ ಅವತಾರಮಾಡಿದ. ಮತ್ತು ಮಾನವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಾನು ನಡೆದು ತೋರಿಸಿದ.  ತನ್ನ ಸಂಹಾರಕ್ಕಾಗಿ ತಾನೆ ಮುನ್ನುಡಿ ಬರೆದುಕೊಂಡ ರಾವಣ ಅಪಹರಿಸಿದ ಸೀತೆಯನ್ನು ಹುಡುಕುವ ನೆಪದಲ್ಲಿ, ತನ್ನ ದರ್ಶನಕ್ಕಾಗಿ ಎದುರು ನೋಡುತ್ತಿದ್ದ ಕಾಡಿನಲ್ಲಿದ್ದ ತಪಸ್ವಿ ಋಷಿ-ಮುನಿಗಳಿಗೆ ತನ್ನ ದರ್ಶನ ಕೊಟ್ಟು ಆನಂದ ಕರುಣಿಸಿ, ದಂಡಕಾರಣ್ಯದಲ್ಲಿ ಬೀಡುಬಿತ್ತಿದ್ದ ಎಲ್ಲಾ ರಾಕ್ಷಸರನ್ನು ಸಂಹಾರಮಾಡಿ,  ಲಂಕೆಗೆ ಹೋಗುವ ಸಲುವಾಗಿ ಸಮುದ್ರ ನಿಗ್ರಹ ಮಾಡಿ ಸೇತುವೆ ಕಟ್ಟಿ ರಾವಣ-ಕುಂಭಕರ್ಣರನ್ನು ಸಂಹಾರಮಾಡಿ, ತನ್ನ ಪರಮ ಭಕ್ತನಾದ ವಿಭೀಷಣನಿಗೆ ಪಟ್ಟಗಟ್ಟಿ ಅನುಗ್ರಹಿಸಿ, ಎಲ್ಲ ಪ್ರಜೆಗಳ ಪ್ರಶಂಸೆಗೆ ಪಾತ್ರನಾಗುವರೀತಿ ರಾಜ್ಯಭಾರ ಮಾಡಿ, ರಾಮರಾಜ್ಯ ಎಂದು ಒಂದು ಮಾದರಿಯನ್ನು ತೋರಿಸಿಕೊಟ್ಟ  ಒಂದು ಅಧ್ಬುತ ಅವತಾರ ಈ ರಾಮಾವತಾರ.


ಹತ್ತೊಂಭತ್ತು ಮತ್ತು ಇಪ್ಪತ್ತನೇ ಅವತಾರಗಳು.

                ಏಕೋನವಿಂಶೇ ವಿಂಶತಿಮೇ ವೃಷ್ಣಿಷು ಪ್ರಾಪ್ಯ ಜನ್ಮನೀ |
                ರಾಮಕೃಷ್ಣಾವಿತಿ ಭುವೋ ಭಗವಾನಹರದ್ಭರಮ್ ||           ಭಾಗವತ: 1-3-23



  ಹತ್ತೊಂಭತ್ತು ಮತ್ತು ಇಪ್ಪತ್ತನೇ ಅವತಾರಗಳು ಬಲರಾಮ ಮತ್ತು ಕೃಷ್ಣ. ಆದರೇ ಬಲರಾಮಾವತಾರ ಭಗವಂತನ ಪೂರ್ಣಾವತಾರವಲ್ಲ. ಆವೇಶಾವತಾರ. ಬಲರಾಮ ಶೇಷನ ಅವತಾರ. ಈ ಹಿಂದೆ ಪೃಥುರಾಜನ ವಿಷಯದಲ್ಲಿವಿವರಿಸಿದಂತೆ, ಬಲರಾಮನಲ್ಲಿ ಭಗವಂತನ ವಿಶೇಷ ಆವೇಶ. ಕೃಷ್ಣಾವತಾರ ಭಗವಂತನ ಪೂರ್ಣಾವತಾರ. ಈ ಎರಡು ಅವತಾರಗಳು ವೃಷ್ಣಿ ವಂಶದಲ್ಲಿ ಅಂದರೆ ಯದುವಂಶದಲ್ಲಿ ಆದ ಅವತಾರಗಳು. ಭಗವಂತನ ಅವತಾರಗಳಲ್ಲಿ ಕೆಲವು ಜ್ಞಾನಕಾರ್ಯದ ಅವತಾರಗಳು ಮತ್ತು ಕೆಲವು ಬಲಕಾರ್ಯದಅವತಾರಗಳು. ಆದರೆ ಕೃಷ್ಣಾವತಾರದಲ್ಲಿ ಭಗವಂತ ಜ್ಞಾನ ಮತ್ತು ಬಲ ಎರಡನ್ನು ಅಭಿವ್ಕಕ್ತಗೊಳಿಸಿದ್ದಾನೆ. ಅರ್ಜುನನ್ನು ನಿಮಿತ್ತವಾಗಿರಿಸಿಕೊಂಡು ಸರ್ವವೇದಗಳಸಾರ-ಮಹಾಭಾರತದ ಉಪನಿಷತ್ತೆಂದು ಕರೆಯಲ್ಪಡುವ ಭಗವದ್ಗೀತೆಯನ್ನು ಜಗತ್ತಿಗೆ ಬೋಧಿಸಿದ ಅವತಾರ ಕೃಷ್ಣಾವತಾರ.

ಇಪ್ಪತ್ತೊಂದನೇ ಅವತಾರ.

                 ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ |
                  ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ ||        ಭಾಗವತ: 1-3-24


 ಇದು ಒಂದು ಮೋಹಕ ಅವತಾರ. ಅರ್ಹತೆ ಇಲ್ಲದ ತಾಮಸಪ್ರವೃತ್ತಿಯವರು ತಾವು ಸನ್ಮಾರ್ಗ ಹಿಡಿದು ಉನ್ನತಿಗೆ ಏರಲು ಪ್ರಯತ್ನಿಸಿದಾಗ ಅವರನ್ನು ಹಾದಿ ತಪ್ಪಿಸಿ ಅವರಿಗೆ ಉಚಿತವಾದ ಮಾರ್ಗಕ್ಕೆ ಅವರನ್ನು ಹಿಂತಿರುಗುಸುವುದಕ್ಕಾಗಿ ತಳೆದ ಅವತಾರ ಈ ಬುದ್ಧಾವತಾರ. ಈ ಅವತಾರದ ಬಗ್ಗೆ ಇಂದಿಗೂ ಪಂಡಿತರ ನಡುವೆ ಗೊಂದಲಗಳಿವೆ. ಹೆಚ್ಚಿನ ಪಂಡಿತರು ಬುದ್ಧಾವತಾರಗಳು ಎರಡಿವೆ ಎಂದು ಹೇಳುತ್ತಾರೆ. ಒಂದು ಐತಿಹಾಸಿಕ ಬುದ್ಧಾವತಾರ; ಇನ್ನೊಂದು ಪೌರಾಣಿಕ ಬುದ್ಧಾವತಾರ.
ಈ ಗೊಂದಲಕ್ಕೆ ಕಾರಣವೆಂದರೆ, ಮೇಲೆ ಉಲ್ಲೇಖಿಸಲಾದ ಭಾಗವತದಲ್ಲಿನ ಶ್ಲೋಕ. ಶ್ಲೋಕದಲ್ಲಿ ಕಲೌ ಸಂಪ್ರವೃತ್ತೇ ಎಂದಿದೆ. ಅಂದರೆ ಕಲಿಯುಗದಲ್ಲಿ ಆದ ಅವತಾರ ಎಂದು ಅರ್ಥ ಮಾಡುತ್ತಾರೆ. ಕಲಿಯುಗದಲ್ಲಿ ಭಗವಂತನಿಗೆ ಅವತಾರವಿಲ್ಲವಾದುದರಿಂದ ಈ ಐತಿಹಾಸಿಕ ಬುದ್ಧ ಭಗವಂತನ ಅವತಾರವಲ್ಲ ಎಂಬುದು ಒಂದು. ಇನ್ನು ಎರಡನೆಯದಾಗಿ, ಬುದ್ಧೋನಾಮ್ನ ಜಿನಸುತಃ ಎಂದಿದೆ. (ಈಗ ಮುದ್ರಿತವಾಗಿರುವ ಕೆಲವು ಭಾಗವತ ಪುಸ್ತಕಗಳಲ್ಲಿ, ಜನಸುತಃ ಎಂದು ಮುದ್ರಿಸಿರುತ್ತಾರೆ. ಆದರೆ ಮೂಲಪಾಠ ಜಿನಸುತಃ ಎಂಬುದಾಗಿರುತ್ತದೆ.) ಅಂದರೆ ಜಿನ ಎಂಬುವವರ ಮಗನಾಗಿ ಬುದ್ಧ ಹುಟ್ಟಿದ. ಆದರೆ ಐತಿಹಾಸಿಕ ಬುದ್ಧನ ತಂದೆಯ ಹೆಸರು ಶುದ್ದೋದನ - ಜಿನ ಅಲ್ಲ. ಆದುದರಿಂದ ಈ ಬುದ್ಧ ಬೇರೆ ಎಂಬ ವಾದ.  ಮೂರನೆಯದಾಗಿ ಕೀಕಟೇಷು ಭವಿಷ್ಯತಿ ಎಂಬುದಾಗಿ ಇದೆ. ಕೀಕಟ ಎಂದರೆ ಈಗಿನ ಬಿಹಾರ ಪ್ರಾಂತ. ಕೀಕಟ ಎಂಬುದರ ಸರಿಯಾದ ಅರ್ಥವೆಂದರೆ, ವೈದಿಕಸಂಸ್ಕಾರವಿಲ್ಲದ ಜನರು ವಾಸ ಮಾಡುತ್ತಿರುವ ಪ್ರದೇಶ ಎಂದಾಗುತ್ತದೆ. ಬುದ್ಧ ಹುಟ್ಟಿದ್ದು ನೇಪಾಳದಲ್ಲಿ, ಬಿಹಾರದಲ್ಲಿ ಅಲ್ಲ. ಆದುದರಿಂದ ಈ ಬುದ್ಧ ಬೇರೆ ಎಂಬ ವಾದ. ಇನ್ನು ಕೊನೆಯದಾಗಿ ಬುದ್ಧ ಬತ್ತಲೆಯಾಗಿದ್ದ ಎಂಬ ವಿಷಯ. ಐತಿಹಾಸಿಕ ಬುದ್ಧ ಬತ್ತಲೆಯಾದ ಉಲ್ಲೇಖವಿಲ್ಲ. ಆದುದರಿಂದ ಈ ಬುದ್ಧ ಬೇರೆ ಎಂದು ವಾದಿಸುತ್ತಾರೆ. ಹೀಗಾಗಿ ಗೊಂದಲವೋ ಗೊಂದಲ.
 ಆದರೆ ಶ್ರೀಮದಾಚಾರ್ಯರು ಭಾಗವತ ತತ್ಪರ್ಯನಿರ್ಣಯದಲ್ಲಿ ಈ ಇಬ್ಬರೂ ಬುದ್ಧರು ಬೇರೆ ಬೇರೆಯಲ್ಲ, ಒಂದೇ ಎಂಬ ವಿಷಯ ಸ್ಪಷ್ಟಪಡಿಸಿರುತ್ತಾರೆ. ಭಗವಂತನಿಗೆ ಕಲಿಯುಗದಲ್ಲಿ ಅವತಾರವಿಲ್ಲ ಎಂಬುದು ನಿಜ. ಆದರೆ ನಿಜವಾಗಿ ಕಲಿಯುಗ ಪ್ರಾರಂಭವೇ ಅಗಿಲ್ಲ. ಈಗ ನಾವು ಸಂಧಿಕಾಲದಲ್ಲಿದ್ದೇವೆ. ಬುದ್ಧನ ಅವತಾರವಾಗಿದ್ದು ದ್ವಾಪರ-ಕಲಿಯುಗಗಳ ಸಂಧಿಯಲ್ಲಿ. ಕಲಿಯುಗದಲ್ಲಿ ಅಲ್ಲ. ಮಹಾಭಾರತ ಯುದ್ಧದಲ್ಲಿ ದುಯರ್ೋಧನ ತೊಡೆಮುರಿದುಕೊಂಡು ಬಿದ್ದ ದಿನದಿಂದಲೇ ಕಲಿಯುಗ ಪ್ರಾರಂಭವಾಗುತ್ತದೆ ಎಂದು ಹೇಳುವುದಾದರೂ, ಒಂದು ಯುಗ ಮುಗಿದು ಇನ್ನೊಂದು ಯುಗ ಪ್ರಾರಂಭದ ಮಧ್ಯದಲ್ಲಿ ಸಂಧಿಕಾಲವಿರುತ್ತದೆ. ಹೀಗಾಗಿ ದುಯರ್ೊಧನ ಸತ್ತನಂತರವೂ ಕೃಷ್ಣ ಇದೇ ಭೂಮಿಯಮೇಲೆ ಮುವ್ವತ್ತಾರು ವರ್ಷಗಳಕಾಲ ಇದ್ದು ನಂತರ ಅವತಾರ ಸಮಾಪ್ತಿ ಮಾಡಿದ. ಹೀಗಾಗಿ ಬುದ್ಧನ ಅವತಾರವಾಗಿದ್ದು ಕಲಿಯುಗದಲ್ಲಿ ಅಲ್ಲ - ದ್ವಾಪರ-ಕಲಿ ಯುಗಗಳ ಸಂಧಿಯಲ್ಲಿ. ಎರಡನೆಯದಾಗಿ ಜಿನಸುತಃ  ಎಂಬ ಶಬ್ದ. ಜಿನ ಎನ್ನುವುದು ಹೆಸರಲ್ಲ. ಜೈನಧರ್ಮ ಮತಾವಲಂಬಿಗಳನ್ನು ಜಿನರು ಎಂದು ಕರೆಯುತ್ತಾರೆ. ಬುದ್ಧನ ತಂದೆ ಜೈನಮತ ಪ್ರವರ್ತಕನಾಗಿದ್ದುದರಿಂದ ಅವನ್ನು ಜಿನ ಎಂದು ಊಲ್ಲೇಖಿಸಲಾಗಿದೆ. ಅವನ ಹೆಸರು ಶುದ್ದೋದನ ಎಂದೇ ಇತ್ತು. ಹುಟ್ಟಿದ್ದು ನೇಪಾಳದಲ್ಲಿಯಾದರು ಅವನು ಬುದ್ಧನಾಗಿದ್ದು ಬಿಹಾರದ ಬುದ್ಧಗಯಾದಲ್ಲಿ, ಬೋಧಿವೃಕ್ಷದ ಕೆಳಗೆ. ಇನ್ನು ಬುದ್ಧ ಬತ್ತಲೆಯಾದ ವಿಷಯ ನಾವು ವಾಸ ಮಾಡುವ ಈ ಭೂಲೋಕಕ್ಕೆ ಸಂಬಧಿಸಿದ್ದಲ್ಲ. ಅದು ಅದೃಶ್ಯ ಲೋಕಕ್ಕೆ  ಸಂಬಂಧಿಸಿದ ವಿಷಯ. ತಮ್ಮ ಪತ್ನಿಯರ ಪಾತಿವ್ರತ್ಯದ ಪ್ರಭಾವದಿಂದ ತ್ರಿಪುರಾಸುರರು ಮದೋನ್ಮತ್ತರಾಗಿ ಮೆರೆಯುತ್ತಿದ್ದಾಗ, ಅವರ ಪತ್ನಿಯರ ಪಾತಿವ್ರತ್ಯವನ್ನು ಕೆಡಿಸುವುದಕ್ಕೋಸುಗ ಬುದ್ಧ ಅವರ ಮುಂದೆ ಬತ್ತಲಾಗಿ ಬಹಳ ಮೋಹಕನಾಗಿ ನಿಂತು ಅವರ ಪಾತಿವ್ರತ್ಯವನ್ನು ಭಂಗಗೊಳಿಸಿ ತ್ರಿಪುರಾಸುರರ ಸಂಹಾರಕ್ಕೆ ಕಾರಣವಾದ ಈ ಘಟನೆ ನಡೆದಿದ್ದು ಅದೃಶ್ಯ ಲೋಕದಲ್ಲಿ. ಹೀಗಾಗಿ ಈ ಘಟನೆ ಐತಿಹಾಸಿಕವಾಗಿ ದಾಖಲೆಯಾಗುವ ಸಾಧ್ಯತೆಗಳಿರಲಿಲ್ಲ. ಈ ಕಾರಣಗಳಿಗಾಗಿ ಸ್ಪಷ್ಟವಾಗುವುದೇನೆಂದರೆ, ಐತಿಹಾಸಿಕ ಬುದ್ಧ ಹಾಗೂ ಪೌರಾಣಿಕ ಬುದ್ಧ ಬೇರೆ ಬೇರೆಯಲ್ಲ. ಇಬ್ಬರೂ ಒಂದೇ ಎಂದು. ಹೀಗಾಗಿ ಯಾವುದೇ ಗೊಂದಲವಿಲ್ಲ.

ಇಪ್ಪತ್ತೆರಡನೇ ಅವತಾರ

               ಅಥಾಸೌ ಯುಗಸಂಧ್ಯಾಯಾಂ ದಸ್ಯುಪ್ರಾಯೇಷು ರಾಜಸು |
               ಜನಿತಾ ವಿಷ್ಣುಯಶಸೋ ನಾಮ್ನಾ ಕಲ್ಕಿರ್ಜಗತ್ಪತಿಃ ||       ಭಾಗವತಃ 1-3-25

 ಇನ್ನು ಕಲಿಯುಗದಲ್ಲಿ ದೇಶವನ್ನು ಪಾಲಿಸುವ ರಾಜರುಗಳೇ ದರೋಡೆಕೋರರಾದಾಗ, ದೇಶವನ್ನು ದೋಚುವ ಕಳ್ಳರಾದಾಗ, ಅಥವಾ ದರೋಡೆಕೋರರೇ-ಕಳ್ಳರೇ ರಾಜರುಗಳಾದಾಗ, ಕಲಿಯುಗ ಮುಗಿದು, ಕಲಿ-ಕೃತಯುಗಗಳ ಸಂಧಿಯಲ್ಲಿ ಶಂಭಲಾ ಎಂಬ ಗ್ರಾಮದಲ್ಲಿ ವಿಷ್ಣುಯಶಸ್ ಎಂಬುವವರ ಮಗನಾಗಿ ಭಗವಂತ ಕಲ್ಕಿ ಎಂಬ ಹೆಸರಿನಿಂದ ಅವತಾರ ಮಾಡಿ ಎಲ್ಲ ದುಷ್ಟ  ದರೋಡೆಕೋರ - ಕಳ್ಳ ರಾಜರುಗಳನ್ನ ನಿಗ್ರಹಿಸುತ್ತಾನೆ.
 ಹೀಗೆ ಭಗವಂತನ ಇಪ್ಪತ್ತೆರಡು ಅವತಾರಗಳನ್ನು, ಭಗವಂತನ ಮೂಲ ರೂಪವಾದ ಪುರುಷರೂಪವನ್ನು ಸೇರಿಸಿದರೆ ಇಪ್ಪತ್ಮೂರು ಅವತಾರಗಳನ್ನು ಭಾಗವತ ಊಲ್ಲೇಖಿಸಿದೆ.  ಆದರೆ ಮುಂದೆ ಭಾಗವತ ನಮಗೆ ತಿಳಿಸಿಕೊಡುವುದೇನೆಂದರೆ, ಇಷ್ಟೇ ಭಗವಂತನ ಅವತಾರಗಳು ಎಂದು ತಿಳಿದುಕೊಳ್ಳಬೇಡಿ. ಅವನ ಅವತಾರಗಳು ಅನಂತ - ಅಗಣಿತ. ಅವನ ಅವತಾರಗಳನ್ನು ಎಣಿಸಿ ಹೇಳಲು ಸಾಧ್ಯವಿಲ್ಲ. ಮತ್ತು ಈ ಎಲ್ಲಾ ಅವತಾರಗಳು ಸಾಕ್ಷಾತ್ ಭಗವಂತನಾದ ಆ ಶ್ರೀಕೃಷ್ಣನ ಅವತಾರಗಳೇ ಆಗಿವೆ. ಅವನ ಅವತಾರಗಳಲ್ಲಿ ಒಂದು ಅವತಾರಕ್ಕೂ ಇನ್ನೊಂದು ಅವತಾರಕ್ಕೂ  ಯಾವುದೇ ಭೇದವಿಲ್ಲ. ಎಲ್ಲವೂ ಅಪ್ರಾಕೃತ ಪೂರ್ಣಾನಂದಜ್ಞಾನಮಯ ರೂಪಗಳು.  ಆನೆಯಲ್ಲಿರುವ ಭಗವಂತ ದೊಡ್ಡವನು, ಇರುವೆಯಲ್ಲಿರುವ ಭಗವಂತ ಸಣ್ಣವನು ಎಂದು ಭಾವಿಸಬಾರದು. ಆ ಆ ಅಧೀಷ್ಟಾನಕ್ಕೆ ತಕ್ಕಂತೆ ಶಕ್ತಿಯ ಅಭಿವ್ಯಕ್ತಿಯಲ್ಲಿ ವ್ಯತ್ಯಾಸವಿರುತ್ತದೆ.

ಇಲ್ಲಿಗೆ ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು ಎಂಬ ಈ ಲೇಖನವನ್ನು ಮುಗಿಸುತ್ತಿದ್ದೇನೆ...
::ಕೃಷ್ಣಾರ್ಪಣಮಸ್ತು ::

ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸಮಾಲಿಕೆಯಿಂದ ಸಂಗ್ರಹಿಸಿ ಬರೆದ ಲೇಖನ.


ಸಂಗ್ರಹಕಾರರು:
ಕೆ, ಸತ್ಯನಾರಾಯಣರಾವ್,
 ಈಶವಾಶ್ಯಂ  # 1361, 
ವಿವೇಕಾನಂದನಗರ, ಸಂಡೂರುರಸ್ತೆ, 
ಹೊಸಪೇಟೆ. - 583 203.
 

No comments:

Post a Comment