Wednesday, February 27, 2013

ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು - 9, 10

             
(ಮುಂದುವರಿದ ಭಾಗ)

ಒಂಭತ್ತನೇ ಅವತಾರ

                ಋಷಿಭಿರ್ಯಾಚಿತೋ ಭೇಜೇ ನವಮಂ ಪಾರ್ಥಿವಂ ವಪುಃ |
                ದುಗ್ಧೇಮಾಮೋಷಧೀರ್ವಿಪ್ರಾಸ್ತೇನಾಯಂ ಸ ಉಶತ್ತಮಃ ||.     ಭಾಗವತ. 1-3-14.


     ಸ್ವಾಯಂಭುವ ಮನುವಿನ ಇನ್ನೊಬ್ಬಮಗ ಉತ್ತಾನಪಾದ. ಈ ಉತ್ತಾನಪಾದನ ಮಗನೇ ಧೃವ. ಈ ಧೃವನ ನಂತರದಲ್ಲಿ ಇದೇ ವಂಶದಲ್ಲಿ ಮುಂದೆ ಚಕ್ಷುಷ್ ಎನ್ನುವ ಒಬ್ಬ ರಾಜ. ಆ ಚಕ್ಷುಷನ ಮಗನೇ ಚಾಕ್ಷುಷ ಮನು.  ಅಂದರೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಹಿಂದಿನ ಮನ್ವಂತರ, ಆರನೇ ಮನ್ವಂತರವೇ ಚಾಕ್ಷುಷ ಮನ್ವಂತರ. ಈ ಮನ್ವಂತರದಲ್ಲಿ ಮುಂದೆ ಪೃಥು ಚಕ್ರವರ್ತಿ ಎನ್ನುವವನು ಬರುತ್ತಾನೆ. ಇವನಲ್ಲಿ ಭಗವಂತನ ವಿಶೇಷ ಸನ್ನಿಧಾನ. ಹೀಗೆ ಇದು ಭಗವಂತನ ಪೂರ್ಣಾವತಾರವಲ್ಲ. ಭಗವಂತನ ವಿಶೇಷ ಆವೇಶಾವತಾರ.

     ದೇಶವನ್ನಾಳುವ ಪ್ರತಿಯೊಬ್ಬ ರಾಜನಲ್ಲಿ ಒಂದು ಭಗವಂತನ ರೂಪ ಸನ್ನಿಹಿತವಾಗಿರುತ್ತದೆ. ಅದನ್ನು ರಾಜರಾಜೇಶ್ವರ ರೂಪ ಎಂದು ಕರೆಯುತ್ತಾರೆ. ಈ ರೂಪದಿಂದ ಭಗವಂತ ಎಲ್ಲ ರಾಜರ ಒಳಗಿದ್ದು ಆಡಳಿತ ನಡೆಸುತ್ತಾನೆ. ಈ ಕಾರಣಕ್ಕಾಗಿಯೇ ''  ರಾಜಾ ಪ್ರತ್ಯಕ್ಷ ದೇವತಾ '' ಎನ್ನಿಸಿಕೊಳ್ಳುತ್ತಾನೆ.  ಪೃಥು ಚಕ್ರವರ್ತಿಯಲ್ಲಿ ಈ ರಾಜರಾಜೇಶ್ವರ ರೂಪವಲ್ಲದೆ, ಪೃಥು ಎಂಬ ಹೆಸರಿನ ಭಗವಂತನ ವಿಶೇಷ ಆವೇಶವಿತ್ತು ಎಂದು ಭಾಗವತ ಪುರಾಣ ಹೇಳುತ್ತದೆ.

     ಈ ಪೃಥು ಚಕ್ರವರ್ತಿಯ ಅಜ್ಜ ಅಂದರೆ ತಂದೆಯ ತಂದೆ ಅಂಗರಾಜ.  ಈ ಅಂಗ, ವಂಗ, ಕಳಿಂಗ  ಎಂಬ ಹೆಸರಿನ ದೇಶಗಳಲ್ಲಿ, ಅಂಗ ಎಂಬ ದೇಶಕ್ಕೆ, ಈ ಹೆಸರು ಬಂದಿದ್ದು ಈ ಅಂಗರಾಜನಿಂದಲೇ. ಇವನು ಬಹಳ ಒಳ್ಳೆಯ ರಾಜ. ಉತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದನು. ಈ ಅಂಗ ರಾಜನಿಗೆ ಒಬ್ಬ ಮಗನಿದ್ದನು. ಅವನ ಹೆಸರು ವೇನ. ಇವನು ಮಹಾ ದುಷ್ಟ. ಇವನು ಚಿಕ್ಕವನಿರುವಾಗಿನಿಂದಲೇ ಬಹಳ ಕ್ರೂರಿಯಾಗಿದ್ದ. ಬೇರೆಯವರ ಮಕ್ಕಳನ್ನು ತನ್ನೊಡನೆ ಆಟವಾಡಲು ಕರೆಯುತ್ತಿದ್ದ. ರಾಜನ ಮಗನಾದ್ದರಿಂದ ಅವನ ಮಾತನ್ನು ತಿರಸ್ಕರಿಸುವಹಾಗಿರಲಿಲ್ಲ. ಹಾಗೆ ಆಡಲಿಕ್ಕೆಂದು ಮಕ್ಕಳೊಡನೆ ಸ್ವಲ್ಪಹೊತ್ತು ಆಟವಾಡಿ ನಂತರದಲ್ಲಿ ಆ ಮಕ್ಕಳನ್ನು ಭಾವಿಗೆ ತಳ್ಳಿಬಿಡುತ್ತಿದ್ದನಂತೆ. ಆ ಮಕ್ಕಳು ಭಾವಿಯಲ್ಲಿ ನೀರಿನಲ್ಲಿ ವಿಲವಿಲ ಒದ್ದಾಡಿ ಸಾಯುವುದನ್ನು ಕಂಡು ಖುಷಿ ಪಡುತ್ತಿದ್ದನಂತೆ. ಎಷ್ಟೇ ಪ್ರಯತ್ನ ಪಟ್ಟರೂ ಅಂಗರಾಜನಿಗೆ ಈ ಮಗನನ್ನು ತಿದ್ದಲಿಕ್ಕಾಗಲೀ, ನಿಯಂತ್ರಣದಲ್ಲಿಡುವುದಕ್ಕಾಗಲೀ ಸಾಧ್ಯವಾಗದೇ ಹೋಯಿತು. ಇವನ ಈ ವರ್ತನೆಯಿಂದ ಬೇಸತ್ತ ರಾಜ, ಕಣ್ಣೀರು ಸುರಿಸುತ್ತಾ, ಒಂದು ದಿನ ರಾತ್ರಿ ತನ್ನ ಹೆಂಡತಿಗೆ, ಮಗನಿಗೆ, ಯಾರಿಗೂ ಹೇಳದೆ ಅರಮನೆ ಬಿಟ್ಟು ಹೊರಟುಹೋಗಿ ಕಾಡು ಸೇರಿಬಿಟ್ಟನಂತೆ. ಈ ವಿಷಯ ತಿಳಿದನಂತರ, ಊರಿನ ಪ್ರಮುಖರು, ಋಷಿಗಳು ಸೇರಿ ಆಗಿನ ಕಾಲದ ಸಂಪ್ರದಾಯದಂತೆ, ಈ ವೇನನನ್ನೇ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಕಟ್ಟಿದರು. ರಾಜನಾದ ತಕéಣ ಈ ವೇನನು ಒಂದು ಆಜ್ಞೆಯನ್ನು ಹೊರಡಿಸಿ, ಇನ್ನು ಮುಂದೆ ಈ ದೇಶದಲ್ಲಿ ಯಾರೂ ಪ್ರತ್ಯೇಕ ದೇವರ ಪೂಜೆ ಮಾಡುವುದನ್ನು, ದೇವರಿಗೆ ಕಾಣಿಕೆಗಳನ್ನು ಸಮರ್ಪಿಸುವುದನ್ನು ನಿಷೇಧಿಸಿದನು. ತಾನು ರಾಜನಾದುದರಿಂದ, '' ರಾಜಾ ಪ್ರತ್ಯಕ್ಷ ದೇವತಾ '' ಎಂದು ತಿಳಿದು, ತನಗೇ ಪೂಜೆ-ಕಾಣಿಕೆಗಳನ್ನು ಸಲ್ಲಿಸಬೇಕು, ಬೇರೆ ಇತರೆ ಯಾವುದೇ ಧಾರ್ಮೀಕ ಕಾರ್ಯಗಳು ನಡೆಯಕೂಡದೆಂದು ಕಟ್ಟಪ್ಪಣೆ ವಿಧಿಸಿದ. ಇದರ ಪರಿಣಾಮವಾಗಿ, ಆ ದೇಶದಲ್ಲಿ ಭೀಕರ ಬರಗಾಲ ಪ್ರಾಪ್ತವಾಯಿತು. ತಿನ್ನಲಿಕ್ಕೆ ಅನ್ನವಿಲ್ಲ, ಕುಡಿಯಲು ನೀರಿಲ್ಲ, ಹಸುಗಳಿಗೂ ಸಹ ತಿನ್ನಲು ಹುಲ್ಲಿಲ್ಲದಂತಹ ಪ್ರಸಂಗ ಉಂಟಾಯಿತು. ಇದರಿಂದಾಗಿ, ಭೀಕರ ಸಾವು-ನೋವುಗಳುಂಟಾಗಿ, ದನಗಳ - ಮನುಷ್ಯರ ಹೆಣಗಳ ರಾಶಿಯೇ ಬಿದ್ದಿತಂತೆ. ಇದನ್ನು ಸಹಿಸಲಾಗದೆ ಆಗಿನ ಋಷಿಗಳು ಈ ಪರಿಸ್ಥಿತಿಗೆ ಕಾರಣನಾದ ಆ ವೇನನನ್ನು ಸಿಂಹಾಸನದಿಂದ ಕೆಳಗೆಳೆದು, ತಮ್ಮ ತಪಃಶ್ಶಕ್ತಿಯಿಂದ ಹೂಂಕಾರಮಾಡಿ ಅವನನ್ನು ಕೊಂದುಹಾಕಿದರಂತೆ.  ಮುಂದೆ ಆ ಋಷಿಗಳು ಭಗವಂತನ್ನು, ಒಬ್ಬ ಒಳ್ಳೇ ರಾಜನನ್ನು ಕೊಡುವಂತೆ ಪ್ರಾರ್ಥಿಸಿಕೊಂಡು, ಆ ವೇನನ ದೇಹವನ್ನೇ ಕಟೆದು (ಮಥಿಸಿ) ಒಂದು ಜೀವವನ್ನು ಸೃಷ್ಟಿಸಿದರು. ಅವನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಗಟ್ಟಿದರು. ಅವನೇ ಪೃಥುಚಕ್ರವರ್ತಿ. ಇವನು ಬಹಳ ಒಳ್ಳೆಯವನಾಗಿದ್ದು ಉತ್ತಮ ಆಡಳಿತವನ್ನು ನಡೆಸಿಕೊಂಡುಹೋದನು.

     ಇವನ ಆಡಳಿತ ಕಾಲ ಬರುವವರೆಗೆ, ಭೂಮಿಯಲ್ಲಿ ನಾಗರೀಕತೆ ಎನ್ನುವುದು ಇರಲಿಲ್ಲ. ಭೂಮಿಯೂ ಏರುಪೇರಾಗಿತ್ತು. ಸಮತಟ್ಟಾದ ಜಾಗವಿದ್ದಲ್ಲಿ ಮನೆ ಕಟ್ಟುವುದು ಎಲ್ಲಿ ನೀರು ನಿಂತಿರುತ್ತದೋ ಅಲ್ಲಿ ಬೇಸಾಯ ಮಾಡುವುದು ಹೀಗೆ ನಡೆದಿತ್ತು. ಆಗಿನ ಕಾಲದಲ್ಲಿ ಜನಸಂಖ್ಯೆಯೂ ಸಹ ಬಹಳ ಕಡಿಮೆ ಇತ್ತು.

     ಈ ಪೃಥುರಾಜನ ಆಡಳಿತ ಕಾಲದಲ್ಲಿ, ಅವನು ಏರುಪೇರಾಗಿದ್ದ ಭುಮಿಯನ್ನು ಸಮತಟ್ಟುಗೊಳಿಸಿ ಜನರ ವಸತಿಗಾಗಿ, ವ್ಯವಸಾಯಕ್ಕಾಗಿ, ಹುಲ್ಲುಗಾವಲಿಗಾಗಿ, ಮತ್ತು ಅರಣ್ಯವನ್ನು ಬೆಳೆಸುವುದಕ್ಕಾಗಿ, ಹೀಗೆ ಬೇರೆ ಬೇರೆ ಪ್ರಯೋಜನಕ್ಕಾಗಿ ಬೇರೆ ಬೇರೆ ಪ್ರದೇಶಗಳನ್ನಾಗಿ ವಿಭಾಗಮಾಡಿ, ನಗರಗಳನ್ನು ನಿರ್ಮಾಣಮಾಡಿದ. ನಗರಗಳಲ್ಲಿ, ವಾಹನಗಳು ಓಡಾಡಲು ರಸ್ತೆಗಳು, ವ್ಯವಸಾಯಕ್ಕಾಗಿ ಕೆರೆ-ಜಲಾಶಯಗಳು, ಕಾಲುವೆಗಳು, ಚರಂಡಿಗಳು, ಉದ್ಯಾನವನಗಳನ್ನು ನಿರ್ಮಾಣಮಾಡಿಸಿದ. ಹೀಗೆ ಜಗತ್ತಿನಲ್ಲಿ ಒಂದು ವ್ಯವಸ್ಥಿತವಾದ ನಗರ-ನಾಗರೀಕತೆಯ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ಪರಿಚಯಿಸಿದವನೇ ಈ ಪೃಥುರಾಜ. ಈ ರೀತಿಯಾಗಿ ಭೂಮಿಯಲ್ಲಿ ಸಮೃಧ್ಧವಾಗಿ ಬಂಗಾರದ ಬೆಳೆಯನ್ನು ಬೆಳೆದು ದೇಶದಲ್ಲಿ ಸುಭಿಕ್ಷೆಯುಂಟಾಗುವಂತೆ ಮಾಡಿದ. ಈ ರೀತಿಯಾಗಿ ಭೂಮಿಗೆ ಒಂದು ಹೊಸ ಜನ್ಮವನ್ನೇ ಕೊಟ್ಟಿದ್ದರಿಂದ ಈ ಭುಮಿಯನ್ನು ಜನ ಪೃಥುರಾಜನ ಮಗಳೆಂದು ಕರೆದರು. ಪೃಥುರಾಜನ ಮಗಳು ಎನಿಸಿಕೊಂಡ ಭೂಮಿಗೆ ಈ ರಾಜನಿಂದಾಗಿ ಪೃಥಿವೀ ಎಂಬ ಹೆಸರು ಬಂದಿತು. ಈ ಕಾರಣದಿಂದ ಪ್ರಜೆಗಳು ಅವನನ್ನು ಉಶತ್ತಮ ಎಂದು ಕರೆದರು. ಉಶತ್ತಮ ಎಂದರೆ ಸತ್ಯಕಾಮ ಅಂದರೆ ಬಯಸಿದ್ದನ್ನು ಮಾಡಬಲ್ಲವ ಎಂದು. ಹೀಗೆ ದೇಶದ ಸಮಗ್ರ ಏಳಿಗೆಗೆ ಕಾರಣನಾದ ಈ ಪೃಥುಚಕ್ರವರ್ತಿಯನ್ನ ಜನರು ಭಗವಂತನೆಂದು ಕರೆದರು. ಇದು ಭಗವಂತನ ಆವೇಶಾವತಾರ. ಇಲ್ಲಿಯವರೆವಿಗೂ ನಾವು ಚಾಕ್ಷುಷ ಮನ್ವಂತರದವರೆಗಿನ ಅವತಾರಗಳನ್ನು ನೋಡಿದ್ದಾಯಿತು.  ಇನ್ನು ಮುಂದೆ ವೈವಸ್ವತ ಮನ್ವಂತರದಲ್ಲಿ ಆದ ಅವತಾರಗಳನ್ನು ನೋಡೋಣ.

ಹತ್ತನೇ ಅವತಾರ:

               ಮಾತ್ಸ್ಯಂ ಸ ಜಗೃಹೇ ರೂಪಂ ಚಾಕ್ಷುಷಾಂತರ ಸಂಪ್ಲವೇ |
               ನಾವ್ಯಾರೋಪ್ಯ ಮಹೀಮಯ್ಯಾಮಪಾದ್ವ್ಯೆವಸ್ವತಂ ಮನುಂ||   ಭಾಗವತ: 1-3-15


     ಇದು ಮತ್ಯಾವತಾರ  - ಹತ್ತನೇ ಅವತಾರ ಅಂದರೆ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಮೊದಲನೇ ಅವತಾರ.
     ಒಂದು ಮನ್ವಂತರ ಮುಗಿದು ಅದರ ಮುಂದಿನ ಮನ್ವಂತರ ಪ್ರಾರಂಭವಾಗುವುದಕ್ಕೆ ಮುಂಚೆ ಒಂದು ಸಣ್ಣ ಪ್ರಳಯವಾಗುತ್ತದೆ. ಈ ಪ್ರಳಯದ ಅವಧಿ ಸುಮಾರು 1400 ವರ್ಷಗಳಿಂದ ಹಿಡಿದು 2000 ವರ್ಷಗಳು. ಈ ಅವಧಿಯಲ್ಲಿ ಭೂಮಿಯಮೇಲೆ ಜಲ ಪ್ರಳಯ ನಡೆಯುತ್ತಾ ಇರುತ್ತದೆ. ಆಗ ಭೂಮಿಯ ಬಹು ಭಾಗ ನಾಶವಾಗಿ ಹೋಗುತ್ತದೆ. ಭೂಮಿಯಮೇಲಿನ ಎಲ್ಲ ನಾಗರೀಕತೆ ಕೊಚ್ಚಿಹೋಗಿ , ಎಲ್ಲೋ ಒಂದು ಮೂಲೆಯಲ್ಲಿ  ಅಳಿದುಳಿದ ಜನರಿಂದ ಮುಂದಿನ ಮನ್ವಂತರ ಪ್ರಾರಂಭವಾಗುತ್ತದೆ. ಇದು ಪ್ರಕೃತಿಯು ತನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಕ್ರಮ. ಹೀಗಾಗದೇಹೋದರೆ, ಭೂಮಿಯಮೇಲೆ ವಾಸಮಾಡಲು ಜೀವಿಗಳಿಗೆ ಜಾಗವೇ ಇರುವುದಿಲ್ಲ.
     ಹೀಗೆ ಆರನೇ ಮನ್ವಂತರವಾದ ಚಾಕ್ಷುಷ ಮನ್ವಂತರ ಮುಗಿದು ಏಳನೇ ಮನ್ವಂತರವಾದ ವೈವಸ್ವತ ಮನ್ವಂತರ ಪ್ರಾರಂಭವಾಗುವುದಕ್ಕೆ ಮುಂಚೆ ನಡೆದ ಪ್ರಳಯದಲ್ಲಿ ಈ ಮತ್ಸ್ಯಾವತಾರವಾದದ್ದು. ಚಾಕ್ಷುಷ ಮನ್ವಂತರದ ಕೊನೆಯಲ್ಲಿ, ಒಂದು ದಿನ ಸೂರ್ಯನ ಪುತ್ರನಾದ ವೈವಸ್ವತಮನು ಸೂರ್ಯನಿಗೆ ಅಘ್ರ್ಯ ಕೊಡುತ್ತಿರುವ ಸಮಯದಲ್ಲಿ ಅವನ ಬೊಗಸೆಯಲ್ಲಿ ಒಂದು ಮೀನು ಕಂಡಿತು. ಅದನ್ನು ಅವನು ಅಘ್ರ್ಯಪಾತ್ರೆಗೆ ಹಾಕಿದ. ಆ ಪುಟ್ಟ ಮೀನು ಬೆಳೆದು ಆ ಪಾತ್ರೆಯ ತುಂಬ ತುಂಬಿತು. ಅದನ್ನು ತೆಗೆದುಕೊಂಡುಹೋಗಿ ಕೆರೆಯಲ್ಲಿ ಬಿಟ್ಟ. ಆ ಕೆರೆಯೂ ತುಂಬುವಷ್ಟು ದೊಡ್ಡಮೀನಾಗಿ ಬೆಳೆಯಿತು. ಸಮುದ್ರದಲ್ಲಿ ಬಿಟ್ಟ. ಅಲ್ಲಿಯೂ ಅದು ಮಹಾಮತ್ಸ್ಯವಾಗಿ ಸಮುದ್ರವನ್ನೆಲ್ಲ ತುಂಬಿತು. ಆ ಮೀನಿಗೆ ಒಂದು ಕೋಡು ಇತ್ತು. ಈ ಮನ್ವಂತರದ ಅಧಿಪತಿ ವೈವಸ್ವತಮನುವನ್ನು ರಕ್ಷಿಸುವುದಕ್ಕಾಗಿಯೇ ಭಗವಂತ ಮತ್ಸ್ಯರೂಪನಾಗಿ ಅವತರಿಸಿದ. ಭಗವಂತ ಯಾವುದೇರೂಪ ಧರಿಸಿದರು ಅದು ಅಪ್ರಾಕೃತರೂಪ. ಅದು ಜ್ಞಾನಾನಂದಮಯ. ಪಂಚಭೂತಗಳಿಂದಾದ ಶರೀರವಲ್ಲ ಎಂಬುದನ್ನು ಗಮನದಲ್ಲಿಡಬೇಕು. ಈ ರೂಪದಿಂದ  ಭಗವಂತ ವೈವಸ್ವತಮನುವನ್ನು ಆ ಪ್ರಳಯ ಜಲಧಿಯಲ್ಲಿ ಸಾಯದಂತೆ ರಕ್ಷಿಸಿ ಒಂದು ದೋಣಿಯಲ್ಲಿ ಕೂಡಿಸಿಕೊಂಡು , ಆ ದೋಣಿಯನ್ನು ತನ್ನ ಕೋಡಿಗೆ ಕಟ್ಟಿಕೊಂಡು ಆ ಪ್ರಳಯೋದಕದಿಂದ ಅವನನ್ನು ರಕ್ಷಿಸಿದ ಮತ್ತು ಅವನಿಗೆ ತತ್ವೋಪದೇಶಮಾಡಿ ಈಗಿನ ಮನ್ವಂತರದ ಅಧಿಪತಿಯನ್ನಾಗಿ ಮಾಡಿದ ಅವತಾರ. ಆ ಪ್ರಳಯದಲ್ಲಿ ಇದ್ದ ದೋಣಿ ಯಾವುದೆಂದರೆ, ಭೂಮಿಯೇ ಆ ದೋಣಿಯಾಗಿದ್ದಿತು. ಇದು ಹತ್ತನೇ ಅವತಾರ.

                                                               ಮುಂದುವರೆಯುವುದು.......


ಕೆ. ಸತ್ಯನಾರಾಯಣರಾವ್,
ಈಶಾವಾಶ್ಯಂ
ವಿವೇಕಾನಂದನಗರ, ಹೊಸಪೇಟೆ.
 

1 comment:

  1. Types of Baccarat | Aussie-friendly casino games online - Welsh
    The games are fairly straightforward, the 바카라 players can place their bets at a casino, with an odds of 10/2 deccasino and odds of 1/2. The main 인카지노 difference between those two

    ReplyDelete