Monday, January 21, 2013

ಶ್ರೀಮದ್ಭಾಗವತದಲ್ಲಿ ಭಗವಂತನ ಅವತಾರಗಳು -4,5,6


...(ಮುಂದುವರೆದ ಭಾಗ)
    
     ಈಗ ನಾವು ಸ್ವಾಯಂಭುವ ಮನ್ವಂತರದಲ್ಲಿ ಆದ ಅವತಾರಗಳ ಬಗ್ಗೆ ನೋಡುತ್ತಿದ್ದೇವೆ. ನಾವು ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಅವತಾರಗಳಲ್ಲಿ ಭಗವಂತನು  ಹೊಂದಿರುವ ಹೆಸರುಗಳನ್ನೇ ಇಟ್ಟುಕೊಂಡಿರುವ ಕೆಲವು ಋಷಿಗಳು ಸಹ ಇದ್ದಾರೆ. ಮೂರನೆ ಅವತಾರವಾದ ಐತರೇಯನ ಹೆಸರನ್ನೇ ಹೊಂದಿರುವ ಒಬ್ಬ ಋಷಿ ಇದ್ದಾನೆ. ಈ ಋಷಿ ತಪಸ್ಸುಮಾಡಿ ಭಗವಂತನ ಹೆಸರು ಮತ್ತು ಅವನ ತಾಯಿಯ ಹೆಸರುಗಳೇ ತನಗೂ ಮತ್ತು ತನ್ನ ತಾಯಿಗೂ ಇರಬೇಕೆಂದು ಬೇಡಿಕೊಂಡಿದ್ದನಂತೆ. ಆದುದರಿಂದ ಇತರಾದೇವಿಯ ಮಗ ಐತರೇಯ ಎಂಬ ಭಗವಂತನ ಅವತಾರವಿದೆ ಹಾಗೆ ಇತರಾದೇವಿಯ ಮಗ ಐತರೇಯ ಎಂಬ ಒಬ್ಬ ಋಷಿಯೂ ಇದ್ದಾನೆ. ಅದೇ ರೀತಿ ಕಪಿಲ ಎಂಬ ಹೆಸರಿನ ಭಗವಂತನ ಅವತಾರವಿದೆ, ಕಪಿಲ ಎಂಬ ಒಬ್ಬ ಋಷಿಯೂ ಇದ್ದಾನೆ. ಇಲ್ಲಿ ಇಬ್ಬರ ತಾಯಿ ಬೇರೆ ಬೇರೆ ಆದರೆ ಇಬ್ಬರ ಶಿಷ್ಯರ ಹೆಸರು ಒಂದೆ. ಆಸುರಿ ಎಂದು. ಇಬ್ಬರೂ ಕಪಿಲರು ಬೋಧಿಸಿದ ಶಾಸ್ತ್ರ ಸಾಂಖ್ಯ ಶಾಸ್ತ್ರ. ಆದರೆ ಭಗವಂತನ ಅವತಾರವಾದ ಕಪಿಲ ಬೋಧಿಸಿದ್ದು ಭಗವಂತನ ಜ್ಞಾನದ ಬಗ್ಗೆ. ಆದರೆ ಇನ್ನೊಬ್ಬ ಕಪಿಲ ಬೋಧಿಸಿದ್ದು ನಿರೀಶ್ವರ ಸಾಂಖ್ಯಮತ. ಅದಕ್ಕಾಗಿ ಗೊಂದಲ ನಿವಾರಣೆಗಾಗಿ ಭಗವಂತನ ಅವತಾರವನ್ನು  '' ಕಪಿಲ ವಾಸುದೇವ  '' ಎಂದು ಕರೆದರು. ದೇವಕಿಯಮಗ ಕೃಷ್ಣ ಎಂಬ ಪ್ರಸಿದ್ಧವಾದ ಭಗವಂತನ ಅವತಾರವಿದೆ ಹಾಗೆ ದೇವಕಿಯಮಗ ಕೃಷ್ಣ ಎಂಬ ಒಬ್ಬ ಋಷಿಯೂ  ಇದ್ದಾನೆ.  ಈಗ ನಾವು ಭಗವಂತನ ನಾಲ್ಕನೇ ಅವತಾರದ ಬಗ್ಗೆ ನೋಡೋಣ.


ನಾಲ್ಕನೇ ಅವತಾರ

ತುರ್ಯೇ ಧರ್ಮಕಲಾಸರ್ಗೇ ನರನಾರಾಯಣೌ ಋಷೀ |
     ಭೂತ್ವಾತ್ಮೋಪಶಮೋಪೇತಮಕರೋದ್ದುಶ್ಚರಂ ತಪಃ  ||
     
 --ಭಾಗವತ:- 1-3-9                        
                                                                       
    
ಸ್ವಾಯಂಭುವಮನುವಿನ ಭಾಗ್ಯ ಬಹಳ ದೊಡ್ಡದು.  ಸ್ವಾಯಂಭುವಮನುವಿನ ಮನೆತನದಲ್ಲಿ ಭಗವಂತನ ಅವತಾರಗಳ ಸರಮಾಲೆಯೇ ಇದೆ. ಸ್ವಾಯಂಭುವಮನುವಿಗೆ ಮೂರು ಜನ ಹೆಣ್ಣುಮಕ್ಕಳು. (1) ಆಕೂತಿ; (2) ದೇವಹೂತಿ; ಮತ್ತು (3) ಪ್ರಸೂತಿ. ಪ್ರಸೂತಿಯನ್ನು ದಕ್ಷಪ್ರಜಾಪತಿ ಮದುವೆ ಮಾಡಿಕೊಂಡ. ಪ್ರಸೂತಿಯಲ್ಲಿ ಹತ್ತು ಜನ ಹೆಣ್ಣುಮಕ್ಕಳು ಹುಟ್ಟಿದರು. ಅವರಲ್ಲಿ ಕೊನೆಯವಳು ಮೂರ್ತಿ ಅಂತ. ಅವಳನ್ನು ಧರ್ಮದೇವತೆ ಮದುವೆ ಮಾಡಿಕೊಂಡ. ಮೂರ್ತಿಯಲ್ಲಿ ನಾಲ್ಕು ಜನ ಗಂಡುಮಕ್ಕಳು ಜನಿಸಿದರು. (1)ನರ; (2)ನಾರಾಯಣ; (3) ಹರಿ; ಮತ್ತು (4) ಕೃಷ್ಣ. ಇವರಲ್ಲಿ ನರ ಎಂದರೆ ಶೇಷ. ಶೇಷನಲ್ಲಿ ಭಗವಂತನ ವಿಶೇಷ ಆವೇಶ. ಇನ್ನು ಉಳಿದ ಮೂರು ರೂಪಗಳು ಭಗವಂತನ ಅವತಾರಗಳು. ಇವುಗಳಲ್ಲಿ ಹರಿ ಮತ್ತು ಕೃಷ್ಣ ರೂಪಗಳನ್ನು ಭಾಗವತ ಹೇಳುವುದಿಲ್ಲ. ನಾರಾಯಣ ಭಗವಂತನ ರೂಪ. ನರ-ನಾರಾಯಣ ಋಷಿಗಳಲ್ಲಿ ನರ ಎಂದರೆ ಶೇಷ, ಅವನಲ್ಲಿ ಭಗವಂತನ ವಿಶೇಷ ಆವೇಶ. ನಾರಾಯಣ ಭಗವಂತ.

     ಇವರು, ಮನಸ್ಸನ್ನು ನಿಗ್ರಹಮಾಡಿಕೊಂಡು ದುಶ್ಚರವಾದ ತಪಸ್ಸನ್ನು ಹೇಗೆ ಆಚರಿಸುವುದು ಎಂಬುದನ್ನು ತಾವು ಆಚರಿಸಿ  ತೋರಿಸಿದರು. ಬದರಿಯಲ್ಲಿ ನರ-ನಾರಾಯಣ ಪರ್ವತಗಳಲ್ಲಿ ವಾಸಿಸುತ್ತಿದ್ದರು. ಶ್ರೀಮದಾಚಾರ್ಯರು ಬದರಿಕಾಶ್ರಮಕ್ಕೆ ಹೋದಾಗ, ವ್ಯಾಸಾಶ್ರಮಕ್ಕೆ, ನರ-ನಾರಾಯಣಾಶ್ರಮಕ್ಕೆ ಹೋಗಿ ಅವರುಗಳನ್ನು ಕಂಡು ತಮ್ಮ ಶಾಸ್ತ್ರ ರಚನೆಗೆ ಅನುಮತಿ ಪಡೆದುಕೊಂಡುಬಂದರೆಂದು ಮಧ್ವವಿಜಯದಲ್ಲಿ ಶ್ರೀಯುತ ನಾರಾಯಣಪಂಡಿತಾಚಾರ್ಯರು ತಿಳಿಸಿರುತ್ತಾರೆ.
     ಭಗವಂತ ತನ್ನ ಕೆಲವು ಅವತಾರಗಳನ್ನು ಅಂದರೆ ವರಾಹ, ನರ-ನಾರಾಯಣ, ಪರಶುರಾಮ ರೂಪಗಳನ್ನು ಇಂದಿಗೂಸಹ ಉಪಸಂಹಾರ ಮಾಡಿರುವುದಿಲ್ಲ. ಈಗಲೂಸಹ ಬದರಿಯಲ್ಲಿ ನರ-ನಾರಾಯಣ ಪರ್ವತದಲ್ಲಿ ನರ-ನಾರಾಯಣರು ತಪಸ್ಸು ಮಾಡುತ್ತಾ ಇದ್ದಾರೆ ಎಂದು ಜ್ಞಾನಿಗಳು ಹೇಳುತ್ತಾರೆ.
 
ಐದನೇ ಅವತಾರ

ಪಂಚಮಃ ಕಪಿಲೋನಾಮ ಸಿದ್ದೇಶಃ ಕಾಲವಿಪ್ಲುತಮ್|
             ಪ್ರೋವಾಚಾಸುರಯೇ ಸಾಂಖ್ಯಂ ತತ್ವಗ್ರಾಮವಿನಿರ್ಣಯಂ||     
ಭಾಗವತ:- 1-3-10                   
 
     ಸ್ವಾಯಂಭುವಮನುವಿನ ಇನ್ನೊಬ್ಬ ಮಗಳು ದೇವಹೂತಿಯನ್ನು ಕರ್ದಮ ಪ್ರಜಾಪತಿ ಮದುವೆ ಮಾಡಿಕೊಂಡಿದ್ದನು. ಆ ದೇವಹೂತಿಯಲ್ಲಿ ಭಗವಂತ ಕಪಿಲನಾಮಕನಾಗಿ ಅವತಾರ ಮಾಡಿದ. ಈ ಕಪಿಲನನ್ನು ಕಪಿಲ ವಾಸುದೇವ ಎಂದೂ ಸಹ ಕರೆಯುತ್ತಾರೆ. ಈ ರೂಪದಿಂದ ವಾಸುದೇವಕಪಿಲ ತನ್ನ ಶಿಷ್ಯ ಆಸುರಿ ಎನ್ನುವವನಿಗೆ ಸಾಂಖ್ಯ ಶಾಸ್ತ್ರವನ್ನು ಉಪದೇಶಿಸಿದ. ಅದಕ್ಕೂ ಮೊದಲು ಕಪಿಲ ತನ್ನ ತಾಯಿಯಾದ ದೇವಹೂತಿಗೆ ಸಾಂಖ್ಯ ಶಾಸ್ತ್ರವನ್ನು ಉಪದೇಶಿಸಿದ್ದ.  ಈ ಭಗವಂತ ಉಪದೇಶಿಸಿದ  ಸಾಂಖ್ಯಶಾಸ್ತ್ರಕ್ಕೆ ತಂತ್ರ ಸಾಂಖ್ಯ ಎಂದು ಕರೆಯುತ್ತಾರೆ. ಏಕೆಂದರೆ ಅದು ವೇದಾಧೀನವಾದ ಸಾಂಖ್ಯ ಅಂದರೆ ವೈದಿಕಸಾಂಖ್ಯ. ಇನ್ನೊಬ್ಬ, ಭಗವಂತನ ಅವತಾರವಲ್ಲದ, ಕಪಿಲ ಎಂಬ ಋಷಿಯೂ ಬೋಧಿಸಿದ ಶಾಸ್ತ್ರಕ್ಕೂ ಸಹ ಸಾಂಖ್ಯವೆಂದು ಹೆಸರು. ಆದರೆ ಅದು ನಿರೀಶ್ವರ ಸಾಂಖ್ಯ-ಅವೈದಿಕ ಸಾಂಖ್ಯ. ಈ ಭಗವಂತನ ಅವತಾರವಾದ ಕಪಿಲ ಸಿದ್ಧಪುರುಷರಿಗೆಲ್ಲ ಆಚಾರ್ಯಪರುಷನಾಗಿ ನಿಂತು ಕಾಲಗತಿಯಲ್ಲಿ ನಷ್ಟವಾಗಿಹೋಗಿದ್ದ ಸಾಂಖ್ಯ ಶಾಸ್ತ್ರವನ್ನು ತನ್ನ ಶಿಷ್ಯ ಆಸುರಿ ಮೂಲಕ ಜಗತ್ತಿಗೆ ಕೊಟ್ಟ ರೂಪ. ಇಡೀ ಆಧ್ಯಾತ್ಮತತ್ವವನ್ನು ಸಂಖೈಯ ಮೂಲಕ ತಿಳಿಸಿದ. ಪಂಚ ಕಮರ್ೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು, ಪಂಚಭೂತಗಳು, ಪಂಚತನ್ಮಾತ್ರೆಗಳು ಮತ್ತು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ(5+5+5+5+4=24) ಈ ಇಪ್ಪತ್ನಾಲ್ಕು  ತತ್ವಗಳ ಒಳಗೆ ನಿಯಾಮಕನಾಗಿ ನಿಂತ ಭಗವಂತ ಇಪ್ಪತ್ತೈದನೇ ತತ್ವ ಎಂದು ಸಂಖೈಯ ಮೂಲಕ ನಿರೂಪಿಸಿದ.  ಸಾಂಖ್ಯಶಾಸ್ತ್ರವೆಂದರೆ  ಕೇವಲ ಸಂಖೈಯ ಮೂಲಕ ವಿಶ್ವವನ್ನ ತಿಳಿಸಿ ಕೊಡುವುದಷ್ಟೆಅಲ್ಲ. ಯಥಾರ್ಥವಾದ ಭಗವತ್ತತ್ವದ ಅರಿವಿಗೆ ಸಾಂಖ್ಯವೆಂದು ಹೆಸರು.  ಹೀಗೆ ಪ್ರಪಂಚದಲ್ಲಿ ಮೂಲಭೂತವಾದ ತತ್ವಗಳು ಎಷ್ಟು ಅಂತ ನಿರ್ಣಯ ಮಾಡುವ ಶಾಸ್ತ್ರವನ್ನು ತನ್ನ ಶಿಷ್ಯ ಆಸುರಿಯ ಮೂಲಕ ಜಗತ್ತಿಗೆ ಕೊಟ್ಟ ಅವತಾರ ಕಪಿಲಾವತಾರ.
ಆರನೆಯ ಅವತಾರ

ಷಷ್ಠೇ ಅತ್ರೇರಪತ್ಯತ್ವಂ ವೃತಃ ಪ್ರಾಪ್ತೋನಸೂಯಯಾ|
    ಅನ್ವೀಕ್ಷಿಕೀಮಲರ್ಕಾಯ ಪ್ರಹ್ಲಾದಾದಿಭ್ಯ ಊಚಿವಾನ್||     
ಭಾಗವತ:- 1-3-11                    
 
      ದೇವಹೂತಿಯಲ್ಲಿ ಭಗವಂತ ಕಪಿಲನಾಮಕನಾಗಿ ಅವತರಿಸುವುದಕ್ಕೂ ಮುನ್ನ ಅವಳಿಗೆ ಒಂಭತ್ತು ಜನ ಹೆಣ್ಣುಮಕ್ಕಳದ್ದರು. ಆ ಒಂಭತ್ತು ಜನರಲ್ಲಿ ಒಬ್ಬಳು ಅನುಸೂಯೆ.  ಅವಳನ್ನು ಅತ್ರಿ ಮಹರ್ಷಿ ಮದುವೆ ಮಾಡಿಕೊಂಡಿದ್ದ. ಈ ಅತ್ರಿ-ಅನುಸೂಯರ ಮಗನಾಗಿ ಮತ್ತೇ ಭಗವಂತನ ಅವತಾರ. ಅವನೇ ದತ್ತ.  ಅತ್ರಿಯ ಮಗನಾದುದರಿಂದ ದತ್ತಾತ್ರೇಯ ಎಂಬ ಹೆಸರಿನಿಂದ ಕರೆಯಲ್ಪಟ್ಟ ರೂಪ.

     ಅತ್ರಿ-ಅನುಸೂಯ ದಂಪತಿಗಳು, ಸೃಷ್ಟಿ-ಸ್ಥಿತಿ-ಸಂಹಾರಗಳ ನಿಯಾಮಕನಾದ ಭಗವಂತ ತಮ್ಮ ಮಗನಾಗಿ ಹುಟ್ಟಬೇಕೆಂದು ಪ್ರಾರ್ಥಿಸಿ  ತಪಸ್ಸು ಮಾಡಿದ್ದರು.  ಆದುದರಿಂದ ಭಗವಂತ ಅವರಲ್ಲಿ ಮೂರು ರೂಪಗಳಿಂದ ಹುಟ್ಟಬೇಕಾಯಿತು. ಏಕೆಂದರೆ ಭಗವಂತ ಬ್ರಹ್ಮನೊಳಗಿದ್ದು ಸೃಷ್ಟಿ ಕಾರ್ಯ ಮಾಡುತ್ತಾನೆ, ತಾನು ಸ್ವತಃ ವಿಷ್ಣು ಸ್ಠಿತಿಕಾರಕ,  ಶಿವನಲ್ಲಿದ್ದು ಸಂಹಾರ ಮಾಡುತ್ತಾನೆ. ಹೀಗಾಗಿ ಬ್ರಹ್ಮ-ವಿಷ್ಣು-ಮಹೇಶ್ವರರು ಅತ್ರಿ-ಅನುಸೂಯರ ಮಕ್ಕಳಾಗಿ ಹುಟ್ಟಿದರು. ವಿಷ್ಣು ತಾನು ದತ್ತನಾಗಿ ಅವತರಿಸಿದ; ಶಿವ ದೂರ್ವಾಸಮುನಿಯಾಗಿ ಅವತರಿಸಿದ; ಆದರೆ ಬ್ರಹ್ಮನಿಗೆ ಭೂಮಿಯಲ್ಲಿ ಜನ್ಮವಿಲ್ಲದಕಾರಣ ಚಂದ್ರನಲ್ಲಿ ಆವಿಷ್ಟನಾಗಿ, ಚಂದ್ರ ಮಗನಾಗಿ ಅವತರಿಸಿದ.

     ಇವರಲ್ಲಿ ವಿಷ್ಣು, ಅತ್ರಿ-ಅನುಸೂಯೆ ದಂಪತಿಗಳ ತಪಸ್ಸಿಗೆ ಮೆಚ್ಚಿ, ತನ್ನನ್ನು ತಾನು ದತ್ತ  ಅಂದರೆ ಕೊಟ್ಟುಕೊಂಡನಾದುದರಿಂದ ಅವನು ದತ್ತ.  ಅತ್ರಿಯ ಮಗನಾಗಿ ಹುಟ್ಟಿದ್ದರಿಂದ ದತ್ತಾತ್ರೇಯ.  ಹೆಸರೇ ದತ್ತಾತ್ರೇಯ ಅಲ್ಲ.
ಈಗ ನಮಗೆ ಸಾಮಾನ್ಯವಾಗಿ ಕಂಡುಬರುವ ದತ್ತಾತ್ರೇಯನ ಭಾವಚಿತ್ರ ಅಥವಾ ಕ್ಯಾಲೆಂಡರುಗಳಲ್ಲಿ ದತ್ತಾತ್ರೇಯನಿಗೆ ಮೂರು ತಲೆ- ಒಂದು ದೇಹ - ಒಂದು ಆಕಳು - ನಾಲ್ಕು ನಾಯಿಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರ ಅಶಾಸ್ತ್ರೀಯವಾದುದು. ವಾಸ್ತವವಾಗಿ ದತ್ತಾತ್ರೇಯನಿಗೆ ಮೂರು ತಲೆಗಳಿರಲಿಲ್ಲ; ಒಂದೇ ತಲೆ ಇತ್ತು. ಅನುಸೂಯೆ ಮೂರು ಮಕ್ಕಳನ್ನು ಹೆತ್ತಿದ್ದಳು. ಮೂರು ಮಕ್ಕಳಿಗೆ ಬೇರೆ-ಬೇರೆಯಾಗಿ ಮೂರು ತಲೆಗಳಿದ್ದವು. ಒಂದೇ ದೇಹದ ಒಂದೇ ಕುತ್ತಿಗೆಯಮೇಲೆ ಮೂರು ತಲೆಗಳಿರಲಿಲ್ಲ.  ಈ ಚಿತ್ರವನ್ನು ಯಾರೋ ಆರ್ವಾಚೀನ ಚಿತ್ರಗಾರರು ಕಲ್ಪಿಸಿಕೊಂಡು ಬರೆದ ಚಿತ್ರ. ಇದಕ್ಕೆ ಕಾರಣ ಏನೆಂದರೆ, ದತ್ತಾತ್ರೇಯ ಪಂಥ ಅಂತ ಒಂದು ಪಂಥವಿದೆ. ಆ ಪಂಥದವರು ಭಾಗವತ ಸಂಪ್ರದಾಯದವರು.  ಅವರ ಪ್ರಕಾರ ಬ್ರಹ್ಮ-ವಿಷ್ಣು-ಶಿವ ಈ ಮೂವರು ಬೇರೆಯಲ್ಲ. ಎಲ್ಲರೂ ಒಂದೆ. ಬ್ರಹ್ಮನೇ ವಿಷ್ಣು; ವಿಷ್ಣುವೇ ಶಿವ. ಅಭೇದೋಪಾಸನೆ.  ಹೀಗಾಗಿ ಮೂರು ತಲೆಗಳಿರುವ ಒಂದೇ ದೇವತೆಯನ್ನು ಕಲ್ಪಿಸಿಕೊಂಡು ರಚಿಸಲಾದ ಚಿತ್ರ. ಆದರೇ ಕೇವಲ ಭಾಗವತದಲ್ಲಿ ಮಾತ್ರವಲ್ಲ, ಬೇರೆ ಯಾವುದೇ ಪುರಾಣಗಳಲ್ಲಿಯೂ ಸಹ ಮೂರು ತಲೆಗಳುಳ್ಳ ದತ್ತಾತ್ರೇಯನ ಉಲ್ಲೇಖ ಬಂದಿರುವುದಿಲ್ಲ.  ಇಷ್ಟೇ ಅಲ್ಲದೆ, ತ್ರಿಮೂರ್ತಿಗಳು ಅನುಸೂಯೆಯನ್ನು ಪರೀಕ್ಷಿಸಲೋಸುಗ ಬತ್ತಲಾಗಿ ಹಾಲುಕುಡಿಸುವಂತೆ ಕೇಳಿದರು, ಅನುಸೂಯೆ ತ್ರಿಮೂರ್ತಿಗಳನ್ನು ಚಿಕ್ಕ ಮಕ್ಕಳನ್ನಾಗಿ ಮಾಡಿ ಹಾಲು ಕುಡಿಸಿದಳು ಎಂಬ ಇನ್ನು ಅನೇಕ ಕಥೆಗಳು ಕೇವಲ ಸುಳ್ಳು ಕಥೆಗಳು. ಯಾವುದೇ ಶಾಸ್ತ್ರೀಯ ಆಧಾರಗಳಿಲ್ಲ.


     ಈ ರೂಪದಿಂದ ಭಗವಂತ ಅಲರ್ಕ - ಪ್ರಹ್ಲಾದಾದಿಗಳಿಗೆ ಬ್ರಹ್ಮ ಜ್ಞಾನವನ್ನು ಊಪದೇಶಿಸಿದ.
 
                                                                         ಮುಂದುವರೆಯುವದು.......
 
ಕೆ. ಸತ್ಯನಾರಾಯಣರಾವ್,
ಈಶವಾಶ್ಯಂ, #1361, ವಿವೇಕಾನಂದನಗರ,
ಸಂಡೂರು ರಸ್ತೆ, ಹೊಸಪೇಟೆ-583 203.
 

2 comments:

  1. This comment has been removed by the author.

    ReplyDelete
  2. Nice!
    ಜ್ಞಾನ ನಿಂತ ನೀರಾಗಬಾರದು. ಅದು ಸದಾ ಹರಿಯುತ್ತಿರಬೇಕು. ಈ ದಿಕ್ಕಿನಲ್ಲಿ ನಿಮ್ಮ ಪ್ರಯತ್ನ ಶ್ಲಾಗನೀಯ
    you can also visit: http://bhagavatainkannada.blogspot.in/
    ಹರಿಃ ಓಂ

    ReplyDelete