Saturday, December 1, 2012

ಕನಕದಾಸರ ಮುಂಡಿಗೆ

ಕನಕದಾಸರ ಮುಂಡಿಗೆ

ಮುಂಡಿಗೆ ದಾಸರೆಂದು ಪ್ರಸಿದ್ಧರಾದ ಶ್ರೀಕನಕದಾಸರು ತಮ್ಮ ಅನೇಕ ಪದ್ಯಗಳಲ್ಲಿ ಮಹಾಭಾರತ, ರಾಮಾಯಣ ಹಾಗು ಭಾಗವತದ ವಿಷಯಗಳನ್ನು ಒಂದೊಂದು ನುಡಿಗಳಲ್ಲಿ ಒಗಟಿನ ರೂಪದಲ್ಲಿ ನೀಡಿ ಓದುವವರ ಮೆದುಳಿಗೆ ಆಹಾರವನ್ನು ನೀಡಿ ಚಿಂತನೆಗೆ ಹಚ್ಚುತ್ತಾರೆ. ಅಂತಹ ಪದ್ಯಗಳಲ್ಲಿ ಒಂದಾದ "ಈತನೀಗ ವಾಸುದೇವನೋ" ಎಂಬ ಪದದ ಅರ್ಥ ಚಿಂತನೆ ಮಾಡೋಣ.  ಈ ಹಾಡಿಗೆ ಮೊದಲೇ ಒಂದು ವ್ಯಾಖ್ಯಾನ ಡಿಸೆಂಬರ್-2010 ಹಾಗು ಡಿಸೆಂಬರ್-2011 ಸಂಚಿಕೆಯಲ್ಲಿ ಬಂದಿದ್ದರೂ, ಅದು ಸಮಂಜಸವಾಗಿಲ್ಲದ ಕಾರಣ ಈ ಲೇಖನ ಬರೆಯಲಾಗಿದೆ.

ಈತನೀಗ ವಾಸುದೇವನೋ, ಲೋಕದೊಡೆಯ || ಪ ||
ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ||ಅ.ಪ||

ಸರ್ವ ಜೀವರಿಗೂ ಮೊಕ್ಷಪ್ರದನಾದ ಶ್ರೀ ವಾಸುದೇವನು, ಇಡೀ ಬ್ರಹ್ಮಾಂಡದ ಸೃಷ್ಟಿ-ಸ್ಥಿತಿ-ಲಯ ಕರ್ತನಾಗಿ ಅದರ ಸಂಪೂರ್ಣ ಒಡೆಯನಾಗಿದ್ದಾಗ್ಯೂ, ತನ್ನ ದಾಸನಾದ ಅರ್ಜುನನಿಗೊಲಿದು, ಮಹಾಭಾರತ ಯುದ್ಧದಲ್ಲಿ ಅವನ ರಥಕ್ಕೆ ಸಾರಥ್ಯವನ್ನು ಮಾಡಿ ತಾನು ಭಕ್ತಪರಾಧೀನ ಎಂದು ಲೋಕಕ್ಕೆ ತಿಳಿಸಿಕೊಟ್ಟ ಎನ್ನುವುದು ಇಲ್ಲಿಯ ಭಾವಾರ್ಥ.

ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರ
ನನುಜೆಯಾಳಿದವನ ಶಿರವ ಕತ್ತರಿಸಿದ
ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ  ||1||

ದನುಜೆ-ಹಿಡಿಂಬಿಯ -- ಆಳ್ದ-ಪತಿಯಾದ ಭೀಮನ -- ಅಣ್ಣನ-ಧರ್ಮರಾಯನ -- ಅಯ್ಯನ-ಯಮಧರ್ಮನ -- ಪಿತನ-ಸೂರ್ಯನ ಮುಂದೆ -- ಕೌರವೇಂದ್ರನನುಜೆ-ದಶ್ಶೀಲೆಯ -- ಆಳಿದವನ-ಪತಿಯಾದ ಜಯದ್ರಥನ ಶಿರವ ಕತ್ತರಿಸಿದ -- ತನ್ನ-ಅನುಜೆ - ಅಂದರೆ ಕೃಷ್ಣನ ತಂಗಿ ಸುಭದ್ರೆ -- ಆಳಿದವನ-ಪತಿಯಾದ  ಅರ್ಜುನನನ್ನು ಬೆಂಕಿ ಮುಟ್ಟದಂತೆ ಕಾಯ್ದು --    ಸೂರ್ಯಾಸ್ತ ವಾಗುವುದರೊಳಗಾಗಿ ಜಯದ್ರಥನ ಶಿರವ ತೆಗೆಯದಿದ್ದರೆ, ಅಗ್ನಿಪ್ರವೇಶ ಮಾಡುತ್ತೇನೆಂದು ಅರ್ಜುನನ  ಮಾಡಿದ ಪ್ರತಿಙ್ಞೆಯನ್ನು ನೆರವೇರುವಂತೆ ಮಾಡಿದ -- ರುಕ್ಮನನುಜೆಯ-ರುಕ್ಮಿಣಿಯ -- ಆಳಿದವನ-ಕೃಷ್ಣ (ವಾಸುದೇವ) ಮೂರ್ತಿಯನ್ನು ನೋಡಿರೋ.

ನರನ ಸುತನರವಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಟು ತಿಪ್ಪನ ಯೋಚಿಸಿ
ಭರದಲವನ ಕರೆದು ಕುರುಹ ತೋರಿ ಪತ್ರವನ್ನು ಹಾರಿಸಿದವನ
ಶಿರವನ್ನು ಭೇದಿಸಿದ ದೇವ ಕಾಣಿರೋ.

-- ಈ ನುಡಿಗೆ ಅರ್ಥ ತಿಳಿದಿಲ್ಲ --


ಸೃಷ್ಟಿ ಕರ್ತನಿಗೆ ಮಗನಾದವನಿಗಿಷ್ಟ ಭೂಷಣ ಆಶನನಾದನ
ಜ್ಯೇಷ್ಟ ಪುತ್ರಗೆ ವೈರಿ ತೊಡೆಯ ಭೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-
ತ್ಕೃಷ್ಟ ಮಹಿಮನಾದ ದೇವ ಕಾಣಿರೋ

ಸೃಷ್ಟಿ ಕರ್ತನಿಗೆ-ಬ್ರಹ್ಮನಿಗೆ -- ಮಗನಾದವನಿಗೆ-ರುದ್ರದೇವರಿಗೆ -- ಇಷ್ಟ ಭೂಷಣ-ಸರ್ಪಕ್ಕೆ -- ಆಶನನಾದನ-ಆಹಾರವಾದ ವಾಯುವಿನ -- ಜ್ಯೇಷ್ಟ ಪುತ್ರಗೆ-ಭೀಮನಿಗೆ -- ವೈರಿ ತೊಡೆಯ ಭೇದಿಸೆಂದು-ಕೌರವನ ತೊಡೆಗೆ ಗದಾ ಪ್ರಹಾರ ಮಾಡೆಂದು ತಿಳಿಸಿ ತನ್ನ ಭಕ್ತರಾದ ಪಾಂಡವರ ಕಷ್ಟವನ್ನು ಕಳೆದು ಅವರನ್ನು ಉದ್ದಾರ ಮಾಡಿದ ಉತ್ಕೃಷ್ಟ ಮಹಿಮೆಯುಳ್ಳ ದೇವ ನೋಡಿರೋ.

ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸ್ಯಾಗ
ವೀರನೆಚ್ಚ ಯೆಸುಗೆ ಬಪ್ಪುದನ್ನು ಈಕ್ಷಿಸಿ
ಧಾರಿಣಿಯ ಪರದೊಳೌಕಿ ಚರಣ ಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ನೋಡಿರೋ

ಖಾಂಡವವನ ದಹನ ಮಾಡಿ ತನ್ನ ನೆಲೆಯನ್ನು ನಾಶ ಮಾಡಿದನೆಂಬ ಕಾರಣಕ್ಕಾಗಿ ಅರ್ಜುನನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದ ಸರ್ಪ, ಮಹಾಭಾರತ ಯುದ್ಧದಲ್ಲಿ ಕರ್ಣನ ಬಾಣದಲ್ಲಿ ಸೇರಿಕೊಂಡು, ಆ ಬಾಣವನ್ನು ಕರ್ಣನು ಅರ್ಜುನನ ಶಿರಕ್ಕೆ ಗುರಿಯಿಟ್ಟು ಪ್ರಯೋಗಿಸಿದಾಗ -- ಅದನ್ನು ತಿಳಿದ ಅರ್ಜುನನ ರಥದಲ್ಲಿನ ಕೃಷ್ಣನು ತನ್ನ ಪಾದದಿಂದ ಭೂಮಿಯನ್ನು ಕೆಳಗೆ ಒತ್ತಿ, ಆ ಮೂಲಕ ರಥವನ್ನು ಸಹ ಕೆಳಗೆ ಇಳಿಯುವಂತೆ ಮಾಡಿ, ಆ ಬಾಣ, ಅಜರ್ುನನ ಕಿರೀಟವನ್ನು ಹಾರಿಸಿಕೊಂಡು ಹೋಗುವಂತೆ ಮಾಡಿ, ತನ್ನ ಚರಣ ಭಜಕನಾದ ನರ ಅಂದರೆ ಅರ್ಜುನನನ್ನು ಕಾಯ್ದ, ಭಕ್ತರ ಭಾರವನ್ನು ಹೋರುವಂತ ದೇವನೀತ ಕಾಣಿರೋ.

ವ್ಯೋಮಕೇಶ ನಿಪ್ಪದಿಸೆಯ ಆ ಮಹಾ ಮಹಿಮೆಯುಳ್ಳ
ಸಾಮಜವನೇರಿ ಬರುವ ಶಕ್ತಿಯ ನೀಕ್ಷಿಸಿ
ಪ್ರೇಪದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-
ಭೌಮ ಬಡದಾದಿ ಕೇಶವನ್ನ ನೋಡಿರೋ

ವ್ಯೋಮಕೇಶ-ರುದ್ರ ದೇವರ -- ಇಪ್ಪದಿಸೆಯ-ದಿಕ್ಕಾದ ಈಶಾನ್ಯದಲ್ಲಿ ಇರುವ ಪ್ರಾಗ್ಜೋತಿಷಪುರ ಅಂದರೆ ಈಗಿನ ಅಸ್ಸಾಂ ರಾಜ್ಯದ ರಾಜನಾಗಿದ್ದ ನರಕಾಸುರನ ಮಗ ಭಗದತ್ತನು ಆನೆಯೇರಿ ಬರುತ್ತಾ ಅರ್ಜುನನ ಮೇಲೆ ಪ್ರಯೋಗಿಸಿದ್ದ ಶಕ್ತ್ಯಾಯುಧಕ್ಕೆ, ಭಕ್ತನ ಮೇಲಿನ ಪ್ರೀತಿಯಿಂದ, ಆಯುಧಕ್ಕೆ ತನ್ನ ಎದೆಯನ್ನೆ ಒಡ್ಡಿ, ಆಯುಧವನ್ನು ಶಾಂತಗೊಳಿಸಿ, ತನ್ನ ಭಕ್ತನನ್ನು ಕಾಯ್ದ ಕಾಯ್ದ ಸಾರ್ವಭೌಮ ಬಡದಾದಿ ಕೇಶವನ್ನ ನೋಡಿರೋ.ಕೆ. ಸತ್ಯನಾರಾಯಣ ರಾವ್
"ಈಶಾವಾಸ್ಯಂ",
ವಿವೇಕಾನಂದ ನಗರ,
ಸಂಡೂರು ರಸ್ತೆ, ಹೊಸಪೇಟೆ.
ಮೊ: 9449250043

No comments:

Post a Comment