Monday, August 19, 2013

ಉಪಾಕರ್ಮ


ಉಪಾಕರ್ಮ

ಉಪಾಕರ್ಮವನ್ನು ಶ್ರಾವಣಮಾಸದಲ್ಲಿರುವ ಬರುವ ಶ್ರವಣಾ ನಕ್ಷತ್ರದ ದಿನದಂದು ಋಗ್ವೇದಿಗಳು, ಶ್ರಾವಣ ಶುಕ್ಲದ ಪೂರ್ಣಿಮಾದಂದು ಯಜುರ್ವೇದಿಗಳು ಉಪಾಕರ್ಮ ವನ್ನು ಮಾಡಿಕೊಳ್ಳಬೇಕು. ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.
ಅಲ್ಲದೇ! ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ. ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆ ಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರ ಬೇಕೆಂದು ತಿಳಿ ಹೇಳುತ್ತದೆ. ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗ ವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವ ಸಂಕೇತ.
ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
 
ಉತ್ಸರ್ಜನ - ಉಪಾಕರ್ಮ ಎಂದರೇನು?

ಉತ್ಸರ್ಜನ ಎಂದರೆ ಬಿಡುವುದು ಎಂದರ್ಥ. ಯಾವುದನ್ನು ಬಿಡುವುದು ಎಂದರೆ ವೇದ ಗಳನ್ನು ಬಿಡುವುದು ಎಂದರ್ಥ. ಇದೇನಿದು ವೇದಗಳನ್ನು ಬಿಡುವುದು ಎಂದರೆ ಎನ್ನುವ ಸಂಶಯ ಬಂದರೆ ಇದಕ್ಕೆ ಹಿನ್ನೆಲೆ ಹೀಗಿದೆ - ಹಿಂದೆ ವೇದಕಾಲದಲ್ಲಿ ಋಷಿ-ಮುನಿಗಳು ವರ್ಷಪೂರ್ತಿ ವೇದಾಭ್ಯಾಸವನ್ನು ಮಾಡುತ್ತಿರಲಿಲ್ಲ. ಅದರಲ್ಲಿ ಸ್ವಲ್ಪ ದಿನಗಳ ಕಾಲ ವೇದಾಭ್ಯಾಸವನ್ನು ಬಿಟ್ಟು ವೇದದ ಅಂಗಗಳಾದ ಇನ್ನಿತರೇ ಶಾಸ್ತ್ರಗಳ ಅಧ್ಯಯನದಲ್ಲಿ, ಕೃಷ್ಯಾದಿಗಳಿಂದ ತಮ್ಮ ಉಪಜೀವನ ಕ್ಕೆ ಬೇಕಾದ ಧಾನ್ಯಸಂಗ್ರಹದಲ್ಲಿ ತೊಡಗುತ್ತಿದ್ದರು. ಅಂತಹ ಸಮಯದಲ್ಲಿ ವೇದಾಧ್ಯಯನವು ಅವಿಚ್ಛಿನ್ನವಾಗಿ ನಡೆಯಲು ಅಸಾಧ್ಯವಾದುದರಿಂದ, ಅಲ್ಲದೇ

ಅಧ್ಯಾಯೋತ್ಸರ್ಜನಂ ಮಾಘ್ಯಾಂ ಪೌರ್ಣಮಾಸ್ಯಾಂ ವಿಧೀಯತೇ |
ಅತ ಆರಭ್ಯ ಷಣ್ಮಾಸಾನ್ ಷಡಂಗಾನಿ ವಿಧೀಯತೇ ||

ಎನ್ನುವ ಪ್ರಮಾಣ ಶ್ಲೋಕ ದಿಂದ ಮಾಘ ಶುಕ್ಲ ಪೂರ್ಣಿಮಾದಂದು ವೇದಾಧ್ಯಯನವನ್ನು ಉತ್ಸರ್ಜನೆ ಮಾಡಿ (ಬಿಟ್ಟು) ವೇದದ ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂಧಶ್ಶಾಸ್ತ್ರ, ನಿರುಕ್ತ, ಜ್ಯೋತಿಷ್ಯಶ್ಶಾಸ್ತ್ರ, ಕಲ್ಪ ಎನ್ನುವ ವಿದ್ಯೆಗಳನ್ನು ಕಲಿಯಲು ಪ್ರಾರಂಭಿಸುತ್ತಿದ್ದರು. ಈ ರೀತಿಯಾಗಿ ನಿರಂತರವಾಗಿ ವೇದದ ಅಧ್ಯಯನ ವನ್ನು ಬಿಡುವುದಕ್ಕೆ‘ಉತ್ಸರ್ಜನ‘ ಎಂದು ಕರೆಯುತ್ತಿದ್ದರು. ಅಂತಹ ಸಮಯದಲ್ಲಿ ವೇದ ಮಂತ್ರ ಗಳ ಅಧ್ಯಯನವು ಲೋಪವಾಗಿ ಆ ವೇದಮಂತ್ರಗಳಿಗೆ ಯಾತಯಾಮತಾ (ಒಂದು ಯಾಮ ದಷ್ಟು ಕಾಲ ಮೀರುವುದು) ದೋಷವು ಬರುತ್ತಿತ್ತು. ಅಂತಹ ದೋಷವು ಕಳೆದು ವರ್ಣಾಶ್ರಮೋಕ್ತ ಕರ್ಮಗಳು ವೀರ್ಯವತ್ತಾಗಿ ಫಲ ಕೊಡಬೇಕಾದರೆ ಆಯಾಯಾ ಶಾಖೆಯವರು ಸ್ವಶಾಖೋಕ್ತ ವಿಧಿಯಿಂದ ಶ್ರಾವಣ ಶುಕ್ಲ ಪೂರ್ಣಿಮಾ ಅಥವಾ ಶ್ರವಣ ನಕ್ಷತ್ರದ ದಿನದಂದು ವೇದದ್ರಷ್ಟಾರ ರಾದ ಋಷಿಗಳನ್ನು ಪೂಜಿಸಿ, ಅವರ ಅನುಗ್ರಹದಿಂದ ನೂತನ ಯಜ್ಞೋಪವೀತವನ್ನು ಧಾರಣೆ ಮಾಡಿ ಪುನಃ ವೇದಾಧ್ಯಯನ - ಅಧ್ಯಾಪನವನ್ನು ಸ್ವೀಕರಿಸುವುದಕ್ಕೆ ‘ಉಪಾಕರ್ಮ‘ ಎಂದು ಕರೆಯುತ್ತಿದ್ದರು. ಈ ರೀತಿಯಾಗಿ ಉಪಾಕರ್ಮವನ್ನು ಏಕೆ ಮಾಡಬೇಕೆಂದರೆ ’ಅಯಾತಯಾಮ ಛಂದೋಭಿಃ ಯತ್ಕರ್ಮಸಿದ್ಧಿಕಾರಣಮ್‘ ಎಂದು ಹೇಳಿರುವುದರಿಂದ ನಾವು ಮಾಡುವಂತಹ ಕರ್ಮಗಳು ಸಿದ್ಧಿಯಾಗಬೇಕಾದರೆ ಅಯಾತಯಾಮ (ಯಾತಯಾಮತಾ ದೋಷವಿಲ್ಲದಿರುವ) ಮಂತ್ರಗಳಿಂದ ಮಾತ್ರ ಸಾಧ್ಯ. ಆದುದರಿಂದ ಮಾಘ ಮಾಸದಲ್ಲಿ ಉತ್ಸರ್ಜನವನ್ನು, ಶ್ರಾವಣ ಮಾಸದಲ್ಲಿ ಉಪಾಕರ್ಮವನ್ನು
ಅವಶ್ಯವಾಗಿ ಮಾಡಲೇಬೇಕು.
ಆದರೆ ಪ್ರಕೃತದಲ್ಲಿ ಶ್ರಾವಣ ಮಾಸ ದಲ್ಲಿಯೇ ಉತ್ಸರ್ಜನ - ಉಪಾಕರ್ಮ ಎರಡನ್ನೂ ಮಾಡುವ ಸಂಪ್ರದಾಯವು ಬೆಳೆದು ಬಂದಿದೆ. ಆ ದಿನ ಋಗ್ವೇದಿಗಳು ಅರುಂಧತೀ ಸಹಿತರಾದ ಸಪ್ತರ್ಷಿಗಳನ್ನು, ಯಜುರ್ವೇದಿಗಳು ನವಕಾಂಡ ಋಷಿಗಳನ್ನು ಸ್ಥಾಪನೆ ಮಾಡಿ, ಷೋಡಶೋಪಚಾರ ಪೂಜೆಗಳಿಂದ, ಚರುವಿನಿಂದ ಹೋಮವನ್ನು ಮಾಡಿ, ಉತ್ಸೃಷ್ಟಾಃ ವೈ ವೇದಾಃ ಎಂದು ವೇದವನ್ನು ತ್ಯಾಗ ಮಾಡಿ, (ಮಂತ್ರ) ಸ್ನಾನವನ್ನು ಮಾಡಿ, ಉತ್ಸರ್ಜನಾಂಗವಾಗಿ ದೇವರ್ಷಿಪಿತೃ ತರ್ಪಣವನ್ನು ಕೊಟ್ಟು ಸ್ಥಾಪಿಸಿದ ಋಷಿಗಳನ್ನು ಉದ್ವಾಸನೆ ಮಾಡಿ ಕೃಷ್ಣಾರ್ಪಣವನ್ನು ಬಿಡಬೇಕು. ಆನಂತರ ಪುನಃ ಋಷಿಗಳನ್ನು ಆಹ್ವಾನಿಸಿ, ಪೂಜೆ, ಯಜ್ಞೋಪವೀತ ಸಹಿತವಾದ ಹೋಮವನ್ನು ಮುಗಿಸಿ, ಉಪಕೃತಾಃ ವೈ ವೇದಾಃ ಎಂದು ಉದ್ಘೋಷಿಸಿ, ಋಷಿಗಳ ಅಪ್ಪಣೆ ಪಡೆದು ವೇದಗಳನ್ನು ಸ್ವೀಕರಿಸಿ, ಹೋಮಶೇಷವಾದ ಸಕ್ತು (ಹಿಟ್ಟನ್ನು) ವನ್ನು ಭಕ್ಷಿಸಿ, ಯಜ್ಞೋಪವೀತ ದಾನ, ಧಾರಣೆ, ಬ್ರಹ್ಮಯಜ್ಞವನ್ನು ಮುಗಿಸಿ ಮಾಡಿದ ಕರ್ಮವನ್ನು ಭಗವಂತನಿಗೆ ಸಮರ್ಪಿಸಿ, ಭಗವಂತನ ಅನುಗ್ರಹವನ್ನು ಪಡೆಯುವುದೇ ಉಪಾಕರ್ಮದ ಉದ್ದೇಶ.

No comments:

Post a Comment