Tuesday, February 5, 2013

ಶ್ರೀಮದ್ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು 7,8 & 9


(ಮುಂದುವರಿದ ಭಾಗ)

ಏಳನೇ ಅವತಾರ.
 
            ತತಃ ಸಪ್ತಮ ಆಕೂತ್ಯಾಂ ರುಚೇರ್ಯಜ್ಞೋಭ್ಯಜಾಯತ |
            ಸ ಯಾಮಾದ್ಯೆಃ ಸುರಗಣೈರಪಾತ್ಸ್ವಾಯಮ್ಭುವಾನ್ತರಮ್ ||  
                                                                        ಭಾಗವತ......1-3-12
 
1.  ಸ್ವಾಯಂಭುವ ಮನುವಿನ ಮೂರು ಹೆಣ್ಣುಮಕ್ಕಳಲ್ಲಿ ದೇವಹೂತಿ ಮತ್ತು ಪ್ರಸೂತಿ ಈ ಇಬ್ಬರ ನಂತರ ಉಳಿದ ಮೂರನೆಯವಳಾದ ಆಕೂತಿಯ ವಿಷಯ ನೋಡೋಣ. ಈ ಆಕೂತಿಯನ್ನು ರುಚಿ ಪ್ರಜಾಪತಿ ಮದುವೆ ಮಾಡಿಕೊಂಡಿದ್ದ.  ಈ ದಂಪತಿಗಳಲ್ಲಿ ಭಗವಂತ ಯಜ್ಞ ನಾಮಕನಾಗಿ ಅವತರಿಸಿಬಂದ.  ಈ ಯಜ್ಞ ನಾಮಕ ಭಗವಂತನೇ ಸ್ವಾಯಂಭುವ ಮನ್ವಂತರದ ಇಂದ್ರನಾದ. ಬೇರೆ ಬೇರೆ ಮನ್ವಂತರಗಳಲ್ಲಿ ಬೇರೆ ಬೇರೆ ದೇವತೆಗಳು ಇಂದ್ರ ಪದವಿಯನ್ನು ಆಳುತ್ತಾರೆ. ಸ್ವಾಯಂಭುವಮನ್ವಂತರದಲ್ಲಿ ಯಜ್ಞನಾಮಕ ಭಗವಂತನೇ ಇಂದ್ರಪದವಿಯಲ್ಲಿ ಇದ್ದ. ನಂತರ ಸ್ವಾರೋಚಿಷ ಮನ್ವಂತರದಲ್ಲಿ ವಾಯುದೇವರೇ ರೋಚನ ನಾಮಕನಾಗಿ ಇಂದ್ರ ಪದವಿಯಲ್ಲಿದ್ದರು. ನಂತರದ ಮನ್ವಂತರಗಳಲ್ಲಿ ಅಶ್ವಿನಿದೇವತೆಗಳು, ಯಮ, ಪುರಂದರ ಎನ್ನುವ ದೇವತೆಗಳು ಇಂದ್ರಪದವಿಯನ್ನು ಆಳಿದರು. ಈ ಯಜ್ಞನಾಮಕನಾದ ಭಗವಂತನೇ ಮುಂದೆ ಕೃಷ್ಣನಾಗಿ, ರೋಚನನಾಮಕ ವಾಯುದೇವರೇ ಭೀಮಸೇನನಾಗಿ, ಪುರಂದರನಾಮಕ ಇಂದ್ರನೇ ಅರ್ಜುನನಾಗಿ, ಅಶ್ವಿನಿ ದೇವತೆಗಳೇ ನಕುಲ-ಸಹದೇವರಾಗಿ ಜನಿಸಿದರು. ಈ ಪಾಂಡವರೆಲ್ಲ ಈ ಮೊದಲು ಇಂದ್ರಪದವಿಯಲ್ಲಿದ್ದು ಬಂದವರು.

2.   ಸ್ವಾಯಂಭುವಮನ್ವಂತರದ ರಕ್ಷಣೆ ಮಾಡಬೇಕಿದ್ದ ಸ್ವಾಯಂಭುವ ಮನುವನ್ನು ಒಮ್ಮೆ ಅಸುರರೆಲ್ಲರೂ ಒಟ್ಟಾಗಿ ಕೊಂದುಬಿಡಬೇಕೆಂದು ತೀರ್ಮಾನಿಸಿದರು. ಹಾಗೆ ಮಾಡುವ ಮೂಲಕ ಪ್ರಪಂಚದ ವ್ಯವಸ್ಥೆಯನ್ನು ಅಲ್ಲೋಲ-ಕಲ್ಲೋಲಗೊಳಿಸಲು ಪ್ರಯತ್ನಿಸಿದರು. ಆಗ ಸ್ವಾಯಂಭುವಮನು ಆ ಅಸುರರೊಡನೆ ಹೋರಾಡುವ ಸ್ಥಿತಿಯಲ್ಲಿರಲಿಲ್ಲ. ಆಗ ಸ್ವಾಯಂಭುವಮನು, ತನ್ನ ಮಗಳು ಆಕೂತಿಯಮಗನಾಗಿ, ಅಂದರೆ ತನ್ನ ಮೊಮ್ಮಗನಾಗಿ ಅವತರಿಸಿಬಂದ ಯಜ್ಞನಾಮಕ ಭಗವಂತನನ್ನು ಧ್ಯಾನಮಾಡುತ್ತಾ ವೇದಮಂತ್ರವನ್ನು ಕಂಡ. ಅದೇ ಈಶಾವಾಶ್ಯೋಪನಿಷತ್ತು. ಈ ಉಪನಿಷತ್ತಿನ ಮಂತ್ರಗಳಿಂದಲೇ ಸ್ವಾಯಂಭುವಮನು, ತನಗೆ ಆಪತ್ತು ಬಂದಾಗ ಭಗವಂತನನ್ನು ರಕ್ಷಣೆಮಾಡುವಂತೆ ಪ್ರಾರ್ಥಿಸಿದ. ಆಗ ಆ ಮನ್ವಂತರದ ಇಂದ್ರನಾಗಿದ್ದ ಯಜ್ಞನಾಮಕ ಭಗವಂತನು ಪ್ರತ್ಯಕ್ಷನಾಗಿ, ತಾನು, ಯಾಮನಾಮಕರಾದ ದೇವತೆಗಳೊಡನೆ, ಆ ಅಸುರರನ್ನೆಲ್ಲ ನಾಶಮಾಡಿ, ಆ ಮನ್ವಂತರ ಸಾಂಗವಾಗಿ ಮುಂದುವರಿಯುವಂತೆಮಾಡಿ, ಸ್ವಾಯಂಭುವಮನುವಿಗೆ ರಕ್ಷಣೆ ನೀಡಿದ.

3.   ಈಶಾವಾಶ್ಯೋಪನಿಷತ್ತು ಇದು ಈ ಉಪನಿಷತ್ತಿನ ಮೂಲ ಹೆಸರಲ್ಲ. ಈ ಉಪನಿಷತ್ತು ಈಶಾವಾಶ್ಯಮಿದಂಞ್ ಸರ್ವಂ ಎಂದು ಪ್ರಾರಂಭವಾಗುವುದರಿಂದ, ನೆನಪಿಟ್ಟುಕೊಳ್ಳಲು ಸುಲಭವಾಗುವುದೆಂಬ ಕಾರಣದಿಂದ ಬಂದ ಹೆಸರು.  ಈ ಉಪನಿಷತ್ತಿನ ಮೂಲಹೆಸರು ಯಾಜ್ಞೀಯ ಮಂತ್ರೋಪನಿಷತ್ತು.  ಏಕೆಂದರೆ, ಈ ಉಪನಿಷತ್ತಿನ ಪೃತಿಪಾದ್ಯದೇವತೆ ಯಜ್ಞ ನಾಮಕ ಭಗವಂತ. ಇತರೆ ಎಲ್ಲಾ ಉಪನಿಷತ್ತುಗಳು ವೇದಗಳ ಬ್ರಾಹ್ಮಣ ಅಥವಾ ಆರಣ್ಯಕಗಳಲ್ಲಿ ಇವೆ. ಆದರೆ ಈ ಉಪನಿಷತ್ತು ಮಾತ್ರ ಮಂತ್ರಭಾಗದಲ್ಲಿದೆ. ಶುಕ್ಲಯಜುರ್ವೇದದ ಸಂಹಿತೆಯ (ಮಂತ್ರಭಾಗದ) ನಲವತ್ತನೆಯ ಅಧ್ಯಾಯವೇ ಈ ಉಪನಿಷತ್ತು. ಆದುದರಿಂದ ಈ ಉಪನಿಷತ್ತು ಮಂತ್ರೋಪನಿಷತ್ತು, ಪ್ರತಿಪಾದ್ಯ ದೇವತೆ ಯಜ್ಞನಾಮಕನಾದುದರಿಂದ ಯಾಜ್ಞೀಯಮಂತ್ರೋಪನಿಷತ್ತು. ಸ್ವಾಯಂಭುವಮನುವಿನ ನಂತರ, ಈ ಮಂತ್ರವನ್ನ ಕಂಡವರೆಂದರೆ, ಸೂರ್ಯ, ಯಾಜ್ಞವಲ್ಕ್ಯ ಕಣ್ವ ಋಷಿ, ದಧ್ಯಂಗಾಥರ್ವಣ ಮುಂತಾದವರು. ಇದು ಏಳನೇ ಅವತಾರ.

ಎಂಟನೇ ಅವತಾರ

            ಅಷ್ಟಮೋ ಮೇರುದೇವ್ಯಾಂ ತು ನಾಭೇರ್ಜಾತ ಉರುಕ್ರಮಃ |
            ದರ್ಶಯನ್ವತ್ರ್ಮ ಧೀರಾಣಾಂ ಸರ್ವಾಶ್ರಮ ನಮಸ್ಕೃತಮ್ ||       ಭಾಗವತ  1-3-13


4.   ಇಲ್ಲಿಯವರೆಗೆ ಸ್ವಾಯಂಭುವಮನುವಿನ ಹೆಣ್ಣುಮಕ್ಕಳ ಸಂತತಿಯನ್ನು ನೋಡಿದೆವು. ಸ್ವಾಯಂಭುವಮನುವಿಗೆ ಈ ಮೂವರು ಪುತ್ರಿಯರಲ್ಲದೆ ಇಬ್ಬರು ಗಂಡುಮಕ್ಕಳಿದ್ದರು.  ಅವರೆಂದರೆ, (1) ಉತ್ತಾನಪಾದ; (2)ಪ್ರಿಯವ್ರತ. ಇವರಲ್ಲಿ ಪ್ರಿಯವ್ರತನ ಮಗ ಆಗ್ನೀಧ್ರ; ಆಗ್ನೀಧ್ರನ ಮಗ ನಾಭಿರಾಜ; ನಾಭಿರಾಜನ ಮಗನಾಗಿ ವೃಷಭದೇವ ನಾಮಕನಾಗಿ ಭಗವಂತನ ಅವತಾರ. ನಾಭಿರಾಜ ಒಮ್ಮೆ ಯಜ್ಞ ಮಾಡಿ ತನಗೆ ದೇವರಂಥ ಮಗ ಹುಟ್ಟಬೇಕೆಂದು ಪ್ರಾರ್ಥಿಸಿಕೊಂಡನಂತೆ. ದೇವರಂಥ ಮಗ ಹುಟ್ಟಬೇಕೆಂದರೆ, ದೇವರಂತಹ ಇನ್ನೊಬ್ಬನಿಲ್ಲದ ಕಾರಣ, ಆ ದೇವರೇ ಮಗನಾಗಿ ಹುಟ್ಟಬೇಕಾಯಿತು ಎನ್ನುತ್ತದೆ ಭಾಗವತ. ಹೀಗಾಗಿ ನಾಭಿರಾಜನ ಪ್ರಾರ್ಥನೆಯಂತೆ ನಾಭಿರಾಜ ಮತ್ತು ಅವನ ಪತ್ನಿ ಮೇರುದೇವಿ ಇವರ ದಾಂಪತ್ಯದಲ್ಲಿ ವೃಷಭದೇವ ಎಂಬ ಹೆಸರಿನಿಂದ ಭಗವಂತ ಅವತಾರಮಾಡಿದ. ಈ ವೃಷಭದೇವನ ಮಗನೇ ಅತ್ಯಂತ ಪ್ರಸಿದ್ದನಾದ ಭರತ ಚಕ್ರವತರ್ಿ.  ಈ ಭರತಚಕ್ರವರ್ತಿಯಿಂದಲೇ ನಮ್ಮ ದೇಶಕ್ಕೆ ಭಾರತ ಎಂದು ಹೆಸರು ಬಂದಿತು. ಅದಕ್ಕೂ ಮುಂಚೆ ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಇರಲಿಲ್ಲ.

5.    ಈ ವೃಷಭದೇವ ಇಡೀ ದೇಶವನ್ನಾಳುವ ಸಮಯದಲ್ಲಿ, ಭಗವಂತ ಒಂದು ಲೀಲಾನಾಟಕವಾಡಿದ್ದಾನೆ. ಈ ಸ್ವಾಯಂಭುವಮನ್ವಂತರದ ಇಂದ್ರ ಯಜ್ಞನಾಮಕನೂ ಭಗವಂತನ ಅವತಾರ. ಈ ಭೂಮಿಯನ್ನು ಆಳುತ್ತಿರುವ ವೃಷಭದೇವನೂ ಭಗವಂತನ ಅವತಾರ. ಹೀಗಿರುವಾಗ ಒಮ್ಮೆ ಯಜ್ಞನಾಮಕ ಇಂದ್ರನು ಬೇಕೆಂದೇ ಮಳೆ ಬರಿಸಲಿಲ್ಲವಂತೆ. ಆಗ ವೃಷಭದೇವನು ಮಳೆ ಬರಿಸಿದನಂತೆ. ಈ ರೀತಿಯಾಗಿ ಎರಡು ಭಗವದ್ರೂಪಗಳ ನಡುವೆ ಜಗಳವಾದಂತೆ ಲೀಲಾನಾಟಕ.

6.   ಈ ರೀತಿಯಾಗಿ ದೇಶವನ್ನಾಳಿದ ವೃಷಭದೇವ ಒಂದು ದಿನ ಎಲ್ಲಾ ಆಡಳಿತವನ್ನು ತನ್ನ ಮಗನಾದ ಭರತನಿಗೆ ಬಿಟ್ಟುಕೊಟ್ಟು ತಾನು ಎಲ್ಲವನ್ನು ತೊರೆದು ಎಲ್ಲ ಆಶ್ರಮದರೂ ನಮಸ್ಕರಿಸುವಂತಹ ಸನ್ಯಾಸಾಶ್ರಮ ಸ್ವೀಕಾರ ಮಾಡಿ ಪರಿವ್ರಾಜಕನಾಗಿ ಹೊರಟುಹೋದನಂತೆ. ಎಲ್ಲವನ್ನೂ ಅಂದರೆ ತಾನು ಉಟ್ಟ ಬಟ್ಟೆಗಳನ್ನೂ ಸಹ ತೊರೆದು, ದಿಗಂಬರನಾಗಿ ಹೊರಟುಬಿಟ್ಟ. ಜನ ಅವನನ್ನು ಹುಚ್ಚನಾದ ಎಂದು ತಿಳಿದು, ಅಯ್ಯೋ ಒಬ್ಬ ಮಹಾನ್ ಚಕ್ರವತರ್ಿಗೆ ಎಂಥಾ ಗತಿ ಬಂತು, ತಲೆಕೆಟ್ಟುಹೋಗಿ, ಬಟ್ಟೆ ಬಿಚ್ಚಿಕೊಂಡು ತಿರುಗಾಡುತ್ತಿದ್ದಾನೆ ಎಂದು ಅನುಕಂಪದ ಮಾತುಗಳನ್ನಾಡಿದರಂತೆ. ಆದರೆ ವಾಸ್ತವವಾಗಿ ತಲೆ ಕೆಟ್ಟಿದ್ದು ಈ ರೀತಿ ಮಾತನಾಡುವ ಜನರಿಗೆ; ವ್ರಷಭದೇವ ವ್ಯೆರಾಗ್ಯತಾಳಿ ಆ ರೀತಿ ವತರ್ಿಸುತ್ತಿದ್ದಾನೆ ಎಂಬ ವಿಷಯ ಸಾಮಾನ್ಯಜನರ ಬುದ್ದಿಗೆ ಎಟುಕದ ವಿಷಯವಾಗಿತ್ತು. ಹೀಗೆ ಸರ್ವಸಂಗ ಪರಿತ್ಯಾಗಮಾಡಿ ಹೊರಟ ವೃಷಭದೇವ ನಮ್ಮ ದಕ್ಷಿಣಕನ್ನಡ ಜಿಲ್ಲೆಯ, ಕೊಲ್ಲೂರಿನ ಹತ್ತಿರವಿರುವ ಕುಟಚಾದ್ರಿ ಬೆಟ್ಟದಲ್ಲಿ ಬಂದು ಮಲಗಿಕೊಂಡಿದ್ದನಂತೆ. ಒಂದುದಿವಸ ಅವನು ತನ್ನ ಯೋಗಸಿದ್ದಿಯಿಂದ ಯೋಗಾಗ್ನಿಯನ್ನು ಸೃಷ್ಟಿಸಿ ತನ್ನ ಅವತಾರ ಸಮಾಪ್ತಿ ಮಾಡಿದ. ಅವನು ಸೃಷ್ಟಿಸಿದ ಅಗ್ನಿಯಿಂದಾಗಿ ಕಾಡಿಗೆ ಬೆಂಕಿಹತ್ತಿ ಕಾಳ್ಗಿಚ್ಚು ಹರಡಿ ಅರಣ್ಯ ಉರಿಯತೊಡಗಿತು. ಬೆಂಕಿ ಆರಿದ ನಂತರದಲ್ಲಿ ಜನರಿಗೆ ವೃಷಭದೇವ ಕಾಣಲಿಲ್ಲ. ಆವರು ಅವನನ್ನ ಕಾಳ್ಗಿಚ್ಚಿನಲ್ಲಿ ಸುಟ್ಟುಹೋದ ಎಂದು ತಿಳಿದುಕೊಂಡರು.  ಹೀಗೆ ಜನರಿಗೆ ಭ್ರಮೆಯುಂಟಾಗುವಂತೆ ತನ್ನ ವಿಚಿತ್ರ ಲೀಲೆಯನ್ನು ತೋರಿದ. ಇವನು ದಿಗಂಬರನಾಗಿ ತಿರುಗಾಡುತ್ತಾ, ತನ್ನ ತಲೆಕೂದಲುಗಳನ್ನು ತಾನೇ ಕಿತ್ತು ತೆಗೆಯುತ್ತಿದ್ದ ವರ್ತನೆಯನ್ನು ಅನುಸರಿಸಿ ಒಂದು ಹೊಸ ಪಂಥವೇ ಹುಟ್ಟಿಕೊಂಡಿತು. ಅದೇ ಜೈನ ಪಂಥ. ಈ ವೃಷಭದೇವನೇ ಜೈನಪಂಥದ ಆದಿ ತೀರ್ಥಂಕರ. ಜೈನ ಧರ್ಮದಲ್ಲಿ ಒಟ್ಟು ಇಪ್ಪತ್ನಾಲ್ಕು ತಿರ್ಥಂಕರರು ಆಗಿಹೋಗಿದ್ದಾರೆ. ಇಪ್ಪತ್ನಾಲ್ಕನೇ ಅಂದರೆ ಕೊನೆಯ ತಿರ್ಥಂಕರನೇ ಮಹಾವೀರ. ಇವನು ಗೌತಮಬುದ್ದನ ಸಮಕಾಲೀನ.  ಹೀಗೆ ಜೈನ ಮತ್ತು ಬೌಧ್ದ ಧರ್ಮಗಳೆರಡಕ್ಕೂ ಮೂಲ ಪುರುಷ, ಭಗವಂತನ ಅವತಾರಗಳೇ ಎಂದು ಭಾಗವತ ನಮಗೆ ತಿಳಿಸಿಕೊಡುತ್ತದೆ.

7.    ಈ ಎಂಟು ಅವತಾರಗಳು ಸ್ವಾಯಂಭುವಮನ್ವಂತರದಲ್ಲಿ ಆದ ಅವತಾರಗಳು.

8.   ಸ್ವಾಯಂಭುವಮನುವಿನ ಇನ್ನೊಬ್ಬ ಮಗ ಉತ್ತಾನಪಾದನ ಸಂತತಿಯಲ್ಲಿ ವಿಶೇಷ ಭಗವಂತನ ಅವತಾರಗಳು ಇಲ್ಲವಾದರೂ, ಉತ್ತಾನಪಾದನ ಒಬ್ಬ ಮಗ ಧೃವನನ್ನು ಅನಗ್ರಹಿಸಿದ ರೂಪ ಭಗವಂತನ ವಾಸುದೇವ ರೂಪ. ಧೃವವರದ ವಾಸುದೇವ.  ಸ್ವಾಯಂಭುವ ಮನ್ವಂತರದ ನಂತರದ ಮನ್ವಂತರ ಸ್ವಾರೋಚಿಷ ಮನ್ವಂತರದಲ್ಲಿ ಭಗವಂತನ ಅವತಾರವಿಲ್ಲ. ನಂತರದ ಮನ್ವಂತರಗಳೆಂದರೆ, ಉತ್ತಮ, ತಾಪಸ ಮತ್ತು ರೈವತ. ಈ ಮೂರು ಮನುಗಳು ಪ್ರಿಯವ್ರತನ ಮಕ್ಕಳು.  ಈ ಮೂವರಲ್ಲಿ ತಾಪಸ ಮನು ಭಗವಂತನ ಅವತಾರ ಎಂದು ತಿಳಿದುಬರುತ್ತದೆ.  ನಂತರದ ಆರನೇ ಮನ್ವಂತರವೇ ಚಾಕ್ಷುಷ ಮನ್ವಂತರ. ಅಂದರೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಹಿಂದಿನ ಮನ್ವಂತರ.  ಈ ಮನ್ವಂತರದಲ್ಲಿಯೂಸಹ ಭಗವಂತನ ಅವತಾರವಿಲ್ಲವಾದರೂ, ಒಂದು ಆವೇಶಾವತಾರವಿದೆ. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.
                                                       (ಮುಂದುವರಿಯುವದು)
ಕೆ. ಸತ್ಯನಾರಾಯಣರಾವ್,
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇಟೆ.

 
 
 

 

No comments:

Post a Comment