Wednesday, December 26, 2012

ಶ್ರೀ ಮದ್ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು

 

ಸೃಷ್ಟಿಯ ಆದಿಯಲ್ಲಿ ಅಂದರೆ ಚತುರ್ಮುಖ ಬ್ರಹ್ಮನ 100 ವರ್ಷಗಳು ಮುಗಿದನಂತರ  (ಬ್ರಹ್ಮನ ಒಟ್ಟು ಆಯುಷ್ಯ ಮನವಲೋಕದ ಗಣನೆಯಲ್ಲಿ 31,104,000,00,00,000 ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ ವರ್ಷಗಳು) ಬ್ರಹ್ಮಾಂಡ ಸಂಪೂರ್ಣ ನಾಶವಾಗಿ ನಂತರ ಮತ್ತೆ ಹೊಸ ಸೃಷ್ಟಿ. ಈ ಸೃಷ್ಟಿಯ ಆದಿಯಲ್ಲಿ ಏನೂ ಇರಲಿಲ್ಲ. ಈ ಏನೂ ಇರದ ಸಮಯದಲ್ಲಿ ಒಂದು ಇತ್ತು.  ಅದೇ ಭಗವಂತ. ಆ ಭಗವಂತ ಪ್ರಳಯದ ಸಮಯದಲ್ಲಿ ತನ್ನನ್ನು ಮುಚ್ಚಿಕೊಂಡಿದ್ದನು. ಸೃಷ್ಟಿ ಕಾಲವು ಪ್ರಾಪ್ತವಾದಾಗ ಕತ್ತಲು ಕರಗಿ ತಾನು ಪ್ರಕಟಗೊಂಡ ಇದನ್ನೆ ಭಾಗವತದಲ್ಲಿ
 
"ಜಗೃಹೇ ಪೌರುಷಂ ರೂಪಂ ಭಗವಾನ್ಮಹದಾದಿಭಿಃ ಸಂಭೂತಂ ಷೋಡಶಕಲ ಮಾದೌ ಲೋಕಸಿಸೃಕ್ಷಯಾ "

ಎಂದು ಉಲ್ಲೇಖಿಸಿ ಭಗವಂತನು ಪುರುಷ ರೂಪವನ್ನು ಗ್ರಹಣ ಮಾಡಿದ ಎಂದು ಹೇಳುತ್ತದೆ. ಇಲ್ಲಿ ಗ್ರಹಣ ಮಾಡುವುದು ಅಥವಾ ಸ್ವೀಕರಿಸುವುದು ಎಂದರೇ, ತಾನು ಪ್ರಕಟನಾದ ಎಂದೇ ಅರ್ಥ. ಇದು ಭಗವಂತನ ಮೂಲ ರೂಪ. ಇನ್ನು ಎಲ್ಲಾ ಭಗವಂತನ ಅವತಾರ ರೂಪಗಳು ಈ ರೂಪದಿಂದಲೇ ಪ್ರಕಟವಾಗುತ್ತವೆ. ಮತ್ತು ಈ ರೂಪದಲ್ಲೇ ವಿಲೀನವಾಗುತ್ತವೆ. ಈ ರೂಪವನ್ನು ಪದ್ಮನಾಭ ರೂಪ ಎಂದು ಸಹ ಕರೆಯುತ್ತಾರೆ. ಈ ರೂಪದಿಂದಲೇ ಮಹತ್ತತ್ವದ ಸೃಷ್ಟಿಯಾಗುತ್ತದೆ. ಅಂದರೆ 14 ಕಲೆಗಳುಳ್ಳ ಅರ್ದಾತ 14 ಲೋಕಗಳನ್ನೊಳಗೊಂಡ ಬ್ರಹ್ಮಾಂಡ ಸೃಷ್ಟಿಯಾಗುತ್ತದೆ. (14ಲೋಕಗಳು ಎಂದರೇ ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯ ಎಂದು 7 ಮೇಲಿನ ಲೋಕಗಳು ಹಾಗೂ ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ ಎಂಬ ಏಳು ಅಧೋಲೋಕಗಳು) ಈ ಬ್ರಹ್ಮಾಂಡದ ಸೃಷ್ಟಿಗೆ ಕಾರಣವಾದ ಈ ಪುರಷ ರೂಪ ಒಂದನೆಯ ಪುರಷ ರೂಪ (ಪ್ರಥಮಂ ಮಹತ್ಸ್ರಷ್ಟುಃ ) ಈ ರೀತಿಯಾಗಿ ಸೃಷ್ಟವಾದ ಬ್ರಹ್ಮಾಂಡದ ಒಳಗೆ ತಾನು ಇನ್ನೊಂದು ರೂಪದಿಂದ ಪ್ರವೇಶಿಸಿದ (ತತ್ ಸೃಷ್ಟ್ವಾ ತದೇನುಪ್ರಾವಿಶತ್) ಈ ರೀತಿಯಾಗಿ ಇಡೀ ಬ್ರಹ್ಮಾಂಡದ ಒಳಗೆ ತುಂಬಿಕೊಂಡ ಈ ರೂಪವೂ ಸಹ ಪುರಷರೂಪ -2ನೇ ಪುರುಷ ರೂಪ (ದ್ವಿತೀಯಂ ಅಂಡ ಸಂಸ್ಥಿತಂ) ನಂತರ ಬ್ರಹ್ಮಾಂಡದ ಒಳಗೆ ಪಿಂಡಾಂಡಗಳನ್ನು (ಪ್ರಾಣಿಗಳ ದೇಹಗಳನ್ನು) ಸೃಷ್ಟಿಸಿ  ಅದರಲ್ಲಿ ಪ್ರವೇಶ ಮಾಡಿದ. ಇದು 3ನೇ ಪುರಷ ರೂಪ (ತೃತೀಯಂ ಪ್ರಾಣಿನಾಂ ದೇಹೇ) ಈ ರೀತಿಯಾಗಿ ಭಗವಂತನ ಮೂರು ಪುರಷ ರೂಪಗಳಿರುತ್ತವೆ. ಇದನ್ನೇ ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರದಲ್ಲಿ
ಪುರಷ ರೂಪತ್ರಯ ಪುರಾತನ
ಪುರಷ ಪುರುಷೋತ್ತಮ ಕ್ಷರಾಕ್ಷರ
ಪುರಷ ಪೂಜಿತ ಪಾದ ಪೂರ್ಣಾನಂದಜ್ಞಾನಮಯ ||  
                                                                                         - ವ್ಯಾಪ್ತಿ ಸಂಧಿ

ಎಂದು ಉಲ್ಲೇಖಿಸಿರುತ್ತಾರೆ.
ಸ್ವಾಯಂಭುವ ಮನ್ವಂತರದಲ್ಲಿ ಆದ ಅವತಾರಗಳು
 ಒಟ್ಟು 14 ಮನ್ವಂತರಗಳಿದ್ದು ಮೊದನೆಯದು ಸ್ವಾಯಂಭುವ ಮನ್ವಂತರ ಸ್ವಾಯಂಭುವ ಮನು  ಈ ಮನ್ವಂತರದ ಮನು. ಇನ್ನು 13 ಮನ್ವಂತರಗಳು ಈ ರೀತಿ ಇವೆ. 2) ಸ್ವಾರೋಚಿಷ ಮನ್ವಂತರ  3) ಉತ್ತಮ ಮನ್ವಂತರ  4) ತಾಪಸ  5) ರೈವತ  6) ಚಾಕ್ಷುಷ  7) ವೈವಸ್ವತ 8) ಸೂರ್ಯ ಸಾವರ್ಣಿ 9) ದಕ್ಷಸಾವರ್ಣಿ 10) ಬ್ರಹ್ಮಸಾವರ್ಣಿ  11) ಧರ್ಮ ಸಾವರ್ಣಿ  12) ರುದ್ರ ಸಾವರ್ಣಿ   13) ದೇವ ಸಾವರ್ಣಿ   14) ಇಂದ್ರ ಸಾವರ್ಣಿ  ಹೀಗೇ 14 ಮನ್ವಂತರಗಳು ಒಂದೊಂದು ಮನ್ವಂತರದ ಕಾಲಾವಧಿ ಸುಮಾರಾಗಿ 31 ಕೋಟಿ ವರ್ಷಗಳು ಬ್ರಹ್ಮನ ಒಂದು ಹಗಲಿನಲ್ಲಿ ಈ 14 ಮನ್ವಂತರಗಳು ಮುಗಿದು ಹೋಗುತ್ತವೆ. ಬ್ರಹ್ಮನ ಒಂದು ಹಗಲು ಎಂದರೆ 432 ಕೋಟಿ ವರ್ಷಗಳು ಮತ್ತು 432 ಕೋಟಿ ವರ್ಷಗಳು ಬ್ರಹ್ಮನ ಒಂದುರಾತ್ರಿ ಒಟ್ಟು 864 ಕೋಟಿ ವರ್ಷಗಳಾದರೆ ಬ್ರಹ್ಮನ ಒಂದುದಿನ ಬ್ರಹ್ಮನ ಆಯುಷ್ಯ ಒಂದು ನೂರು (100)ವರ್ಷ ಅರ್ಥಾತ್ 864x30x12x100 ವರ್ಷಗಳು ಅಂದರೆ 31,104,000,0000000 ವರ್ಷಗಳು ಆನಂತರ ಮಹಾಪ್ರಳಯ ಪ್ರಳಯ ಮುಗಿದ ನಂತರ ಮತ್ತೆ ಸೃಷ್ಟಿ 3 ಪುರುಷ ರೂಪಗಳ ಅಭಿವೃಕ್ತಿ ಸ್ವ್ವಾಯಂಭುವ ಮನ್ವಂತರ ಪ್ರಾರಂಭ ಅದರಲ್ಲಿ ಮೊದಲನೆ ಅವತಾರ

ಭಾಗವತ :- 
ಸ ಏವ ಪ್ರಥಮಂ ದೇವ ಕೌಮಾರಂ ಸರ್ಗಮಾಸ್ಥಿತಃ  |
ಚಚಾರ ದುಶ್ಚರಂ ಬ್ರಹ್ಮಾ ಬ್ರಹ್ಮಚರ್ಯಮಖಂಡಿತಂ  ||
                                                                                                     -1ನೇ ಸ್ಕಂದ /3 ಅಧ್ಯಾಯ . 6 ಶ್ಲೋಕ
ಪ್ರಥಮ ಅವತಾರ ಸನತ್ಕುಮಾರ ಅವತಾರ ಈ ಸನತ್ಕುಮಾರ ಎಂದರೆ ಚತುಃಸನರಲ್ಲಿ ಒಬ್ಬರಾದ  ಸನತ್ಕುಮಾರ ಎಂದು ಎಲ್ಲರೂ ವ್ಯಾಖ್ಯಾನ ಬರೆದಿದ್ದಾರೆ ಚತುಃಸನರು ಎಂದರೆ ಸನಕ, ಸನಂದನ, ಸನಾತನ, ಸನತ್ಕುಮಾರ .ಈ 4 ಮಂದಿ ಇವರಲ್ಲಿ ಕೊನೆಯವರಾದ ಸನತ್ಕುಮಾರನೇ ಭಗವಂತನ ಅವತಾರವೆಂದು ಎಲ್ಲರೂ ತಿಳಿದುಕೊಂಡಿದ್ದರು. ಶ್ರೀ ಮಧ್ವಾಚಾರ್ಯರು ಭೂಮಿಯಲ್ಲಿ ಅವತಾರ ಮಾಡಿ ಭಾಗವತಕ್ಕೆ ವ್ಯಾಖ್ಯಾನ ಮಾಡುವವರೆಗೂ ಎಲ್ಲರೂ ತಪ್ಪಾಗಿಯೇ ತಿಳಿದುಕೊಂಡಿದ್ದರು ನಂತರದಲ್ಲಿ ಶ್ರೀ ಮಧ್ವಾಚಾರ್ಯರು, ಚತುಃಸನರಲ್ಲಿ ಒಬ್ಬರಾದ ಸನತ್ಕುಮಾರ ಭಗವಂತನ ಅವತಾರವಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಸನತ್ಕುಮಾರ  ಬ್ರಹ್ಮನ ಮಾನಸ ಪುತ್ರ ಮತ್ತು ಈ ಸನತ್ಕುಮಾರನೇ ವಿಷ್ಣುವಿನ ಮಗ ಕಾಮನಾಗಿ ನಂತರದಲ್ಲಿ ರುದ್ರದೇವರ ಮಗ ಸ್ಕಂದನಾಗಿ ಹೀಗೇ ತ್ರಿಮೂರ್ತಿಗಳಿಗೂ ಮಗನಾಗಿ ಜನಿಸಿದವನು . ಮತ್ತೆ ಇದೇ ಸನತ್ಕುಮಾರನೇ ದ್ವಾಪರದಲ್ಲಿ ಕೃಷ್ಣ ರುಗ್ಮಿಣೀಯರಲ್ಲಿ ಪ್ರದ್ಯುಮ್ನನಾಗಿ ಜನಿಸಿದವನು.

 ಈ ಚತುಃಸನರಿಗೂ ಮತ್ತು ಬ್ರಹ್ಮ ರುದ್ರಾದಿಗಳಿಗೂ ಸಹ ಉಪದೇಶ ಮಾಡಿದ ಭಗವಂತನ ಅವತಾರವಾದ ಸನತ್ಕುಮಾರ ರೂಪ ಬೇರೆಯೇ ಇದೆ ಎಂದು ತಿಳಿಸಿಕೊಟ್ಟಿರುತ್ತಾರೆ. ಈ ಅವತಾರದಲ್ಲಿ ಭಗವಂತ ದುಶ್ಚರವಾದ ಅಖಂಡ ಬ್ರಹ್ಮಚರ್ಯವನ್ನು ಹೇಗೆ ಆಚರಿಸಬೇಕೆಂದು ತಿಳಿಸಿಕೊಟ್ಟ ರೂಪ ಹೀಗೆ ಶ್ರೀ ಮದಾಚಾರ್ಯರು ಅಧ್ಯಾತ್ಮಲೋಕಕ್ಕೆ ಕೊಟ್ಟಿರುವ ಕೊಡುಗೆಗಳು ಅಸದೃಶವಾಗಿವೆ. ಈ ಮೊದಲು ಯಾರಿಗೂ ತಿಳಿಯದ / ಹೊಳೆಯದ ಅನೇಕ ವಿಷಯಗಳನ್ನು ಶ್ರೀ ಮದಾಚಾರ್ಯರು ಪ್ರಮಾಣಗಳ ಸಹಿತ ಲೋಕಕ್ಕೆ ಸಾಧಕರಿಗೆ ತಿಳಿಸಿಕೊಟ್ಟು ಮಹದುಪಕಾರ ಮಾಡಿರುತ್ತಾರೆ ಅವರ ಈ ಉಪಕಾರ ಸ್ಮರಣೆಯೇ ನಮ್ಮ ಪರಮ ಕರ್ತವ್ಯ.


 2ನೇ ಅವತಾರ ಮುಂದಿನ ಭಾಗದಲ್ಲಿ . . . . . .
 
ಕೆ.ಸತ್ಯನಾರಾಯಣರಾವು
ಈಶಾವಾಶ್ಯಂ, ವಿವೇಕಾನಂದನಗರ,
ಹೊಸಪೇಟೆ  - 583 201

 

No comments:

Post a Comment