Friday, December 14, 2012

ಧನುರ್ಮಾಸ - Part 1/2

ಧನುರ್ಮಾಸ

ಮಾಸಗಳಲ್ಲಿ ಎರಡು ವಿಧ. ಸೌರ ಮಾಸ ಮತ್ತು ಚಾಂದ್ರಮಾಸ ಎಂಬುದಾಗಿ.
ಚಾಂದ್ರಮಾಸ ಎಂದರೆ ಶುಕ್ಲ ಪಕ್ಷದ ಪ್ರತಿಪದಾ (ಪಾಡ್ಯ) ದಿಂದ ಹಿಡಿದು ಅಮಾವಾಸ್ಯೆಯವರೆಗಿನ ದಿನಗಳನ್ನು ಚಂದ್ರಮಾಸಗಳೆಂದು ಕರೆಯುತ್ತಾರೆ. ಸೌರಮಾಸ ಎಂದರೆ ಸೂರ್ಯನು ಅಶ್ವಿನಿ ನಕ್ಷತ್ರಗಳಿಂದ ಯುಕ್ತವಾದ ರಾಶಿಗಳಲ್ಲಿ ಸಂಚರಿಸುವಾಗ ಜರುಗುವ ಒಂದೊಂದು ಸಂಕ್ರಮಣಗಳಿಗೆ ಸೌರಮಾಸಗಳೆಂದು ಕರೆಯುತ್ತಾರೆ. ಚಾಂದಮಾಸಕ್ಕೆ ನಿಗದಿತ ಸಮಯವಿಲ್ಲವಾದರೆ, ಸೌರಮಾಸಕ್ಕೆ ನಿಗದಿತ ಸಮಯವಿದೆ.
ಧನುರ್ಮಾಸ ಎಂದರೆ ಸೂರ್ಯನು ಮೂಲಾ ನಕ್ಷತ್ರದಿಂದ ಹಿಡಿದು ಉತ್ತರಾಷಾಢ ನಕ್ಷತ್ರ 1 ನೇ ಪಾದದವರೆಗಿನ ಧನುರಾಶಿಯಲ್ಲಿ ಸಂಚರಿಸುವ ( ಸುಮಾರಾಗಿ ಡಿಸೆಂಬರ್ ತಿಂಗಳ 16 ನೇ ತಾರೀಖಿನಿಂದ ಜನವರಿ 14 ರವೆರೆಗಿನ) ಸಮಯವನ್ನು ಧನುರ್ಮಾಸವೆಂದು ಕರೆಯುತ್ತಾರೆ.

ಇಂತಹ ಧನುರ್ಮಾಸದಲ್ಲಿ ವಿಶೇಷವಾಗಿ ಪರಮಾತ್ಮನನ್ನು ಹುಗ್ಗಿಯ ಅನ್ನವನ್ನು ಸಮರ್ಪಣೆ ಮಾಡಿ ಪೂಜಿಸುವುದರಿಂದ ವಿಶೇಷ ಫಲವಿದೆ ಎಂದು ಪುರಾಣಗಳು ಸಾರಿ ಹೇಳುತ್ತಿವೆ. ಈ ರೀತಿಯಾಗಿ -
ಧನುರ್ಮಾಸಪೂಜೆ

ಕೋದಂಡಸ್ತೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ |
ಸಹಸ್ರವಾರ್ಷೀಕೀಪೂಜಾ ದಿನೇನೈಕೇನ ಸಿದ್ಧ್ಯತಿ || ಆಗ್ನೇಯ ಪುರಾಣ

ಧನುರಾಶಿಯಲ್ಲಿ ಸೂರ್ಯನಿರುವಾಗ ಹರಿಗೆ ಹುಗ್ಗಿಯನ್ನು ಒಂದು ದಿನವಾದರೂ ಸಮರ್ಪಿಸುವ ಮನುಷ್ಯನು ಒಂದು ಸಾವಿರ ವರ್ಷಗಳವರೆಗೆ ಪೂಜೆಮಾಡಿದ ಫಲವನ್ನು ಪಡೆಯುವನು ಎನ್ನುವ ಆಗ್ನೇಯ ಪುರಾಣದ ವಚನವಿದೆ. ಆದುದರಿಂದ ಧನುರ್ಮಾಸದ ಒಂದು ತಿಂಗಳ ಕಾಲ ಪ್ರತಿದಿನ ಉಷಃಕಾಲದಲ್ಲಿ ಶ್ರೀಹರಿಗೆಮುದ್ಗಾನ್ನವನ್ನು (ಹುಗ್ಗಿಯನ್ನು) ವಿಷ್ಣುವಿಗೆ ಸಮರ್ಪಿಸಿ ಬ್ರಾಹ್ಮಣಸಂತರ್ಪಣೆಮಾಡುವುದರಿಂದ ಶ್ರೀಹರಿಯು ಪ್ರೀತನಾಗುವನು.
ಧನುರ್ಮಾಸಪೂಜೆಯ ಕಾಲ :-

ಮುಖ್ಯಾರುಣೋದಯೇ ಪೂಜಾ ಮಧ್ಯಮಾ ಲುಪ್ತತಾರಕಾ |
ಅಧಮಾ ಸೂರ್ಯಸಹಿತಾ ಮಧ್ಯಾಹ್ನೇ ನಿಷ್ಫಲಾ ಭವೇತ್ ||

ಇಂತಹ ಪೂಜೆಗೆ ಮುಖ್ಯಕಾಲಅರುಣೋದಯ ಕಾಲವು ಉತ್ತಮ, ನಕ್ಷತ್ರಗಳು ಕಾಣದಿರುವಾಗ ಮಾಡುವುದುಮಧ್ಯಮ, ಸೂರ್ಯನು ಉದಯಿಸಿದ ಮೇಲೆ ಮಾಡುವುದು ಅಧಮ.ಮಧ್ಯಾಹ್ನಕಾಲದಲ್ಲಿ ಮಾಡುವುದು ನಿಷ್ಫಲ. ಆದುದರಿಂದ ಈ ಧನುರ್ಮಾಸದಲ್ಲಿ ಭಗವಂತನ ಪೂಜೆಯನ್ನು ಉಷಃಕಾಲದಲ್ಲಿಯೇ ಮಾಡಬೇಕು.
ಹೇಗೆನಿತ್ಯದಲ್ಲಿಯೂ ಭಗವಂತನಿಗೆ ಷೋಡೋಶೋಪಚಾರ ಪೂಜೆಯನ್ನು ಸಲ್ಲಿಸಿ, ಭಗವಂತನಿಗೆನೈವೇದ್ಯಾದಿಗಳನ್ನು ಸಮರ್ಪಿಸುತ್ತೇವೆಯೋ ಹಾಗೆಯೇ ಧನುರ್ಮಾದಲ್ಲಿ ವಿಶೇಷವಾಗಿ ಅರುಣೋದಯಕಾಲದಲ್ಲಿಯೇ ಹುಗ್ಗಿಯನ್ನು ಮಾಡಿ ಭಗವಂತನಿಗೆ ಸಮರ್ಪಿಸಬೇಕು.ಹುಗ್ಗಿಯನ್ನು ಹೇಗೆ ಮಾಡಬೇಕೆಂಬುದನ್ನೂ ಪುರಾಣವೇ ತಿಳಿಸುತ್ತಿದೆ, ಹೀಗೆ -


ಮುದ್ಗಂ ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಯತೇ |
ಮಧ್ಯಮಂ ತಂಡುಲಾದರ್ಧಂ ತದರ್ಧಮಧಮಂ ಭವತ್ ||
ಮುದ್ಗಂದ್ವಿಗುಣಂ ಕೇಚಿತ್ ಪ್ರಶಂಸಂತಿ ಮುನೀಶ್ವರಾಃ |
ಯಥಾ ಬಲಂಪ್ರಕುರ್ವೀತ ನ ಹೀಯೇತ್ತಂಡುಲಾರ್ಧತಃ ||

ಅಂದರೆ - ಅಕ್ಕಿಯಷ್ಟೇ ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸಿ ಮಾಡುವ ಹುಗ್ಗಿಯು ಉತ್ತಮೋತ್ತಮ. ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರುಬೇಳೆಯನ್ನು ಸೇರಿಸಿದರೆ ಮಧ್ಯಮ. ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹಸರುಬೇಳೆಯನ್ನು ಸೇರಿಸಿದರೆ ಅಧಮ, ಅಕ್ಕಿಯ ಎರಡರಷ್ಟು ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸುವುದು ಇನ್ನೂ ಶ್ರೇಷ್ಠ ಎಂದು ಕೆಲವು ಮುನಿಗಳ ಅಭಿಪ್ರಾಯವಿದೆ. ಆದುದರಿಂದ ತನ್ನ ಶಕ್ತಿಯಿರುವಷ್ಟು ಶ್ರೇಷ್ಠ ರೀತಿಯಲ್ಲಿ ಹುಗ್ಗಿಯನ್ನು ತಯಾರಿಸಿ ಪರಮಾತ್ಮನಿಗೆ ನೈವೇದ್ಯವನ್ನು ಮಾಡಬೇಕು. ಎಂತಹ ಪ್ರಸಂಗದಲ್ಲಿಯೂ ಹೆಸರುಬೇಳೆಯ ಪ್ರಮಾಣವನ್ನು ಅಕ್ಕಿಯ ಪ್ರಮಾಣದ ಅರ್ಧಕ್ಕಿಂತ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ಹೀಗೆ ಪರಮಾತ್ಮನನ್ನು ಪೂಜಿಸಬೇಕು ಎಂದು ಹೇಳುತ್ತಾ ಧನುರ್ಮಾಸದಲ್ಲಿ ಮತ್ತೇನೇನು ಮಾಡಬೇಕು ಎಂದು ಹೇಳುತ್ತಾರೆ. ಹೀಗೆ-
ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೇ ದಿನೇ |
ಉಷಃಕಾಲೇ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ದನಂ ||
ಉಪಚಾರೈಃಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ |
ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀ ದಿನೇ ||
ತಥಾಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾಣ್ಯರ್ಚಯೇಚ್ಚ ಮಾಂ ||

ಆದುದರಿಂದ ಸರ್ವಪ್ರಯತ್ನದಿಂದ ಧನುರ್ಮಾಸದಲ್ಲಿ ಪ್ರತಿದಿನವೂ ಉಷಃಕಾಲದಲ್ಲಿ ಪರಮಾತ್ಮನನ್ನುಷೋಡಶೋಪಚಾರಗಳಿಂದ ಪೂಜಿಸಿ ಹುಗ್ಗಿಯನ್ನು ಸಮರ್ಪಿಸಬೇಕು ಹೇಗೆ ಸಾಧನಾ ದ್ವಾದಶೀಯಂದು ಪ್ರಯತ್ನಪೂರ್ವಕವಾಗಿ ಜಪ-ತಪಾದಿಗಳನ್ನು ಸಂಕೋಚಗೊಳಿಸಿಪಾರಣೆಯನ್ನು ಮಾಡುತ್ತೇವೆಯೋ ಹಾಗೆಯೇ ಈ ಧನುರ್ಮಾಸದಲ್ಲಿಯೂ ಪ್ರತಿನಿತ್ಯ ಆಚರಿಸಬೇಕು. ಈ ರೀತಿಯಾಗಿ ಪೂಜೆ ಸಲ್ಲಿಸಿರುವುದರಿಂದ ಏನು ಫಲ ಬರುವುದೆಂದು ತಿಳಿಸುತ್ತಿದೆ ಪುರಾಣವು -

ದಧ್ಯಾದ್ರ್ರಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ವಲಂ |
ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್ ||
ದೃಷ್ಟ್ವಾ ತಚ್ಛುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲಃ |
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಜಗದೀಶ್ವರಃ||

ಮೊಸರು, ಹಸಿಶುಂಠಿ, ಹೆಸರುಬೇಳೆ, ಬೆಲ್ಲ, ಕಂದಮೂಲ ಫಲಗಳಿಂದ ಕೂಡಿದ ಹುಗ್ಗಿಯನ್ನು ಪರಮಾತ್ಮನಿಗೆ ಸಮರ್ಪಿಸಿದರೆ ಭಕ್ತವತ್ಸಲನಾದ ಪರಮಾತ್ಮನು ತನ್ನ ಭಕ್ತರಿಗೆ ಸಕಲವಿಧವಾದ ಭೋಗಗಳನ್ನು, ಕೊನೆಗ ಮೋಕ್ಷವನ್ನೂ ಕೊಡುತ್ತಾನೆ.
ಹೀಗೆಪರಮಾತ್ಮನನ್ನು ಪೂಜಿಸಿದ ನಂತರ ಅವಶ್ಯವಾಗಿ ಶ್ರೀ ಲಕ್ಷ್ಮೀ ಸ್ತೋತ್ರವನ್ನು ಅವಶ್ಯವಾಗಿಪಠಿಸಬೇಕು -

ಶ್ರೀದೇವಿ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ ||
ಪಂಚಮಂವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ .|
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ ||
ನವಮಂಶಾರ್ಙಣೀ ಪ್ರೋಕ್ತಾ ದಶಮಂ ದೇವದೇವಿಕಾ |
ಏಕಾದಶಂಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ ||
ಶ್ರೀಃಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರೀಲೋಕೇಶ್ವರೀ |
ಮಾ ಕ್ಷೀರಾಬ್ಧಿಸುತಾರವಿಂದಜನನೀ ವಿದ್ಯಾ ಸರೋಜಾತ್ಮಿಕಾ |
ಸರ್ವಾಭೀಷ್ಫಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತಃಶುದ್ಧತರಾ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ ||
ಭದ್ರಲಕ್ಷ್ಮೀಸ್ತವಂನಿತ್ಯಂ ಪುಣ್ಯಮೇತಚ್ಛುಭಾವಹಂ |
ತುಲೌ ಸ್ನಾತ್ವಾಪಿ ಕಾವೇರ್ಯಾಂ ಜಪಶ್ರೀವೃಕ್ಷಸನ್ನಿಧೌ ||

ಎಂಬುದಾಗಿ. ಹಾಗೆಯೇ ಈ ಧನುರ್ಮಾಸದಲ್ಲಿ ಬರುವ ವ್ಯತೀಪಾತ,ವೈಧೃತಿ ಯೋಗಗಳಂದು ವಿಶೇಷವಾಗಿ ಪೂಜೆಯನ್ನು ಸಲ್ಲಿಸಬೇಕೆಂದು ಹೇಳುತ್ತದೆ -

ಮಹಾವ್ಯತೀಪಾತಯೋಗ
ಅರ್ಧೋದಯಸಹಸ್ರಾಣಿ ವಾಜಪೇಯಾದಯೋಧ್ವರಾಃ |
ಮಾರ್ಗಶೀಷ್ವ್ಯತೀಪಾತಕಲಾಂನಾರ್ಹಂತಿ ಷೋಡಶೀಂ ||
ಮಾರ್ಗಶೀರ್ಷವ್ಯತೀಪಾತೇ ಪಿತÙೃನುದ್ದಿಶ್ಯ ತರ್ಪಯನ್ |
ಅಘ್ರ್ಯಂ ದದ್ಯಾದ್ಧರಿಂ ಧ್ಯಾಯನ್ ಮೂಲಮಂತ್ರೇಣ ಮಾನವಃ ||

ಧನುರ್ಮಾಸದಲ್ಲಿ ಬರುವ ವ್ಯತೀಪಾತಯೋಗವಿರುವ ದಿನದ 16ನೇ ಒಂದು ಅಂಶವನ್ನೂ ಕೂಡ ಸಹಸ್ರ ಅರ್ಧೋದಯಗಳೂ, ವಾಜಪೇಯ ಮೊದಲಾದ ಮಹಾಯಾಗಗಳೂ ಹೊಂದಲಾರವು. ಈ ವ್ಯತೀಪಾತಯೋಗದಲ್ಲಿ ಉಷಃಕಾಲದಲ್ಲಿ ವಿಷ್ಣುವನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸಿ, ಅಘ್ರ್ಯವನ್ನು ಕೊಟ್ಟ ನಂತರ ಪಿತೃದೇವತೆಗಳಿಗೆ ತಿಲತರ್ಪಣವನ್ನು ಕೊಡತಕ್ಕದ್ದು. ವಿಷ್ಣು ಪೂಜೆಯ ನಂತರ ಅಘ್ರ್ಯವನ್ನು ಈ ಮಂತ್ರದಿಂದ ಕೊಡತಕ್ಕದ್ದು - ಅಘ್ರ್ಯಮಂತ್ರ-

ವ್ಯತೀಪಾತಮಹಾಸತ್ವ ಸರ್ವಪಾಪ ಪ್ರಣಾಶನ |
ಸಹಸ್ರಬಾಹೋವಿಶ್ವಾತ್ಮನ್ ಗೃಹಣಾಘ್ರ್ಯಂ ನಮೋಸ್ತುತೇ ||
ವ್ಯತೀಪಾತನಮಸ್ತೇಸ್ತು ನಮಸ್ತೇ ವಿಷ್ಣುಮಂಗಲ |
ವಿಷ್ಣುಚಕ್ರಸ್ವರೂಪಾಯನಮಸ್ತೇ ದಿವ್ಯತೇಜಸೇ ||

ಎಂದು ಈ ಮಂತ್ರದಿಂದ ವಿಷ್ಣುವಿಗೆ ಒಂದು ಅಘ್ರ್ಯವನ್ನು ಕೊಡಬೇಕು.ನಂತರ ಪಿತೃತರ್ಪಣವನ್ನಿತ್ತು ಈ ಕೆಳಗಿನ ಮಂತ್ರದಿಂದ ಪ್ರಾರ್ಥನೆ ಮಾಡಬೇಕು.ಪ್ರಾರ್ಥನಾ ಮಂತ್ರ -
ವಿಷ್ಣುಪ್ರಿಯವ್ಯತೀಪಾತ ಪಿತೃಣಾಂ ಮನೃಣಪ್ರದ |
ಪಿತೃಣಾಂಮಮ ವೈಕುಂಠಂ ಪ್ರಯಚ್ಛ ಭಗವನ್ ಹರೇ ||
ತ್ವತ್ಪ್ರಸಾದೇನಮೇ ಭಕ್ತಿರಸ್ತ್ವೇವಮನಪಾಯಿನೀ ||

ಎಂದು ಪ್ರಾರ್ಥಿಸಬೇಕು. ಇದರಂತೆ ವೈಧೃತಿಯೋಗವೂ ಕೂಡ ವಿಶೇಷ ಫಲವುಳ್ಳದ್ದಾಗಿದೆ.
ಉಷಃಪೂಜಾಂ ಧನುರ್ಮಾಸೇ ಯೋ ನ ಕುರ್ವೀತವೈಷ್ಣವೀಂ |
ಸಪ್ತಜನ್ಮಸು ರಿಕ್ತಃ ಸ್ಯಾತ್ ಕ್ಷಯರೋಗೀ ಚ ಮೂಢಧೀಃ ||

ಧನುರ್ಮಾಸದಲ್ಲಿ ಉಷಃಕಾಲದಲ್ಲಿ ವಿಷ್ಣುಪೂಜೆ ಮಾಡದವನು ಏಳು ಜನ್ಮಗಳಲ್ಲಿ ಬಡವನೂ, ಮೂಢನೂ, ಕ್ಷಯರೋಗಿಯೂ ಆಗುವನು. ಆದುದರಿಂದಮಹಾಪುಣ್ಯಕರವಾದ ಧನುರ್ಮಾಸದಲ್ಲಿ ಪ್ರಾತಃಕಾಲದಲ್ಲಿ ಪರಮಾತ್ಮನನ್ನು ಪೂಜಿಸಿಸಾರ್ಥಕತೆಯನ್ನು ಪಡೆಯೋಣ.


--
ಶ್ರೀ ರಂಗನಾಥಾಚಾರ್ಯ ಸಾಲಗುಂದಾ,
"ಈಶಾವಾಸ್ಯಂ", ಶ್ರೀರಾಮಮಂದಿರದ ಹತ್ತಿರ, ಸಿಂಧನೂರು -584128
 

No comments:

Post a Comment