Thursday, January 3, 2013

ಶ್ರೀ ಮದ್ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು (2,3ನೇ ಅವತಾರ)


(ಮುಂದುವರೆದ ಭಾಗ)
2ನೇ ಅವತಾರ:
 
ದ್ವಿತೀಯಂ ತು ಭವಾಯಸ್ಯ ರಸಾತಲಗತಾಂ ಮಹೀಮ್|
ಉದ್ದರಿಷ್ಯನ್ನು ಪಾದತ್ತ ಯಜ್ಞೇಶಃ ಸೌಕರಂ ವಪ್ರಃ ||
                                  ಭಾಗವತ 1-3-7


ಈ ಎರಡನೇ ಅವತಾರ ಯಾವುದೇಂದರೆ ಅದು ವರಾಹ ಅವತಾರ ಎನ್ನುತ್ತದೆ. ಭಾಗವತ ನಮಗೆ ಗೊತ್ತಿರುವಹಾಗೆ ವೈವಸ್ವತ ಮನ್ವಂತರದಲ್ಲಿ ಆದ ದಶಾವತಾರಗಳಲ್ಲಿ ವರಾಹಾವತಾರ 3ನೇಯದು. (ಮತ್ಸ-ಕೂರ್ಮ-ವರಾಹ) ಆದರೆ ಭಾಗವತದ ಪ್ರಕಾರ ಸ್ವಾಯಂಭುವ ಮನ್ವಂತರದಲ್ಲಿ ಆದ ಎರಡನೇ ಅವತಾರ ವರಾಹಾವತಾರ. ಈ ಅವತಾರದ ಉದ್ದೇಶವೇನೆಂದರೆ ಆದಿ ದೈತ್ಯನಾದ ಹಿರಣ್ಯಾಕ್ಷನು ಈ ಭೂಮಿಯನ್ನು ನಾಶಪಡಿಸುವ ಉದ್ದೇಶದಿಂದ ಅದನ್ನು ಕಕ್ಷೆಯಿಂದ ತಪ್ಪಿಸಿ ರಸಾತಲಕ್ಕೆ ತೆಗೆದುಕೊಂಡುಹೋದಾಗ, ಆಗ ಸ್ವಾಯಂಭೂವಮನು ಬ್ರಹ್ಮದೇವರನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಂಡಾಗ, ಬ್ರಹ್ಮದೇವನ ಮೂಗಿನಿಂದ, ಸಣ್ಣರೂಪದಿಂದ ಹೊರಬಂದ ವರಾಹ ರೂಪದ ಶ್ರೀಹರಿ, ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮತ್ತೆ ಅದರ ಕಕ್ಷೆಯಲ್ಲಿ ನಿಲ್ಲಿಸಿದ ರೂಪ. ಈ ಹಿರಣ್ಯಾಕ್ಷ ದಿತಿ-ಕಶ್ಯಪರ ಮಗನಲ್ಲ, ಬ್ರಹ್ಮನಪುತ್ರ. ಇದೇ ಆದಿ ಹಿರಣ್ಯಾಕ್ಷನೇ ಮುಂದೆ ವೈವಸ್ವತ ಮನ್ವಂತರದಲ್ಲಿ ದಿತಿ-ಕಶ್ಯಪರ ಮಗನಾಗಿ ಜನಿಸಿ ಮತ್ತೇ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿ ನಾಶಪಡಿಸಲು ಯತ್ನಿಸಿದಾಗ ಇದೇ ವರಾಹ ರೂಪದಿಂದ ಶ್ರೀ ಹರಿ ಅವನನ್ನ ಕೊಂದದ್ದು. ಹೀಗೆ ಹಿರಣ್ಯಾಕ್ಷನಿಗೆ ಸ್ವಾಯಂಭುವ ಮನ್ವಂತರದಲ್ಲಿ ಹಾಗೂ ವೈವಸ್ವತ ಮನ್ವಂತರದಲ್ಲಿ ಎರಡು ಬಾರಿ ಜನನ. ಆದರೆ ವೈವಸ್ವತ ಮನ್ವಂತರದಲ್ಲಿ ಮತ್ತೆ ವರಹವತಾರ ಇಲ್ಲ. ಸ್ವಾಯಂಭುವ ಮನ್ವಂತರದಲ್ಲಿ ತಾಳಿದ ವರಾಹಾವತಾರದಿಂದಲೇ ಎರಡೂ ಬಾರಿಯೂ ಹಿರಣ್ಯಾಕ್ಷನ ಸಂಹಾರ ನಡೆದಿದೆ. ಆದುದರಿಂದ ಭಾಗವತ , ವೈವಸ್ವತ ಮನ್ವಂತರದಲ್ಲಿ ವರಾಹಾವತಾರವನ್ನು ಪರಿಗಣಿಸುವುದಿಲ್ಲ. ಕಾಲಾನುಕ್ರಮದ ಪ್ರಕಾರ ಸ್ವಾಯಂಭುವ ಮನ್ವಂತರದಲ್ಲಿ ಆದ ಈ ವರಾಹಾವತಾರವನ್ನೇ  ಎರಡನೇ ಅವತಾರ ಎಂದು ಪರಿಗಣಿಸುತ್ತದೆ. ಈ ರೂಪಕ್ಕೆ ಯಜ್ಞ ವರಾಹ ಎಂದು ಕರೆಯುತ್ತಾರೆ  ಏಕೆಂದರೆ ಯಜ್ಞ ವರಾಹ ರೂಪದಲ್ಲಿ ತನ್ನ ರೋಮಕೂಪದಿಂದ ಯಜ್ಞಕ್ಕೆ ಬೇಕಾಗುವ ಧಭೆ ಮುಂತಾದ ಸಲಕರಣೆಗಳನ್ನು ಸೃಷ್ಟಿಸಿದ ಎಂದು ಭಾಗವತ ನಮಗೆ ತಿಳಿಸಿಕೊಡುತ್ತದೆ.


3ನೇ ಅವತಾರ:
ತೃತೀಯಂ ಋಷಿಸರ್ಗಂ ವೈ ದೇವರ್ಷಿತ್ವಮುಪೇತ್ಯ ಸಃ |
ತತ್ರ ಸಾತ್ವತಮಾಚಷ್ಟ ನೈಷ್ಕಮ್ರ್ಯಂ ಕರ್ಮಣಾಂ ಯತಃ||

 
ಈ ಮೂರನೇ ಅವತಾರದ ಬಗ್ಗೆಯೂ ಸಹ ಶ್ರೀ ಮದಾಚಾರ್ಯರು ಅವತಾರ ಮಾಡಿ ತಿಳಿಸಿಕೊಡುವ ವರೆಗೂ ಇತರೆ ಭಾಗವತ ವ್ಯಾಖ್ಯಾನಕಾರರಿಗೆ ಈ ಅವತಾರ ಯಾವುದು ಎಂದು ತಿಳಿದಿರಲಿಲ್ಲ. ಈ ಮೇಲಿನ ಶ್ಲೋಕದಲ್ಲಿ ಕಂಡುಬರುವಂತೆ ದೇವರ್ಷಿ ಎಂದರೆ ಋಷಿಯಾಗಿ ಅವತಾರಮಾಡಿ ದೇವತೆಗಳಿಗೆ ಋಷಿಯಾದ ಎಂದು ತಿಳಿದು ದೇವತೆಗಳಿಗೆ ಋಷಿ ಎಂದರೆ ನಾರದರು ಎಂದು ವ್ಯಾಖ್ಯಾನ ಮಾಡಿರುತ್ತಾರೆ. ಆದರೆ ನಾರದರು ಭಗವಂತನ ಅವತಾರ ಅಲ್ಲ. ನಾರದರಲ್ಲಿ ಭಗವಂತನ ವಿಶೇಷ ಸನ್ನಿಧಾನ ವಿರಬಹುದು. ಆದರೆ ಭಗವಂತನ ಅವತಾರವಲ್ಲ ಎಂದು ಆಚಾರ್ಯರು ತಿಳಿಸಿಕೊಟ್ಟರು. ಈ ದೇವರ್ಷಿ ದೇವತಗಳಿಗೆ ಉಪದೇಶ ಮಾಡಿದ ಹಾಗೂ ದೇವತೆಗಳ ಋಷಿ ನಾರದರಿಗೂ ಸಹ ಉಪದೇಶಮಾಡಿದ ಭಗವಂತನ ರೂಪ ಒಂದಿದೆ. ಅದು ಯಾವುದೆಂದರೆ ಐತರೇಯ ರೂಪ ಎಂದು ತಿಳಿಸಿದರು. ಶ್ರೀ ಮದಾಚಾರ್ಯರು ಬಂದು ಭಾಗವತಕ್ಕೆ ತಾತ್ಪರ್ಯ ಬರೆಯುವವರಿಗೂ ಇತರೆ ಯಾವುದೇ ವ್ಯಾಖ್ಯಾನಕಾರಕರಿಗೆ ಈ ವಿಷಯ ತಿಳಿದಿರಲಿಲ್ಲ. ಎಲ್ಲರೂ  ನಾರದನೇ ಭಗವಂತನ ಅವತಾರ ಎಂದು ಬರದಿದ್ದಾರೆ. ಶ್ರೀ ಮದಾಚಾರ್ಯರು ಪ್ರಬಲವಾದ ಪ್ರಮಾಣಗಳನ್ನು ಕೊಟ್ಟು ಇದು ನಾರದರ ಅವತಾರವಲ್ಲ ಇದು ಐತರೇಯ ರೂಪ ಎಂದು ಸ್ಟಷ್ಟ ಪಡಿಸಿದರು. ಈ ರೂಪದಿಂದ ಸಾತ್ವಿಕವಾದ ವೈಷ್ಣಧರ್ಮವನ್ನು ನಾರದಾದಿಗಳಿಗೆ ಉಪದೇಶಮಾಡಿದ ಅಷ್ಟೇ ಅಲ್ಲ ಐತರೇಯ ಬ್ರಾಹ್ಮಣ, ಐತರೇಯ ಆರಣ್ಯಕ ಮತ್ತು ಐತರೇಯ ಉಪನಿಷತ್ತು ಎಂಬ ವೇದಭಾಗವನ್ನು ಆವಿಷ್ಕಾರಗೊಳಿಸಿದ ರೂಪ. ಇದರಿಂದಾಗಿ ಎಲ್ಲ ಕರ್ಮಗಳು ಸಹ ಕರ್ಮಬಂಧನವನ್ನು ಕಳಚುವುದುಕ್ಕೆ ಸಾದನವಾದವು. ಕರ್ಮದಿಂದ ನೈಷ್ರ್ಕಮ್ಯವನ್ನು- ಮುಕ್ತಿಯನ್ನು ಪಡೆಯಲು ಸಾಧನವಾಯಿತು, ಕರ್ಮದಿಂದ ಜ್ಞಾನ-ಜ್ಞನದಿಂದ ಅಮೃತತ್ವವನ್ನು ಪಡೆಯಲು ಸಾಧ್ಯವಾಯಿತು. ಇಂತಹ ಅಪೂರ್ವವಾದ ಜ್ಞಾನ ಮಾರ್ಗವನ್ನು ಐತರೇಯ ರೂಪದಿಂದ ಉಪದೇಶಿಸಿದ.  

 ಈ ಐತರೇಯನ ಬಗ್ಗೆ ಭಾಗವತದಲ್ಲಿ ಈತನ ಕಥೇಯನ್ನೇ ಹೇಳುವುದಿಲ್ಲ. ಈತ ಒಬ್ಬ ದೇವರ್ಷಿ ಎಂದಷ್ಟೇ ಉಲ್ಲೇಖ ಮಾಡಿರುತ್ತದೆ. ಆದರೆ ಈ ಐತರೇಯನ ಬಗ್ಗೆ ಬೇರೆ ಪುರಾಣಗಳಲ್ಲಿ ಒಂದು ರೋಚಕವಾದ ಕಥೆ ಇದೆ.
 ಐತರೇಯನ ತಂದೆ ವಿಶಾಲ ಅನ್ನುವ ಒಬ್ಬ ಋಷಿ ಅವನಿಗೆ ಇಬ್ಬರು ಹೆಂಡತಿಯರಿದ್ದರು. ಮೊದಲನೇ ಹೆಂಡತಿಗೆ ಕೆಲವು ಮಕ್ಕಳಿದ್ದರು. ಎರಡನೇ ಹೆಂಡತಿಯ ಮಗನೇ ಐತರೇಯ. ಈ ಎರಡನೇ ಹೆಂಡತಿಯನ್ನು ವಿಶಾಲ ನಾಮಕ  ಋಷಿ ಅಷ್ಟಾಗಿ ಪ್ರೀತಿಸುತ್ತಿರಲಿಲ್ಲ. ತಾತ್ಸಾರದಿಂದ ನೋಡಿಕೊಳ್ಳುತ್ತಿದ್ದ ಮೊದಲನೇ ಹೆಂಡತಿಯ ಮಕ್ಕಳು ಚೆನ್ನಾಗಿ ವೇದಾಧ್ಯಯನ ಮಾಡಿ ತಂದೆಯ ಜೊತೆಗೆ ವೇದ ವಿದ್ಯಪಡೆದು ದೊಡ್ಡ ಪಂಡಿತರಾಗಿಬಿಟ್ಟಿದ್ದರು. ಈ ಎರಡನೇ ಹೆಂಡತಿಗೆ ಹುಟ್ಟಿದ ಮಗು ಹುಟ್ಟಿದಾಗಿನಿಂದ ಬಹಳ ಹಠ ಎಂದರೆ ಹಠ. ಸದಾ ಅಳುತ್ತಿತ್ತಂತೆ. ಇದನ್ನು ತಡೆದುಕೊಳ್ಳಲು ಸಾಧ್ಯವಾಗದೆ .ಒಮ್ಮೆ ಅವನ ತಾಯಿ ಆ ಮಗುವಿಗೆ ಬಾಯಿ ಮುಚ್ಚುತ್ತಿಯೋ? ಇಲ್ಲವೋ? ಎಂದು ಗದರಿಸಿದಳಂತೆ. ತಕ್ಷಣ ಆ ಮಗು ಬಾಯಿ ಮುಚ್ಚಿಕೊಂಡು ಬಿಟ್ಟಿತಂತೆ. ಮತ್ತೆ ಬಾಯಿ ತೆಗೆಯಲೇ ಇಲ್ಲ. ಮಾತನಾಡಲೇ ಇಲ್ಲ. ಸದ್ಯಕ್ಕೆ ಆಕೆಗೆ ಆರಾಮ ಎನ್ನಿಸಿತು. 

  ಮೊದಲನೇ ಹೆಂಡತಿಯ ಮಕ್ಕಳು ತಂದೆಯ ಜೊತೆಗೆ ಯಜ್ಞ ಯಗಾದಿಗಳನ್ನು ಮಾಡಿಸುವುದಕ್ಕೆ ಹೊರಗೆ ಹೋಗುತ್ತಿದ್ದರು. ಈ ಮಗುವಿಗೆ ಬಾಯಿ ಇರುವುದಿಲ್ಲ ಎಂದು ತಿಳಿದು ಅದನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು. ಇತರೆ ಮಕ್ಕಳು ತಂದೆ ಒಟ್ಟಿಗೆ ಹೋಗಿ ಬೇಕಾದಷ್ಟು ಸಂಭಾವನೆ ಪಡೆದು ಖ್ಯಾತರಾದರು. ಈ ಮಗು ಸುಮಾರು 8-10 ವರ್ಷಗಳಾಗುವುವರೆಗೆ ಮಾತೇ ಅಡಲಿಲ್ಲ.

ಹೀಗೇ ಒಂದು ದಿನ ತಾಯಿ ಕಣ್ಣೀರಿಡುತ್ತಾ ಆ ಮಗುವನ್ನು ಕುರಿತು ನಿನಗೆ ಮಾತನಾಡಲಾದರೂ ಬಂದಿದ್ದರೆ ನೀನು ಅಪ್ಪನ ಸಂಗಡ ಹೋಗಿ ಪೌರೋಹಿತ್ಯ ಮಾಡಿ ಮಂತ್ರಗಳನ್ನಾದರೂ ಹೇಳಿ ಸಂಭಾವನೆ ಪಡೆಯಬಹುದಿತ್ತು. ನಿನಗೆ ಅದೂ ಇಲ್ದೇ ಹೋಯಿತು ಎಂದು ಹೇಳಿದಳಂತೆ. ತಕ್ಷಣ ಆ ಮಗು ಅಮ್ಮಾ  ನೀನು ಮಾತನಾಡು ಎಂದರೆ ನಾನು ಮಾತಾಡುತ್ತೇನೆ. ನೀನು ಬಾಯಿ ಮುಚ್ಚು ಅಂತ ಹೇಳಿದಕ್ಕೆ ನಾನು ಬಾಯಿ ಮುಚ್ಚಿದೆ. ನನಗೆ ಮಾತನಾಡಲಿಕ್ಕೆ ಬರುತ್ತೆ. ನಾನು ವೇದ ಮಂತ್ರಗಳನ್ನು ಹೇಳಬಲ್ಲೆ ಎಂದು ಹೇಳಿದಾಗ ಆ ತಾಯಿಗೆ ಸಂತೋಷವೋ ಸಂತೋಷ. ಆಗ ಆ ತಾಯಿ ಮಗುವಿಗೆ ನಿಮ್ಮ ತಂದೆ ಯಜ್ಞ ಮಾಡಿಸಲು ಹೋಗಿದ್ದಾರೆ ಅಲ್ಲಿ ಪಕ್ಕದ ರಾಜನೊಬ್ಬ ಯಜ್ಞ ಮಾಡಿಸುತ್ತಿದ್ದಾನೆ. ನೀನು ಅಲ್ಲಿಗೆ ಹೋಗು ಎಂದು ಹೇಳಿದಳು. ಆಗ ಐತರೇಯ ಆಯ್ತಮ್ಮ ಹೋಗುತ್ತೇನೆ ಎಂದು ಹೇಳಿ ಆ ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ಹೋದನಂತೆ. ಅಲ್ಲಿ ಅವನ ತಂದೆ ಮತ್ತು ಅಣ್ಣಂದಿರು ವೇದ ಮಂತ್ರಗಳನ್ನು ಪಠಿಸುತ್ತಾ ಯಜ್ಞ ಮಾಡಿಸುತ್ತಿದ್ದರು. ತಂದೆಗೆ ಇವನು ಅಲ್ಲಿಗೆ ಬಂದಿದ್ದು ಇಷ್ಟವಾಗಲಿಲ್ಲ. ಇವನೇಕೆ ಇಲ್ಲಿಗೆ ಬಂದ ಇವನಿಂದ ನನ್ನ ಮರ್ಯಾದೆ ಹೋಗುತ್ತದೆ ಎಂದು ಯೋಚಿಸತೊಡಗಿದನಂತೆ. ಈ ಐತರೇಯ, ಇನ್ನು 8-10 ವರ್ಷದ ಮಗು, ತಂದೆಯ ತೊಡೆಯ ಮೇಲೆ ಕೂಡಲು ಹೋದ. ಆಗ ಆ ತಂದೆ ಅವನನ್ನು ತಳ್ಳಿಬಿಟ್ಟನಂತೆ ,ಇದನ್ನು ಕಂಡು ಭೂದೇವಿಗೆ ಬಹಳ ಸಿಟ್ಟು ಬಂದಿತು. ಆಗ ಭೂಮಿಯಿಂದ ಒಂದು ಆಸನ ಮೇಲೆದ್ದು ಬಂದಿತಂತೆ ಆಗ ಆ ಹುಡುಗ ಆ ಆಸನದಲ್ಲಿ ಕುಳಿತು ನಿಸರ್ಗಳವಾಗಿ ವೇದ ಮಂತ್ರಗಳನ್ನು ಪ್ರವಚನ ಮಾಡಲಾರಂಭಿಸಿದ. 40 ಅಧ್ಯಾಯಗಳ ಐತರೇಯ ಬ್ರಾಹ್ಮಣ, 14 ಅಧ್ಯಾಯಗಳ ಐತರೇಯ ಅರಣ್ಯಕ, ಅದರಲ್ಲಿ ಕೊನೆಯ 9 ಅಧ್ಯಾಯಗಳ ಐತರೇಯ ಉಪನಿಷತ್ತಗಳನ್ನು ಪ್ರವಚನ ಮಾಡಿದನಂತೆ. ಈ ಪ್ರವಚನವನ್ನು ಕೇಳಲು ಸಾಕ್ಷಾತ್ ಲಕ್ಷೀದೇವಿ ಬಂದು ಅಲ್ಲಿ ಕೂತು ಪ್ರವಚನ ಕೇಳಿದಳಂತೆ. ಅಲ್ಲದೇ ಬ್ರಹ್ಮ ರುದ್ರಾದಿ ದೇವತೆಗಳೆಲ್ಲರೂ ಆ ಪ್ರವಚನ ಕೇಳಲು ಅಲ್ಲಿ ಬಂದು ನೆರೆದರು. 

 ಹೀಗೆ ಮಹಿ ಅಂದರೆ ಭೂಮಿ. ಮಹಿಯಿಂದ ದತ್ತವಾದ ಆಸನದಲ್ಲಿ ಕುಳಿತಿದ್ದರಿಂದ ಐತರೇಯನಿಗೆ ಮಹಿದಾಸ ಎಂಬ ಹೆಸರು ಬಂದಿತು. ಅಲ್ಲದೆ ಮಹಾಮಹಿಮರಾದ ಲಕ್ಷ್ಮಿ ಬ್ರಹ್ಮರುದ್ರಾದಿ ದೇವತೆಗಳು ಅಲ್ಲಿಗೆ ಬಂದು ಅವನ ದಾಸರಾಗಿ ಪ್ರವಚನ ಕೇಳಿದ್ದರಿಂದಲೂ ಸಹ ಅವನು ಮಹಿದಾಸನಾದ. 
 ನಂತರದಲ್ಲಿ ಅವನು ಮನೆಗೆ ಹೋದಮೇಲೆ ಇವನನ್ನು ತಾತ್ಸಾರ ಮಾಡುತ್ತಿದ್ದ ಅವನ ಮಲತಾಯಿ ಪಶ್ಚಾತ್ತಾಪದಿಂದ ಅವನನ್ನು ಸಂತೋಷದಿಂದ ಆಲಂಗಿಸಿಕೊಂಡು ನಿನ್ನ ಮುಂದೆ ನನ್ನ ಮಕ್ಕಳು ಯಾವ ಮಹಾ ಬುದ್ದಿವಂತರಪ್ಪಾ ಎಂದು ಹೇಳಿ ತನ್ನಿಂದ ನಡೆದ ತಪ್ಪಿಗಾಗಿ ಪರಿತಪಿಸಿದಳಂತೆ. 
 ಇಂತಹ ಅಪೂರ್ವ ಪ್ರಸಂಗವನ್ನು ಎಲ್ಲ ವ್ಯಾಖ್ಯಾನಕಾರರು ಕೈ ಬಿಟ್ಟು ಬಿಟ್ಟಿದ್ದರು. ಮತ್ತು ನಾರದರನ್ನು ಭಗವಂತನ ಅವತಾರ ಎಂದು ವ್ಯಾಖ್ಯಾನ ಬರೆದರು. ಆದರೆ ಶ್ರೀಮದಾಚಾರ್ಯರು ಮಾತ್ರ,. ಇಂದೊಂದೇ ಅಲ್ಲ, ಇಂತಹ ಎಷ್ಟೋ ಅಪೂರ್ವ ಪ್ರಸಂಗಗಳನ್ನು ಸರಿಯಾದ ಆಧಾರ ಪ್ರಮಾಣಗಳಿಂದ ಉಲ್ಲೇಖಿಸಿ ಬೆಳಕಿಗೆ ತಂದು ಸಾಧಕರಿಗೆ ಜಜ್ಞಾಸುಗಳಿಗೆ ಮಹದುಪಕಾರ ಮಾಡಿರುತ್ತಾರೆ.
ಆಚಾರ್ಯ ಶ್ರೀಮದಾಚಾರ್ಯ ಸಂತುಮೇ ಜನ್ಮ ಜನ್ಮನೀ

        ...ಮುಂದುವರೆಯುವುದು

ಕೆ. ಸತ್ಯನಾರಾಯಣ ರಾವ್
ಈಶಾವಾಸ್ಯಂ
ವಿವೇಕಾನಂದ ನಗರ
ಹೊಸಪೇಟೆ.

 
 

1 comment:

  1. Thank you indeed for this article. Very nicely told - how the name 'Mahidasa' came into picture/usage.

    ReplyDelete